ಕಂಬಳ ತುಳುನಾಡಿನ ಕೃಷಿ ಬದುಕು ಮತ್ತು ಧಾರ್ಮಿಕ ಪರಂಪರೆಯ ಸಂಕೇತ- ಸತ್ಯಜಿತ್ ಸುರತ್ಕಲ್
ಸವಣೂರು : ತುಳುನಾಡಿನ ಜನಪ್ರಿಯ ಕ್ರೀಡೆಗಳಲ್ಲಿ ಕಂಬಳ ಅತೀ ಪುರಾತನವಾದುದು. ಸುಮಾರು ಹಲವು ವರ್ಷಗಳ ಇತಿಹಾಸವನ್ನು ಹೊಂದಿರುವ ಕಂಬಳ, ಕಾಲಕ್ಕೆ ತಕ್ಕಂತೆ ಬದಲಾವಣೆಗೆ ಒಗ್ಗಿಕೊಳ್ಳುತ್ತಾ ಬಂದರೂ ಇಂದಿಗೂ ಅದೇ ಹಳೆಯ ಸೊಗಡನ್ನು ಉಳಿಸಿಕೊಂಡು ಮುಂದುವರಿಯುತ್ತಿದೆ. ಕಂಬಳ ಅನ್ನೋದು ಕೇವಲ ಕ್ರೀಡೆಯಾಗಿ ಮಾತ್ರ ಇರದೇ, ತುಳುನಾಡಿನ ಕೃಷಿ ಬದುಕು ಮತ್ತು ಧಾರ್ಮಿಕ ಪರಂಪರೆಯ ಸಂಕೇತವಾಗಿದೆ ಎಂದು ಹಿಂದೂ ಮುಖಂಡ ಸತ್ಯಜಿತ್ ಸುರತ್ಕಲ್ ಹೇಳಿದರು.
ಅವರು ಪಾಲ್ತಾಡಿ ಗ್ರಾಮದ ಚಾಕೋಟೆತ್ತಡಿ ಶ್ರೀ ಧರ್ಮರಸು ಉಳ್ಳಾಕುಲು ದೈವಸ್ಥಾನದ ಗದ್ದೆಯಲ್ಲಿ ಲೋಹಿತ್ ಬಂಗೇರ ಬಾಲಯ,ಬಾಲಯ ಕಂಬಳ ತಂಡ ತಿಂಗಳಾಡಿ,ಅಮರ ಸಂಘಟನಾ ಸಮಿತಿ ಸುಳ್ಯ, ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು ಹಾಗೂ ಉಳ್ಳಾಕುಲು ಫ್ರೆಂಡ್ಸ್ ಕ್ಲಬ್ ಪಾಲ್ತಾಡಿ ಇದರ ಸಹಕಾರದೊಂದಿಗೆ ಸಾರಕರೆ ದಿ.ಶೀನಪ್ಪ ಪೂಜಾರಿ ಬೊಳಿಯಾಲ ಇವರ 20ನೇ ವರ್ಷದ ಸ್ಮರಣಾರ್ಥ ಕೆಸರ್‌ಡೊಂಜಿ ದಿನ ಕಂಬಳ ಉತ್ಸವ ಮತ್ತು ರಕ್ತದಾನ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಮ್ಮ ಭೂಮಿಯನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸದೇ ಮಾನವನ ಕ್ರೌರ್ಯಕ್ಕೆ ಬಲಿಯಾಗುತ್ತಿದೆ.ಭೂಮಿ ಸಂಪನ್ನತೆ ಬರಿದಾಗುತ್ತಿದೆ.ಪ್ರಕೃತಿ ಮುನಿದರೆ ನಾವು ಏನೂ ಅಲ್ಲ.ಭೂಮಿ ಇದ್ದರೆ ಮಾತ್ರ ನಾವು.ಮಣ್ಣಿಗೆ ಗೌರವ ನೀಡುವ ಕೆಲಸ ಎಲ್ಲರೂ ಮಾಡಬೇಕು ಎಂದ ಅವರು ಗ್ರಾಮೀಣ ಪ್ರದೇಶದಲ್ಲಿ ಮಣ್ಣಿನ ಕಲೆ ಕಂಬಳ ಉತ್ಸವ ,ಕೆಸರುಗದ್ದೆ ಕ್ರೀಡಾಕೂಟ ಮಾಡುವ ಮೂಲಕ ಲೋಹಿತ್ ಬಂಗೇರ ಬಾಲಯ ಕಂಬಳ ತಂಡ ಉತ್ತಮ ಕಾರ್ಯ ಮಾಡಿದೆ ಎಂದರು.
ಕಂಬಳ ಸಮಿತಿಯ ಮುಖ್ಯ ತೀರ್ಪುಗಾರರು ,ಕಾಂತಾರ ಚಲನಚಿತ್ರ ನಟ ರಾಜೀವ ರೈ ಎಡ್ತೂರು ಮಾತನಾಡಿ, ತುಳುನಾಡಿನ ಜಾನಪದ ಪರಂಪರೆಯಲ್ಲಿ ಹತ್ತಾರು ಕ್ರೀಡೆಗಳಿದ್ದರೂ ಕಂಬಳಕ್ಕೆ ತನ್ನದೇ ಆದ ಮಹತ್ವವಿದೆ.ಕಂಬಳಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನ ಆಗಮಿಸುತ್ತಾರೆ. ಕಂಬಳದ ಗದ್ದೆಗಳಲ್ಲಿ ಕೋಣಗಳು ಓಡುವಾಗ ಬಾನೆತ್ತರಕ್ಕೆ ಚಿಮ್ಮುವ ನೀರಿನಂತೆ, ಕಂಬಳ ಖ್ಯಾತಿ ಪ್ರಖ್ಯಾತಿ ದೇಶದ ಗಡಿಯನ್ನು ಮೀರಿ ವಿದೇಶಗಳಲ್ಲೂ ಪಸರಿಸಿದೆ. ಕಂಬಳ ನಮ್ಮ ತುಳನಾಡಿನ ಹೆಗ್ಗುರುತು ಎಂದರು.
ನಳೀಲು ಶ್ರೀ ಸುಬ್ರಹ್ಮಣ್ಯದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ನಳೀಲು ಮಾತನಾಡಿ, ಪಾಲ್ತಾಡಿಯ ಚಾಕೋಟೆತ್ತಡಿ ದೈವಸ್ಥಾನದ ವಠಾರದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳು ದೈವದ ಶಕ್ತಿಯಿಂದ ಯಶಸ್ವಿಯಾಗಿದೆ.ಗ್ರಾಮೀಣ ಭಾಗದಲ್ಲೂ ಇಂತಹ ಅದ್ದೂರಿಯ ಕಾರ್ಯಕ್ರಮ ಸಂಘಟಿಸಿದ ಆಯೋಜಕರಿಗೆ ಅಭಿನಂದನೆ ಸಲ್ಲಿಸಿದರು.
ಬೆಳ್ಳಾರೆ ಪೊಲೀಸ್ ಠಾಣೆ ಎಸೈ ಸಂತೋಷ್ ಬಿ.ಪಿ,ಜಾನುವಾರು ತರಬೇತಿ ಕೇಂದ್ರ ಕೊಯಿಲ ಇದರ ಪ್ರಭಾರ ನಿರ್ದೇಶಕ ಡಾ.ಪ್ರಸನ್ನ ಹೆಬ್ಬಾರ್,ಹೈಕೋರ್ಟ್ ಹಿರಿಯ ನ್ಯಾಯವಾದಿ ಎಂ.ರಾಜಣ್ಣ ,ಅಮರ ಸಂಘಟನಾ ಸಮಿತಿಯ ಮಾಜಿ ಅಧ್ಯಕ್ಷ ಎಂ.ಆರ್.ರಜನಿಕಾಂತ್ ಸಂಧರ್ಬೋಚಿತವಾಗಿ ಮಾತನಾಡಿದರು.
ವೇದಿಕೆಯಲ್ಲಿ ಕೊಳ್ತಿಗೆ ಸಿ.ಎ.ಬ್ಯಾಂಕ್ ಮಾಜಿ ನಿರ್ದೇಶಕ ದಿವಾಕರ ಬಂಗೇರ ಬೊಳಿಯಾಲ, ಕಂಬಳ ತೀರ್ಪುಗಾರ ಸುದರ್ಶನ್ ನಾಯಕ್ ಕಂಪ, ಅಂತರಾಷ್ಟ್ರೀಯ ಕ್ರೀಡಾಪಟು ಅಶೋಕ್ ಕೆ.ಎಸ್.ಕಣಿಯಾರು,ಸವಣೂರು ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಕಿಟ್ಟಣ್ಣ ರೈ ನಡುಕೂಟೇಲು,ಪುಷ್ಪಾವತಿ ಬಾಳಪ್ಪ ಸುವರ್ಣ ಬಾಲಯ ತಿಂಗಳಾಡಿ,ರೋಶನ್ ಬಂಗೇರ ಬಾಲಯ,ರೋಹಿತ್ ಬಂಗೇರ ಅಡೀಲು,ನಿತಿನ್ ಬಂಗೇರ ಅಭೀರ ಉಪಸ್ಥಿತರಿದ್ದರು.
ಸನ್ಮಾನ ಸಮಾರಂಭ
ಕಾರ್ಯಕ್ರಮದಲ್ಲಿ ನಿವೃತ ದೈಹಿಕ ಶಿಕ್ಷಣ ಶಿಕ್ಷಕ ಸುರೇಶ್ ಕುಮಾರ್ ದೊಡ್ಡಮನೆ,ಕಂಬಳದ ಮುಖ್ಯ ತೀರ್ಪುಗಾರ ವಿಜಯ ಕುಮಾರ್ ಕಂಗಿನಮನೆ,ಮುಖ್ಯಮಂತ್ರಿಗಳ ಚಿನ್ನದ ಪದಕ ಪುರಸ್ಕೃತ ಪೊಲೀಸ್ ಇಲಾಖೆಯ ಪ್ರವೀಣ್ ರೈ ನಡುಕೂಟೇಲು,ಕಂಬಳ ತೀರ್ಪುಗಾರ ನಿರಂಜನ್ ರೈ ಮಠಂತಬೆಟ್ಟು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಶಶಿಕಾಂತ್ ಮಿತ್ತೂರು ಸ್ವಾಗತಿಸಿ,ದಾಮೋದರ ಪೂಜಾರಿ ಕೆಂಗುಡೇಲು ವಂದಿಸಿದರು.ಸುಶ್ಮಿತಾ ಕಡಪಳ ಕಾರ್ಯಕ್ರಮ ನಿರೂಪಿಸಿದರು.
ಎಲ್ಲರ ಸಹಕಾರದಿಂದ ಯಶಸ್ವಿ-ಲೋಹಿತ್ ಬಂಗೇರ
ಕಾರ್ಯಕ್ರಮದ ಆಯೋಜಕ ಉದ್ಯಮಿ ಲೋಹಿತ್ ಬಂಗೇರ ಬಾಲಯ ಮಾತನಾಡಿ, ಪಾಲ್ತಾಡಿಯಲ್ಲಿ ಮುಂದಿನ ದಿನಗಳಲ್ಲಿ ಕಂಬಳ ನಡೆಸುವ ಯೋಜನೆ ಇದ್ದು ಎಲ್ಲರ ಸಹಕಾರ ಬೇಕು.ನಾನು ಈ ಕಾರ್ಯಕ್ರಮದಲ್ಲಿ ನಿಮಿತ್ತ ಮಾತ್ರ ನಮ್ಮ ಬಾಲಯ ಕಂಬಳ ತಂಡ ತಿಂಗಳಾಡಿ ಇದರಲ್ಲಿ 50 ಜನ ಸಮಾನ ಮನಸ್ಕರ ಬಳಗ ಇದೆ.ಅವರ ಸಹಕಾರದಲ್ಲಿ ಮುಂದೆಯೂ ಇಂತಹ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.