ರಸ್ತೆ ಸಂಪರ್ಕಗಳೇ ಇಲ್ಲದಿದ್ದರೂ ಎರಡೆರಡು ಸೇತುವೆಗಳ ನಿರ್ಮಾಣ…!

0

ಇರ್ದೆಯ ಸೀರೆಹೊಳೆಗೆ ಬದಂತ್ತಡ್ಕ, ಕೆಲ್ಲಾಡಿಯಲ್ಲಿ ಪ್ರತ್ಯೇಕ ಬ್ರಿಡ್ಜ್ ಕಂ ಬ್ಯಾರೇಜ್

ಪುತ್ತೂರು: ಸಾಮಾನ್ಯವಾಗಿ ಅದೆಷ್ಟೋ ಊರು, ಹಳ್ಳಿಗಳಲ್ಲಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸಂಪರ್ಕಕ್ಕಾಗಿ ಸೇತುವೆಗಳಿಲ್ಲದೆ ಜನರು ಪರದಾಡುತ್ತಿರುವ ಜೀವಂತ ನಿದರ್ಶನಗಳು ಇಂದಿಗೂ ಇವೆ.ಕೆಲವು ಕಡೆಗಳಲ್ಲಿ ಸೇತುವೆ ನಿರ್ಮಾಣ ಮರೀಚಿಕೆಯಾಗಿ ಅಪಾಯಕಾರಿಯಾದರೂ ಅನಿವಾರ್ಯವಾಗಿ ಅಡಿಕೆ ಪಾಲದಲ್ಲಿಯೇ ಜೀವ ಕೈಯಲ್ಲಿ ಹಿಡಿದು ನದಿ, ತೋಡುಗಳನ್ನು ದಾಟಿ ಹೋಗುತ್ತಿರುವುದೂ ನಮ್ಮ ಕಣ್ಣ ಮುಂದಿದೆ.ಅಂಥದ್ದರಲ್ಲಿ ಇಲ್ಲೊಂದು ಕಡೆ ಸಂಪರ್ಕ ರಸ್ತೆಯೇ ಇಲ್ಲದಿರುವಲ್ಲಿ ಎರಡು ಸೇತುವೆಗಳು ನಿರ್ಮಾಣಗೊಂಡು ಉಪಯೋಗ ಶೂನ್ಯವಾಗಿದೆ.ಅದೂ ಹೆಚ್ಚು ಕಡಿಮೆ ಒಂದಕ್ಕೊಂದು ಸೇತುವೆಗಳು 800 ಮೀಟರ್ ಅಂತರದಲ್ಲಿ ನಿರ್ಮಾಣಗೊಂಡಿರುವುದು ಮತ್ತೊಂದು ವಿಶೇಷ.


ಇರ್ದೆ ಗ್ರಾಮದಲ್ಲಿ ಹಾದು ಹೋಗುವ ಸೀರೆಹೊಳೆಗೆ ಕೆಲ್ಲಾಡಿ ಮತ್ತು ಬದಂತ್ತಡ್ಕ ಎಂಬಲ್ಲಿ ಈ ರೀತಿಯ ಸೇತುವೆಗಳು ನಿರ್ಮಾಣಗೊಂಡಿದೆ.ಸಣ್ಣ ನೀರಾವರಿ ಇಲಾಖೆಯ ಅನುದಾನದಲ್ಲಿ ಕಿಂಡಿ ಆಣೆಕಟ್ಟು ಹಾಗೂ ಸೇತುವೆಗಳು (ಬ್ರಿಡ್ಜ್ ಕಂ ಬ್ಯಾರೇಜ್) ಈ ಎರಡೂ ಪ್ರದೇಶದಲ್ಲಿ ನಿರ್ಮಾಣಗೊಂಡಿದೆ.ವಿಶೇಷ ಅಂದರೆ ಎರಡೂ ಕಡೆ ಸೇತುವೆಗಳಿಗೂ ಸಂಪರ್ಕ ರಸ್ತೆಗಳೇ ಇಲ್ಲ.ಸಂಪರ್ಕ ರಸ್ತೆಗಳೇ ಇಲ್ಲದಿರುವಾಗ ಸೇತುವೆಗಳನ್ನು ನಿರ್ಮಿಸಿರುವ ಉದ್ದೇ ಶವೇನು ಎಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ.


ಪ್ರಾರಂಭದಲ್ಲಿ ಇರ್ದೆಯ ಬದಂತ್ತಡ್ಕದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಸಣ್ಣ ನೀರಾವರಿ ಇಲಾಖೆಯ ರೂ.2.50 ಕೋಟಿ ಅನುದಾನದಲ್ಲಿ ಕಿಂಡಿ ಆಣೆಕಟ್ಟು ಹಾಗೂ ಸೇತುವೆ(ಬ್ರಿಡ್ಜ್ ಕಂ ಬ್ಯಾರೇಜ್) ನಿರ್ಮಾಣಗೊಂಡಿತ್ತು.ಈ ಪ್ರದೇಶದ ಒಂದು ಭಾಗ ಇರ್ದೆ ಗ್ರಾಮದ ವ್ಯಾಪ್ತಿಯಲ್ಲಿದ್ದರೆ ಇನ್ನೊಂದು ಪ್ರದೇಶ ಬಲ್ನಾಡು ಗ್ರಾಮಕ್ಕೆ ಸೇರಿದೆ.ಕಿಂಡಿ ಆಣೆಕಟ್ಟಿನ ಜೊತೆಗೆ ಸೇತುವೆಯೇನೋ ನಿರ್ಮಾಣಗೊಂಡಿದೆ.ಇಲ್ಲಿ ಸೇತುವೆಗೆ ಬಲ್ನಾಡು ಭಾಗದಿಂದ ಸಂಪರ್ಕ ಕಲ್ಪಿಸಲು ತಾತ್ಕಾಲಿಕ ರಸ್ತೆ ಸಂಪರ್ಕವಿದೆ.ಇರ್ದೆಯಿಂದ ಬದಂತ್ತಡ್ಕ ಮೂಲಕ ಸೇತುವೆಗೆ ಸಂಪರ್ಕ ರಸ್ತೆ ನಿರ್ಮಾಣವಾಗಬೇಕಾದ ಜಾಗಗಳು ಖಾಸಗಿಯವರ ಪಟ್ಟಾ ಜಾಗಗಳಾಗಿದೆ.ಅದು ಅಡಿಕೆ ಕೃಷಿ ತೋಟಗಳನ್ನೂ ಹೊಂದಿದೆ.ಹೀಗಾಗಿ ಇಲ್ಲಿ ರಸ್ತೆ ನಿರ್ಮಿಸಬೇಕಾದರೆ ಭೂಸ್ವಾಧೀನ ಮಾಡಿಕೊಂಡು ರಸ್ತೆ ನಿರ್ಮಿಸಬೇಕಾದ ಸವಾಲುಗಳಿವೆ.


ಬದಂತಡ್ಕದಲ್ಲಿ ಸೇತುವೆ ನಿರ್ಮಾಣಗೊಂಡು ಸಂಪರ್ಕ ರಸ್ತೆ ನಿರ್ಮಿಸಬೇಕಾದ ಸವಾಲುಗಳಿರುವಾಗಲೇ ಈ ಸೇತುವೆಯಿಂದ ಸುಮಾರು 800 ಮೀಟರ್ ದೂರದ ಕೆಲ್ಲಾಡಿಯಲ್ಲಿ ಡ್ರಾಂ ಕಂ ಬ್ರಿಡ್ಜ್ ನಿರ್ಮಾಣಗೊಂಡಿದೆ. ಅದು ಸಣ್ಣ ನೀರಾವರಿ ಇಲಾಖೆಯ ರೂ.3.20 ಕೋಟಿ ಅನುದಾನದಲ್ಲಿ ನಿರ್ಮಾಣಗೊಂಡಿದೆ.2022ರ ನವಂಬರ್ ತಿಂಗಳಲ್ಲಿ ಕಾಮಗಾರಿ ಪ್ರಾರಂಭಗೊಂಡಿದ್ದು ಕಳೆದ ಮೇ ಅಂತ್ಯಕ್ಕೆ ಕಿಂಡಿ ಅಣೆಕಟ್ಟು ಹಾಗೂ ಸೇತುವೆ ನಿರ್ಮಾಣಗೊಂಡಿದೆ.ಇದರಲ್ಲಿ ವಿಶೇಷತೆಯೆಂದರೆ, ಸೇತುವೆಯ ಒಂದು ಭಾಗವಾದ ಪದರಂಜದ ಮೂಲಕ ಖಾಸಗಿಯವರ ಜಾಗದ ಮೂಲಕ ತಾತ್ಕಾಲಿಕ ರಸ್ತೆ ಸಂಪರ್ಕವಿದ್ದರೂ ಇನ್ನೊಂದು ಭಾಗದಲ್ಲಿ ರಸ್ತೆಯೇ ಇಲ್ಲ.ಅಲ್ಲಿ ಡೆಡ್ ಎಂಡ್.ಆಚೆ ಭಾಗದಲ್ಲಿ ರಸ್ತೆಯೇ ಇಲ್ಲ.ಎದುರಿಗೆ ಕಾಣುವುದು ದೊಡ್ಡ ಗುಡ್ಡ ಮಾತ್ರ. ಅಲ್ಲಿ ರಸ್ತೆ ನಿರ್ಮಿಸುವುದು ಅಸಾಧ್ಯ. ಒಂದು ವೇಳೆ ರಸ್ತೆ ನಿರ್ಮಿಸುವುದಾದರೂ ಸೇತುವೆಗಿಂತ ದುಪ್ಪಟ್ಟು ವೆಚ್ಚ ರಸ್ತೆ ನಿರ್ಮಾಣಕ್ಕೆ ಬೇಕಾಗಬಹುದು.ಅಲ್ಲಿ ಕಾಲು ದಾರಿಯೂ ಇಲ್ಲ. ಕಿಂಡಿ ಅಣೆಕಟ್ಟು ಈ ಭಾಗದ ಜನರಿಗೆ ಅಂತರ್ಜಲ ವೃದ್ದಿಗೆ ಸಹಕಾರಿಯಾದರೂ ಸೇತುವೆ ಮಾತ್ರ ಜನರಿಗೆ ಉಪಯೋಗಕ್ಕೆ ಬರುವುದು ಸಾಧ್ಯವಿಲ್ಲ. ಅಲ್ಲಿ ಓಡಾಡುವವರೇ ವಿರಳ.ಹೀಗಿದ್ದರೂ ಇಲ್ಲಿ ಇಷ್ಟೊಂದು ದೊಡ್ಡ ಮೊತ್ತದಲ್ಲಿ ಸೇತುವೆ ನಿರ್ಮಿಸಿರುವುದರ ಉದ್ದೇಶ ಮಾತ್ರ ಯಾರಿಗೂ ತಿಳಿಯದಂತಾಗಿದೆ.ಕೆಲ್ಲಾಡಿಯಲ್ಲಿ ಕಿಂಡಿ ಆಣೆಕಟ್ಟು ನಿರ್ಮಿಸುವಂತೆ ಕಳೆದ ಐದು ವರ್ಷಗಳ ಹಿಂದೆ ಶಾಸಕರಿಗೆ ಮನವಿ ಸಲ್ಲಿಸಲಾಗಿತ್ತು.ನಮ್ಮ ಮನವಿಗೆ ಸ್ಪಂದಿಸಿದ್ದ ಶಾಸಕರು ಕಿಂಡಿ ಅಣೆಕಟ್ಟು ಮಂಜೂರುಗೊಳಿಸಿದ್ದಾರೆ.ಇದರ ಜೊತೆಗೆ ಸೇತುವೆಯೂ ಮಂಜೂರಾಗಿದೆ ಎಂದು ಕೆಲ್ಲಾಡಿ ಭಾಗದ ಸ್ಥಳೀಯರು ತಿಳಿಸಿದ್ದಾರೆ.


ಎರಡೂ ಕಡೆ ಸಂಪರ್ಕ ರಸ್ತೆ ನಿರ್ಮಿಸುವುದೇ ಸವಾಲು:
ಬದಂತ್ತಡ್ಕದ ಸೇತುವೆಯ ಒಂದು ಭಾಗವಾದ ಬಲ್ನಾಡು ಸಂಪರ್ಕ ಕಲ್ಪಿಸುವಲ್ಲಿ ಕಚ್ಚಾ ರಸ್ತೆಯ ಸೌಲಭ್ಯವಿದೆ.ಇನ್ನೊಂದು ಭಾಗವಾದ ಇರ್ದೆಯ ಬದಂತ್ತಡ್ಕ ಸಂಪರ್ಕ ಕಲ್ಪಿಸುವಲ್ಲಿ ಖಾಸಗಿಯವರ ಕೃಷಿ ಜಾಗವಿದೆ.ಹೀಗಾಗಿ ಇಲ್ಲಿ ಜಾಗ ಸ್ವಾಧೀನ ಪಡಿಸಿಕೊಂಡು ರಸ್ತೆ ನಿರ್ಮಿಸಬೇಕಾದ ಸವಾಲುಗಳಿವೆ.ಆದರೆ ಕೆಲ್ಲಾಡಿಯ ಸವಾಲು ಇದಕ್ಕೂ ಭಿನ್ನವಾಗಿದೆ.ಸೇತುವೆ ಹಾಗೂ ಕಿಂಡಿ ಆಣೆಕಟ್ಟು ನಿರ್ಮಾಣಕ್ಕೆ ಸ್ಥಳೀಯರು ತಾತ್ಕಾಲಿಕವಾಗಿ ರಸ್ತೆಯನ್ನು ನೀಡಿದ್ದಾರೆ.ಅದು ಆ ಭಾಗದ ನಿವಾಸಿಗಳ ವರ್ಗಸ್ಥಳವಾಗಿದ್ದು ಅವರ ಕೃಷಿ ಜಾಗದ ಮೂಲಕ ಹಾದುಹೋಗುತ್ತಿದೆ.ಈ ಕಾರಣಕ್ಕಾಗಿ, ಕಾಮಗಾರಿ ನಡೆಯುವ ತನಕ ಮಾತ್ರ ರಸ್ತೆಗೆ ಜಾಗ ನೀಡುತ್ತೇವೆ. ಸಂಪರ್ಕ ರಸ್ತೆಗೆ ಶಾಶ್ವತವಾಗಿ ಜಾಗ ಬಿಡುವುದಿಲ್ಲ ಎಂದು ಜಾಗದ ಮಾಲಕರು ಸ್ಪಷ್ಟಪಡಿಸಿದ್ದಾರೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.ಹೀಗಾಗಿ ಜಮೀನಿನ ವಾರಸುದಾರರಿಗೆ ಪರಿಹಾರ ನೀಡಿ ಖಾಸಗಿ ಜಾಗವನ್ನು ಭೂಸ್ವಾಧೀನ ಮಾಡಿಕೊಂಡು ರಸ್ತೆ ನಿರ್ಮಿಸಬೇಕಾದ ಬಹುದೊಡ್ಡ ಸವಾಲು ಒಂದಾದರೆ ಸೇತುವೆಯ ಇನ್ನೊಂದು ಭಾಗದಲ್ಲಿ ರಸ್ತೆಯೇ ಇಲ್ಲ.ಅಲ್ಲಿ ಕಾಣಸಿಗುವುದು ದೊಡ್ಡ ಬೆಟ್ಟ ಮತ್ತೊಂದು ಸವಾಲು.ಆದರೂ ಅಲ್ಲಿ ರಸ್ತೆ ನಿರ್ಮಿಸುವುದಿದ್ದರೂ ಅದಕ್ಕೆ ಸೇತುವೆ ಹಾಗೂ ಕಿಂಡಿ ಆಣೆಕಟ್ಟಿಗಿಂತ ದುಪ್ಪಟ್ಟು ಮೊತ್ತದ ಅವಶ್ಯಕತೆಯಿದೆ ಎಂದು ಅಂದಾಜಿಸಲಾಗಿದೆ.


800 ಮೀಟರ್ ದೂರದಲ್ಲಿ ಎರಡು ಬ್ರಿಡ್ಜ್ ಕಂ ಬ್ಯಾರೇಜ್:
ಇಲ್ಲಿ ನಿರ್ಮಾಗೊಂಡಿರುವ ಬ್ರಿಡ್ಜ್ ಕಂ ಬ್ಯಾರೇಜ್‌ಗಳ ಅಂತರ ಬಹಳಷ್ಟು ಕಡಿಮೆಯಿದೆ.ಒಂದು ಕಿಂಡಿ ಅಣೆಕಟ್ಟಿನಿಂದ ಇನ್ನೊಂದು ಕಿಂಡಿ ಆಣೆಕಟ್ಟಿಗೆ ಸರಿ ಸುಮಾರು ೮೦೦ ಮೀಟರ್ ಅಂತರದಲ್ಲಿ ಸೇತುವೆ ಹಾಗೂ ಕಿಂಡಿ ಅಣೆಕಟ್ಟು ನಿರ್ಮಾಣಗೊಂಡಿದೆ.ಕುಡಿಯುವ ನೀರಿಗಾಗಿ ನಿರ್ಮಾಣಗೊಂಡಿರುವ ಬದಂತ್ತಡ್ಕದ ಕಿಂಡಿ ಅಣೆಕಟ್ಟಿನ ಎತ್ತರ ಬಹಳಷ್ಟು ಕಡಿಮೆಯಿದೆ.ಅಲ್ಲದೆ ಅದರ ಭಾಗದಲ್ಲಿ ಅಣೆಕಟ್ಟಿನ ಮುಕ್ಕಾಲು ಭಾಗ ಮರಳಿನ ದಿಬ್ಬವೇ ಉಂಟಾಗಿದ್ದು ಇದರಲ್ಲಿ ಎಷ್ಟು ನೀರು ಸಂಗ್ರಹವಾಗಬಹುದು.ಕನಿಷ್ಟ ಅಂತರದಲ್ಲಿ ಎರಡು ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಿಸಿರುವ ಉದ್ದೇಶವೇನು ಎಂದೂ ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.ರಾಜಕೀಯ ಪ್ರತಿಷ್ಠೆಗಾಗಿ ಸರಕಾರದ ಅನುದಾನ ಈ ರೀತಿಯಾಗಿ ದುರುಪಯೋಗವಾಯಿತೇ ಎನ್ನುವ ಪ್ರಶ್ನೆಗಳೂ ಎದುರಾಗಿವೆ.


ಕಳಪೆ ಕಾಮಗಾರಿ ಆರೋಪ:
ಕೆಲ್ಲಾಡಿಯ ಕಿಂಡಿ ಅಣೆಕಟ್ಟು ಹಾಗೂ ಸೇತುವೆಯ ನಿರ್ಮಾಣ ಕಾರ್ಯಗಳು ಮೇ ಅಂತ್ಯದ ವೇಳೆಗೆ ಪೂರ್ಣಗೊಂಡಿದೆ.ಆದರೆ ಈ ವರ್ಷದ ಕನಿಷ್ಠ ಮಳೆಗೆ ಒಂದು ಭಾಗದ ತಡೆಗೋಡೆ ಜರಿದು ನದಿ ಪಾಲಾಗಿರುವುದಲ್ಲದೆ ಪಕ್ಕದ ಅಡಿಕೆ ಕೃಷಿ ತೋಟಕ್ಕೂ ಹಾನಿಯಾಗಿದೆ.ಅಲ್ಲದೆ ಸೇತುವೆಯಲ್ಲಿ ಅಲ್ಲಲ್ಲಿ ಬಿರುಕುಗಳು ಉಂಟಾಗಿದ್ದು ಕಾಮಗಾರಿಯು ಕಳಪೆ ಗುಣಮಟ್ಟದ್ದಾಗಿದೆ ಎಂಬ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.


ಎಲ್ಲಾ ಅಂದುಕೊಂಡಂತೆ ಸಂಪರ್ಕ ರಸ್ತೆ ನಿರ್ಮಾಣವಾದರೆ ಬದಂತಡ್ಕದಲ್ಲಿ ನಿರ್ಮಾಣಗೊಂಡ ಸೇತುವೆಯು ಬಲ್ನಾಡು ಹಾಗೂ ಇರ್ದೆ ಗ್ರಾಮಗಳಿಗೆ ಸಂಪರ್ಕದ ಕೊಂಡಿಯಾಗಲಿದೆ.ಇರ್ದೆ, ಬೆಟ್ಟಂಪಾಡಿ, ನಿಡ್ಪಳ್ಳಿ, ಪಾಣಾಜೆ ಮೊದಲಾದ ಪ್ರದೇಶಗಳಿಂದ ಸಾರ್ಯ, ಸಾಜ, ಬೆಳಿಯೂರುಕಟ್ಟೆ ಹಾಗೂ ಪುಣಚ ಮೊದಲಾದ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಲು ತುಂಬಾ ಹತ್ತಿರವಾಗಲಿದೆ.ಅದೇ ರೀತಿ ಬಲ್ನಾಡು ಭಾಗದ ಜನರಿಗೆ ಇರ್ದೆ, ಬೆಟ್ಟಂಪಾಡಿ, ಪಾಣಾಜೆ, ಸುಳ್ಯಪದವು, ಈಶ್ವರಮಂಗಲಗಳಿಗೆ ಸಂಪರ್ಕ ಕಲ್ಪಿಸಲು ಬಹಳಷ್ಟು ಅನುಕೂಲವಾಗಲಿದೆ.ಕೆಲ್ಲಾಡಿಯ ಸೇತುವೆಯೂ ಇರ್ದೆ ಬೆಟ್ಟಂಪಾಡಿ ಎರಡೂ ಭಾಗದ ಜನರಿಗೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸಂಪರ್ಕ ಕಲ್ಪಿಸಲು ಸಹಕಾರಿಯಾಗಲಿದೆ.ಕಿಂಡಿ ಅಣೆಕಟ್ಟುಗಳಿಗೆ ಹಲಗೆಗಳು ಜೋಡಣೆಯಾಗಿ ನೀರು ಸಂಗ್ರಹಗೊಂಡು ಅಂತರ್ಜಲ ವೃದ್ಧಿಯಾಗಲಿ.ಈ ಭಾಗದ ಕೃಷಿಕರಿಗೂ ಪ್ರಯೋಜನವಾಗಲಿ. ಈಗಾಗಲೇ ನಿರ್ಮಾಣಗೊಂಡಿರುವ ಸೇತುವೆಗಳಿಗೆ ಸಂಪರ್ಕ ರಸ್ತೆಗಳು ನಿರ್ಮಾಣಗೊಂಡು ಜನರಿಗೆ ಪ್ರಯೋಜನವಾಗುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಪ್ರಯತ್ನಿಸಲಿ. ಸರಕಾರದ ಅನುದಾನಗಳು ಸದ್ಬಳಕೆಯಾಗಲಿ ಎಂಬುದು ನಾಗರಿಕರ ಆಶಯವಾಗಿದೆ.


ಎರಡೂ ಕಡೆ ರಸ್ತೆ ಇಲ್ಲದೆ ಗುಡ್ಡಕ್ಕೆ ಸೇತುವೆ ನಿರ್ಮಿಸಿದ್ದಾರೆ.ಇದು ಕೂಡ ಕಳಪೆಯಾಗಿದೆ.ಯಾವುದೇ ತಡೆಗೋಡೆ ಕಾಮಗಾರಿ ಮಾಡುವಾಗ 8, 10 ಎಂಎಂ ಸ್ಟೀಲ್ ಬಳಕೆ ಮಾಡಬೇಕು. ಆದರೆ ಇಲ್ಲಿ ಅದನ್ನು ಕೂಡ ಬಳಸಿಲ್ಲ.ಸಾರ್ವಜನಿಕ ಉಪಯೋಗ ನೋಡದೆ ಅಕ್ಕಪಕ್ಕದಲ್ಲೇ ಇಂತಹ ಸೇತುವೆಗಳನ್ನು ಮಾಡಿದ್ದಾರೆ. ಇಲ್ಲಿ ಗುಮ್ಮಟಗದ್ದೆ-ಪದರಂಜ-ಕೆಲ್ಲಾಡಿ-ಬದಂತಡ್ಕ-ದೂಮಡ್ಕ ಸಂಪರ್ಕ ಸೇತುವೆ ಆಗಬೇಕಿತ್ತು.ಆದರೆ ಆರಿಸಿಕೊಂಡ ಜಾಗ ಸರಿಯಾಗಿಲ್ಲ. ಸೇತುವೆ ಮಾಡಿದ ಬಳಿಕ ರಸ್ತೆ ಹುಡುಕುವುದು ಸರಿಯಲ್ಲ. ಇಲ್ಲಿ ರಸ್ತೆ ಮಾಡಲು ಕೆಲವು ಖಾಸಗಿ ವ್ಯಕ್ತಿಗಳು ಹಿಂದೆ ಮುಂದೆ ನೋಡ್ತಿದ್ದಾರೆ.ಇದಕ್ಕೆ ದೊಡ್ಡ ಮೊತ್ತದ ಅನುದಾನ ಬೇಕಾಗಬಹುದು. ರಸ್ತೆ ನಿರ್ಮಾಣವಾದರೆ ಸೇತುವೆ ಉಪಯೋಗಕ್ಕೆ ಬರಬಹುದು

ನವೀನ್ ರೈ ಚೆಲ್ಯಡ್ಕ, ಸದಸ್ಯರು, ಬೆಟ್ಟಂಪಾಡಿ ಗ್ರಾ.ಪಂ.

ಇಲ್ಲಿ ಎರಡು ಸೇತುವೆಗಳು ನಿರ್ಮಾಣಗೊಂಡಿದೆ.ಆದರೆ ಅವೆರಡಕ್ಕೂ ಸಂಪರ್ಕವೇ ಇಲ್ಲ. ಕೋಟಿಗಟ್ಟಲೆ ಅನುದಾನ ಬಳಸಿ ವ್ಯರ್ಥ ಮಾಡಲಾಗಿದೆ.ಇಲ್ಲಿ ಇಷ್ಟು ಖರ್ಚು ಮಾಡಿ ಎರಡೆರಡು ಸೇತುವೆ ನಿರ್ಮಾಣ ಮಾಡುವ ಬದಲು ಚೆಲ್ಯಡ್ಕದಲ್ಲಿ ಒಂದು ಸೇತುವೆ ನಿರ್ಮಿಸಬಹುದಿತ್ತಲ್ಲವೇ?

-ಹರೀಶ್, ಸ್ಥಳೀಯರು

ತಡೆಗೋಡೆ ಕುಸಿದು ಸುಮಾರು 150 ಅಡಿಕೆ ಮರಗಳು ನಾಶವಾಗಿವೆ.ಸಾವಿರಾರು ರೂ.ನಷ್ಟವಾಗಿದೆ.ನಮಗೆ ಪರಿಹಾರ ನೀಡಬೇಕು.ಈ ಹಿಂದೆ ಏನೂ ಆಗಿರಲಿಲ್ಲ. ತಡೆಗೋಡೆ ಆದ ಬಳಿಕ ಈ ಸಮಸ್ಯೆ ಸೃಷ್ಟಿಯಾಗಿದೆ. ಕುಸಿಯುತ್ತಾ ಹೋದರೆ ನಮ್ಮ ತೋಟವೇ ನಾಶವಾಗಲಿದೆ.ಈ ಬಗ್ಗೆ ಕಂದಾಯ ಇಲಾಖೆಗೆ ಮನವಿ ನೀಡಿದ್ದೇವೆ.

-ವಿಶಾಲಾಕ್ಷಿ , ಸ್ಥಳೀಯರು


ಇಲ್ಲೊಂದು ವೆಂಟೆಡ್ ಡ್ಯಾಂ ಆಗಬೇಕೆಂದು 5 ವರ್ಷಗಳ ಹಿಂದೆ ಶಾಸಕರಿಗೆ ಅರ್ಜಿ ನೀಡಿದ್ದೆವು.ಕಿಂಡಿ ಅಣೆಕಟ್ಟಿನ ಜೊತೆಗೆ ಸೇತುವೆಯೂ ಬಂದಿದೆ.ಕೆಲಸ ಕಾಮಗಾರಿಗೆ ಸ್ಥಳೀಯರು ರಸ್ತೆ ನೀಡಿದ್ದೇವೆ.ಇದು ಕಾಮಗಾರಿ ನಡೆಯುವವರೆಗೆ ಅಷ್ಟೇ ಎಂದು ಕೂಡ ಹೇಳಿದ್ದೇವೆ.ಮುಂದಕ್ಕೆ ರಸ್ತೆ ಬೇಕಾದಾಗ ಅವರವರು ಜಾಗ ನೀಡಬಹುದು.ಈಗ ರಸ್ತೆಗೆ ಜಾಗ ಬಿಟ್ಟವರ ಜೊತೆಗೆ ಮಾತುಕತೆ ನಡೆಸಿ ಸೂಕ್ತ ಪರಿಹಾರ ನೀಡಿ, ಜೊತೆಗೆ ಭದ್ರತೆ ಒದಗಿಸಿದರೆ ಸರಿಯಾಗಬಹುದೇನೋ..
ಮಾಧವ ರೈ, ಸ್ಥಳೀಯರು

ಇಲ್ಲಿ ಎರಡು ಅಣೆಕಟ್ಟುಗಳ ನಿರ್ಮಾಣ ಹಲವು ಸಂಘರ್ಷಗಳ ಹಿನ್ನೆಲೆಯಲ್ಲಿ ನಡೆದಿದೆ. ಕೊನೆಗೆ ಶಾಸಕರ ಜೊತೆಗೆ ಮಾತನಾಡಿ ಎರಡು ಅಣೆಕಟ್ಟು ನಿರ್ಮಿಸೋಣ ಎಂದು ನಿರ್ಮಿಸಲಾಗಿದೆ.ಇಲ್ಲಿ ಕೆಲವೊಂದು ಕಡೆ ರಸ್ತೆ ಮಾಡುವುದು ಅಷ್ಟು ಸುಲಭವಿಲ್ಲ.ಅಲ್ಲಿ ಹೊಳೆಯ ಬದಿಯಲ್ಲಿ ಪದರಂಜಕ್ಕೆ ಲಿಂಕ್ ಆಗುವ ಕಾಲುದಾರಿಯೊಂದಿತ್ತು. ಮೊದಲು ಕೆಲ್ಲಾಡಿಯಿಂದ ಇಳಿದು ಅದೇ ದಾರಿಯ ಮೂಲಕ ದೂಮಡ್ಕಕ್ಕೆ ಜನ ತೆರಳುತ್ತಿದ್ದರು.ಈಗ ಕಾಲುದಾರಿ ಬಳಕೆಯಲ್ಲಿಲ್ಲ.ಈಗ ಅದೇ ಕಾಲುದಾರಿ ಮೂಲಕ ರಸ್ತೆ ಮಾಡಬೇಕೆಂಬ ಆಗ್ರಹ ಅಣೆಕಟ್ಟಿನ ಆ ಭಾಗದವರಿಂದ ಕೇಳಿಬರುತ್ತಿದೆ.ಈ ಬಗ್ಗೆ ಪಂಚಾಯತ್‌ನಲ್ಲಿ ಚರ್ಚೆ ನಡೆಯುತ್ತಿದೆ.

-ಚಂದ್ರಶೇಖರ್ ರೈ ಬಾಲ್ಯೊಟ್ಟು,
ಸದಸ್ಯರು ಪಂಚಾಯತ್


ಕಿಂಡಿ ಅಣೆಕಟ್ಟಿನ ಜೊತೆಗೆ ಸೇತುವೆ ನಿರ್ಮಿಸಲೇಬೇಕೆಂದಿಲ್ಲ. ಜನರ ಬೇಡಿಕೆ ಇದ್ದರೆ ಮಾತ್ರ ಮಾಡುತ್ತೇವೆ.ಕೆಲ್ಲಾಡಿ, ಬದಂತಡ್ಕದಲ್ಲಿ ಬೇಕು ಎಂದು ಜನರ ಬೇಡಿಕೆಯೆಂತೆ ಶಾಸಕರ ಅನುದಾನದಲ್ಲಿ ಮಾಡಿದ್ದೇವೆ. 2022-23ನೇ ಸಾಲಿನಲ್ಲಿ 19 ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಿದ್ದೇವೆ.ಈ ಪೈಕಿ 3 ಕಿಂಡಿ ಅಣೆಕಟ್ಟುಗಳಲ್ಲಿ ಸೇತುವೆ ಇಲ್ಲ.ಉಳಿದ 16ರಲ್ಲಿ ಸೇತುವೆ ನಿರ್ಮಾಣ ಆಗಿದೆ.ಸ್ಥಳೀಯರ ಬೇಡಿಕೆ, ಮುಂದಿನ 100 ವರ್ಷಗಳ ಪ್ರವಾಹ ಪರಿಸ್ಥಿತಿಯನ್ನು ಅವಲೋಕನ ಮಾಡಿ, ವಿನ್ಯಾಸ ಮಾಡಿ ನಿರ್ಮಾಣ ಮಾಡುತ್ತೇವೆ.ತಡೆಗೋಡೆ ಕುಸಿದ ಬಗ್ಗೆ ಗಮನಕ್ಕೆ ಬಂದಿದೆ, ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದೇವೆ.ಗುತ್ತಿಗೆದಾರರರಿಗೆ ಸೂಚನೆ ನೀಡಲಾಗಿದೆ.ಮಳೆಗಾಲ ಮುಗಿದ ಕೂಡಲೇ ದುರಸ್ತಿ ಕೆಲಸ ಮಾಡಲಿದ್ದಾರೆ –

ರಾಕೇಶ್, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಸಣ್ಣನಿರಾವರಿ ಇಲಾಖೆ

LEAVE A REPLY

Please enter your comment!
Please enter your name here