ಅನಿವಾರ್ಯವಾದರೆ ರಾಜಕೀಯಕ್ಕೆಂದ ಪುತ್ತಿಲ ಪರಿವಾರ ದಕ್ಷಿಣ ಕನ್ನಡ ಜಿಲ್ಲೆಗೂ ವಿಸ್ತರಣೆ !

0

ಪರಿವಾರದ ಸಮಾಗಮದಲ್ಲಿ ತಾ.ಪಂ, ಜಿ.ಪಂ, ಎಂ.ಪಿ ಚುನಾವಣೆಗೆ ಪರೋಕ್ಷ ಸುಳಿವು ನೀಡಿದ ಅರುಣ್ ಕುಮಾರ್ ಪುತ್ತಿಲ

ಉತ್ತಮ ಕೆಲಸ ಮಾಡಿ ನಾಯಕರಾಗಿ – ಬಿ.ವಿ.ಸೂರ್ಯನಾರಾಯಣ
ಎಲ್ಲಾ ಗ್ರಾಮ, ಬೂತ್ ಸಮಿತಿಗಳಿಂದ ಸೇವಾ ಕಾರ್ಯ ಯಶಸ್ವಿ – ಪ್ರಸನ್ನ ಕುಮಾರ್ ಮಾರ್ತಾ

ಪುತ್ತೂರು: 5 ವಿಚಾರಗಳನ್ನು ಸಮಾಜಮುಖಿ ಸೇವೆಗಾಗಿ ಅಸ್ತಿತ್ವಕ್ಕೆ ಬಂದ ಪುತ್ತಿಲ ಪರಿವಾರ ಅನಿವಾರ್ಯವಾದರೆ ರಾಜಕೀಯಕ್ಕೂ ಸಿದ್ಧ ಎಂದು ಈ ಹಿಂದೆ ಹೇಳಿದಂತೆ ಇದೀಗ ಪುತ್ತಿಲ ಪರಿವಾರ ಮುಂದೆ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಗೆ ವಿಸ್ತಾರಣೆ ಆಗಲಿದೆ ಎಂದು ಪುತ್ತಿಲ ಪರಿವಾರದ ಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಹೇಳುವ ಮೂಲಕ ಮುಂದಿನ ದಿನ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಮತ್ತು ಲೋಕಸಭಾ ಚುನಾವಣೆಯಲ್ಲೂ ಸ್ಪರ್ಧಿಸುವ ಸುಳಿವನ್ನು ಪರೋಕ್ಷವಾಗಿ ಪುತ್ತಿಲ ಪರಿವಾರದ ಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಅವರು ನೀಡಿದ್ದಾರೆ.


ಪುತ್ತೂರು ಸಾಲ್ಮರ ಕೊಟೇಚ ಹಾಲ್ ನಲ್ಲಿ ಆ.20 ರಂದು ನಡೆದ ಪುತ್ತಿಲ ಪರಿವಾರದ ನಗರ, ಗ್ರಾಮಾಂತರದ ಬೂತ್ ಅಧ್ಯಕ್ಷ, ಕಾರ್ಯದರ್ಶಿಗಳ ಸಮಾಗಮದಲ್ಲಿ ಅವರು ಮಾತನಾಡಿ ಪುತ್ತಿ ಪರಿವಾರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಚೈತನ್ಯ ತುಂಬುವ, ಸುಶೀಕ್ಷಿತರಿಗೆ ಇನ್ನಷ್ಟು ಶಕ್ತಿಯನ್ನು ತುಂಬುವ, ತಳಮಟ್ಟದಲ್ಲಿರುವ ಅಶಕ್ತ ಕುಟುಂಬಗಳಿಗೆ ಸೇವೆ, ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಆರೋಗ್ಯದಲ್ಲೂ ಸೇವೆ ನೀಡುವ ಮೂಲಕ ಸುಮಾರು ನಗದು ಮತ್ತು ಸಾಹಿತ್ಯ ಒದಗಿಸುವ ಮೂಲಕ ಒಟ್ಟು ಕಳೆದ ನೂರು ದಿವಸದಲ್ಲಿ ಲಕ್ಷಾಂತರ ರೂಪಾಯಿ ಯೋಜನೆಯ ಸಮಾಜಮುಖಿ ಸೇವೆ ಮಾಡಿ ಸಂಘಟನೆಯನ್ನು ಪರಿಪೂರ್ಣತೆ ಮಾಡಿದ ಪರಿವಾರದ ಎಲ್ಲಾ ಗ್ರಾಮ, ಬೂತ್‌ಗಳ ಪದಾಧಿಕಾರಿಗಳಿಗೆ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ ಎಂದ ಅವರು ನಾವು ಪುತ್ತಿಲ ಪರಿವಾರ ಸ್ಥಾಪಿಸುವಾಗ ಸಮಾಜಮಖಿಯ ಸೇವೆಗಳನ್ನೊಳಗೊಂಡ 5 ವಿಚಾರಗಳನ್ನು ಮುಂದಿಟ್ಟಿದ್ದೆವು. ಆದರೆ ಅನಿವಾರ್ಯವಾದರೆ ರಾಜಕೀಯಕ್ಕೂ ಪ್ರವೇಶ ಮಾಡುತ್ತೇವೆ ಎಂಬ ಸೂಚನೆ ನೀಡಿದ್ದೆವು. ಅದರಂತೆ ಒಂದು ಗ್ರಾ.ಪಂ ಕ್ಷೇತ್ರದಲ್ಲಿ ಸಮರ್ಥವಾಗಿ ಗೆದ್ದು, ಇನ್ನೊಂದು ಕ್ಷೇತ್ರದಲ್ಲಿ ಅಲ್ಪ ಮತಗಳಿಂದ ಸೋಲು ಅನುಭವಿಸಿದ್ದೇವೆ ಎಂದರು. ನಾವು ಆರಂಭದಲ್ಲಿ ಸಾಕಷ್ಟು ವ್ಯವಸ್ಥೆಗಳಲ್ಲಿ ಪ್ರತಿರೋಧಗಳು, ಸವಾಲುಗಳನ್ನು ಸ್ವೀಕಾರ ಮಾಡಿ ಯಶಸ್ವಿಯಾಗಿದ್ದೇವೆ. ಮುಂದಿನ ದಿನ ಶೋಷಿತರ, ಕಷ್ಟದಲ್ಲಿರುವವರ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕೊಡುವ ನಿಟ್ಟಿನಲ್ಲಿ ಸಮಾಜದ ಬಂಧುಗಳ ಅಪೇಕ್ಷೆಯಂತೆ ಸಾರ್ವಜನಿಕ ಸೇವೆಗೆ ಪೂರಕವಾಗಿ ಸೇವಾ ಶಕ್ತಿಯಾಗಿ ಬ್ಯಾಂಕ್ ಖಾತೆ ತೆರದಿದ್ದೇವೆ. ಮುಂದೆ 6 ತಿಂಗಳಿಗೊಮ್ಮೆ ಲೆಕ್ಕಪತ್ರ ನೀಡುತ್ತೆವೆ. ಯೋಚನೆ, ಯೋಜನೆಗಳನ್ನು ಗುರಿಯಾಗಿರಿಸಿ, ಸೋಲುಗಳನ್ನು ಸವಾಲುಗಳನ್ನಾಗಿ ಸ್ವೀಕರಿಸಿ, ಜನರ ಆಶೋತ್ತರಗಳನ್ನು ಈಡೇರಿಸಲು ಪರಿವಾರ ಜಿಲ್ಲಾ ಮಟ್ಟಕ್ಕೆ ಹೋಗುವ ಒತ್ತಾಯದಂತೆ ದಕ್ಷಿಣ ಕನ್ನಡ ಜಿಲ್ಲೆಗೆ ಪರಿವಾರವನ್ನು ವಿಸ್ತರಣೆ ಮಾಡುವ ಮೂಲಕ ಸಮಾಜದ ಎಲ್ಲಾ ದುರಂತಗಳಿಗೆ ಉತ್ತರ ಕೊಡುವ ಕೆಲಸ ಆಗಲಿದೆ. ನಮಗೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎಂಬ ಚಿಂತನೆಯಲ್ಲಿ ಮುಂದುವರಿಯೋಣ ಎಂದ ಅವರು ತಮ್ಮ ಭಾಷಣದಲ್ಲಿ ಮುಂದಿನ ದಿನ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಮತ್ತು ಲೋಕಸಭೆ ಚುನವಣೆಯಲ್ಲೂ ಪುತ್ತಿಲ ಪರಿವಾರ ಸ್ಪರ್ಧಿಸಲಿದೆ ಎಂಬ ಸುಳಿವು ನೀಡಿದಂತಾಗಿದೆ.


ಉತ್ತಮ ಕೆಲಸ ಮಾಡಿ ನಾಯಕರಾಗಿ:
ನಿವೃತ್ತ ಪ್ರಾಂಶುಪಾಲ ಬಿ ವಿ ಸೂರ್ಯನಾರಾಯಣ್ ಅವರು ಮಾತನಾಡಿ ಏನೇ ಸವಾಲು ಬಂದರೂ ಜೊತೆಯಾಗಿರಿ. ಸಮಾಜದಲ್ಲಿ ಆಗದ ಕೆಲಸವನ್ನು ಮಾಡಿ ಆಗ ನೀವು ನಾಯಕರಾಗುತ್ತೀರಿ ಎಂದ ಅವರು ಇನ್ನೊಬ್ಬರ ಕಷ್ಟಕ್ಕೆ ಸ್ಪಂಧಿಸಿ ಅವರ ಸಂವೇಧನಾಶೀಲತೆಯಲ್ಲಿ ಭಾಗಿಯಾಗಿ ಎಂದರು. ನಿಮ್ಮ ಮೊದಲ ಹೆಜ್ಜೆ ಬಹಳ ದಿಟ್ಟ ಹೆಜ್ಜೆಯಾಗಿದೆ. ಇದರಲ್ಲಿ ನೀವು ಯಶಸ್ವಿಯಾಗಿದ್ದಿರಿ. ನೀವೆಲ್ಲ ಪರಿವಾರದವರು ನನ್ನ ಪರಿವಾರದವರೇ ಆಗಿದ್ದೀರಿ ಎಂದರು.


ಎಲ್ಲಾ ಗ್ರಾಮ, ಬೂತ್ ಸಮಿತಿಗಳಿಂದ ಸೇವಾ ಕಾರ್ಯ ಯಶಸ್ವಿ :
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತಾ ಮಾತನಾಡಿ ಇವತ್ತು ನಮಗೆ ಶತ ದಿನದ ಸಂಭ್ರಮ ನಾವೊಂದು ಸಂಘಟನೆಯಾಗಿ ಪುತ್ತೂರು ತಾಲೂಕಿನಲ್ಲಿ ಗುರುತಿಸಿಕೊಂಡಿದ್ದೇವೆ. ನಮ್ಮ ಉದ್ದೇಶವಾದ ಸೇವಾ ಕಾರ್ಯಗಳನ್ನು 5 ಯೋಜನೆಯಲ್ಲಿ ಮಾಡುತ್ತಿದ್ದು, ಅದನ್ನು ಎಲ್ಲಾ ಗ್ರಾಮ ಸಮಿತಿ ಬೂತ್ ಸಮಿತಿಗಳು ಯಶಸ್ವಿಯಾಗಿ ನಡೆಸಿದೆ. ಎಲ್ಲಾ ಸೇವೆಗಳ ಕುರಿತು ಮುಂದಿನ ಸಭೆಯಲ್ಲಿ ಎಲ್ಲಾ ಗ್ರಾಮ ಮತ್ತು ಬೂತ್ ಸಮಿತಿಗಳು ತಮ್ಮ ವರದಿಯನ್ನು ನೀಡಬೇಕೆಂದು ನಾನು ವಿನಂತಿಸುತ್ತೇನೆ. ಸೌಜನ್ಯನ ಸಾವಿಗೆ ನ್ಯಾಯ ಒದಗಿಸುವಂತೆ ನಮ್ಮ ನಡೆ ನ್ಯಾಯದ ಕಡೆ ಎಂಬ ಹೋರಾಟ ಯಶಸ್ವಿಯಾಗಲು ನಮ್ಮ ಪರಿವಾರದ ಗ್ರಾಮ,ಬೂತ್ ಸಮಿತಿಯ ಕಾರ್ಯಕರ್ತರು ಎಂದ ಅವರು ದೇಶದಲ್ಲಿ ದಿನದ 24 ಗಂಟೆಯೂ ನಿರಂತರ ದೇಶಕ್ಕಾಗಿ ಚಿಂತಿಸುವ ಮತ್ತು ಸೇವೆ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಆದಿತ್ಯನಾಥ್ ಯೋಗಿಯಂತೆ ಪುತ್ತೂರಿನಲ್ಲಿ 24 ಗಂಟೆಯೂ ಸಮಾಜದ ಚಿಂತನೆ ಮತ್ತು ಸೇವೆ ನೀಡುತ್ತಿರುವ ಏಕೈಕ ವ್ಯಕ್ತಿ ಅರುಣ್ ಕುಮಾರ್ ಪುತ್ತಿಲ ಮಾತ್ರ. ಮುಂದಿನ ದಿನ ಯಾವುದೇ ಒಡಕಿಲ್ಲದೆ ಸೇವಾ ಚಟುವಟಿಕೆ ನಿರಂತರ ಮುಂದುವರಿಸುವ ಎಂದರು.

ಪುತ್ತಿಲ ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲು ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಧಾರ್ಮಿಕ ಉಪನ್ಯಾಸಕ ಶ್ರೀಕೃಷ್ಣ ಉಪಾಧ್ಯಾಯ, ಪರಿವಾರಸ ಗೌರವ ಸಲಹೆಗಾರ ಸುನಿಲ್ ಬೋರ್ಕರ್, ಭೀಮ್ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪುತ್ತಿಲ ಪರಿವಾರದ ತಾಲೂಕಿನ ಉಪಾಧ್ಯಕ್ಷ ಕೃಷ್ಣಪ್ರಸಾದ್ ಶೆಟ್ಟಿ, ಮಹೇಂದ್ರವರ್ಮ ಬಜತ್ತೂರು, ಶರತ್ ಕುಮಾರ್ ಈಶ್ವರಮಂಗಲ, ಪ್ರೇಮರಾಜ್ ಆರ್ಲಪದವು, ಪ್ರವೀಣ್ ಶೆಟ್ಟಿ ತಿಂಗಳಾಡಿ, ರಾಕೇಶ್, ಅಣ್ಣಿ ಪೂಜಾರಿ, ರಾಜು ಶೆಟ್ಟಿ ಅತಿಥಿಗಳನ್ನು ಗೌರವಿಸಿದರು. ಶರಣ್ಯ ಮತ್ತು ಶ್ರಾವಣ್ಯ ಪ್ರಾರ್ಥಿಸಿದರು. ಪರಿವಾರದ ಕಾರ್ಯದರ್ಶಿ ರವಿ ಕುಮಾರ್ ಸ್ವಾಗತಿಸಿದರು. ಪುತ್ತಿಲ ಪರಿವಾರದ ನಗರ ಅಧ್ಯಕ್ಷ ಅನಿಲ್ ತೆಂಕಿಲ ವಂದಿಸಿದರು. ನವೀನ್ ರೈ ಪಂಜಳ, ರವಿ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ಪುತ್ತಿಲ ಪರಿವಾರದ ತಾಲೂಕಿನ ಎಲ್ಲಾ ಪದಾಧಿಕಾರಿಗಳು, ಗ್ರಾಮ ಸಮಿತಿ ಗೌರವ ಸಲಹೆಗಾರರು, ತಾಲೂಕಿನ ಗ್ರಾಮದ ಅಧ್ಯಕ್ಷ ಕಾರ್ಯದರ್ಶಿಗಳು, ಎಲ್ಲಾ 220 ಬೂತ್‌ನ ಅಧ್ಯಕ್ಷ ಮತ್ತು ಕಾರ್ಯದರ್ಶಿಗಳು ಸಮಾವೇಶದಲ್ಲಿ ಭಾಗವಹಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಭಾರತಮಾತಾ , ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಾರ್ಗದರ್ಶಕರಿಗೆ ಪುಷ್ಪಾರ್ಚನೆ ಮಾಡಿ ದೀಪ ಪ್ರಜ್ವಲನೆ ಮಾಡಿ, ಜಮ್ಮು ಕಾಶ್ಮೀರದ ಲೇಹ್‌ನಲ್ಲಿ ವಾಹನ ಅಪಘಾತದಿಂದ ಮೃತಪಟ್ಟ 9 ಮಂದಿ ಯೋಧರ ಆತ್ಮಕ್ಕೆ ಚಿರಶಾಂತಿ ಕೋರಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

ನಿರೀಕ್ಷೆಗೂ ಮೀರಿದ ಸೇವೆ ನೀಡಿದ ಮಾಹಿತಿ ನೀಡಿದ ಗ್ರಾಮ ಸಮಿತಿ
ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕದಲ್ಲಿ ನಿರೀಕ್ಷೆಗೂ ಮೀರಿದ ಸೇವೆ ಮಾಡಲಾಗಿರುವ ಕುರಿತು ಪರಿವಾರದ ಸಮಿತಿ ಪದಾಧಿಕಾರಿಗಳು ಮಾಹಿತಿ ನೀಡಿದರು. ಪೊದೆ ಕಡಿಯುವುದು, ಅನಾರೋಗ್ಯಕ್ಕೆ ಸ್ಪಂಧನೆ, ಶ್ರಮದಾನ, ಆರ್ಥಿಕ ನೆರವು, ರಸ್ತೆ ಸಂಪರ್ಕ, ಶಾಲೆಗೆ ನೆರವು, ಅಂತ್ಯಕ್ರಿಯೆಯಲ್ಲಿ ಸಹಕಾರ, ಶ್ರದ್ದಾಕೇಂದ್ರಗಳಲ್ಲಿ ಶುಚಿತ್ವದ ಕೆಲಸ, ಹಿಂದೂ ಹಬ್ಬಗಳಲ್ಲಿ ಜೋಡಣೆಯ ಕುರಿತು ನೀಡಿದ ಸೇವೆಯನ್ನು ಪುತ್ತಿಲ ಪರಿವಾರದ ಗ್ರಾಮ ಮತ್ತು ಬೂತ್ ಸಮಿತಿಯ ಪದಾಧಿಕಾರಿಗಳು ಕಾರ್ಯಕ್ರಮದ ಆರಂಭದಲ್ಲಿ ತಾಲೂಕು ಸಮಿತಿಗೆ ಮಾಹಿತಿ ನೀಡಿದರು. ತಾಲೂಕು ಸಮಿತಿಯು ಅಲ್ಪ ಸಮಯದಲ್ಲೇ ನಿರೀಕ್ಷೆಗೂ ಮೀರಿದ ಸೇವೆ ಪುತ್ತಿಲ ಪರಿವಾರದಿಂದ ಆಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪುತ್ತಿಲ ಪರಿವಾರ ಮಹಿಳಾ ಸಮಿತಿ ರಚನೆ
ಪುತ್ತಿಲ ಪರಿವಾರದ ಮಹಿಳಾ ಸಮಿತಿ ರಚನೆಯ ಘೋಷಣೆಯನ್ನು ಪುತ್ತಿಲ ಪರಿವಾರದ ತಾಲೂಕು ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತಾ ಅವರು ಮಾಡಿದರು. ಪುತ್ತಿಲ ಪರಿವಾರ ಮಹಿಳಾ ಅಧ್ಯಕ್ಷರಾಗಿ ಮಲ್ಲಿಕಾ ಪ್ರಸಾದ್ ಬಡಗನ್ನೂರು, ಪ್ರಧಾನ ಕಾರ್ಯದರ್ಶಿಯಾಗಿ ಜಯಲಕ್ಷ್ಮೀ ಸಗ್ರಿತ್ತಾಯ, ಉಪಾಧ್ಯಕ್ಷರಾಗಿ ಅಶ್ವಿನಿ, ಅಣ್ಣಪೂರ್ಣ ಎಸ್ ಕೆ ರಾವ್, ಕಾರ್ಯದರ್ಶಿಯಾಗಿ ರೇಣುಕಾ ಅವರ ಹೆಸರನ್ನು ಘೊಷಣೆ ಮಾಡಿ ಮುಂದಿನ ಸಮಿತಿ ಪದಾಧಿಕಾರಿಗಳನ್ನು ರಚಿಸಲಾಗುವುದು ಎಂದರು.


ಬ್ಯಾಂಕ್ ಖಾತೆ ಕ್ಯೂ ಆರ್ ಕೋಡ್ ಬಿಡುಗಡೆ
ಪುತ್ತಿಲ ಪರಿವಾರದಿಂದ ಸಮಾಜಮುಖಿ ಕಾರ್ಯಕ್ಕಾಗಿ ಗೋ ಸಂರಕ್ಷಣೆ ಸೇರಿದಂತೆ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ವಿಚಾರದಲ್ಲಿ ಸೇವೆ ನೀಡಲು ಬೇಕಾಗುವ ಶಕ್ತಿಗಳನ್ನು ಒದಗಿಸುವ ನಿಟ್ಟಿನಲ್ಲಿ ಸೇವಾ ಆರ್ಥಿಕ ಹೊಂದಾಣಿಕೆ ಮಾಡಿಕೊಳ್ಳಲು ಪುತ್ತಿಲ ಪರಿವಾರದಿಂದ ಬ್ಯಾಂಕ್ ಖಾತೆ ತೆರೆದಿದ್ದು, ಅದರ ಕ್ಯೂ ಆರ್ ಕೋಡ್ ಅನ್ನು ಸಭೆಯಲ್ಲಿ ಬಿಡುಗಡೆ ಮಾಡಲಾಯಿತು.


LEAVE A REPLY

Please enter your comment!
Please enter your name here