ಪುತ್ತೂರು: ನಾವು ಸದಾ ಜಾಗೃತರಾಗಿದ್ದು ಒಳ್ಳೆಯ ಮಾನವರಾಗಿ, ನಮ್ಮ ದೇಶದ ಸಂಸ್ಕೃತಿಯ ಜೊತೆಗೆ ಇತರ ಎಲ್ಲಾ ವಿಷಯಗಳ ಮಹತ್ವಗಳನ್ನೂ ತಿಳಿಯುತ್ತಾ, ನಮ್ಮ ಸುತ್ತಮುತ್ತಲಿನವರಿಗೂ ಅರಿವು ಮೂಡಿಸುವ ಮೂಲಕ ನಮ್ಮ ದೇಶವನ್ನು ಬಲಿಷ್ಠಗೊಳಿಸಲು ಸದಾ ದೇಶದ ಬಗ್ಗೆ ಚಿಂತಿಸೋಣ ಎಂದು ನಿವೃತ್ತ ಸೈನಿಕ ಸಂಘದ ನಿಕಟಪೂರ್ವ ಗೌರವಾಧ್ಯಕ್ಷ ತುಳಸೀದಾಸ್ ಅವರು ಹೇಳಿದರು.
ಅವರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಂಗಸಂಸ್ಥೆ ರೇಡಿಯೋ ಪಾಂಚಜನ್ಯ 90.8 ಎಫ್.ಎಂ. ಸಮುದಾಯ ಬಾನುಲಿ ಕೇಂದ್ರದಲ್ಲಿ ಆ.22ರಂದು ನಡೆದ ಪುತ್ತೂರು ತಾಲೂಕಿನ ನಿವೃತ್ತ ಯೋಧರ ಯಶೋಗಾಥೆಯ ಪ್ರತಿಬಿಂಬಿತ 62ರ ಸಂಚಿಕೆಯ ಕಾರ್ಯಕ್ರಮ, ‘ದೇಶರಕ್ಷಣೆ ನಮ್ಮೆಲ್ಲರ ಹೊಣೆ, ಏಕೆ? ಮತ್ತು ಹೇಗೆ ?’ ಸಂವಾದ ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಜಗತ್ತು ಬದಲಾಗಬೇಕು ಎನ್ನುವವರು, ಮೊದಲು ತಮ್ಮಿಂದಲೇ ಬದಲಾವಣೆ ತರಲು ಸಾಧ್ಯವಾದರೆ, ಅದು ಅದ್ಭುತವಾದ ಸಂದೇಶ ಎಂದು ಹೇಳಿದರು. ಕಾರ್ಯಕ್ರಮವನ್ನು ನಿವೃತ್ತ ಸೈನಿಕ ಸಂಘದ ಗೌರವಾಧ್ಯಕ್ಷರಾದ ಐಖಿ. ಅಔಐ ರಮಾಕಾಂತನ್ ಮತ್ತು ಅಧ್ಯಕ್ಷ ಎಂ.ಕೆ. ನಾರಾಯಣ ಭಟ್ ಅವರು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಿವೇಕಾನಂದ ಸೆಂಟ್ರಲ್ ಸ್ಕೂಲ್ ಸಮಿತಿ ಸದಸ್ಯೆ ಹಾಗೂ ದೇಶರಕ್ಷಣೆ ನಮ್ಮ ಹೊಣೆ ಕಾರ್ಯಕ್ರಮದ ಸಂಯೋಜಕರಾದ ಶಂಕರಿ ಶರ್ಮ ಅವರು ವಹಿಸಿದ್ದರು. ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಅಧ್ಯಕ್ಷರಾದ ಉಮೇಶ್ ನಾಯಕ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ, ಭಾರತ ಮಾತೆಯ ಪುಣ್ಯದ ಮಣ್ಣಿನಲ್ಲಿ ವೀರ ಅಮರರಾದ ಯೋಧರಿಗಾಗಿ ಗೌರವ ಸಲ್ಲಿಸುವ ಉದ್ದೇಶದಿಂದ `ನಮ್ಮ ಮಣ್ಣು ನಮ್ಮ ದೇಶ’ ಪರಿಕಲ್ಪನೆಯಲ್ಲಿ ಗಿಡಕ್ಕೆ ನೀರು ಹಾಕುವ ಮೂಲಕ ವೀರ ಯೋಧರಿಗೆ ಗೌರವ ಸಲ್ಲಿಸಲಾಯಿತು.
ಪುತ್ತೂರು ತಾಲೂಕಿನಲ್ಲಿ 150ಕ್ಕೂ ಅಧಿಕ ಯೋಧರು ನಿವೃತ್ತ ಸೈನಿಕ ಸಂಘದ ಸದಸ್ಯರಿದ್ದು, ಅವರನ್ನು ಗೌರವಿಸುವ ನೆಲೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ನಿವೃತ್ತ ಸೈನಿಕರಿಗೆ ಆರತಿ ಬೆಳಗಿ, ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ರೇಡಿಯೋ ಪಾಂಚಜನ್ಯ ಸಮಿತಿ ಕೋಶಾಧಿಕಾರಿಯಾದ ಗೌರಿ ಬನ್ನೂರು, ವಿವೇಕಾನಂದ ಸೆಂಟ್ರಲ್ ಸ್ಕೂಲ್ ಸಮಿತಿ ಅಧ್ಯಕ್ಷೆ ವಸಂತಿ ಕೆ, ಕಾರ್ಯದರ್ಶಿ ಭರತ್ ಪೈ, ಶ್ರೀರಾಮಕೃಷ್ಣ ಪ್ರೌಢ ಶಾಲಾ ಸ್ಕೌಟ್ಸ್ ಶಿಕ್ಷಕರಾದ ಸುನೀತಾ ಮತ್ತು ವೇದಾವತಿ, ಶರಾವತಿ ರವಿನಾರಾಯಣ, ಡಾ. ವಿಜಯ ಸರಸ್ವತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ರೇಡಿಯೋ ಪಾಂಚಜನ್ಯದ ಅಧ್ಯಕ್ಷೆ ಕೃಷ್ಣವೇಣಿ ಪ್ರಸಾದ್ ಮುಳಿಯ ಪ್ರಾಸ್ತಾವಿಕವಾಗಿ ಮಾತನಾಡಿದರು.
ರೇಡಿಯೋ ಪಾಂಚಜನ್ಯದ ಕಾರ್ಯದರ್ಶಿ ಪದ್ಮಾ ಕೆ.ಆರ್. ಆಚಾರ್ಯ ಸ್ವಾಗತಿಸಿ, ಸದಸ್ಯೆ ಶಾಲಿನಿ ಆತ್ಮಭೂಷಣ್ ವಂದಿಸಿದರು. ಕಾರ್ಯಕ್ರಮವನ್ನು ರೇಡಿಯೋ ಪಾಂಚಜನ್ಯದ ಸಂಯೋಜಕಿ ತೇಜಸ್ವಿನಿ ರಾಜೇಶ್ ನಿರೂಪಿಸಿದರು. ಸಿಬ್ಬಂದಿ ಪ್ರಶಾಂತ್ ಮತ್ತು ಮುಳಿಯ ಸಿಬ್ಬಂದಿ ಸಂದೇಶ್ ಸಹಕರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮ (ಬಾಕ್ಸ್) ಕಾರ್ಯಕ್ರಮದಲ್ಲಿ ವಿವೇಕಾನಂದ ಕಾಲೇಜು ವಿದ್ಯಾರ್ಥಿನಿ ಶ್ರೇಯಾ ಆಚಾರ್ಯ ಭಾಗವತಿಕೆ ಶೈಲಿಯಲ್ಲಿ ಹಾಗೂ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನೆಹರೂನಗರ ಇಲ್ಲಿ ವಿದ್ಯಾರ್ಥಿಗಳು ದೇಶಭಕ್ತಿಗೀತೆಯನ್ನು ಹಾಡಿದರು ಮತ್ತು ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ರಿ. ವತಿಯಿಂದ ಶ್ರೀ ದೀಪಕ್ ಹಾಗೂ ಪ್ರೀತಿಕಲಾ ಅವರ ನೇತೃತ್ವದಲ್ಲಿ ನೃತ್ಯ ಕಾರ್ಯಕ್ರಮ ನಡೆಯಿತು.
ಜೊತೆಗೆ ಉಪಸ್ಥಿತರಿದ್ದ ಯೋಧರಿಗಾಗಿ ಮನೋರಂಜನಾ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಪ್ರಬಂಧ ಸ್ಪರ್ಧೆ ದೇಶರಕ್ಷಣೆ ನಮ್ಮ ಹೊಣೆ ಏಕೆ ? ಮತ್ತು ಹೇಗೆ ? ಈ ವಿಷಯದಲ್ಲಿ ನಡೆಸಿದ ಸ್ಪರ್ಧೆಯಲ್ಲಿ ಪ್ರಥಮ ವಾಮದಪದವು ಸರಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿನಿ ರಕ್ಷಿತಾ, ದ್ವಿತೀಯ ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿನಿ ಅಂಕಿತಾ ಎ.ಎಸ್. ಮತ್ತು ಮಂಗಳೂರು ಎಸ್‌ಡಿಎಂ ಮಂಗಳೂರು ಕಾಲೇಜು ವಿದ್ಯಾರ್ಥಿನಿ ಅರ್ಚಿತ್ ಎ.ಜೈನ್, ತೃತೀಯ ನೆಹರೂನಗರ ವಿವೇಕಾನಂದ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ ಇಲ್ಲಿನ ವಿದ್ಯಾರ್ಥಿನಿ ಅಕ್ಷಯ ಶಂಕರಿ ಹಾಗೂ ಸಂತ ಫಿಲೋಮಿನಾ ಕಾಲೇಜು ದರ್ಬೆ ಪುತ್ತೂರು ಇಲ್ಲಿನ ಸ್ಮಿತಾ ಎಸ್. ರೈ ಅವರು ಪ್ರೋತ್ಸಾಹಕ ಬಹುಮಾನವನ್ನು ಪಡೆದಿದ್ದು ಅವರನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಲಾಯಿತು. ವಿವೇಕಾನಂದ ಪದವಿ ಕಾಲೇಜಿನ ಎನ್.ಸಿ.ಸಿ ವಿಭಾಗದ ವಿದ್ಯಾರ್ಥಿಗಳು ಹಾಗೂ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸೇರಿದಂತೆ ಹಲವು ಕಾಲೇಜು ವಿದ್ಯಾರ್ಥಿಗಳು ಸಂವಾದದಲ್ಲಿ ಪಾಲ್ಗೊಂಡರು.