ಅಧ್ಯಕ್ಷರಾಗಿ ಹರೀಶ್ ವಿ., ಉಪಾಧ್ಯಕ್ಷರಾಗಿ ಬೀಫಾತುಮ್ಮ ಆಯ್ಕೆ
ವಿಟ್ಲ: ಕೆದಿಲ ಗ್ರಾಮ ಪಂಚಾಯತ್ ನ ಎರಡನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಹರೀಶ್ ವಿ. ಹಾಗೂ ಉಪಾಧ್ಯಕ್ಷರಾಗಿ ಬೀಫಾತುಮ್ಮರವರು ಆಯ್ಕೆಯಾಗಿದ್ದಾರೆ. ಇವರಿಬ್ಬರೂ ಕಾಂಗ್ರೆಸ್ ಬೆಂಬಲಿತ ಸದಸ್ಯರು.
ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬಂಬಲಿತ ಸದಸ್ಯ ಹರೀಶ್ ವಿ. ಹಾಗೂ ಬಿಜೆಪಿ ಬೆಂಬಲಿತ ಸದಸ್ಯ ಶ್ಯಾಮಪ್ರಸಾದ್ ರವರು ಸ್ಪರ್ಧಿಸಿದ್ದರು. ಈ ವೇಳೆ ನಡೆದ ಮತದಾನದಲ್ಲಿ ಹರೀಶ್‌ರವರು 9 ಮತಗಳನ್ನು ಪಡೆದು ವಿಜಯಿಯಾದರೆ ಶ್ಯಾಮಪ್ರಸಾದ್‌ರವರು ಮತಗಳನ್ನು ಪಡೆದು ಪರಾಜಿತರಾಗಿದ್ದರು.
ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಬಿಪಾತುಮ್ಮ ಹಾಗೂ ಬಿಜೆಪಿ ಬೆಂಬಲಿತ ಸದಸ್ಯೆ ಬೇಬಿರವರು ಸ್ಪರ್ಧಿಸಿದ್ದರು. ಬಳಿಕ ನಡೆದ ಮತದಾನದಲ್ಲಿ ಬಿಪಾತುಮ್ಮರವರು ಜಯಗಳಿಸಿದ್ದರು. ಬಂಟ್ವಾಳ ತಾಲೂಕು ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಪ್ರೀತಮ್ ಎನ್. ಚುನಾವಣಾ ಪ್ರಕ್ರೀಯೆ ನಡೆಸಿದರು. ಅಭಿವೃದ್ಧಿ ಅಧಿಕಾರಿ ಅಜಿತ್ ಸಹಕರಿಸಿದರು. ಸದಸ್ಯರಾದ ಜಯಂತಿ, ಉಮೇಶ್ ಎಂ.,ವನಿತಾ ಬೇಬಿ, ಹಬೀಬ್ ಮಹ್ ಸೀನ್ ಎಂ.ಎಚ್., ದೇವಕಿ ಬಿ., ಶ್ಯಾಮಲ, ಶ್ಯಾಮ ಪ್ರಸಾದ್, ಸುಲೈಮಾನ್ ಸರೋಳಿ, ಹರಿಣಾಕ್ಷಿ, , ಅಬ್ದುಲ್ ಅಜೀಜ್ ಸತ್ತಿಕಲ್ಲು, ಮಹಮ್ಮದ್ ಉನೈಸ್ ಉಪಸ್ಥಿತರಿದ್ದರು.
ಗ್ರಾಮ ಪಂಚಾಯತ್ ಚುನಾವಣೆಯಲ್ಲಿ 8 ಬಿಜೆಪಿ ಬೆಂಬಲಿತ ಸದಸ್ಯರು ಹಾಗೂ 6 ಕಾಂಗ್ರೆಸ್ ಬೆಂಬಲಿತ ಸದಸ್ಯರು ಜಯಗಳಿಸಿದ್ದರು.
ಪ್ರಾರಂಭದ ಅವಧಿಯಲ್ಲಿ ಬಹುಮತ ಹೊಂದಿದ್ದ ಬಿಜೆಪಿ ಬೆಂಬಲಿತ ಸದಸ್ಯರು ಅಧ್ಯಕ್ಷ, ಉಪಾಧ್ಯಕ್ಷರಾಗಿ ಜಯಗಳಿಸಿದ್ದರು. ಇದೀಗ ಎರಡನೇ ಅವಧಿಯ ವೇಳೆ ಬಿಜೆಪಿ ಬೆಂಬಲಿತ ಸದಸ್ಯರಾಗಿದ್ದ ಮೂವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರಿಂದಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯರ ಸಂಖ್ಯೆ ೯ಕ್ಕೆ ಏರಿಕೆಯಾಗಿ ಬಿಜೆಪಿ ಬೆಂಬಲಿತ ಸದಸ್ಯರ ಸಂಖ್ಯೆ ೫ಕ್ಕೆ ಇಳಿದು ಆಡಳಿತ ಕಾಂಗ್ರೆಸ್ ಬೆಂಬಲಿತರ ಪಾಲಾಗಿದೆ.