ದಯವಿಟ್ಟು ಬಂಧುಗಳೇ ಸತ್ಯದ ಹೋರಾಟದಲ್ಲಿ ಕೈ ಜೋಡಿಸಿ – ಮಹೇಶ್ ರೈ ತಿಮರೋಡಿ
ಪುತ್ತೂರು: 11 ವರ್ಷಗಳ ಹಿಂದೆ ಬೆಳ್ತಂಗಡಿ ತಾಲೂಕಿನಲ್ಲಿ ನಡೆದ ಕು.ಸೌಜನ್ಯ ಅವರ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸುವ ಮೂಲಕ ನಿಜವಾದ ಆರೋಪಿಗಳನ್ನು ಪತ್ತೆ ಹಚ್ಚಲು ಪ್ರಕರಣವನ್ನು ಮರುತನಿಖೆ ಮಾಡಬೇಕು ಮತ್ತು ನಿರ್ದೋಷಿ ಸಂತೋಷ್ ರಾವ್ ಅವರಿಗಾದ ನಷ್ಟವನ್ನು ಭರಿಸಿ ಪರಿಹಾರಕ್ಕಾಗಿ ಆಗ್ರಹಿಸಿ ಪುತ್ತೂರಿನಲ್ಲಿ ಅಭಿನವ ಭಾರತ ಮಿತ್ರ ಮಂಡಳಿ ಪುತ್ತೂರು ಮತ್ತು ಪ್ರಜಾಪ್ರಭುತ್ವ ವೇದಿಕೆ ಬೆಳ್ತಂಗಡಿ ಇದರ ಜಂಟಿ ಆಶ್ರಯದಲ್ಲಿ ಆ.28ರಂದು ಜನಜಾಗೃತಿ ಸಭೆ ನಡೆಯಿತು.
ಸಂಜೆ ಪುತ್ತೂರು ದರ್ಬೆಯಿಂದ ಮೆರವಣಿಗೆ ಮೂಲಕ ಮುಖ್ಯರಸ್ತೆಯಾಗಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಥ ಬೀದಿಯ ಮೂಲಕ ಪುತ್ತೂರು ನೆಲ್ಲಿಕಟ್ಟೆಯಲ್ಲಿರುವ ಖಾಸಗಿ ಬಸ್ ನಿಲ್ದಾಣಕ್ಕೆ ಬಂದು ಅಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ಬೃಹತ್ ಜನಜಾಗೃತಿ ಸಭೆ ನಡೆಯಿತು.
ಪ್ರಜಾಪ್ರಭುತ್ವ ವೇದಿಕೆಯ ಮಹೇಶ್ ಶೆಟ್ಟಿ ತಿಮರೋಡಿ ಅವರು ಮಾತನಾಡಿ ಸೌಜನ್ಯನಿಗೆ ಆದ ಅನ್ಯಾಯಕ್ಕೆ ನ್ಯಾಯ ದೊರಕಿಸಿ ಕೊಡಲು ದಯವಿಟ್ಟು ಬಂಧುಗಳೆಲ್ಲಾ ಸತ್ಯದ ಹೋರಾಟದಲ್ಲಿ ಕೈ ಜೋಡಿಸಿ. ಮುಂದಿನ ದಿನ ಪುತ್ತೂರಿನಲ್ಲಿ ಹೋರಾಟ ಪ್ರಾರಂಭ ಆಗಲಿದೆ. ತಾ.ಪಂ, ಜಿ.ಪಂ ವ್ಯಾಪ್ತಿಯಲ್ಲಿ ಕೂಡಾ ಹೋರಾಟ ಪ್ರಾರಂಭವಾಗಬೇಕು.
ಮುಂದೆ ಸೆ.3ಕ್ಕೆ ರಾಜ್ಯದ, ರಾಷ್ಟ್ರದ ಭ್ರಷ್ಟ ವ್ಯವಸ್ಥೆಯ ಅಧಿಕಾರಿಗಳ ವಿರುದ್ದ, ನಮ್ಮ ಕೂಗು ಕೇಳಿಸದ ಪ್ರಧಾನಿ ಮೋದಿ, ಗೃಹಮಂತ್ರಿ ಅಮಿತ್ ಶಾ, ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಈಗಾಗಲೇ ನನಗೇನು ಗೊತ್ತಿಲ್ಲ ಎಂದು ಹೇಳಿಕೆ ನೀಡುತ್ತಿರುವ ಗೃಹಸಚಿವರಿಗೂ ಕಣ್ಣು ತೆರಸುವ ಕೆಲಸವನ್ನು ಮಾಡಲಿದ್ದೇವೆ ಎಂದು ಹೇಳಿದರು. ಸೌಜನ್ಯಳ ತಾಯಿ ಕುಸುಮಾವತಿ, ನ್ಯಾಯವಾದಿ ಮೋಹಿತ್ ಕುಮಾರ್ ಮಾತನಾಡಿದರು.
ಸನ್ಮಾನ:
ಸೌಜನ್ಯ ಪ್ರಕರಣದಲ್ಲಿ ಸಂತೋಷ್ ರಾವ್ ಅವರ ಕೇಸ್ ನಡೆಸಿರುವ ನ್ಯಾಯವಾದಿಗಳಾದ ನವೀನ್ ಪದ್ಯಾಣ, ಮೋಹಿತ್ ಅವರನ್ನು ಅಭಿನವ ಭಾರತ ಮಿತ್ರ ಮಂಡಳಿಯಿಂದ ಗೌರವಿಸಲಾಯಿತು.
ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ, ಹಿಂದು ಜಾಗಣರ ವೇದಿಕೆ ತಾಲೂಕು ಸಂಚಾಲಕ ದಿನೇಶ್ ಪಂಜಿಗ, ಹಿಂದು ಜನ ಜಾಗೃತಿ ಸಮಿತಿಯ ಹರಿಪ್ರಸಾದ್ ನೆಲ್ಲಿಕಟ್ಟೆ, ಯುವ ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ವಲಯ ಅಧ್ಯಕ್ಷ ಪ್ರಶಾಂತ್ ಕೆಮ್ಮಾಯಿ, ಮೋಹಿನಿ ರೈ ಅತಿಥಿಗಳನ್ನು ಗೌರವಿಸಿದರು. ನ್ಯಾಯವಾದಿ ನವೀನ್ ಪದ್ಯಾಣ,
ಅಭಿನವ ಭಾರತ ಮಿತ್ರ ಮಂಡಳಿಯ ಪ್ರವರ್ತಕ ಧನ್ಯ ಕುಮಾರ್ ಬೆಳಂದೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ನವೀನ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.