ಶಾಂತಿನಗರ ಹಾ.ಉ.ಸಹಕಾರಿ ಸಂಘದ ಕಟ್ಟಡ ಉದ್ಘಾಟನೆ

0

ಹಾಲು ಉತ್ಪಾದನೆ ಹೆಚ್ಚಳಕ್ಕೆ ವಿವಿಧ ಕಾರ್ಯಕ್ರಮ: ಎಸ್.ಬಿ.ಜಯರಾಮ ರೈ

ನೆಲ್ಯಾಡಿ: ಗೋಳಿತ್ತೊಟ್ಟು ಗ್ರಾಮದ ಶಾಂತಿನಗರ ಹಾಲು ಉತ್ಪಾದಕರ ಸಹಕಾರಿ ಸಂಘದ ನೂತನ ಕಟ್ಟಡದ ಉದ್ಘಾಟನೆ ಆ.24ರಂದು ಬೆಳಿಗ್ಗೆ ನಡೆಯಿತು.
ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಉಪಾಧ್ಯಕ್ಷ ಎಸ್.ಬಿ.ಜಯರಾಮ ರೈಯವರು ಕಟ್ಟಡ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ದ.ಕ.ಜಿಲ್ಲೆಯಲ್ಲಿ ಹಾಲು ಉತ್ಪಾದನೆ ಕಡಿಮೆಯಾಗುತ್ತಿದ್ದು ಹೆಚ್ಚಳಕ್ಕೆ ಹಲವು ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಹೈನುಗಾರರಿಗೆ ಹೆಚ್ಚಿನ ಸವಲತ್ತು ನೀಡುವ ಬಗ್ಗೆಯೂ ಚಿಂತನೆ ನಡೆಯುತ್ತಿದೆ. ಸಂಘಗಳಿಗೆ ಖರ್ಚುವೆಚ್ಚ ಕಡಿಮೆಗೊಳಿಸುವ ನಿಟ್ಟಿನಲ್ಲಿ ಕ್ಯಾನ್‌ಲೆಸ್ ಒಕ್ಕೂಟ ಮಾಡುವ ನಿಟ್ಟಿನಲ್ಲಿಯೂ ಪ್ರಯತ್ನ ನಡೆಯುತ್ತಿದೆ. ಪುತ್ತೂರಿನಲ್ಲಿ ಕೆಎಂಎಫ್ ಘಟಕ ಸ್ಥಾಪನೆ, ಹಾಲಿನ ಪ್ಯಾಕಿಂಗ್, ಐಸ್‌ಕ್ರೀಮ್ ತಯಾರಿಸುವ ಕುರಿತೂ ಚಿಂತನೆ ನಡೆದಿದೆ ಎಂದರು.

ಒಕ್ಕೂಟದ ನಿರ್ದೇಶಕ ನಾರಾಯಣ ಪ್ರಕಾಶ್‌ರವರು ಮಾತನಾಡಿ, ಹಾಲು ಉತ್ಪಾದನೆ ಕಡಿಮೆಯಾಗಿರುವುದು ತಾತ್ಕಾಲಿಕವಾಗಿದೆ. ಹಾಲಿನ ಉತ್ಪನ್ನ, ಹಾಲಿಗೆ ಬೇಡಿಕೆ ಹೆಚ್ಚಳವಾಗಿದೆ. ಆದ್ದರಿಂದ ಹೈನುಗಾರರೂ ಧೃತಿಗೆಡಬೇಕಿಲ್ಲ. ಹೈನುಗಾರಿಕೆಯು ಕೃಷಿಗೆ ಪೂರಕವಾಗಿದೆ. ಕೃಷಿ ಉಳಿಯಲು ಹೈನುಗಾರಿಕೆ ಉಳಿಯಬೇಕೆಂದು ಹೇಳಿದರು.


ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಕೆ.ಪ್ರತಾಪಚಂದ್ರ ರೈ ಕುದ್ಮಾರುಗುತ್ತು ಅವರು ಮಾತನಾಡಿ, ಎರಡೂವರೇ ವರ್ಷದ ಹಿಂದೆ ಆರಂಭಗೊಂಡ ಶಾಂತಿನಗರ ಹಾಲು ಉತ್ಪಾದಕರ ಸಹಕಾರಿ ಸಂಘವು ಬಾಡಿಗೆ ಕಟ್ಟಡದಲ್ಲಿ ಹಾಲು ಸಂಗ್ರಹಣಾ ಕೇಂದ್ರ ಹೊಂದಿತ್ತು. ಈಗ ಜಾಗ ಪಡೆದು 4 ಲಕ್ಷ ರೂ.ವೆಚ್ಚದಲ್ಲಿ ಸಂಘದ ನಿರ್ದೇಶಕರ ಹಾಗೂ ಸದಸ್ಯರ ಸಹಕಾರದೊಂದಿಗೆ ತಾತ್ಕಾಲಿಕವಾಗಿ ಸ್ವಂತ ಕಟ್ಟಡ ಮಾಡಲಾಗಿದೆ. ಈಗ ಹಾಲು ಸಂಗ್ರಹಣೆಯಲ್ಲಿ ಕಡಿಮೆಯಾಗಿದ್ದು ಸದಸ್ಯರು ಹೈನುಗಾರಿಕೆಗೆ ಒತ್ತುಕೊಟ್ಟು ಹಾಲು ಉತ್ಪಾದನೆ ಹೆಚ್ಚಳ ಮಾಡಬೇಕು. ಇದರಿಂದ ಸಂಘವೂ ಅಭಿವೃದ್ಧಿ ಹೊಂದಲಿದೆ ಎಂದರು. ಸಂಘದ ಕಾರ್ಯದರ್ಶಿ ರಜತ್‌ಕುಮಾರ್ ಸ್ವಾಗತಿಸಿ, ವರದಿ ಮಂಡಿಸಿದರು. ಉಪಾಧ್ಯಕ್ಷ ಜನಾರ್ದನ ಗೌಡ ಬರಮೇಲು ವಂದಿಸಿದರು. ದ.ಕ.ಹಾಲು ಒಕ್ಕೂಟ ಮಂಗಳೂರು ಇದರ ವಿಸ್ತರಣಾಧಿಕಾರಿ ಮಾಲತಿ ಪಿ.,ಕಾರ್ಯಕ್ರಮ ನಿರೂಪಿಸಿದರು.

ಸಂಘದ ನಿರ್ದೇಶಕರಾದ ವೇದಕುಮಾರ್ ಪುಳಾರ, ಬಾಲಕೃಷ್ಣ ಗೌಡ ಆರಕರೆ, ದೇಜಪ್ಪ ಗೌಡ ಬಾಂಕೋಡಿ, ಗುಮ್ಮಣ್ಣ ಗೌಡ ಡೆಂಬಲೆ, ಸೂರಪ್ಪ ಗೌಡ ಆನಾಲು, ಪುರುಷೋತ್ತಮ ಗುರುಂಪು, ಸದಾನಂದ ಪೂಜಾರಿ ಮುರಿಯೇಲು, ವಾಮನ ನಾಯ್ಕ ನೂಜೂಲು, ಚೋಮಯ್ಯ ಶಾಂತಿನಗರ, ನಂದಿನಿ ನಾರಾಯಣ ಪೂಜಾರಿ ಡೆಂಬಳೆ, ಸೀತಮ್ಮ ಶಾಂತಿನಗರ, ಹಾಲುಪರೀಕ್ಷಕಿ ಜಯಂತಿ ಸಹಕರಿಸಿದರು. ದ.ಕ.ಹಾಲು ಒಕ್ಕೂಟದ ವ್ಯವಸ್ಥಾಪಕ ರಾಮಕೃಷ್ಣ ಭಟ್, ಪುತ್ತೂರು ವಿಭಾಗದ ಉಪವ್ಯವಸ್ಥಾಪಕ ಡಾ.ಸತೀಶ್ ರಾವ್, ಪಶು ವೈದ್ಯಾಧಿಕಾರಿ ಡಾ.ಜಿತೇಂದ್ರ ಪ್ರಸಾದ್ ಮತ್ತಿತರರು ಆಗಮಿಸಿ ಶುಭಹಾರೈಸಿದರು. ಬಳಿಕ ಸಂಘದ ವಾರ್ಷಿಕ ಸಾಮಾನ್ಯ ಸಭೆ ನಡೆಯಿತು.

LEAVE A REPLY

Please enter your comment!
Please enter your name here