ಉಪ್ಪಳಿಗೆ ಸರಕಾರಿ ಹಿ.ಪ್ರಾ ಶಾಲೆಯಲ್ಲಿ ಎಲ್‌ಕೆಜಿ ತರಗತಿ ಉದ್ಘಾಟನೆ

0

ಪುತ್ತೂರು: ಸರಕಾರಿ ಶಾಲೆಗಳಲ್ಲಿಯೂ ಖಾಸಗಿ ಶಾಲೆಗಳಿಗಿಂತ ಉತ್ತಮ ನಡೆಸುವುದು ಸರಕಾರದ ಉದ್ದೇಶ. ಇದಕ್ಕಾಗಿ ಉತ್ತಮ ಅಧ್ಯಾಪಕರನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು 13,500ಮಂದಿ ಶಿಕ್ಷಕರ ನೇಮಕಾತಿ ಪೂರ್ಣಗೊಂಡಿದೆ. ನ್ಯಾಯಾಲಯದ ತಡೆಯಿರುವ ಕಾರಣ ಸ್ಥಗಿತಗೊಂಡಿದೆ. ಮುಂದಿನ ಎರಡು ತಿಂಗಳಲ್ಲಿ ರಾಜ್ಯಕ್ಕೆ 13,500 ಹೊಸ ಶಿಕ್ಷಕರು ನೇಮಕಗೊಳ್ಳಲಿದ್ದಾರೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಇರ್ದೆ-ಉಪ್ಪಳಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೆ.4ರಂದು ನೂತನವಾಗಿ ಪ್ರಾರಂಭಗೊಂಡ ಎಲ್‌ಕೆಜಿ ತರಗತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರತಿ ಶಾಲೆಗಳಲ್ಲಿಯೂ ಆಯಾ ವಿಷಯವಾರು ಶಿಕ್ಷಕರನ್ನು ನೇಮಕ ಮಾಡಬೇಕು ಆವಶ್ಯಕತೆಗಳಿದ್ದು ಈ ನಿಟ್ಟಿನಲ್ಲಿ ಮುಂದಿನ ನೇಮಕಾತಿಗಳು ನಡೆಯಲಿದೆ. ಇಂಗ್ಲಿಷ್‌ನಲ್ಲಿ ಅನುಭವಿರುವ ಶಿಕ್ಷಕರನ್ನೇ ಆಂಗ್ಲ ಮಾಧ್ಯಮಕ್ಕೆ ನೇಮಕಗೊಳಿಸಬೇಕು. ಶಾಲಾ ಶಿಕ್ಷಣದ ಜೊತೆಗೆ ನ್ಯೂಸ್ ಚಾನೆಲ್‌ಗಳು ತೋರಿಸುವುದು, ಪುಸ್ತಕ ಗಳನ್ನು ಒದಿಸಲು ಪೋಷಕರು ಪ್ರೇರಣೆ ನೀಡಬೇಕು. ತರಗತಿ ಮಾತ್ರವಲ್ಲದೆ ಹೊರಗಡೆಯಲ್ಲಿಯೂ ಇಂಗ್ಲಿಷ್‌ನಲ್ಲಿ ಮಾತನಾಡುವುದನ್ನು ರೂಡಿಸಿಕೊಳ್ಳಬೇಕು. ಮಕ್ಕಳಿಗೆ ಕಲಿಕೆಗೆ ಪೂರಕವಾದ ವಾತಾವರಣ ಕಲ್ಪಿಸಬೇಕು. ಡಾಕ್ಟರ್, ಇಂಜಿನಿಯರ್ ಕಲಿಯುವವರೇ ದೊಡ್ಡವರಲ್ಲ. ಇಂದು ಬಡವರಿಗೂ ಡಾಕ್ಟರ್, ಇಂಜಿನಿಯರ್, ಐಎಎಸ್, ಐಪಿಎಸ್ ಮಾಡುವ ಅವಕಾಶವಿದೆ ಇವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.



ರೂ.3 ಲಕ್ಷ ಅನುದಾನ:
ಶಾಲಾ ಮನವಿಯನ್ನು ಸ್ವೀಕರಿಸಿದ ಶಾಸಕ ಅಶೋಕ್ ಕುಮಾರ್ ರೈಯವರು ಕ್ರೀಡಾಂಗಣಕ್ಕೆ ರೂ.3 ಲಕ್ಷ ಅನುದಾನ ನೀಡುವುದಾಗಿ ಅವರು ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಬೆಟ್ಟಂಪಾಡಿ ಗ್ರಾ.ಪಂ ಅಧ್ಯಕ್ಷೆ ವಿದ್ಯಾಶ್ರೀಸುರೇಶ್ ಸರಳಿಕಾನ ಮಾತನಾಡಿ, ಸುಮಾರು 68 ವರ್ಷಗಳ ಇತಿಹಾಸವಿರುವ ಉಪ್ಪಳಿಗೆ ಶಾಲೆಯಲ್ಲಿ ಆಂಗ್ಲ ಮಾಧ್ಯಮ, ಎಲ್‌ಕೆಜಿ ಪ್ರಾರಂಭಿಸುವಂತೆ ಪಂಚಾಯತ್‌ನ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ಸರಕಾರಕ್ಕೆ ಹಾಗೂ ಕಳೆದ ಅವಧಿಯಲ್ಲಿ ಶಾಸಕ ಸಂಜೀವ ಮಠಂದೂರು ಅವರಿಗೆ ಮನವಿ ಸಲ್ಲಿಸಲಾಗಿದ್ದು ನಮ್ಮ ಬೇಡಿಕೆ ಈಡೇರಿದೆ. ಇಲ್ಲಿನ ವಿದ್ಯಾಭ್ಯಾಸ ಪಡೆದ ವಿದ್ಯಾರ್ಥಿಗಳು ಉನ್ನತ ಸ್ಥಾನ ಪಡೆಯುವಂತಾಗಲಿ ಎಂದ ಅವರು ಪ್ರಸ್ತುತ ಶಾಲೆಯಲ್ಲಿರುವ ಶಿಕ್ಷಕರು, ಕೊಠಡಿಗಳ ಕೊರತೆಗಳನ್ನು ಪೂರೈಸುವಂತೆ ಶಾಸಕರಲ್ಲಿ ವಿನಂತಿಸಿದರು.
ಎಸ್‌ಡಿಎಂಸಿ ಸದಸ್ಯ ಫಾರೂಕ್ ಪ್ರಾಸ್ತಾವಿಕವಾಗಿ ಮಾತನಾಡಿ, ಉಪ್ಪಳಿಗೆ ಹಿ.ಪ್ರಾ ಶಾಲೆಯಲ್ಲಿ ಉತ್ತಮ ಸೌಲಭ್ಯ, ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದ್ದು ಸುತ್ತ ಮುತ್ತಲಿನ ನಾಲ್ಕು ಗ್ರಾಮಗಳಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದೆ. ಪ್ರತಿ ವರ್ಷ ದಾಖಲಾತಿಯು ಏರಿಕೆಯಾಗುತ್ತಿದೆ. ಇಲ್ಲಿ ಒಟ್ಟು 220 ವಿದ್ಯಾರ್ಥಿಗಳಿದ್ದರೂ ಶಿಕ್ಷಕರ ಕೊರೆತಯಿದೆ. ಒಬ್ಬ ಶಿಕ್ಷಕರು ನಿವೃತ್ತಿಯ ಅಂಚಿನಲ್ಲಿದ್ದಾರೆ. ಇಬ್ಬರ ಶಿಕ್ಷಕರ ಕೊರತೆಯಿದೆ. 12 ಕೊಠಡಿಗಳ ಪೈಕಿ 8 ಕೊಠಡಿಗಳು ಮಾತ್ರವೇ ಇದ್ದು 4 ಕೊಠಡಿಗಳ ಕೊರತೆ ಸೇರಿದಂತೆ ಮೂಲಭೂತ ಸೌಲಭ್ಯಗಳಾದ ಶೌಚಾಲಯ, ಸುಸಜ್ಜಿತ ಕ್ರೀಡಾಂಗಣ, ಬಾವಿ, ಸಂಪರ್ಕ ರಸ್ತೆ, ಸಭಾ ಭವನ ಪೂರ್ಣಗೊಳ್ಳಬೇಕಾದ ಆವಶ್ಯಕತೆಯಿದೆ ಎಂದು ಶಾಸಕರಲ್ಲಿ ಮನವಿ ಮಾಡಿದರು.
ಬೆಟ್ಟಂಪಾಡಿ ಗ್ರಾ.ಪಂ ಉಪಾಧ್ಯಕ್ಷ ಮಹೇಶ್ ಕೋರ್ಮಂಡ, ಸದಸ್ಯರಾದ ಪ್ರಕಾಶ್ ರೈ ಬೈಲಾಡಿ, ಉಮಾವತಿ ಎಸ್ ಮಣಿಯಾಣಿ, ಸುಮಲತಾ, ಉಪ್ಪಳಿಗೆ ಶ್ರೀ ವಿಷ್ಣುಯುವಕ ಮಂಡಲದ ಸ್ಥಾಪಕಾಧ್ಯಕ್ಷ ಕೃಷ್ಣ ಪ್ರಸಾದ್ ಆಳ್ವ, ಕ್ಷೇತ್ರ ಸಮನ್ವಯಾಧಿಕಾರಿ ನವೀನ್ ಸ್ಟಿಫನ್ ವೇಗಸ್, ಕ್ಷೇತ್ರ ಸಮೂಹ ಸಂಪನ್ಮೂಲ ವ್ಯಕ್ತಿ ಬಾಲಕೃಷ್ಣ, ಇರ್ದೆ ಉಪ್ಪಳಿಗೆ ಸರಕಾರಿ ಪ್ರೌಢ ಶಾಲಾ ಮುಖ್ಯಗುರು ರಾಮಚಂದ್ರ, ಹಿ.ಪ್ರಾ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಲೋಕನಾಥ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ:
ಕಾರ್ಯಕ್ರಮದಲ್ಲಿ ಶಾಸಕ ಅಶೋಕ್ ಕುಮಾರ್ ರೈಯವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಮನವಿ:
ಶಾಲೆಯ ಮೂಲಭೂತ ಸೌಲಭ್ಯಗಳನ್ನು ಪೂರೈಸುವುದು ಹಾಗೂ ಕೊಠಡಿ ಹಾಗೂ ಶಿಕ್ಷಕರ ಕೊರತೆಯನ್ನು ಪೂರೈಸಿಕೊಡುವಂತೆ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಲೋಕನಾಥ, ಮುಖ್ಯಗುರು ಲಿಂಗಮ್ಮ, ಕೃಷ್ಣಪ್ರಸಾದ್ ಆಳ್ವ ಮನವಿ ಸಲ್ಲಿಸಿದರು.
ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಮುಖ್ಯ ಗುರು ಲಿಂಗಮ್ಮ ಸ್ವಾಗತಿಸಿದರು. ಎಸ್‌ಡಿಎಂಸಿ ಉಪಾಧ್ಯಕ್ಷೆ ಯಶೋಧ, ಸದಸ್ಯರಾದ ಸತೀಶ್, ಪ್ರಮೀಳಾ, ಮಾಜಿ ಅಧ್ಯಕ್ಷ ನಿತ್ಯಾನಂದ ಬೈಲಾಡಿ, ಶಿಕ್ಷಕರಾದ ಪುಷ್ಪಾವತಿ, ನಾಗರತ್ನ, ಚೇತನಾ, ಪ್ರತಿಮಾ, ಗೀತಾ ಅತಿಥಿಳನ್ನು ಹೂಗುಚ್ಚ ನೀಡಿ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕಿ ವಾಣಿಶ್ರಿ ವಂದಿಸಿ, ಶಿಕ್ಷಕಿ ಪಾರ್ವತಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here