ಗೋಳಿತ್ತೊಟ್ಟು ಗ್ರಾ.ಪಂ.: ಅಧ್ಯಕ್ಷರಾಗಿ ಸವಿತಾ ಆಲಂತಾಯ, ಉಪಾಧ್ಯಕ್ಷರಾಗಿ ಕೆ.ಬಾಬು ಪೂಜಾರಿ ಅವಿರೋಧ ಆಯ್ಕೆ

0

ನೆಲ್ಯಾಡಿ: ಗೋಳಿತ್ತೊಟ್ಟು ಗ್ರಾ.ಪಂ.ನ 2ನೇ ಅವಧಿಗೆ ಅಧ್ಯಕ್ಷರಾಗಿ ಸವಿತಾ ಆಲಂತಾಯ ಹಾಗೂ ಉಪಾಧ್ಯಕ್ಷರಾಗಿ ಕೆ.ಬಾಬು ಪೂಜಾರಿ ಕಿನ್ಯಡ್ಕ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇಬ್ಬರೂ ಬಿಜೆಪಿ ಬೆಂಬಲಿತ ಸದಸ್ಯರಾಗಿದ್ದಾರೆ. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಪ್ರಕ್ರಿಯೆ ಆ.19ರಂದು ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು.

17 ಸದಸ್ಯ ಬಲದ ಗೋಳಿತ್ತೊಟ್ಟು ಗ್ರಾ.ಪಂ.ನಲ್ಲಿ ಬಿಜೆಪಿ ಬೆಂಬಲಿತ 13 ಹಾಗೂ ಕಾಂಗ್ರೆಸ್ ಬೆಂಬಲಿತ 4 ಸದಸ್ಯರಿದ್ದಾರೆ. ಹಿಂದುಳಿದ ವರ್ಗ ಬಿ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಆಲಂತಾಯ ವಾರ್ಡ್‌ನ ಬಿಜೆಪಿ ಬೆಂಬಲಿತ ಸದಸ್ಯೆ ಸವಿತಾ ಆಲಂತಾಯ ಹಾಗೂ ಹಿಂದುಳಿದ ವರ್ಗ ಎ ಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಗೋಳಿತ್ತೊಟ್ಟು ವಾರ್ಡ್‌ನ ಸದಸ್ಯ ಕೆ.ಬಾಬು ಪೂಜಾರಿ ಕಿನ್ಯಡ್ಕ ನಾಮಪತ್ರ ಸಲ್ಲಿಸಿದ್ದರು. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದೊಂದೇ ನಾಮಪತ್ರ ಸಲ್ಲಿಕೆಯಾದುದರಿಂದ ಅವಿರೋಧ ಆಯ್ಕೆ ನಡೆದಿದೆ. ಹಾಲಿ ಅಧ್ಯಕ್ಷ ಜನಾರ್ದನ ಗೌಡ, ಹಾಲಿ ಉಪಾಧ್ಯಕ್ಷೆ ಶೋಭಲತಾ, ಸದಸ್ಯರಾದ ಬಾಲಕೃಷ್ಣ ಎ., ಶಿವಪ್ರಸಾದ್, ನೋಣಯ್ಯ ಗೌಡ, ಪ್ರಜಲ, ವಾರಿಜಾಕ್ಷಿ, ವಿ.ಸಿ.ಜೋಸೆಫ್ ಉಪಸ್ಥಿತರಿದ್ದರು.

ಸವಣೂರು ಸರಕಾರಿ ಉನ್ನತ ಹಿ.ಪ್ರಾ.ಶಾಲೆಯ ಮುಖ್ಯಶಿಕ್ಷಕ ನಿಂಗರಾಜು ಕೆ.ಪಿ.ಚುನಾವಣಾಧಿಕಾರಿಯಾಗಿದ್ದರು. ಪಿಡಿಒ ಜಗದೀಶ್ ನಾಯ್ಕ್, ಕಾರ್ಯದರ್ಶಿ ಚಂದ್ರಾವತಿಯವರು ಸಹಾಯಕ ಚುನಾವಣಾಧಿಕಾರಿಯಾಗಿದ್ದರು. ಗ್ರಾ.ಪಂ.ಸಿಬ್ಬಂದಿಗಳು ಸಹಕರಿಸಿದರು.

ಚುನಾವಣಾ ಪ್ರಕ್ರಿಯೆಯಿಂದ ದೂರ ಉಳಿದ ಬಿಜೆಪಿ ಸದಸ್ಯರು:
ಗ್ರಾಮ ಪಂಚಾಯಿತಿಯಲ್ಲಿರುವ ಬಿಜೆಪಿ ಬೆಂಬಲಿತ 13 ಸದಸ್ಯರ ಪೈಕಿ 7 ಸದಸ್ಯರು ಚುನಾವಣಾ ಪ್ರಕ್ರಿಯೆಯಿಂದ ದೂರ ಉಳಿದಿದ್ದರು. ಬಿಜೆಪಿ ಬೆಂಬಲಿತ ಸದಸ್ಯರಾದ ಜೀವಿತಾ, ಹೇಮಲತಾ, ಪದ್ಮನಾಭ ಪೂಜಾರಿ, ಗುಲಾಬಿ ಕೆ., ಸಂಧ್ಯಾ, ಶ್ರುತಿ, ಜಾನಕಿ ಅವರು ಆಯ್ಕೆ ಪ್ರಕ್ರಿಯೆ ಸಭೆಗೆ ಗೈರು ಹಾಜರಿಯಾಗಿದ್ದರು. ಬಿಜೆಪಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಇಬ್ಬರು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೂವರು ಆಕಾಂಕ್ಷಿಗಳಿದ್ದ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಕೆಗೂ ಮುನ್ನ ಬಿಜೆಪಿ ಸುಳ್ಯಮಂಡಲದ ಹಾಗೂ ಗೋಳಿತ್ತೊಟ್ಟು ಶಕ್ತಿಕೇಂದ್ರದ ಮುಖಂಡರು ಸದಸ್ಯರ ಜೊತೆ ಗೋಳಿತ್ತೊಟ್ಟು ಭಜನಾ ಮಂದಿರದಲ್ಲಿ ಮಾತುಕತೆ ನಡೆಸಿದ್ದರು. ಅಂತಿಮವಾಗಿ ಪಕ್ಷದ ಮುಖಂಡರ ಸೂಚನೆಯಂತೆ ಅಧ್ಯಕ್ಷ ಸ್ಥಾನಕ್ಕೆ ಸವಿತಾ ಆಲಂತಾಯ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕೆ.ಬಾಬು ಪೂಜಾರಿ ಕಿನ್ಯಡ್ಕ ಅವರು ನಾಮಪತ್ರ ಸಲ್ಲಿಸಿದರು. ಈ ಬೆಳವಣಿಗೆಯಿಂದ ಅಸಮಾಧಾನಗೊಂಡ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಸೇರಿ ಬಿಜೆಪಿಯ ೭ ಸದಸ್ಯರು ಚುನಾವಣಾ ಪ್ರಕ್ರಿಯೆಯಿಂದಲೇ ದೂರು ಉಳಿದಿದ್ದರು ಎಂದು ವರದಿಯಾಗಿದೆ.

LEAVE A REPLY

Please enter your comment!
Please enter your name here