ಶ್ರೀಧಾಮ ಮಾಣಿಲದಲ್ಲಿ ಮೇಳೈಸಿದ ಮಾತೃಶಕ್ತಿ ಸಮಾವೇಶ

0

ಹಿರಿಯರು ಹಾಕಿದ ಹೆಜ್ಜೆಯನ್ನು ಮೆಲುಕು ಹಾಕುವ ನಿಟ್ಟಿನಲ್ಲಿ ಕಾರ್ಯಕ್ರಮದ ಆಯೋಜನೆ: ಮಾಣಿಲ ಶ್ರೀ
ವಿಟ್ಲ: ಹಿಂದೂ ಸಮಾಜಕ್ಕೆ ಕೃತಗ್ನತೆ ಅಗತ್ಯ. ಹಿರಿಯರು ಹಾಕಿದ ಹೆಜ್ಜೆಯನ್ನು ಮೆಲುಕು ಹಾಕುವ ನಿಟ್ಟಿನಲ್ಲಿ ಮಹಿಳಾ ಸಮಾವೇಶದ ಆಯೋಜನೆಯಾಗಿದೆ. ಜಗತ್ತಿನಲ್ಲಿ ತಾಯಿಯ ಪಾತ್ರ ಮಹತ್ವದ್ದು. ಒಂದೆಡೆ ತಾಯಂದಿರು ಉತ್ಕೃಷ್ಟ ಸ್ಥಾನಕ್ಕೇರುತ್ತಿದ್ದರೆ ಇನ್ನೊಂದು ಕಡೆ ತಾಯಂದಿರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಅಹಂಕಾರ ಬಿಟ್ಟು ಪ್ರೀತಿ ಭಾವ ನಿಮ್ಮಲ್ಲಿ ಬಂದಾಗ ಲಕ್ಷ್ಮೀ ಒಲಿಯಲು ಸಾಧ್ಯ ಎಂದು ಮಾಣಿಲ ಶ್ರೀಧಾಮ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.


ಅವರು ಆ.26ರಂದು ಮಾಣಿಲ ಶ್ರೀಧಾಮ ಶ್ರೀದುರ್ಗಾಮಹಾಲಕ್ಷ್ಮೀ ಕ್ಷೇತ್ರದಲ್ಲಿ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆಯ ಬೆಳ್ಳಿಹಬ್ಬ ಮಹೋತ್ಸವದ ವಿಶೇಷ ಸಂಭ್ರಮದ ಅಂಗವಾಗಿ ನಡೆದ ಮಾತೃಶಕ್ತಿ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.


ಕಾರ್ಯಕ್ರಮ ಉದ್ಘಾಟಿಸಿದ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಸಾದ್ವಿ ಮಾತಾನಂದಮಯೀರವರು ಆಶೀರ್ವಚನ ನೀಡಿ, ಕಾರ್ಯಸಿದ್ದಿಗೆ ದೃಡ ಸಂಕಲ್ಪ ಅಗತ್ಯ. ಪ್ರೀತಿ, ಯಶಸ್ಸು, ಸಂಪತ್ತು ಜೀವನದಲ್ಲಿ ಅತೀ ಮುಖ್ಯ. ಮಾಣಿಲ ಶ್ರೀಗಳ ಪ್ರೀತಿ, ವಿಶ್ವಾಸ, ಮುಗ್ದತೆ ಶ್ರೀಧಾಮದ ಬೆಳವಣಿಗೆಗೆ ಪೂರಕ. ಶ್ರೀಧಾಮ ಭಕ್ತಿ, ಕಲಾಧಾಮವಾಗಿ ಕಂಗೊಳಿಸುತ್ತಿದೆ ಎಂದರು.


ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಭಾಗೀರಥಿ ಮುರಳ್ಯರವರು ಮಾತನಾಡಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳು ಕ್ಷೇತ್ರದಿಂದ ಆಗುತ್ತಿರುವುದು ಸಂತಸದ ವಿಚಾರ. ಕ್ಷೇತ್ರದ ಬೆಳ್ಳಿಹಬ್ಬ ಕಾರ್ಯಕ್ರಮದಲ್ಲಿ ಮಹಿಳೆಯರಿಗಾಗಿ ಒಂದು ದಿನವನ್ನು ಮೀಸಲಿಟ್ಟಿರುವುದು ಉತ್ತಮ ಬೆಳವಣಿಗೆಯಾಗಿದೆ. ಇಂತಹ ಧಾರ್ಮಿಕ ಕ್ಷೇತ್ರಗಳು ಸಂಸ್ಕೃತಿಯ ಉಳಿವಿಗೆ ಪೂರಕ ಎಂದರು.


ವಿವಿಧ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿದ ವರದ ಮುಂಬಯಿ, ಮಲ್ಲಿಕಾ ಭಾಸ್ಕರ ಶೆಟ್ಟಿ ಮುಂಬಯಿ, ದೇವಕಿ ಸುನೀಲ್ ಸಾಲ್ಯಾನ್ ಮುಂಬಯಿ ರವರನ್ನು ಸನ್ಮಾನಿಸಲಾಯಿತು.
ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಸುಲೋಚನಾ ಜಿ. ಕೆ. ಭಟ್, ಕಸ್ತೂರಿ ಪಂಜ, ಕವಯತ್ರಿಗಳಾದ ಕುಶಲಾಕ್ಷಿ ವಿ. ಕುಲಾಲ್ ಕಣ್ವತೀರ್ಥ, ವಿಜಯ ಶೆಟ್ಟಿ ಸಾಲೆತ್ತೂರು, ಮಾಣಿಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ವನಿತಾ, ಬಿ.ಜೆ.ಪಿ. ಜಿಲ್ಲಾ ಕಾರ್ಯದರ್ಶಿ ಜಿ. ಪೂಜಾ ಪಿ. ಪೈ., ಮುಂಬಯಿ ಕುಲಾಲ ಸಂಘದ ಮಹಿಳಾ ಮಂಡಳಿ ಅಧ್ಯಕ್ಷೆ ಮಮತಾ ಗುಜರನ್, ಮಾಣಿಲ ಮಹಿಳಾ ಸಮಿತಿಯ ರೇವತಿ ಪೆರ್ನೆ, ವನಿತಾ ವಿ. ಶೆಟ್ಟಿ ಉಪಸ್ಥಿತರಿದ್ದರು.


ಗೀತಾ ಪುರುಷೋತ್ತಮ, ರೇಷ್ಮಾ ಮನೋಜ್ ಪ್ರಾರ್ಥಿಸಿದರು. ಲತಾ ಪಿ. ಶೆಟ್ಟಿ ಸ್ವಾಗತಿಸಿದರು. ನಳಿನಿ ವಿಶ್ವಕರ್ಮ ಮಾಣಿಲ ವಂದಿಸಿದರು. ವಿಂಧ್ಯಾ ಎಸ್. ರೈ ಕಡೇಶ್ವಾಲ್ಯ ಕಾರ್ಯಕ್ರಮ ನಿರೂಪಿಸಿದರು.


ವೈದಿಕ ಕಾರ್ಯಕ್ರಮ:
ಆ.26ರಂದು ಬೆಳಗ್ಗೆ ಸೌಭಾಗ್ಯ ಲಕ್ಷ್ಮೀ ಹೋಮ, ಸೌಭಾಗ್ಯ ಲಕ್ಷ್ಮೀ ಪೂಜೆ ನಡೆಯಿತು. ಬಳಿಕ ಭಜನಾ ಸಂಕೀರ್ತನೆ ನಡೆಯಿತು. ಮಧ್ಯಾಹ್ನ ಮಹಾಪೂಜೆ ನಡೆದು ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಆಶ್ಲೇಷಾ ಬಲಿ ಪೂಜೆ ನಡೆದು ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನ ಸಂತರ್ಪಣೆ ನಡೆಯಿತು.


ಉಪನ್ಯಾಸ ಕಾರ್ಯಕ್ರಮ: ಶ್ರೀಧಾಮದಲ್ಲಿ ಮಾತೃಶಕ್ತಿ ಸಮಾವೇಶದ ಅಂಗವಾಗಿ ನಡೆದ ವಿಚಾರಗೋಷ್ಠಿಯಲ್ಲಿ ಮಂಗಳೂರು ಆಸರೆ ಚಾರಿಟೇಬಲ್ ನ ಅಧ್ಯಕ್ಷರಾದ ಡಾ|ಆಶಾಜ್ಯೋತಿ ರೈ ಮಾಲಾಡಿರವರು ಭಾರತೀಯರ ಪರಂಪರೆ ಉಳಿಸುವಲ್ಲಿ ಮಾತೆಯರ ಪಾತ್ರದ ಕುರಿತಾಗಿ ಮಾತನಾಡಿದರು.ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಕಸ್ತೂರಿಪಂಜರವರು ಕುಟುಂಬದಲ್ಲಿ ಮಹಿಳೆಯ ಪಾತ್ರದ ಕುರಿತಾಗಿ ಮಾತನಾಡಿದರು. ಜಿಲ್ಲಾ ಬಿಜೆಪಿ ಮಹಿಳಾ ಮೋರ್ಛಾದ ಅಧ್ಯಕ್ಷರಾದ ಧನಲಕ್ಷ್ಮೀ ಗಟ್ಟಿರವರು ವಿವಿಧ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರದ ಕುರಿತಾಗಿ ಮಾತನಾಡಿದರು. ಮಕ್ಕಳ ಭವಿಷ್ಯ ನಿರ್ಮಾಣದಲ್ಲಿ ಮಹಿಳೆಯರ ಪಾತ್ರದ ಕುರಿತಾಗಿ ವಿಜಯ ಶೆಟ್ಟಿ ಸಾಲೆತ್ತೂರು ಮಾತನಾಡಿದರು.


ಸಾಂಸ್ಕೃತಿಕ ಕಾರ್ಯಕ್ರಮ: ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವೈಭವಿ ಶಂನಾಡಿಗ ‘ಕೀರ್ತನ ಕುಠೀರ’ ಕುಂಬಳೆ ಇವರಿಂದ ಹರಿಕಥಾ ಕಾಲಕ್ಷೇಪ ನಡೆಯಿತು. ಬಳಿಕ ಜಾನಪದ ವೈವಿಧ್ಯಗಳು ನಡೆಯಿತು. ತೆಂಕುತಿಟ್ಟು ಯಕ್ಷಗಾನ ರಂಗದ ಯುವ ಭಾಗವತರಾದ ಸಿಂಚನ ಇವರಿಂದ ಯಕ್ಷ ಗಾನ ವೈಭವ ನಡೆಯಿತು. ಮಂಗಳೂರಿನ ರಶ್ಮಿ ಚಿದಾನಂದ ಕೆದಿಲಾಯ ಮತ್ತು ಬಳಗದವರಿಂದ ಅಷ್ಟ ಲಕ್ಷ್ಮೀ ವೈಭವ ನಡೆಯಿತು.


ಇಂದು ಶ್ರೀಧಾಮದಲ್ಲಿ
ಆ.27ರಂದು ಬೆಳ್ಳಿಹಬ್ಬ ಮಹೋತ್ಸವದ ವರಮಹಾಲಕ್ಷ್ಮೀ ವ್ರತಾಚರಣೆ ಸಂಭ್ರಮ ಸಮಾರಂಭ ನಡೆಯಲಿದೆ. ಬೆಳಗ್ಗೆ ತ್ರಿಕಾಲಪೂಜೆ ಆರಂಭ, ಬಳಿಕ ಆದಿತ್ಯ ಹೃದಯ ಹೋಮ, ಕನಕದಾರಾ ಯಾಗ, ಚಕ್ರಾಬ್ಧಿ ಪೂಜೆ, ಸಹಸ್ರನಾಮ ತುಳಸಿ ಅರ್ಚನೆ ನಡೆಯಲಿದೆ. ಸಾಯಂಕಾಲ ಪಂಚದುರ್ಗಾ ಹೋಮ, ಪಂಚದುರ್ಗಾ ಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಮಹಾಲಕ್ಷ್ಮೀ ಕೃಪಾ ಪೋಷಿತ ಯಕ್ಷಗಾನ ಮಂಡಳಿ ಮಾಣಿಲ ಇವರಿಂದ ‘ಬಪ್ಪನಾಡು ಕ್ಷೇತ್ರ ಮಹಾತ್ಮೆ’ ಯಕ್ಷಗಾನ ಬಯಲಾಟ ನಡೆಯಲಿದೆ.

LEAVE A REPLY

Please enter your comment!
Please enter your name here