ಆನಡ್ಕ ಸರಕಾರಿ ಹಿ.ಪ್ರಾ ಶಾಲಾ ಮುಖ್ಯ ಶಿಕ್ಷಕಿ ಶುಭಲತಾ ಹಾರಾಡಿಯವರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

0

ಪುತ್ತೂರು:2023-24ನೇ ಸಾಲಿನ ಹಿರಿಯ ಪ್ರಾಥಮಿಕ ಶಾಲಾ ವಿಭಾಗದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಶಾಂತಿಗೋಡು ಗ್ರಾಮದ ಆನಡ್ಕ ಸರಕಾರಿ ಹಿ.ಪ್ರಾ ಶಾಲಾ ಮುಖ್ಯ ಶಿಕ್ಷಕಿ ಹಾರಾಡಿಯ ಶುಭಲತಾರವರು ಆಯ್ಕೆಯಾಗಿದ್ದಾರೆ.


ಬಂಟ್ವಾಳ ತಾಲೂಕಿನ ಕೊಯಿಲ ನೊಣಯ್ಯ ಹಾಗೂ ಗುಲಾಬಿ ದಂಪತಿ ಪುತ್ರಿ. ಗಣೇಶ್ ಬೀಡಿಯ ವ್ಯವಸ್ಥಾಪಕರಾಗಿದ್ದ ಇಲ್ಲಿನ ಹಾರಾಡಿ ನಿವಾಸಿ ದಿ. ಹರೀಶ್‌ರವರ ಪತ್ನಿಯಾಗಿರುವ ಶುಭಲತಾರವರು ಪ್ರಾಥಮಿಕ ಶಿಕ್ಷಣ ವನ್ನು ಮೂಡಬಿದ್ರೆ ಪ್ರೌಢ ಶಿಕ್ಷಣವನ್ನು ನಾರಾವಿಯಲ್ಲಿ, ವೃತ್ತಿಪರ ಶಿಕ್ಷಣವನ್ನು ಕಪಿತಾನಿಯೋ ಶಿಕ್ಷಣ ಸಂಸ್ಥೆ ಮಂಗಳೂರಿನಲ್ಲಿ ಪಡೆದುಕೊಂಡಿರುತ್ತಾರೆ. ಬಳಿಕ ಬಂಟ್ವಾಳದ ಕೊಯಿಲ ಸ.ಹಿ.ಪ್ರಾ ಶಾಲೆಯಲ್ಲಿ ಉಚಿತ ಸೇವೆಯನ್ನು ಸಲ್ಲಿಸಿದ್ದರು. 1985ರಲ್ಲಿ ನಂತರ ಕಾರ್ಕಳ ತಾಲೂಕಿನ ದುರ್ಗಾ ತೆಳ್ಳಾರ್ ಹಿ.ಪ್ರಾ ಶಾಲೆಗೆ ಸಹಶಿಕ್ಷಕಿಯಾಗಿ ನೇಮಕಗೊಂಡು ಶಿಕ್ಷಕ ವೃತ್ತಿಯನ್ನು ಆರಂಭಿಸಿದ್ದರು. 1987ರಲ್ಲಿ ಬೆಳ್ತಂಗಡಿ ತಾಲೂಕಿನ ಕರಾಯ ಹಿ.ಪ್ರಾ ಶಾಲೆ, 1992ರಲ್ಲಿ ಪುತ್ತೂರಿನ ಹಾರಾಡಿ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆಗೊಂಡು ಇಲ್ಲಿ 27 ವರ್ಷಗಳ ಸುಧೀರ್ಘ ಕಾಲ ಕರ್ತವ್ಯ ನಿರ್ವಹಿಸಿದ್ದರು. 2019ರಲ್ಲಿ ಸುಳ್ಯ ತಾಲೂಕಿನ ಮುರೂರು ಹಿ.ಪ್ರಾ ಶಾಲೆಗೆ ವರ್ಗಾವಣೆಗೊಂಡು 2020ರಲ್ಲಿ ಮುಖ್ಯಶಿಕ್ಷಕಿಯಾಗಿ ಮುಂಭಡ್ತಿ ಪಡೆದು ಆನಡ್ಕ ಶಾಲೆಗೆ ವರ್ಗಾವಣೆಗೊಂಡು ಕಳೆದ ನಾಲ್ಕು ವರ್ಷಗಳಿಂದ ಮುಖ್ಯ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.


ಆನಡ್ಕ ಹಿ.ಪ್ರಾ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಶಾಲೆಯ ಸರ್ವಾಂಗೀಣ ಪ್ರಗತಿಗಾಗಿ ದಾನಿಗಳ ನೆರವಿನೊಂದಿಗೆ ಶಾಲೆಯ ಸೌಂದರೀಕರಣ, ಶಾಲೆಗೆ ಬೇಕಾದ ಭೌತಿಕ ಸೌಲಭ್ಯಗಳನ್ನು ಒದಗಿಸಲು ಶ್ರಮಿಸಿದ್ದಾರೆ. ತಾಲೂಕು ಮಟ್ಟದ ಇಲಾಖಾ ಕಾರ್ಯಕ್ರಮಗಳನ್ನು ಶಾಲೆಯಲ್ಲಿ ಆಯೋಜಿಸಿ ಮೆಚ್ಚುಗೆ ಗಳಿಸಿದ್ದಾರೆ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಮಕ್ಕಳಿಗೆ ಪಾಠದೊಂದಿಗೆ ಗುರು ಮುಖೇನ ಯೋಗ ಧ್ಯಾನ, ಹಾಗೂ ವಿವಿಧ ಕ್ಲಬ್‌ಗಳ ಮೂಲಕ, ವಿವಿಧ ಶೈಕ್ಷಣಿಕ ಚಟುವಟಿಕೆಗಳ ಮೂಲಕ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಶಿಕ್ಷಕರ ಹಾಗೂ ಪೋಷಕರ ನೆರವಿನೊಂದಿಗೆ ಶಾಲೆಯನ್ನು ಅಭಿವೃದ್ಧಿಯ ಪಥದತ್ತ ಮುನ್ನಡೆಸಿದ್ದಾರೆ. ಇವರ ಅವಧಿಯಲ್ಲಿ ಆನಡ್ಕ ಶಾಲೆಗೆ ಉತ್ತಮ ನಲಿ-ಕಲಿ ಪ್ರಶಸ್ತಿ, ಉತ್ತಮ ಶಾಲಾ ಅಭಿವೃದ್ಧಿ ಸಮಿತಿ ಹಾಗೂ ಮೇಲುಸ್ತುವಾರಿ ಸಮಿತಿ ಪ್ರಶಸ್ತಿ, ರಾಜ್ಯಮಟ್ಟದ ಕೃಷಿ ಮೇಳದಲ್ಲಿ ಪ್ರಾಥಮಿಕ ವಿಭಾಗದಲ್ಲಿ ಕೃಷಿ ಚಟುವಟಿಕೆಗಳಿಗಾಗಿ ಪ್ರಶಸ್ತಿ ಸೇರಿದಂತ ಹಲವು ಪ್ರಶಸ್ತಿಗಳು ಬಂದಿರುತ್ತವೆ.


ಉತ್ತಮ ಕಾರ್ಯಕ್ರಮ ನಿರೂಪಕರಾಗಿ, ಮಕ್ಕಳಿಗಾಗಿ ರೂಪಕಗಳ ರಚನಕಾರರಾಗಿ, ತಾಲೂಕು ಜಿಲ್ಲಾ ಮಟ್ಟದ ತೀರ್ಪುಗಾರರಾಗಿ, ಭಾಷಣಕಾರರಾಗಿ, ಸಮರ್ಥ ಸಂಘಟಕರಾಗಿ, ಗುರುತಿಸಿಕೊಂಡಿದ್ದಾರೆ. ಪುತ್ತೂರು ತಾಲೂಕು ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರನ್ನು ಹಲವು ಸಂಘ ಸಂಸ್ಥೆಗಳು ಇವರನ್ನು ಗುರುತಿಸಿವೆ.


38 ವರ್ಷಗಳ ಸುದೀರ್ಘ ಸೇವೆಯನ್ನು ಸಲ್ಲಿಸಿರುವ ಇವರು ತಾವು ಕರ್ತವ್ಯ ನಿರ್ವಹಿಸಿದ ಶಾಲೆಗಳಲ್ಲಿ ತನ್ನ ಕರ್ತವ್ಯದ ಮೂಲಕ ಎಲ್ಲರ ಪ್ರೀತಿ ಗೌರವವನ್ನು ಪಡೆದುಕೊಂಡಿದ್ದಾರೆ. ಉತ್ತಮ ತರಗತಿ ಶಿಕ್ಷಕಿಯಾಗಿ ಅಪಾರ ಸಂಖ್ಯೆಯ ಶಿಷ್ಯ ವೃಂದವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇವರಲ್ಲಿ ಶಿಕ್ಷಣ ಪಡೆದ ಹೆಚ್ಚಿನ ವಿದ್ಯಾರ್ಥಿಗಳು ಇಂದು ಉನ್ನತ ಸ್ಥಾನದಲ್ಲಿರುವುದು ಅವರ ವೃತ್ತಿ ಪ್ರತಿಭೆಗೆ ಹಿಡಿದ ಕನ್ನಡಿಯಾಗಿದೆ.
ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿರುವ ಪುತ್ರ ವಿಕ್ರಮ್ ಎಚ್., ಪುತ್ರಿ ವಿನುತಾ ಎಚ್., ಸೊಸೆ ಚೈತ್ರಾ, ಅಳಿಯ ವಿಕ್ರಮ್‌ರವರೊಂದಿಗೆ ಹಾರಾಡಿಯಲ್ಲಿ ವಾಸ್ತವ್ಯವಿದ್ದಾರೆ.

LEAVE A REPLY

Please enter your comment!
Please enter your name here