ಬಿರುಮಲೆಗೊಂದು ಸುತ್ತು ಸ್ಪರ್ಧೆಯ ನಡಿಗೆ ನಮ್ಮ ಜೀವನ ಆರೋಗ್ಯದೆಡೆಗೆ 2ಕಿ.ಮೀ ನಡಿಗೆ ಸ್ಪರ್ಧೆಗೆ ಬಿರುಮಲೆ ಬೆಟ್ಟದಲ್ಲಿ ಚಾಲನೆ

0

ರೂ.1 ಕೋಟಿ ಅನುದಾನ ನೀಡುವಂತೆ ಪ್ರವಾಸೋದ್ಯಮ ಸಚಿವರಿಗೆ ಪ್ರಸ್ತಾವನೆ-ಅಶೋಕ್ ರೈ

ಪುತ್ತೂರು: ಬಿರುಮಲೆ ಬೆಟ್ಟದ ಅಭಿವೃದ್ಧಿಗಾಗಿ ಅಭಿವೃದ್ಧಿ ಸಮಿತಿಯವರು ಕ್ರಿಯಾಶೀಲರಾಗಿದ್ದಾರೆ. ಈಗಾಗಲೇ ರೂ.2.50 ಕೋಟಿಯ ಯೋಜನೆ ರೂಪಿಸಿ ಪ್ರಸ್ತಾವನೆಯನ್ನು ನನಗೆ ನೀಡಿದ್ದಾರೆ. ಹೀಗಾಗಿ ಸದ್ಯಕ್ಕೆ ರೂ.1 ಕೋಟಿ ಅನುದಾನ ನೀಡುವಂತೆ ಪ್ರವಾಸೋದ್ಯಮ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಬಿರುಮಲೆ ಬೆಟ್ಟ ಅಭಿವೃದ್ಧಿ ಯೋಜನೆ, ರೋಟರಿ ಕ್ಲಬ್ ಪುತ್ತೂರು, ರೋಟರಿ ಕ್ಲಬ್ ಈಸ್ಟ್, ರೋಟರಿ ಕ್ಲಬ್ ಪುತ್ತೂರು ಸಿಟಿ, ರೋಟರಿ ಕ್ಲಬ್ ಪುತ್ತೂರು ಯುವ, ರೋಟರಿ ಕ್ಲಬ್ ಪುತ್ತೂರು ಸ್ವರ್ಣ, ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್, ರೋಟರಿ ಕ್ಲಬ್ ಪುತ್ತೂರು ಎಲೈಟ್, ಬಿರುಮಲೆ ಹಿಲ್ಸ್, ಜೇಸಿಐ, ವರ್ತಕ ಸಂಘ ಪುತ್ತೂರು ಇವುಗಳ ಸಹಯೋಗದೊಂದಿಗೆ ಆ.26ರಂದು ಬಿರುಮಲೆ ಬೆಟ್ಟದಲ್ಲಿ ನಡೆದಬಿರುಮಲೆಗೊಂದು ಸುತ್ತು ಸ್ಪರ್ಧೆಯ ನಡಿಗೆ ನಮ್ಮ ಜೀವನ ಆರೋಗ್ಯದೆಡೆಗೆ 2ಕಿ.ಮೀ ನಡಿಗೆ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿ ಅವರು ಮಾತನಾಡಿದರು. ಮಂಗಳೂರಿನಲ್ಲಿ ಬೀಚ್‌ಗಳಿರುವಂತೆ ಪುತ್ತೂರಿನಲ್ಲಿ ಏನೂ ಇಲ್ಲ. ಹೀಗಾಗಿ ಪುತ್ತೂರಿನ ಜನತೆಗೆ ಬಿರುಮಲೆ ಬೆಟ್ಟದ ಅಭಿವೃದ್ಧಿಯ ಆವಶ್ಯಕತೆಯಿದೆ. ಇದರ ಅಭಿವೃದ್ಧಿಯಾದಾಗ ಜನತೆಗೆ ಸಂಜೆಯ ವೇಳೆ, ರಜಾದಿನಗಳಲ್ಲಿ ಸಮಯ ಕಳೆಯಲು ಅನುಕೂಲವಾಗಲಿದೆ. ಕೇವಲ ಪ್ರಸ್ತಾವನೆ ಸಲ್ಲಿಸಿದರೆ ಸಾಲದು. ಅದರ ಹಿಂದೆ ಪ್ರಯತ್ನವಿರಬೇಕು. ವರ್ಷಕ್ಕೆ ರೂ.50 ಲಕ್ಷವನ್ನಾದರೂ ಪಡೆಯಲು ಪ್ರಯತ್ನಿಸಬೇಕು. ಬೆಟ್ಟಕ್ಕೆ ಜನರು ಬರಲು ಭಯಪಡುತ್ತಿದ್ದು ಮೊದಲನೆಯದಾಗಿ ದಾರಿದೀಪದ ವ್ಯವಸ್ಥೆಯಾಗಬೇಕು.

ಪಾರ್ಕ್ನ ಜೊತೆಗೆ ಜನರನ್ನು ಆಕರ್ಷಿಸಲು ಸರ್ಚಿಂಗ್ ಲೈಟಿಂಗ್ ಮಾಡಬೇಕು. ಭದ್ರತೆಗಾಗಿ ಪೊಲೀಸ್ ನಿಯೋಜಿಸಲು ಕ್ರಮ ಕೈಗೊಳ್ಳಲಾಗುವುದು ಎಂದ ಅವರು ಪ್ರವಾಸೋದ್ಯಮ ಅಭಿವೃದ್ಧಿಯಾದಾಗ ಎಲ್ಲಾ ಕ್ಷೇತ್ರಗಳು ಅಭಿವೃದ್ಧಿಯಾಗಲು ಸಾಧ್ಯ, ಖಾಸಗಿ ಸಹಭಾಗಿತ್ವದೊಂದಿಗೂ ಅಭಿವೃದ್ಧಿಗೆ ಪ್ರಯತ್ನಿಸಲಾಗುವುದು ಎಂದು ಹೇಳಿದರು.

ನಡಿಗೆ ಸ್ಪರ್ಧೆಗೆ ಧ್ವಜ ಹಾರಿಸಿ ಚಾಲನೆ ನೀಡಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ಮಾತನಾಡಿ, ನಮ್ಮ ದೈಹಿಕ ಆರೋಗ್ಯ ವೃದ್ಧಿಗೆ ನಡಿಗೆ ಅನುಕೂಲವಾಗಿದ್ದು ಉತ್ತಮ ಸ್ಪರ್ಧೆ ಏರ್ಪಡಿಸಿದ್ದು ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಬಿರುಮಲೆ ಬೆಟ್ಟ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎ.ಜಗಜ್ಜೀವನ್‌ದಾಸ್ ರೈ ಮಾತನಾಡಿ, ಬಿರುಮಲೆ ಬೆಟ್ಟವು ಪುತ್ತೂರಿನ ಅತೀ ಎತ್ತರದ ಪ್ರೇಕ್ಷಣೀಯ ಸ್ಥಳ. ಇದನ್ನು ಅಭಿವೃದ್ಧಿಪಡಿಸಲು ಎಲ್ಲಾ ವ್ಯವಸ್ಥೆ ಗಳೊಂದಿಗೆ 1978ರಿಂದ ಪ್ರಯತ್ನಿಸಲಾಗುತ್ತಿದೆ. ಬಿರುಮಲೆ ಬೆಟ್ಟವನ್ನು ಆಕರ್ಷಣೀಯವಾಗಿ ಅಭಿವೃದ್ಧಿಪಡಿಸಿ ಪ್ರವಾಸಿ ತಾಣವನ್ನಾಗಿ ಮಾಡುವಂತೆ ಈಗಾಗಲೇ ಶಾಸಕರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದನ್ನು ಮಂಜೂರುಗೊಳಿಸುವಂತೆ ಪ್ರಯತ್ನಿಸಿ, ಸಹಕರಿಸುವಂತೆ ಮನವಿ ಮಾಡಿದರು.

ರೋಟರಿ ಕ್ಲಬ್ 3181 ಅಸಿಸ್ಟೆಂಟ್ ಗವರ್ನರ್ ಲಾರೆನ್ಸ್ ಗೊನ್ಸಾಲ್ವಿಸ್, ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಜೈರಾಜ್ ಭಂಡಾರಿ, ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ರೋಟರಿ ಪುತ್ತೂರು ಸಿಟಿ ಅಧ್ಯಕ್ಷೆ ಗ್ರೇಸಿ ಗೊನ್ಸಾಲ್ವಿಸ್, ರೋಟರಿ ಕ್ಲಬ್ ಸ್ವರ್ಣದ ಆಧ್ಯಕ್ಷ ಸುಂದರ ರೈ ಬಲ್ಕಾಡಿ, ರೋಟರಿ ಕ್ಲಬ್ ಯುವದ ಅಧ್ಯಕ್ಷ ಪಶುಪತಿ ಶರ್ಮ, ರೋಟರಿ ಕ್ಲಬ್ ಸೆಂಟ್ರಲ್ ಅಧ್ಯಕ್ಷ ಡಾ.ರಾಜೇಶ್ ಬೆಜ್ಜಂಗಳ, ರೋಟರಿ ಕ್ಲಬ್ ಎಲೈಟ್ ಅಧ್ಯಕ್ಷ ಅಬ್ದುಲ್ ರಜಾಕ್ ಕಬಕಕಾರ್ಸ್, ಬಿರುಮಲೆ ಹಿಲ್ಸ್ ಉಪಾಧ್ಯಕ್ಷೆ ವಂದನ ಶರತ್, ಜೇಸಿಐ ಅಧ್ಯಕ್ಷ ಸುಹಾಸ್ ಮರಿಕೆ, ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿ ಉಲ್ಲಾಸ್ ಪೈ, ನಗರಸಭಾ ಸದಸ್ಯೆ ಇಂದಿರಾ ಪುರುಷೋತ್ತಮ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂತ ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋ ನಡಿಗೆ ಸ್ಪರ್ಧೆಯ ನಿಯಮಗಳನ್ನು ತಿಳಿಸಿದರು. ಸಂತ ಫಿಲೋಮಿನಾ ಪಿಯು ಕಾಲೇಜಿನ ದೈಹಿಕ ನಿರ್ದೇಶಕ ರಾಜೇಶ್ ಮೂಲ್ಯ, ಸೀತಾರಾಮ ಗೌಡ, ಫಿಲೋಮಿನಾ ಕಾಲೇಜಿನ ಕ್ರೀಡಾಪಟುಗಳು ನಡಿಗೆ ಸ್ಪರ್ಧೆಯ ಯಶಸ್ವಿಗೆ ಸಹಕರಿಸಿದರು. ಸುಬ್ರಾಯ ಅಮ್ಮಣ್ಣಾಯ ಪ್ರಾರ್ಥಿಸಿದರು. ಬಿರುಮಲೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಗಜ್ಜೀವನ್ ದಾಸ್ ರೈ ಸ್ವಾಗತಿಸಿದರು. ದತ್ತಾತ್ರೇಯ ರಾವ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಪ್ರಮುಖರಾದ ಜಯಂತ ನಡುಬೈಲು, ಝೇವಿಯರ್ ಡಿ’ಸೋಜ, ಸೋಮಶೇಖರ ರೈ, ಶ್ಯಾಮಲ, ನಾರಾಯಣ ರೈ ಕುಕ್ಕುವಳ್ಳಿ, ಅಶೋಕ್ ಪಡಿವಾಳ್, ಶರತ್ ಕುಮಾರ್ ರೈ, ಜಯಪ್ರಕಾಶ್ ರೈ, ನಿತಿನ್ ಪಕ್ಕಳ, ಸಂತೋಷ್ ಶೆಟ್ಟಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ಹೀಗೆ ಸಾಗಿದ ನಡಿಗೆ….!
ಬಿರುಮಲೆ ಗಾಂಧಿ ಮಂಟಪದ ಬಳಿ ಚಾಲನೆ ನೀಡಿದ ಬಳಿಕ ಪ್ರಾರಂಭಗೊಂಡ ನಡಿಗೆಯು ಬಿರುಮಲೆ ವಿಶ್ವಕರ್ಮ ಮಂದಿರ, ಗೋಳಿಕಟ್ಟೆ, ಪರ್ಲಡ್ಕ, ಬೈಪಾಸ್ ರಸ್ತೆಯಾಗಿ ದರ್ಬೆ ಮುಖ್ಯ ದ್ವಾರದ ಮೂಲಕ ಮತ್ತೆ ಗಾಂಧಿ ಮಂಟಪದ ಬಳಿಯಲ್ಲಿ ಸಮಾಪನಗೊಂಡಿತು. ಒಟ್ಟು ಸುಮಾರು 2 ಕಿ.ಮೀ ನಡಿಗೆಯ ಸ್ಪರ್ಧೆ ನಡೆಸಲಾಯಿತು. ಸುಮಾರು 265 ಮಂದಿ ನೋಂದಾಯಿಸಿಕೊಂಡು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ನಡಿಗೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಹಣ್ಣು ಹಂಪಲು ವಿತರಿಸಲಾಯಿತು.

ಸ್ಪರ್ಧಾ ವಿಜೇತರು:
ಪುರುಷರ ವಿಭಾಗದ 18 ವರ್ಷದೊಳಗಿನ ವಿಭಾಗದಲ್ಲಿ ಪ್ರವಿತ್(ಪ್ರ), ಸುಹಾಸ್(ದ್ವಿ), 18-30ವರ್ಷದೊಳಗಿನ ವಿಭಾಗದಲ್ಲಿ ಭರತ್ ಗೌಡ(ಪ್ರ), ನವೀನ್(ದ್ವಿ), 30-45 ವರ್ಷದೊಳಗಿನ ವಿಭಾಗದಲ್ಲಿ ಕರುಣಾಕರ ಪ್ರಭು(ಪ್ರ), ಮೋಹನ್(ದ್ವಿ), 45-60 ವರ್ಷದೊಳಗಿನ ವಿಭಾಗದಲ್ಲಿ ದೇವದಾಸ(ಪ್ರ), ಸುಂದರ ಕೆ.(ದ್ವಿ), 60 ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಪ್ರೊ.ದಿನಕರ ರಾವ್(ಪ್ರ), ವಾಸು ಪೂಜಾರಿ(ದ್ವಿ), ಮಹಿಳಾ ವಿಭಾಗದಲ್ಲಿ 18 ವರ್ಷದೊಳಗಿನ ವಿಭಾಗದಲ್ಲಿ ಶ್ರೀವರ್ಧನ(ಪ್ರ), ಶೃತಿ(ದ್ವಿ), 18-30 ವರ್ಷದೊಳಗಿನ ವಿಭಾಗದಲ್ಲಿ ರಕ್ಷಾ ಅಂಚನ್(ಪ್ರ), ಹರ್ಷಿತಾ(ದ್ವಿ), 30-45 ವರ್ಷದೊಳಗಿನ ವಿಭಾಗದಲ್ಲಿ ಜ್ಯೋತಿ ರಾಜೇಶ್ ಆಚಾರ್ಯ(ಪ್ರ), ಮಂಗಳಾ(ದ್ವಿ), 45-60 ವರ್ಷದೊಳಗಿನ ವಿಭಾಗದಲ್ಲಿ ವಿದ್ಯಾ ಕೇಶವ(ಪ್ರ), ಮನೋರಮ(ದ್ವಿ) ಸ್ಥಾನ ಪಡೆದುಕೊಂಡಿದ್ದಾರೆ. ನಡಿಗೆ ಸ್ಪರ್ಧೆ ಅದೃಷ್ಠ ವ್ಯಕ್ತಿಯನ್ನು ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಿದ್ದು ಮಿಥುನ್ ಲಕ್ಕಿ ಪರ್ಸನ್ ಬಹುಮಾನ ಪಡೆದರು. ನಡಿಗೆ ಸ್ಪರ್ಧೆಯಲ್ಲಿ ವಿಶೇಷವಾಗಿ 82 ವರ್ಷದ ನಿವೃತ್ತ ಕರ್ನಲ್ ಜಿ.ಡಿ ಭಟ್ ಭಾಗವಹಿಸಿದ್ದು ಅವರನ್ನು ವಿಶೇಷ ಬಹುಮಾನ ನೀಡಿ ಗೌರವಿಸಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಪ್ರಮಾಣ ಪತ್ರ ವಿತರಿಸಲಾಯಿತು.

LEAVE A REPLY

Please enter your comment!
Please enter your name here