ಸರ್ವರ ಭಾರತವೇ ಸಮೃದ್ಧ ದೇಶ: ಆಳ್ವ
ವಿದ್ಯಾಗಿರಿ (ಮೂಡುಬಿದಿರೆ): ‘ಸುಸ್ಥಿರ, ಸಾಮರಸ್ಯ, ಸಮಾನತೆ, ಸರ್ವ ಜೀವಿಗಳ ನೆಲೆಯ ಭಾರತ ನಿರ್ಮಾಣವೇ ನಮ್ಮೆಲ್ಲರ ಗುರಿ’ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹೇಳಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಕೆ.ವಿ.ಸುಬ್ಬಣ್ಣ ಬಯಲು ರಂಗಮಂದಿರದಲ್ಲಿ ಹಮ್ಮಿಕೊಂಡ 77ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ಮಾಡಿ ಅವರು ಮಾತನಾಡಿದರು.
ಅಂಚೆ, ರೈಲ್ವೆ, ತಂತ್ರಜ್ಞಾನಗಳ ಬೃಹತ್ ಜಾಲಗಳು, ಕಲ್ಲಿದಲ್ಲು, ವಿದ್ಯುತ್, ಧಾನ್ಯ, ಸೆಣಬು, ಗೋಧಿ, ಅಕ್ಕಿ, ಸಕ್ಕರೆ, ಸಾಂಬಾರು, ಹಾಲು, ಮತ್ಸ್ಯ, ಜವಳಿ ಉತ್ಪಾದನೆಗಳು, ಗುಡಿಕೈಗಾರಿಕೆ, ಶಿಲ್ಪಕಲೆ ಸೇರಿದಂತೆ ದೇಶವು ಹಲವು ಬಗೆಗಳಲ್ಲಿ ಮುಂಚೂಣಿಯಲ್ಲಿದೆ. ಜನಸಂಖ್ಯೆ, ಯುವಶಕ್ತಿಯಲ್ಲೂ ನಾವೇ ಮುಂದಿದ್ದೇವೆ ಎಂದರು.’ಆದರೆ, ತಿದ್ದಿಕೊಳ್ಳುವ, ಪರಿಷ್ಕರಿಸಿಕೊಳ್ಳುವ, ಆವಿಷ್ಕರಿಸುವ ಸಾಧನೆಗಳು ನಮ್ಮ ಮುಂದೆ ಸಾಕಷ್ಟಿವೆ. ಸಂತೋಷ ಭರಿತ, ಸಮೃದ್ಧ, ಸದೃಢ, ಸಂಪತ್ಭರಿತ ದೇಶವನ್ನು ನಾವೆಲ್ಲ ನಿರ್ಮಿಸಬೇಕಾಗಿದೆ’ ಎಂದು ನೆನಪಿಸಿದರು.
‘ಧರ್ಮ, ಮತ, ಜಾತಿ, ಭಾಷೆಗಳ ನಡುವೆ ಸಾಮರಸ್ಯ ನಿರ್ಮಿಸಿ, ವೈರುದ್ಧ್ಯ, ವೈಮನಸ್ಸು, ಅಸಮಾನತೆಗಳನ್ನು ಹೋಗಲಾಡಿಸಬೇಕು. ಏಕತೆ, ಸಂಪತ್ತಿನ ಸಮಾನ ಹಂಚಿಕೆ, ಲಿಂಗ ತಾರತಮ್ಯ ರಹಿತ, ಕ್ರೌರ್ಯ- ಬಹಿಷ್ಕಾರಗಳಿಲ್ಲದ ಸಮುದಾಯ ರೂಪಿಸಬೇಕು. ಪಾರದರ್ಶಕ ಆಡಳಿತದ ಹೊಣೆಗಾರಿಕೆ ನಮ್ಮ ಮುಂದಿದೆ’ ಎಂದು ವಿವರಿಸಿದರು.
‘ಭಾಷಾ ವೈವಿಧ್ಯತೆ, ಕಲೆ, ಕೌಶಲ, ಶ್ರಮಿಕರು, ಕೃಷಿಕರಿಗೆ ಆಶ್ರಯವಾಗುವ ಸಂಸ್ಥೆಗಳನ್ನು ರೂಪಿಸಬೇಕು. ಸರ್ವರ ಆರೋಗ್ಯ ಕಾಪಾಡಬಲ್ಲ ವೈದ್ಯಕೀಯ ವ್ಯವಸ್ಥೆ ಬೇಕಾಗಿದೆ’ ಎಂದು ಆಶಯ ವ್ಯಕ್ತಪಡಿಸಿದರು.’ಹೊರದೇಶದಲ್ಲಿ ಯುವಶಕ್ತಿ ಅವಶ್ಯವಾಗಿದೆ. ನಮ್ಮ ದೇಶದ ಯುವಶಕ್ತಿಯ ಮೇಲೆ ಇತರ ದೇಶಗಳ ಕಣ್ಣಿದೆ. ಅದಕ್ಕಾಗಿಯ ವಿದ್ಯಾಭ್ಯಾಸ, ಉದ್ಯೋಗ, ಐಷಾರಾಮಿ ಜೀವನದ ಮೂಲಕ ಗಿಲೀಟಿನ ಆಮಿಷ ನೀಡಿ ಸೆಳೆಯುತ್ತಿದ್ದಾರೆ. ಅದಕ್ಕೆ ಮರುಳಾಗಬೇಡಿ’ ಎಂದರು.’ಪ್ರಯತ್ನದಲ್ಲಿ ನಿರಂತರತೆ, ಸಚ್ಚಾರಿತ್ಯ, ನಿರ್ದಿಷ್ಟತೆ, ನೈಜ ದೇಶಪ್ರೇಮದಿಂದ ಯುವಜನತೆ ಗುರಿ ಸಾಧಿಸಬಹುದು. ಆಗ ದೇಶದ ಭವಿಷ್ಯ ಹಾಗೂ ಬಾಳು ಬಂಗಾರ ಆಗಲು ಸಾಧ್ಯ’ ಎಂದು ಬಣ್ಣಿಸಿದರು. ‘ಅಹಿಂಸೆ ಮೂಲಕ ಸರ್ವಜನರ ಒಗ್ಗೂಡಿಸಿದ, ಮನೋಶಕ್ತಿಯಿಂದ ಸ್ವಾತಂತ್ರ್ಯ ಪಡೆದ ದೇಶ ನಮ್ಮದು’ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಕೇಸರಿ, ಬಿಳಿ, ಹಸಿರು ತ್ರಿವರ್ಣ ರಂಗಿನ ಧಿರಿಸಿನಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಪಾಲ್ಗೊಂಡರು. ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿಗಳಾದ ವಿವೇಕ್ ಆಳ್ವ, ಡಾ ವಿನಯ ಆಳ್ವ, ಆಡಳಿತ ಮಂಡಳಿಯ ಜಯಶ್ರೀ ಅಮರನಾಥ ಶೆಟ್ಟಿ, ಉದ್ಯಮಿ ಶ್ರೀಪತಿ ಭಟ್ ಹಾಗೂ ಇನ್ನಿತರ ಗಣ್ಯರು ಇದ್ದರು.
ಮಾಜಿ ಸೈನಿಕರು, ವಿವಿಧ ಕ್ಷೇತ್ರದ ಸಾಧಕರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿವಿಧ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರುಗಳು, ಬೋಧಕ ಹಾಗೂ ಭೋಧಕೇತರ ಸಿಬ್ಬಂದಿ ಹಾಗೂ ಪದವಿ ಪೂರ್ವ ಕಾಲೇಜು ಸೇರಿದಂತೆ 10 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಸಂಭ್ರಮದಲ್ಲಿ ಪಾಲ್ಗೊಂಡರು.
ಆಳ್ವಾಸ್ ಸಾಂಸ್ಕೃತಿಕ ತಂಡದ ಸದಸ್ಯರು ‘ಕೋಟಿ ಕಂಠೊಂಸೆ’, ‘ವಂದೇ ಮಾತರಂ’, ‘ಜನ ಗಣ ಮನ’ವನ್ನು ಸುಶ್ರಾವ್ಯವಾಗಿ ಹಾಡಿದರು. ಉಪನ್ಯಾಸಕರಾದ ವೇಣುಗೋಪಾಲ ಕೆ. ಶೆಟ್ಟಿ ಹಾಗೂ ಡಾ.ರಾಜೇಶ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.
ಪರೇಡ್ ಕಮಾಂಡರ್ ಆಗಿ ಎನ್‌ಸಿಸಿ ಅಂಡರ್ ಆಫೀಸರ್ ಪುಷ್ಯ ಪೊನ್ನಮ್ಮ ಹಾಗೂ ಗೌರವ ವಂದನೆಯನ್ನು ಅಂಡರ್ ಆಫೀಸರ್‌ಗಳಾದ ವಿಕಾಸ್ ಗೌಡ ಮತ್ತು ಅಬ್ರಹಾರ್ ನೆರವೇರಿಸಿಕೊಟ್ಟರು.
‘ನನಗೆ ತಾಯ್ನೆಲವೇ ಅಮ್ಮನ ಮಡಿಲು’
‘ವಿದ್ಯಾಭ್ಯಾಸ, ಉದ್ಯೋಗ, ಐಷಾರಾಮಿ ಬದುಕಿಗೆ ಮನಸೋಲುವ ಪ್ರತಿಭಾ ಪಲಾಯನವನ್ನು ತಡೆಗಟ್ಟಬೇಕಾಗಿದೆ. ನನಗೆ ಹೊರ ದೇಶಗಳಲ್ಲಿ ಬದುಕು ಕಟ್ಟಿಕೊಳ್ಳಲು ಅನಂತ ಅವಕಾಶ ಬಂದಿದ್ದರೂ, ಹುಟ್ಟೂರಿನ ಅಭಿವೃದ್ಧಿಗೆ ಟೊಂಕ ಕಟ್ಟಿ ನಿಂತೆನು. ತಾಯ್ನೆಲವೇ ಅಮ್ಮನ ಮಡಿಲೆಂದು ಭಾವಿಸಿ ದುಡಿದೆನು. ತಾಯಿ ನಾಡಿನ ಸೇವೆ ಸುಖದ ಫಲವನ್ನು ಕಂಡೆನು. ಇಂದು ಪ್ರತಿಭಾ ಪಲಾಯನ ಆಗದಂತೆ ತಡೆಯಲು ನಾನೇ ಹೆಚ್ಚು ಅರ್ಹನೆಂದು ಭಾವಿಸಿದ್ದೇನೆ’ ಎಂದು ಭಾವುಕರಾಗಿ ಡಾ.ಎಂ.ಮೋಹನ ಆಳ್ವ ಮೆಲುಕು ಹಾಕಿದರು.
ಅನನ್ಯಾ, ಭವಾನಿ ಸಹಿತ ಐವರಿಗೆ ಪುರಸ್ಕಾರ
ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಾರ್ಷಿಕ ಪರೀಕ್ಷೆಯಲ್ಲಿ 600 ಕ್ಕೆ 600 ಅಂಕ ಪಡೆದ ಅನನ್ಯಾ ಅವರಿಗೆ 3 ಲಕ್ಷ ರೂಪಾಯಿ, 600ಕ್ಕೆ 596 ಅಂಕ ಪಡೆದ ವಾಣಿಜ್ಯ ವಿಭಾಗದ ಕೆ. ದಿಶಾ ರಾವ್ ಮತ್ತು ವಿಜ್ಞಾನ ವಿಭಾಗದ ಅದಿತಿ ಅವರಿಗೆ ತಲಾ 1 ಲಕ್ಷ ರೂಪಾಯಿ ಹಾಗೂ ಚೀನಾದ ಚೆಂಗ್ಡುವಿನಲ್ಲಿ ನಡೆದ ಜಾಗತಿಕ ಅಂತರ ವಿಶ್ವವಿದ್ಯಾಲಯ ಕ್ರೀಡಾಕೂಟ 2021ರ ಲಾಂಗ್‌ಜಂಪ್‌ನಲ್ಲಿ ಕಂಚಿನ ಪದಕ ಪಡೆದ ಭವಾನಿ ಯಾದವ್ ಭಗವತಿ ಅವರಿಗೆ 1 ಲಕ್ಷ ರೂಪಾಯಿ, ಅವರ ತರಬೇತುದಾರ ಅಜಿತ್ ಅವರಿಗೆ 50 ಸಾವಿರ ರೂಪಾಯಿ ನೀಡಿ ಗೌರವಿಸಲಾಯಿತು.