ಶ್ರೀಧಾಮ ಮಾಣಿಲದಲ್ಲಿ ಬೆಳ್ಳಿಹಬ್ಬ ಮಹೋತ್ಸವದ ವರಮಹಾಲಕ್ಷ್ಮೀ ವ್ರತಾಚರಣೆ ಸಂಭ್ರಮ ಸಮಾರಂಭ – ಸಾಧಕರಿಗೆ ಸನ್ಮಾನ

0

ಹಳ್ಳಿಯ ಸಂಸ್ಕಾರದಲ್ಲಿ ವ್ಯತ್ಯಯವಾದರೆ ಸಮಾಜಕ್ಕೆ ಆಪತ್ತಿದೆ: ಅವಧೂತ ಶ್ರೀ ವಿನಯ ಗುರೂಜಿ
ಶ್ರೀಧಾಮದಲ್ಲಿ ಇಚ್ಚಾಶಕ್ತಿ, ಕ್ರೀಯಾ ಶಕ್ತಿಯ ಸಮ್ಮಿಳಿತವಾಗಿದೆ: ಕಣಿಯೂರು ಶ್ರೀ

ವಿಟ್ಲ: ಜ್ಞಾನಿಗಳಲ್ಲಿರುವ ದೊಡ್ಡ ಸಂಪತ್ತು ತಪಸ್ಸು. ಲಕ್ಷ್ಮೀ ಅಷ್ಟು ಸುಲಭದಲ್ಲಿ ಒಲಿಯಲಾರಳು. ಅವಳನ್ನು ಒಲಿಸಿಕೊಳ್ಳುವ ತಾಳ್ಮೆ ನಮ್ಮಲ್ಲಿರಬೇಕು. ಭಾರತ ಎಂದರೆ ಭಾವನೆಯಿಂದ ಕೂಡಿದ ರಥ. ಸಂಸ್ಕಾರ ಸಂಸ್ಕೃತಿ ಹಳ್ಳಿಗಳಲ್ಲಿ ಅಡಗಿದೆ. ಅದನ್ನು ವ್ಯತ್ಯಯವಾಗದಂತೆ ನೋಡಿಕೊಳ್ಳುವ ಅಗತ್ಯವಿದೆ. ಹಳ್ಳಿಯ ಸಂಸ್ಕಾರದಲ್ಲಿ ವ್ಯತ್ಯಯವಾದರೆ ಸಮಾಜಕ್ಕೆ ಆಪತ್ತಿದೆ. ಶ್ರೀಗಳ ಕಾರುಣ್ಯದಿಂದ ಮಾತೆಯರಿಗೆ ಲಕ್ಷ್ಮಿಯ ಕೃಪಾಕಟಾಕ್ಷವಾಗಿದೆ. ಮನೆಯ ವಾಸ್ತು ಮನೆಯ ಮಹಿಳೆಯರಲ್ಲಿದೆ. ಅವರು ಮನೆಗೆ ಕನ್ನಡಿ ಇದ್ದ ಹಾಗೆ. ನಮ್ಮೆಲ್ಲರನ್ನು ಒಟ್ಟು ಮಾಡುವಲ್ಲಿ ಹಬ್ಬಗಳ ಪ್ರಾತ್ರ ಮಹತ್ವದ್ದು ಎಂದು ಗೌರಿಗದ್ದೆ ಸ್ವರ್ಣ ಪೀಠಿಕಾಪುರದ ಅವಧೂತ ಶ್ರೀ ವಿನಯ ಗುರೂಜಿ ಹೇಳಿದರು.

ಅವರು ಆ.27ರಂದು ಮಾಣಿಲ ಶ್ರೀಧಾಮ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದಲ್ಲಿ ಬೆಳ್ಳಿಹಬ್ಬ ಮಹೋತ್ಸವದ ವರಮಹಾಲಕ್ಷ್ಮೀ ವ್ರತಾಚರಣೆ ಸಂಭ್ರಮ ಸಮಾರಂಭವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ಮಾಣಿಲಶ್ರೀಗಳ ವ್ಯಕ್ತಿತ್ವದಲ್ಲಿ ಅಹಂಕಾರವಿಲ್ಲ. ಜ್ಞಾನಿಗಳು ಸಮಾಜವನ್ನು ಬೆಳೆಸುವಲ್ಲಿ ಯೋಚಿಸುತ್ತಾರೆ. ಶ್ರೀಗಳ ಪ್ರಯತ್ನದಿಂದಾಗಿ ಮಾಣಿಲ ವೈಕುಂಠವಾಗಿದೆ. ಜ್ಞಾನಕ್ಕೆ ಜಾತಿ, ಶಾಸ್ತ್ರದ ಅಡ್ಡಿ ಇಲ್ಲ. ಸ್ಥಿತಪ್ರಜ್ಞೆ ನಮ್ಮಲ್ಲಿದ್ದರೆ ಯಶಸ್ಸು ಸಾಧ್ಯ. ಹಿಂದೂ ಧರ್ಮ ಹಾಳಾಗಿರುವುದು ಸಂಸ್ಕೃತಿಯ ಕೊರತೆಯಿಂದ. ತಾಯಂದಿರು ಶಾಸ್ತ್ರ ಅಧ್ಯಯನ ಮಾಡುವ ಅಗತ್ಯವಿದೆ. ನಾವೇನು ಆಗಬೇಕು ಎನ್ನುವುದನ್ನು ನಾವು ಅರಿತಿರಬೇಕು. ಸಂಸ್ಕಾರ ಸಂಸ್ಕೃತಿಯ ಉಳಿವಿಗೆ ಮಠ, ಮಂದಿರಗಳ ಪಾತ್ರ ಮಹತ್ವದ್ದು. ಧರ್ಮ, ದೈವ ದೇವರುಗಳಿಗೆ ಶಕ್ತಿ ಅಪಾರ ಎಂದರು.

ಕಣಿಯೂರು ಶ್ರೀ ಚಾಮುಂಡೇಶ್ವರೀ ದೇವೀ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸ್ವಾಮೀಜಿರವರು ಆಶೀರ್ವಚನ ನೀಡಿ ಇಲ್ಲಿ ಇಚ್ಚಾಶಕ್ತಿ, ಕ್ರೀಯಾ ಶಕ್ತಿಯ ಸಮ್ಮಿಳಿತವಾಗಿದೆ. ಪ್ರೀತಿಯಿಂದ ಸಮಾಜವನ್ನು ಗೆಲ್ಲಲು ಸಾಧ್ಯ. ತ್ಯಾಗಪೂರ್ಣ ಸೇವೆ ನಮ್ಮದಾಗಬೇಕು. ಮಾಣಿಲ ಶ್ರೀಗಳು ಅಶಕ್ತರಿಗೆ ನೀಡಿದ ಕೊಡುಗೆ, ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯದ ಮೂಲಕ ಸಮಾಜಕ್ಕೆ ಪ್ರೀತಿಯನ್ನು ನೀಡಿದ್ದಾರೆ. ಸಂಪತ್ತಿಗಿಂತ ಪ್ರೀತಿಯನ್ನು ಸಮಾಜಕ್ಕೆ ನೀಡುವ ಕಾರ್ಯವಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ಳಿಹಬ್ಬ ಸಮಿತಿ ಗೌರವಾಧ್ಯಕ್ಷ ಕೆ. ಸದಾಶಿವ ಶೆಟ್ಟಿ ಕೂಳೂರು ಕನ್ಯಾನ ವಹಿಸಿದ್ದರು. ಚಿಕ್ಕಮಗಳೂರು ಕಳಸ ಶ್ರೀ ಸತ್ಯ ಶನೀಶ್ವರ ಕ್ಷೇತ್ರದ ಶ್ರೀ ಚಿದಾನಂದ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಇದೇ ಸಂದರ್ಭದಲ್ಲಿ ‘ಮಾಣಿಲವಾಯ್ತು ವೈಕುಂಠ’ ಕನ್ನಡ ಭಕ್ತಿ ಗೀತೆಯ ಧ್ವನಿ ಸುರುಳಿಯನ್ನು ಶ್ರೀಗಳು ಹಾಗೂ ವೇದಿಕೆಯಲ್ಲಿದ್ದ ಗಣ್ಯರು ಬಿಡುಗಡೆ ಮಾಡಿದರು. ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್, ಲೋಟಸ್ ಪ್ರಾಪರ್ಟೀಸ್ ಆಡಳಿತ ಪಾಲುದಾರ ಜಿತೇಂದ್ರ ಎಸ್. ಕೊಟ್ಟಾರಿ, ಮುಂಬಯಿ ಕುಲಾಲ ಸಂಘದ ಅಧ್ಯಕ್ಷ ರಘು ಎ. ಮೂಲ್ಯ ಪಾದೆಬೆಟ್ಟು, ಪುತ್ತೂರಿನ ವೈದ್ಯ ಡಾ. ಸುರೇಶ್ ಪುತ್ತೂರಾಯ, ಉಮೇಶ್ ಪೂಂಜ, ವಿಠಲ ತಣ್ಣೀರು ತೋಟ, ಪುರುಷೋತ್ತಮ ಚೇಂಡ್ಲ, ಜಗದೀಶ್ ಶೇಣವ, ಪ್ರಸಾದ್ ಪಾಂಗಣ್ಣಾಯ, ರೇವತಿ ಪೆರ್ನೆ, ವನಿತಾ ವಿ. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಟಿ. ತಾರಾನಾಥ ಕೊಟ್ಟಾರಿ ಸ್ವಾಗತಿಸಿದರು. ದೇವಪ್ಪ ಕುಲಾಲ್ ಪಂಜಿಕಲ್ಲು ವಂದಿಸಿದರು. ಎಚ್. ಕೆ. ನಯನಾಡು, ವಾರುಣಿ ನಾಗರಾಜ ಆಚಾರ್ಯ ಮಂಗಳಾದೇವಿ ಕಾರ್ಯಕ್ರಮ ನಿರೂಪಿಸಿದರು.

ಸಾಧಕರಿಗೆ ಸನ್ಮಾನ:
ಉದ್ಯಮ ಕ್ಷೇತ್ರದಲ್ಲಿ ವಿಶೇಷ ಸಾಧನೆಯನ್ನು ಮಾಡಿದ ಉದ್ಯಮಿ ಕೆ. ಸದಾಶಿವ ಶೆಟ್ಟಿ ಕೂಳೂರು ಕನ್ಯಾನ, ಶೈಕ್ಷಣಿಕ ಕ್ಷೇತ್ರದ ಸಾಧಕರಾದ ಡಾ. ಎಂ. ಬಿ. ಪುರಾಣಿಕ್, ಧಾರ್ಮಿಕ ಕ್ಷೇತ್ರದ ಸಾಧಕರಾದ ಮೋನಪ್ಪ ಭಂಡಾರಿ, ಉದ್ಯಮ ಕ್ಷೇತ್ರದ ಸಾಧಕರಾದ ಸುನೀಲ್ ಆರ್. ಸಾಲ್ಯಾನ್, ಭಾಸ್ಕರ್ ಶೆಟ್ಟಿ ಪುಣೆ, ವೈದ್ಯಕೀಯ ಕ್ಷೇತ್ರದ ಸಾಧಕರಾದ ಡಾ. ನರಸಿಂಹ ಶಾಸ್ತ್ರಿ, ಸಾಮಾಜಿಕ ಕ್ಷೇತ್ರದ ಸಾಧಕರಾದ ಟಿ. ತಾರಾನಾಥ ಕೊಟ್ಟಾರಿ, ಉದ್ಯಮ ಕ್ಷೇತ್ರದ ಸಾಧಕ ದಿವಾಕರ್ ಮೂಲ್ಯ ಬೆಂಗಳೂರು ಅವರನ್ನು ಸನ್ಮಾನಿಸಲಾಯಿತು.

ಧಾರ್ಮಿಕ ಕಾರ್ಯಕ್ರಮ:
ಪ್ರಾತಃಕಾಲ ತ್ರಿಕಾಲ ಪೂಜೆ ಪ್ರಾರಂಭ, ಆದಿತ್ಯಾ ಹೃದಯ ಹೋಮ, ಕನಕಧಾರ ಯಾಗ, ಚಕ್ರಾಬ್ಧಿ ಪೂಜೆ, ಸಹಸ್ರನಾಮ ತುಳಸಿ ಅರ್ಚನೆ, ಸಾಯಂಕಾಲ ಪಂಚದುರ್ಗಾ ಹೋಮ, ಪಂಚದುರ್ಗಾ ಪೂಜೆ, ಮಹಾ ಪೂಜೆ, ಪ್ರಸಾದ ವಿತರಣೆ ನಡೆಯಿತು.

ಸಾಂಸ್ಕೃತಿಕ ಕಾರ್ಯಕ್ರಮ:
ಕಡೇಶಿವಾಲಯ ಶ್ರೀ ಚಿಂತಾಮಣಿ ಡ್ಯಾನ್ಸ್ ಗ್ರೂಪ್ ಅವರಿಂದ ನೃತ್ಯ ವೈಭವ, ಮಂಗಳೂರಿನ ತಂಡದಿಂದ ಹುಲಿಕುಣಿತ, ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕೃಪಾಪೋಷಿತ ಯಕ್ಷಗಾನ ಮಂಡಳಿಯಿಂದ ಶ್ರೀ ಬಪ್ಪನಾಡು ಕ್ಷೇತ್ರಮಹಾತ್ಮೆ ಬಯಲಾಟ ನಡೆಯಿತು.

ನಮ್ಮ ಆಚರಣೆಗಳ ಪಾವಿತ್ರ್ಯತೆಯನ್ನು ಉಳಿಸುವ ಕೆಲಸವಾಗಬೇಕು: ಮಾಣಿಲ ಶ್ರೀ
ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿರವರು ಆಶೀರ್ವಚನ ನೀಡಿ ಹಿಂದೂ ಸಮಾಜದಲ್ಲಿ ಆಗುತ್ತಿರುವ ಸಮಸ್ಯೆಯನ್ನು ಪರಿಹರಿಸುವ ಕೆಲಸವಾಗಬೇಕು. ಜಾತಿಯ ಕಟ್ಟುಪಾಡು ತೊರೆದು ನಾವೆಲ್ಲರು ಒಂದಾಗಬೇಕು. ಸ್ವಾವಲಂಭಿ ಸಮಾಜ ಕಟ್ಟುವ ಪ್ರಯತ್ನ ನಮ್ಮದಾಗಬೇಕು. ಮುಂದಿನ ದಿನಗಳಲ್ಲಿ ಪ್ರತಿ ಮನೆಮನೆಗಳಲ್ಲಿ ಲಕ್ಷ್ಮೀ ಪೂಜೆ ನಡೆಸೋಣ. ಜೀವನದಲ್ಲಿ ಪ್ರೀತಿ ಬಹಳಮುಖ್ಯ. ಸಾಮರಸ್ಯದ ಬದುಕು ನಮ್ಮದಾಗಬೇಕು. ನಮ್ಮ ದೇಶದ ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು. ನಮ್ಮ ಆಚರಣೆಗಳ ಪಾವಿತ್ರ್ಯತೆಯನ್ನು ಉಳಿಸುವ ಕೆಲಸವಾಗಬೇಕು. ನಮ್ಮಲ್ಲಿರುವ ಮತಿಭ್ರಮಣೆ ದೂರವಾಗಬೇಕು.ನಾವೆಲ್ಲರೂ ಮಾನಸಿಕವಾಗಿ ಸುದೃಡವಾಗಬೇಕು. ನಮ್ಮ ಮನಸ್ಸು ಸ್ವಚ್ಛವಾಗಿರಬೇಕು ಎಂದರು.

LEAVE A REPLY

Please enter your comment!
Please enter your name here