ಪಾಲ್ತಾಡಿ : ಸೋರುತ್ತಿರುವ ಕೊಠಡಿಯಲ್ಲಿ ಅಡುಗೆ ತಯಾರಿ -ಟರ್ಪಾಲ್ ಹೊದಿಕೆಯ ಶಾಲಾ ಅಕ್ಷರ ದಾಸೋಹ ಕೊಠಡಿ

0

ಸವಣೂರು : ಸೋರುತ್ತಿರುವ ಅಡುಗೆಕೊಠಡಿಯಲ್ಲಿ ಶಾಲಾ ಮಕ್ಕಳಿಗೆ ಅಡುಗೆ ತಯಾರಿಸಿ ಕೊಡಬೇಕಾದ ಪರಿಸ್ಥಿತಿ ಕಡಬ ತಾಲೂಕಿನ ಪಾಲ್ತಾಡಿ ಸ.ಹಿ.ಪ್ರಾ. ಶಾಲೆಯದ್ದು.
ಹೌದು ,ಕಳೆದ 4 ವರ್ಷಗಳಿಂದ ಇದೇ ಪರಿಸ್ಥಿತಿಯಲ್ಲಿ ಅಕ್ಷರ ದಾಸೋಹ ಕೊಠಡಿಗೆ ಟರ್ಪಾಲು ಹೊದಿಸಿ ಬಿಸಿಯೂಟ ತಯಾರಿಸಲಾಗುತ್ತಿದೆ.ಈ ಕುರಿತು ಇಲ್ಲಿನ ಶಾಲಾಭಿವೃದ್ದಿ ಸಮಿತಿ ಹಾಗೂ ಪೋಷಕರು 4 ವರ್ಷಗಳಿಂದ ಇಲಾಖೆಗೆ, ಜನಪ್ರತಿನಿಧಿಗಳಿಗೆ ಮನವಿ ನೀಡುತ್ತಲೇ ಬಂದಿದ್ದಾರೆ. ಸವಣೂರು ಗ್ರಾ.ಪಂ.ನ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು ಭೇಟಿ ನೀಡಿದ್ದು ಬಿಟ್ಟರೆ ಬೇರೆ ಯಾವುದೇ ಅಧಿಕಾರಿಗಳು ಭೇಟಿ ನೀಡಿಲ್ಲ ಎಂದು ದೂರು ವ್ಯಕ್ತವಾಗಿದೆ.


ಗ್ರಾಮ ಸಭೆಯಲ್ಲಿ ಚರ್ಚೆ:
ಈ ಶಾಲೆಯ ಅಕ್ಷರ ದಾಸೋಹ ಕೊಠಡಿಯ ಸಮಸ್ಯೆಯ ಕುರಿತು ಸವಣೂರು ಗ್ರಾಮ ಸಭೆಯಲ್ಲಿ ಭಾರೀ ಚರ್ಚೆ ನಡೆದಿದೆ. ಕೂಡಲೇ ಈ ಕುರಿತು ಶಿಕ್ಷಣಾಧಿಕಾರಿಗಳು ಶಾಲೆಗೆ ಭೇಟಿ ನೀಡುವ ಕುರಿತು ತಿಳಿಸಲಾಗುವುದು ಎಂದು ಶಿಕ್ಷಣ ಇಲಾಖೆಯ ಪ್ರತಿನಿಧಿ ಗ್ರಾಮ ಸಭೆಗೆ ಮಾಹಿತಿ ನೀಡಿದ್ದರು.ಆದರೆ ಈ ವರೆಗೂ ಶಾಲೆಗೆ ಶಿಕ್ಷಣಾಧಿಕಾರಿ ಭೇಟಿ ನೀಡಿಲ್ಲ ಎಂಬ ಆರೋಪ ವ್ಯಕ್ತವಾಗಿದೆ.


ದಾನಿಗಳ ನೆರವಿನಿಂದ ವಿವಿಧ ಕಾರ್ಯ:
ಶಾಲೆಯ ಅಭಿವೃದ್ದಿ ದೃಷ್ಟಿಯಲ್ಲಿ ಶಾಲಾಭಿವೃದ್ದಿ ಸಮಿತಿಯ ವತಿಯಿಂದ ದಾನಿಗಳ ನೆರವಿನಿಂದ ಶಾಲೆಯಲ್ಲಿ ವಿವಿಧ ಚಟುವಟಿಕೆ ಹಾಗೂ ಅಭಿವೃದ್ದಿ ಕೆಲಸ, ವಿದ್ಯಾರ್ಥಿಗಳಿಗೆ ಕಲಿಕೆಗೆ ಪೂರಕವಾದ ವ್ಯವಸ್ಥೆ ಮಾಡಲಾಗಿದೆ.

ಪ್ರತಿಭಟನೆಯ ಎಚ್ಚರಿಕೆ:
ಶಾಲೆಯ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಯಾವುದೇ ಪೂರಕವಾಗಿ ಸ್ಪಂದಿಸದಿದ್ದರೆ ಶಾಲಾ ಪೋಷಕರು ಹಾಗೂ ಊರವರು ಸೇರಿಕೊಂಡು ಪ್ರತಿಭಟನೆ ನಡೆಸುವ ಕುರಿತೂ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದರು.


ಅಧಿಕಾರಿಗಳಿಗೆ ಯಾಕೆ ಅಸಡ್ಡೆ
ಶಾಲೆಯ ಅಕ್ಷರ ದಾಸೋಹ ಕೊಠಡಿ ಕಳೆದ 4 ವರ್ಷಗಳಿಂದ ಸೋರುತ್ತಿದ್ದು, ಟರ್ಪಾಲ್‌ ಹಾಕಲಾಗಿದೆ. ಹಲವು ಬಾರಿ ಇಲಾಖೆಗೆ ಬರೆದುಕೊಳ್ಳಲಾಗಿದೆ. ಶಾಲೆಯ ಸಮಸ್ಯೆಗಂಭೀರವಾಗಿದ್ದರೂ ಶಿಕ್ಷಣಾಧಿಕಾರಿ ಈವರೆಗೂ ಭೇಟಿ ನೀಡಿಲ್ಲ. ಅಧಿಕಾರಿಗಳಿಗೆ ಶಾಲೆಯ ಬಗ್ಗೆ ಯಾಕೆ ಅಸಡ್ಡೆ
ಜಯರಾಮ ಗೌಡ ದೊಡ್ಡಮನೆ ,ಅಧ್ಯಕ್ಷರು ಶಾಲಾಭಿವೃದ್ದಿ ಸಮಿತಿ ಪಾಲ್ತಾಡಿ ಶಾಲೆ

LEAVE A REPLY

Please enter your comment!
Please enter your name here