ಪೋಕ್ಸೋ ಸಂತ್ರಸ್ಥೆಗೆ ಸಿಗದ ಪರಿಹಾರ ವ್ಯವಸ್ಥೆಯ ಗಂಭೀರ ಲೋಪ: ಜತೀಂದ್ರ ಶೆಟ್ಟಿ

0

ಉಪ್ಪಿನಂಗಡಿ: ಪೋಕ್ಸೋ ಪ್ರಕರಣದ ಸಂತ್ರಸ್ತೆಗೆ 2020ರ ಮಾರ್ಚ್ ತಿಂಗಳ 6ರಂದು 2.5೦ ಲಕ್ಷ ರೂ ಪರಿಹಾರ ಧನವನ್ನು ನೀಡಬೇಕೆಂದು ನ್ಯಾಯಾಲಯವು ಆದೇಶ ನೀಡಿದ್ದರೂ, ಆದೇಶದ ಪರಿಪಾಲನೆ ಯಾರಿಂದಲೂ ಆಗದಿರುವುದು ವ್ಯವಸ್ಥೆಯ ಗಂಭೀರವಾದ ಲೋಪವಾಗಿದೆ ಎಂದು ಸಾಮಾಜಿಕ ಹೋರಾಟಗಾರ ಅಲಿಮಾರ ಜತೀಂದ್ರ ಶೆಟ್ಟಿ ಆರೋಪಿಸಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಪೋಕ್ಸೋ ಪ್ರಕರಣದ ಬಗ್ಗೆ ಕಟ್ಟುನಿಟ್ಟಿನ ಕಾನೂನು ಜಾರಿಯಲ್ಲಿದ್ದರೂ ಅಪರಾಧಿಗಳನ್ನು ಶಿಕ್ಷೆಗೆ ಗುರಿಪಡಿಸುವಲ್ಲಿ ಸರ್ವತ್ರ ನಿರಾಸಕ್ತಿ ವ್ಯಕ್ತವಾಗುತ್ತಿದೆ. ನೆಕ್ಕಿಲಾಡಿ ಗ್ರಾಮದಲ್ಲಿ ನಡೆದ ಪೋಕ್ಸೋ ಪ್ರಕರಣವೊಂದರಲ್ಲಿ ನಾನೇ ಮುಂದೆ ನಿಂತು ಹೋರಾಟ ಮಾಡಿದ್ದು, ಆಕೆಗೆ ನ್ಯಾಯ ದೊರಕಿಸಿಕೊಡುವಲ್ಲಿ ಸಫಲವಾಗಿದ್ದೇನೆ. ಆದರೆ ಈ ಪ್ರಕರಣದಲ್ಲಿ ಸಂತ್ರಸ್ತೆಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ 2.5 ಲಕ್ಷ ಪರಿಹಾರ ಮೊತ್ತವನ್ನು ನೀಡಬೇಕೆಂದು 2020ರ ಮಾರ್ಚ್ ತಿಂಗಳಲ್ಲಿ ಆದೇಶಿಸಿದ್ದರೂ ಪ್ರಾಧಿಕಾರಕ್ಕೆ ತೀರ್ಪಿನ ಪ್ರತಿಯೇ ತಲುಪಿಲ್ಲ ಎನ್ನುವುದು ವಿಶೇಷವಾಗಿದೆ. ಈಗ ತಾನೇ ಸ್ವತಃ ತೀರ್ಪಿನ ದಾಖಲೆಗಳನ್ನು ಪ್ರಾಧಿಕಾರಕ್ಕೆ ತಲುಪಿಸಿದ್ದೇನೆ. ಇದು ಅಮಾಯಕ ಸಂತ್ರಸ್ತರಿಗೆ ನ್ಯಾಯ ಒದಗಿಸುವ ರೀತಿಯೇನು ಎಂದು ಪ್ರಶ್ನಿಸಿದ ಅವರು, ಪೋಕ್ಸೋದಂತಹ ಘಟನೆಗಳು ನಡೆದಾಗ ಇಡೀ ಸಮಾಜ ಸಾಮಾಜಿಕ ಜವಾಬ್ದಾರಿ ತೆಗೆದುಕೊಂಡು ಆಕೆಯ ನೆರವಿಗೆ ನಿಲ್ಲಬೇಕು. ಯಾವುದೇ ಕಾರಣಕ್ಕೂ ಇಲ್ಲಿ ರಾಜಕೀಯವನ್ನು ಎಳೆದು ತರಬಾರದು. ಒಂದು ವೇಳೆ ಆರೋಪಿ ಬಲಿಷ್ಟ, ಯಾವುದೇ ಒಂದು ನಿರ್ದಿಷ್ಟ ಪಕ್ಷದ ಬೆಂಬಲಿಗನಾದರೆ ಆ ಪಕ್ಷ ಆತನಿಗೆ ಹಿಂಬಾಗಿಲಿನಿಂದ ಬೆಂಬಲಕ್ಕೆ ನಿಲ್ಲುವುದನ್ನು ನಾನು ಕಂಡಿದ್ದೇನೆ. ಹೀಗೆ ಆದಾಗ ಇಲ್ಲಿ ಸಂತ್ರಸ್ಥೆ ಒಂಟಿಯಾಗಿ ಬಿಡುತ್ತಾಳೆಯಲ್ಲದೆ, ಆಕೆಯ ಮನೋಸ್ಥೈರ್ಯವು ಕುಗ್ಗುತ್ತದೆ. ಅಂತಹ ಸಂದರ್ಭದಲ್ಲಿ ಆಕೆಗೆ ನ್ಯಾಯವೆನ್ನುವುದು ಮರಿಚಿಕೆಯಾಗುತ್ತದೆ ಎಂದು ಅಭಿಪ್ರಾಯಿಸಿದರು.

ಸೌಜನ್ಯ ಪ್ರಕರಣ ಮರುತನಿಖೆಯಾಗಲಿ: ಅತ್ಯಾಚಾರಕ್ಕೆ ಒಳಗಾಗಿ ಕೊಲೆಗೀಡಾದ ಸೌಜನ್ಯಳಿಗೆ ನ್ಯಾಯ ಸಿಗಬೇಕೆಂಬುದು ನಡೆಯುತ್ತಿರುವ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಸರಕಾರ ಒಂದು ಉತ್ತಮ ತನಿಖಾ ತಂಡವನ್ನು ರಚಿಸಿ, ಸರ್ವೋಚ್ಛ ನ್ಯಾಯಾಲಯದ ಸುಪರ್ದಿಯಲ್ಲಿ ತನಿಖೆ ನಡೆದಾಗ ಮಾತ್ರ ಆಕೆಗೆ ನ್ಯಾಯ ಸಿಗಲು ಸಾಧ್ಯ ಎಂದರು.

ಸಾಲ ಪಡೆದು ಜೀವ ಕಳೆದುಕೊಳ್ಳುವ ಪ್ರಕರಣದ ಬಗ್ಗೆ ಸರಕಾರ ಗಂಭೀರವಾಗಲಿ:
ಇತ್ತೀಚಿನ ದಿನಗಳಲ್ಲಿ ಚೀನಿ ಆಪ್ ಮೂಲಕ ಸಾಲ ಪಡೆದು , ಸಾಲವನ್ನು ಮರು ಪಾವತಿಸಿದ್ದರೂ, ಮರು ಪಾವತಿಸದಿದ್ದರೂ ಸಾಲ ಪಡೆದವರನ್ನು ತೇಜೋವಧೆ ಮಾಡುವ ಮೂಲಕ ಅವರನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿರುವ ಘಟನಾವಳಿಗಳು ವ್ಯಾಪಕ ನಡೆಯುತ್ತಿದ್ದು, ಇದರಿಂದಾಗಿ ಮುಗ್ದ ಜೀವಗಳು ಆತ್ಮಹತ್ಯೆಯಂತಹ ಕೃತ್ಯಗಳಿಗೆ ಮುಂದಾಗುತ್ತಿದ್ದಾರೆ. ಈ ರೀತಿ ಸಾಲ ನೀಡುವುದಾಗಲಿ, ವಸೂಲಿಗೆ ಬೆದರಿಕೆಯೊಡ್ಡುವುದಾಗಲಿ ಕಾನೂನು ಬಾಹಿರ ಕೃತ್ಯವಾಗಿದ್ದರೂ ಸರಕಾರದಿಂದ ಯಾವುದೇ ಅಂಕುಶ ಇಲ್ಲದ ಕಾರಣಕ್ಕೆ ನಿರಂತರವಾಗಿ ಈ ಜಾಲ ಕ್ರಿಯಾಶೀಲವಾಗಿರುತ್ತದೆ. ಇದರಿಂದ ಅಮಾಯಕರು ಬಲಿಯಾಗುತ್ತಿದ್ದು, ಇಂತಹ ಕೃತ್ಯಗಳನ್ನು ನಿಗ್ರಹಿಸಲು ಸರಕಾರ ಕಠಿಣ ಕಾನೂನು ಕ್ರಮವನ್ನು ಅನುಷ್ಟಾನಿಸಬೇಕೆಂದು ಒತ್ತಾಯಿಸಿದ ಅವರು, ಯಾವುದೇ ರೀತಿಯ ಅಶ್ಲೀಲ ಚಿತ್ರಗಳನ್ನು ಯಾ ವಿಡಿಯೋ ದೃಶ್ಯಾವಳಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡುವುದು ಕಾನೂನು ಬಾಹಿರ ಕೃತ್ಯವಾಗಿದ್ದು, ಅಂತಹವರ ವಿರುದ್ಧ ಪೊಲೀಸರಿಗೆ ಅಥವಾ ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡಿ ನ್ಯಾಯ ದೊರಕಿಸಿಕೊಳ್ಳಬಹುದಾಗಿದೆ. ಒಂದು ವೇಳೆ ಬ್ಲ್ಯಾಕ್ ಮೇಲ್ ಕೃತ್ಯಗಳು ಯಾರಿಂದಲಾದರೂ ಘಟಿಸಿದ್ದರೆ, ಅಗತ್ಯ ಕ್ರಮ ಜರಗಿಸುವಲ್ಲಿ ಆಪ್ತ ಸಲಹೆಗಾಗಿ ತನ್ನನ್ನು ( ದೂರವಾಣಿ ಸಂಖ್ಯೆ: 9731318208)ಯ ಮೂಲಕ ಸಂಪರ್ಕಿಸಬಹುದೆಂದು ಅವರು ತಿಳಿಸಿದರು.

LEAVE A REPLY

Please enter your comment!
Please enter your name here