ಪುತ್ತೂರು: 2023-24ನೇ ಶೈಕ್ಷಣಿಕ ವರ್ಷದ ಪುತ್ತೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಆ.31ರಂದು ಮರೀಲ್ ಇ.ಎಸ್.ಆರ್ ಪ್ರೆಸಿಡೆನ್ಸಿ ಸ್ಕೂಲ್ನಲ್ಲಿ ನಡೆಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಕ್ಕಳಿಗೆ ಶುಭ ಹಾರೈಸಿದರು. ಶಿಕ್ಷಣ ಸಮನ್ವಯಾಧಿಕಾರಿ ನವೀನ್ ಸ್ಟೀಫನ್ ವೇಗಸ್ ಶುಭ ಹಾರೈಸಿದರು. ವೇದಿಕೆಯಲ್ಲಿದ್ದ ಅತಿಥಿಗಳಿಗೆ ಡಾ. ಎಪಿಜೆ ಅಬ್ದುಲ್ ಕಲಾಂರವರ ಆತ್ಮಕಥನ ‘ಅಗ್ನಿಯ ರೆಕ್ಕೆಗಳು’ ಎಂಬ ಪುಸ್ತಕವನ್ನು ನೀಡಿ ಸ್ವಾಗತಿಸಲಾಯಿತು. ಶಾಲಾ ಸಂಚಾಲಕರಾದ ಝಾಕಿರ್ ಹುಸೈನ್ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಪಿ.ಟಿ.ಎಂ ಗೌರವಾಧ್ಯಕ್ಷ ಹಮೀದ್ ಕೆ.ಎ ಅವರು ಮಕ್ಕಳಿಗೆ ಪ್ರತಿಭಾ ಕಾರಂಜಿಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಪ್ರೋತ್ಸಾಹದ ಮಾತುಗಳನ್ನಾಡಿದರು.ಶಾಲಾ ಮುಖ್ಯ ಶಿಕ್ಷಕಿ ತಾಜುನ್ನೀಸಾ ಮಾತನಾಡಿ ಸೋಲು ಗೆಲುವಿನ ಮೆಟ್ಟಿಲನ್ನು ಸಮಾನವಾಗಿ ಸ್ವೀಕರಿಸಿ ಮುನ್ನುಗ್ಗಿದಾಗ ಭವಿಷ್ಯದಲ್ಲಿ ಯಶಸ್ಸು ಪ್ರಾಪ್ತಿಯಾಗುತ್ತದೆ ಎಂದು ಹೇಳಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಸಿರಾಜ್ ಹಾಗೂ ಶಾಲಾ ಆಡಳಿತ ಮಂಡಳಿಯ ಸದಸ್ಯ ವಿ ಕೆ. ಶರೀಫ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪುತ್ತೂರು ಕ್ಲಸ್ಟರ್ನ ಸಿ.ಆರ್.ಪಿ ಶಶಿಕಲಾ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕಿ ಶಿಫಾನ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಶಿಕ್ಷಕಿ ತಾಜುನ್ನೀಸಾ ವಂದಿಸಿದರು. ಕೊನೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.