ಕೌಕ್ರಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

0

ಅಧ್ಯಕ್ಷರಾಗಿ ಲೋಕೇಶ್ ಬಾಣಜಾಲು ಅವಿರೋಧ ಆಯ್ಕೆ
ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ: ಬಿಜೆಪಿ ಬೆಂಬಲಿತ ವನಿತಾ ಎಂ.,ಆಯ್ಕೆ

ನೆಲ್ಯಾಡಿ: ಕೌಕ್ರಾಡಿ ಗ್ರಾ.ಪಂ.ನ 2ನೇ ಅವಧಿಗೆ ಅಧ್ಯಕ್ಷರಾಗಿ ಲೋಕೇಶ್ ಬಾಣಜಾಲು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ವನಿತಾ ಎಂ.,ಆಯ್ಕೆಯಾಗಿದ್ದಾರೆ. ಇಬ್ಬರೂ ಬಿಜೆಪಿ ಬೆಂಬಲಿತ ಸದಸ್ಯರಾಗಿದ್ದಾರೆ.


ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಪ್ರಕ್ರಿಯೆ ಆ.22ರಂದು ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು. 18 ಸದಸ್ಯ ಬಲದ ಕೌಕ್ರಾಡಿ ಗ್ರಾ.ಪಂ.ನಲ್ಲಿ ಬಿಜೆಪಿ ಬೆಂಬಲಿತ 11 ಹಾಗೂ ಕಾಂಗ್ರೆಸ್ ಬೆಂಬಲಿತ 7 ಸದಸ್ಯರಿದ್ದಾರೆ. ಸಾಮಾನ್ಯ ಸ್ಥಾನಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಸದಸ್ಯರಾದ ಲೋಕೇಶ್ ಬಿ., ಜನಾರ್ದನ ಎಂ.,ಹಾಗೂ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಸವಿತಾ ನಾಮಪತ್ರ ಸಲ್ಲಿಸಿದ್ದರು. ಬಳಿಕ ಬಿಜೆಪಿ ಬೆಂಬಲಿತ ಸದಸ್ಯ ಜನಾರ್ದನ ಹಾಗೂ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಸವಿತಾ ಅವರು ನಾಮಪತ್ರ ಹಿಂತೆಗೆದುಕೊಂಡಿದ್ದು ಅಧ್ಯಕ್ಷರಾಗಿ ಲೋಕೇಶ್ ಬಿ.ಅವಿರೋಧವಾಗಿ ಆಯ್ಕೆಗೊಂಡರು.

ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ:
ಹಿಂದುಳಿದ ವರ್ಗ ಎ ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಸದಸ್ಯೆ, ಹಾಲಿ ಅಧ್ಯಕ್ಷೆಯೂ ಆದ ವನಿತಾ ಎಂ., ಕಾಂಗ್ರೆಸ್ ಬೆಂಬಲಿತ ಸದಸ್ಯೆ ಶೈಲ ಹಾಗೂ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸಂಧ್ಯಾ ಪಿ.ಸಿ., ನಾಮಪತ್ರ ಸಲ್ಲಿಸಿದ್ದರು. ಬಳಿಕ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಶೈಲ ನಾಮಪತ್ರ ಹಿಂತೆಗೆದುಕೊಂಡರು. ನಂತರ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯೆ ವನಿತಾ ಎಂ.,10 ಮತ ಪಡೆದುಕೊಂಡು ಉಪಾಧ್ಯಕ್ಷರಾಗಿ ಆಯ್ಕೆಗೊಂಡರು. ಬಿಜೆಪಿ ಬಂಡಾಯ ಅಭ್ಯರ್ಥಿ ಸಂಧ್ಯಾ ಪಿ.ಸಿ., ಅವರು ಕಾಂಗ್ರೆಸ್ ಬೆಂಬಲಿತರ ಬೆಂಬಲದೊಂದಿಗೆ 8 ಮತ ಪಡೆದುಕೊಂಡರು.


ಹಾಲಿ ಅಧ್ಯಕ್ಷೆ ವನಿತಾ ಎಂ., ಹಾಲಿ ಉಪಾಧ್ಯಕ್ಷೆ ಜಿ.ಭವಾನಿ, ಸದಸ್ಯರಾದ ಮಹೇಶ್ ಪಿ., ಜನಾರ್ದನ ಎಂ., ಲೋಕೇಶ್ ಬಿ., ಪಷ್ಪಾ, ಸುಧಾಕರ ಜಿ., ಸವಿತಾ ಎಸ್., ಶೈಲ, ದೇವಕಿ, ಉದಯಕುಮಾರ್ ಗೌಡ, ಹನೀಫ್, ಡೈಸಿ ವರ್ಗೀಸ್, ಕುರಿಯಾಕೋಸ್ ಟಿ.ಎಂ.,ಯಾನೆ ರೋಹಿ ಟಿ.ಎಂ., ರತ್ನಾವತಿ ಎಸ್., ಬಿ.ದಿನೇಶ್‌ಕುಮಾರ್, ವಿಶ್ವನಾಥ ಗೌಡ, ಸಂಧ್ಯಾ ಪಿ.ಸಿ.,ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದರು. ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ನವೀನ್‌ಕುಮಾರ್ ಭಂಡಾರಿ ಚುನಾವಣಾಧಿಕಾರಿಯಾಗಿದ್ದರು. ಪುತ್ತೂರು ತಾ.ಪಂ.ವಿಷಯ ನಿರ್ವಾಹಕ ಸುರೇಶ್ ಪೂಜಾರಿ, ಕೌಕ್ರಾಡಿ ಗ್ರಾ.ಪಂ.ಪಿಡಿಒ ಯಶವಂತ ಬೆಳ್ಚಡ, ಕಾರ್ಯದರ್ಶಿ ದೇವಿಕಾ ಸಹಕರಿಸಿದರು.

ಅಭಿನಂದನೆ:
ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಬಿಜೆಪಿ ಮುಖಂಡರು ಬಿಜೆಪಿ ಶಾಲು, ಹಾರಾರ್ಪಣೆ ಮಾಡಿ ಅಭಿನಂದನೆ ಸಲ್ಲಿಸಿದರು. ಬಿಜೆಪಿ ಸುಳ್ಯ ಮಂಡಲದ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ನೆಲ್ಯಾಡಿ ಮಹಾಶಕ್ತಿಕೇಂದ್ರದ ಅಧ್ಯಕ್ಷ ಭಾಸ್ಕರ ಗೌಡ ಇಚ್ಲಂಪಾಡಿಯವರು ಮಾತನಾಡಿ ಶುಭಹಾರೈಸಿದರು. ಬಿಜೆಪಿ ಸುಳ್ಯ ಮಂಡಲದ ಕಾರ್ಯದರ್ಶಿ ಸುಭೋದ್, ಜಿ.ಪಂ.ಮಾಜಿ ಸದಸ್ಯ ಬಾಲಕೃಷ್ಣ ಬಾಣಜಾಲು, ಗ್ರಾ.ಪಂ.ಮಾಜಿ ಅಧ್ಯಕ್ಷ ಎಂ.ಕೆ.ಇಬ್ರಾಹಿಂ, ನೆಲ್ಯಾಡಿ ಗ್ರಾ.ಪಂ.ಸದಸ್ಯ ರವಿಪ್ರಸಾದ್ ಶೆಟ್ಟಿ, ಬಿಜೆಪಿ ಮುಖಂಡ ನಾರಾಯಣ ಗೌಡ ಗುಂಡಿ ಮತ್ತಿತರರು ಉಪಸ್ಥಿತರಿದ್ದರು. ಸದಸ್ಯ ಮಹೇಶ್ ಪಿ.,ವಂದಿಸಿದರು.

LEAVE A REPLY

Please enter your comment!
Please enter your name here