ಉಪ್ಪಿನಂಗಡಿ: ಸಹಕಾರ ಸಂಘಗಳ ಜಂಟಿ ನಿರ್ದೇಶಕರ ಕಚೇರಿ ಮೈಸೂರು ಪ್ರಾಂತ ಇವರ ಜುಲೈ 28 ರ ಆದೇಶದಂತೆ ಮೈಸೂರು ಪ್ರಾಂತದ ದ.ಕ. ಜಿಲ್ಲೆಯನ್ನೂ ಒಳಗೊಂಡಂತೆ 8 ಜಿಲ್ಲೆಗಳ 646 ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಪ್ರತ್ಯೇಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ರಚಿಸುವ ಕುರಿತಾದ ಆದೇಶದ ವಿರುದ್ಧ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘವು ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯವು ಸದ್ರಿ ಆದೇಶಕ್ಕೆ ತಡೆಯಾಜ್ಞೆ ನೀಡಿದೆ ಎಂದು ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಕೆ.ವಿ. ಪ್ರಸಾದ್ ತಿಳಿಸಿದ್ದಾರೆ.
ಈಗಾಗಲೇ ಸಹಕಾರಿ ಇಲಾಖಾ ಅಧಿಕಾರಿಗಳು ಹೊರಡಿಸಿದ ಆದೇಶದನ್ವಯ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಗ್ರಾಮಗಳನ್ನು ಬಿಡುಗಡೆ ಮಾಡಲು 2023 ರ ಅಗಸ್ಟ್ 25 ನೇ ತಾರೀಕನ್ನು ನಿಗದಿ ಪಡಿಸಲಾಗಿತ್ತು. ಗ್ರಾಮವಾರು ನೂತನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ರಚನೆಯ ಸಂಬಂಧ ಷೇರು ಸಂಗ್ರಹಣೆಗೆ ಪ್ರಸ್ತಾವನೆಯನ್ನು ಪಡೆದು ಅನುಮತಿ ನೀಡಲು ಕೊನೆಯ ದಿನಾಂಕವನ್ನು 2023 ರ ಸೆಪ್ಟೆಂಬರ್ 6 ರಂದು ನಿಗದಿಪಡಿಸಲಾಗಿದೆ. ನೋಂದಣಿ ಸಂಬಂಧ ಪ್ರಸ್ತಾವೆಯನ್ನು ಪಡೆದು ಸಂಘವನ್ನು ನೋಂದಾಯಿಸಲು ಕೊನೆಯ ದಿನಾಂಕವಾಗಿ 2023ರ ಸೆಪ್ಟೆಂಬರ್ 16 ನೇ ತಾರೀಕನ್ನು ನಿಗದಿಗೊಳಿಸಲಾಗಿದೆ. ನೂತನವಾಗಿ ರಚನೆಯಾದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಆಡಳಿತ ಮಂಡಳಿಯನ್ನು ರಚಿಸಲು 2023ರ ಅಕ್ಟೋಬರ್ 31ನ್ನು ಕೊನೆಯ ದಿನಾಂಕವಾಗಿ ನಿಗದಿ ಪಡಿಸಲಾಗಿತ್ತು.
ಈಗಾಗಲೇ ಸಹಕಾರಿ ಸಂಘಗಳೇ ಇಲ್ಲದ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹೊಸದಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ರಚಿಸಲು ಈ ಕಾಲಮಿತಿ ಸೂಕ್ತವಾಗಿದೆಯಾದರೂ , ಜಿಲ್ಲೆಯ ಕೃಷಿಕರ ಜೀವನದೊಂದಿಗೆ ಬೆರೆತುಕೊಂಡಿರುವ ದ.ಕ ಜಿಲ್ಲೆಯಂತಹ ಪ್ರದೇಶಗಳಲ್ಲಿನ ಬಹುತೇಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಹಲವು ಗ್ರಾಮಗಳನ್ನು ಒಳಗೊಂಡು ಕಾರ್ಯನಿರ್ವಹಿಸುತ್ತಿದ್ದು, ಚಿನ್ನಾಭರಣಗಳ ಸಾಲ ಸೌಲಭ್ಯವೂ ಸೇರಿದಂತೆ ಸಮಾನಾಂತರ ಬ್ಯಾಂಕಿಂಗ್ ಸೇವೆ ಒದಗಿಸುತ್ತಿವೆ. ನೂತನ ಆದೇಶದ ಅನ್ವಯ ಇನ್ನು ಮುಂದೆ ಪ್ರತಿ ಗ್ರಾಮಗಳಲ್ಲಿಯೂ 13 ಮಂದಿ ಆಡಳಿತ ಸದಸ್ಯರನ್ನು ಒಳಗೊಂಡ ಸ್ವಾಯತ್ತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರಚನೆಯಾಗಬೇಕಾಗಿದ್ದು, ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಸಂಘಗಳ ಆಸ್ತಿಯನ್ನು ವಿಂಗಡಿಸುವ ಬಗ್ಗೆ ಬಹಳಷ್ಟು ಗೊಂದಲಗಳು ಮೂಡಲಿದೆ. ಮಾತ್ರವಲ್ಲದೆ ಕೆಲವೊಂದು ಗ್ರಾಮಗಳು ವ್ಯವಹಾರಾತ್ಮಕವಾಗಿ ದುರ್ಬಲವಾಗಿದ್ದು, ಅಲ್ಲಿ ಸುದೃಢವಾದ ಕಟ್ಟಡದ ನಿರ್ಮಾಣವಾಗಬೇಕಾಗಿದ್ದು, ಸುಲಲಿತ ವ್ಯವಹಾರಕ್ಕೆ ಹಾಗೂ ಸುರಕ್ಷತಾ ವ್ಯವಹಾರಕ್ಕೆ ಪೂರಕವಾದ ಸಿಬ್ಬಂದಿಯನ್ನೂ ಹೊಂದಬೇಕಾಗಿದೆ. ಗ್ರಾಮ – ಗ್ರಾಮದಲ್ಲಿ ಪ್ರತ್ಯೇಕ ಸಂಘ ನಿರ್ಮಾಣವಾಗುವುದರಿಂದ ವ್ಯವಹಾರವೂ ಕಿರಿದಾಗಿ ಲಾಭ ಕಡಿತಗೊಳ್ಳುವ ಅಪಾಯವೂ ಎದುರಾಗಲಿದೆ.
ಈ ಎಲ್ಲಾ ಅಂಶಗಳನ್ನು ಆಧರಿಸಿ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘವು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು, ರಿಟ್ ಸಂಖ್ಯೆ : ಡಬ್ಲ್ಯೂ ಪಿ 17673/ 2023 ರ ವಿಚಾರಣೆ ನಡೆಸಿದ ಆರ್. ದೇವದಾಸ್ ರವರ ಏಕ ಸದಸ್ಯ ಪೀಠ ಸಹಕಾರ ಸಂಘಗಳ ಜಂಟಿ ನಿರ್ದೇಶಕರ ಕಚೇರಿ ಮೈಸೂರು ಪ್ರಾಂತ ಇವರ ಜುಲೈ 28 ರ ಆದೇಶಕ್ಕೆ ಮಂಗಳವಾರದಂದು ತಡೆಯಾಜ್ಞೆ ವಿಧಿಸಿದೆ ಎಂದು ಕೆ.ವಿ. ಪ್ರಸಾದ್ ತಿಳಿಸಿದರು.
ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಹಕಾರಿ ತತ್ವದ ಅಡಿಯಲ್ಲಿ ಜನರು ಆರ್ಥಿಕ ಸ್ವಾವಲಂಬನೆ ಸಾಧಿಸಬೇಕೆಂಬ ಸರಕಾರದ ನಿಲುವು ಸ್ವಾಗಾತಾರ್ಹ. ಆದರೆ ಈಗಾಗಲೇ ಸುಸ್ಥಿತಿಯಲ್ಲಿ ನಡೆಯುತ್ತಿರುವ 5 ಗ್ರಾಮ ಪಂಚಾಯತ್ ವ್ಯಾಪ್ತಿಯನ್ನು ಹೊಂದಿರುವ ನಮ್ಮಂತಹ ಸಹಕಾರಿ ಸಂಘಗಳು 5 ಪ್ರತ್ಯೇಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಾಗಿ ವಿಭಜನೆಗೊಂಡಾಗ ಎಲ್ಲಾ ವ್ಯವಹಾರಗಳು ದುರ್ಬಲಗೊಳ್ಳುವ ಸಾಧ್ಯತೆ ಕಾಣಿಸಿದೆ. ಇಡೀ ಉತ್ತಮ ವ್ಯವಸ್ಥೆ ಬುಡಮೇಲುಗೊಳ್ಳುವ ಸಾಧ್ಯತೆ ಇರುವುದರಿಂದ ಈಗಾಗಲೇ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುವ ಸಹಕಾರಿ ವ್ಯವಸ್ಥೆಗೆ ಅಡಚನೆಯಾಗದಿರಲಿ ಎಂಬ ಕಾರಣಕ್ಕೆ ನ್ಯಾಯಾಲಯದಲ್ಲಿ ರಿಟ್ ಸಲ್ಲಿಸಿದ್ದೆವು. ಖ್ಯಾತ ನ್ಯಾಯವಾದಿ ಅಗರ್ತ ಕೇಶವ ಭಟ್‌ರವರ ವಾದ ಮಂಡನೆಯನ್ನು ಆಲಿಸಿದ ನ್ಯಾಯಾಲಯವು ಸರಕಾರದ ಆದೇಶಕ್ಕೆ ತಡೆಯಾಜ್ಞೆ ವಿಧಿಸಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ ಎಂದು ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಕೆ.ವಿ. ಪ್ರಸಾದ್ ಮಾಧ್ಯಮ ಪ್ರತಿನಿಧಿಗಳಲ್ಲಿ ತಿಳಿಸಿದ್ದಾರೆ.