ಶ್ರೀಕೃಷ್ಣಲೋಕ ಬೆಳ್ಳಿಹಬ್ಬ ಸಂಭ್ರಮದ ವಿವಿಧ ಸ್ಪರ್ಧಾ ಕಾರ್ಯಕ್ರಮಕ್ಕೆ ಚಾಲನೆ

0

ಮನೆಯಲ್ಲೇ ನಮ್ಮ ಮಕ್ಕಳಿಗೆ ಸಂಸ್ಕಾರ ಕೊಡುವ ಜವಾಬ್ದಾರಿ ಇರಬೇಕು – ಅಶೋಕ್ ಪ್ರಭು

ಪುತ್ತೂರು: ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿಯಿಂದ ನಡೆಯುವ ಶ್ರೀಕೃಷ್ಣಲೋಕದ ಬೆಳ್ಳಿಹಬ್ಬದ ಅಂಗವಾಗಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಸಹಯೋಗದೊಂದಿಗೆ ಆ.26 ರಂದು ಪುತ್ತೂರು ಶ್ರೀ ಲಕ್ಷ್ಮೀವೆಂಕಟರಮಣ ದೇವಳದ ಸುಕೃತೀಂದ್ರ ಕಲಾಮಂದಿರದಲ್ಲಿ ವಿವಿಧ ಸ್ಪರ್ಧಾ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಅಶೋಕ್ ಪ್ರಭು ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಆರಂಭದಲ್ಲಿ ಲಕ್ಷ್ಮೀ ವೆಂಕಟರಮಣ ದೇವಳದಲ್ಲೇ ನಡೆದಿರುವ ಕುರಿತು ತಿಳಿದಿದ್ದೇನೆ. ಈಗಲೂ ದೇವಳದ ಗರ್ಭಗುಡಿಯಲ್ಲಿ ಸಣ್ಣ ಶ್ರೀಕೃಷ್ಣನ ವಿಗ್ರಹ ಇದೆ. ಅಲ್ಲಿ ನಿತ್ಯ ಪೂಜೆ ನಡೆಯುತ್ತದೆ ಎಂದ ಅವರು ನಮ್ಮ ಹಿರಿಯರು ಶ್ರೀಕೃಷ್ಣನನ್ನು ಮಾತ್ರ ಜಗದ್ಗುರು ಎಂದು ಹೇಳಿದ್ದು, ಆಗ ನಮಗೆ ಸಂಸ್ಕೃತಿ, ಸಂಸ್ಕಾರವೇ ಪ್ರದಾನ. ನಂತರದ ಬೆಳವಣಿಗೆಯಲ್ಲಿ ಬಂದ ಬ್ರಿಟೀಷರು ನಮ್ಮ ಶಿಕ್ಷಣ ಪದ್ಧತಿ ಬದಲಾಯಿಸಿದ್ದರು. ಈಗ ಅವರು ತೊಲಗಿದರೂ ನಮ್ಮ ಮನಸ್ಥಿತಿ ಬದಲಾಗಿಲ್ಲ. ನಮಗೆ ಮನೆಯೇ ಮೊದಲ ಪಾಠ ಶಾಲೆ ಆದರೆ ಈಗ ಕನ್ನಡ ಶಾಲೆ ಬೇಡ. ಇಂಗ್ಲೀಷ್ ಶಾಲೆಯೇ ಬೇಕು. ಈ ನಡುವೆ ನಮ್ಮ ಮನೆಯಲ್ಲೇ ಮಕ್ಕಳಿಗೆ ಪಾಠ ಮಾಡಲು ಸಮಯವಿಲ್ಲದಂತಹ ಪರಿಸ್ಥಿತಿ ಬಂದೊದಗಿದೆ. ಮೊಬೈಲ್ ವಾಟ್ಸಾಪ್‌ನಲ್ಲಿ ಬಂದ ಸಂದೇಶವನ್ನು ಪಾರ್ವಡ್ ಮಾಡುವ ನಾವು ಧನಾತ್ಮಕ ಚಿಂತನೆ ಕಳೆದು ಕೊಂಡಿದ್ದೇವೆ. ನಮ್ಮ ಮನೆಯಲ್ಲಿ ನಮ್ಮಮಕ್ಕಳಿಗೆ ಸಂಸ್ಕಾರ ಕೊಡುವ ಜವಾಬ್ದಾರಿ ನಮ್ಮದು ಆಗಿರಬೇಕು. ಈ ನಿಟ್ಟಿನಲ್ಲಿ ನಮ್ಮ ಸಂಸ್ಕೃತಿಯನ್ನು ಉಳಿಸುವ ಇಂತಹ ಕಾರ್ಯಕ್ರಮಗಳು ನಿರಂತರ ನಡೆಯಬೇಕೆಂದು ಅಭಿಪ್ರಾಯಪಟ್ಟರು.


ಶಿಶು ಮಂದಿರದ ಆಡಳಿತ ಮಂಡಳಿ ಮಾಜಿ ಅಧ್ಯಕ್ಷೆ ಡಾ.ಸುಧಾ ಎಸ್ ರಾವ್ ಅವರು ಬ್ರಹ್ಮಾರ್ಪಣಾ ನಿಧಿಗೆ ಚಾಲನೆ ನೀಡಿ ಸಂಸ್ಕೃತಿ ಸಂಸ್ಕಾರ ಅಚಾರ ವಿಚಾರಗಳ ಕುರಿತು ಮಾತನಾಡಿದರು.
ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ಗೌರವಾಧ್ಯಕ್ಷೆ ರಾಜಿ ಬಲರಾಮ ಆಚಾರ್ಯ, ಸಮಿತಿ ಅಧ್ಯಕ್ಷ ದಾಮೋದರ್, ಪ್ರಧಾನ ಕಾರ್ಯದರ್ಶಿ ಸಂತೋಷ್ ರೈ, ಖಜಾಂಚಿ ಈಶ್ವರ ಮುರಳಿ ಭಟ್ ಉಪಸ್ಥಿತರಿದ್ದರು. ಸುಪ್ರಿಯಾ ಪ್ರಾರ್ಥಿಸಿದರು. ವಿವೇಕಾನಂದ ಶಿಶು ಮಂದಿರದ ಅಧ್ಯಕ್ಷ ರಾಜಗೋಪಾಲ ಭಟ್ ಸ್ವಾಗತಿಸಿದರು. ಸ್ಪರ್ಧಾ ಕಾರ್ಯಕ್ರಮದ ಸಂಚಾಲಕ ಶ್ರೀಕಾಂತ್ ಕಂಬಳಕೋಡಿ ವಂದಿಸಿದರು. ಪವಿತ್ರ ವಿಜಯ ನಾರಾಯಣ ಕೆ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಮಕ್ಕಳಿಗೆ ಭಗವದ್ಗೀತೆ, ಚಿತ್ರ ಬಿಡಿಸುವುದು ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆಯಿತು. ಮಕ್ಕಳ ತಾಯಂದಿರಿಗೆ ಶಂಖನಾದ ಸ್ಪರ್ಧೆ ನಡೆಯಿತು.

LEAVE A REPLY

Please enter your comment!
Please enter your name here