ಸಂಪರ್ಕ ರಸ್ತೆಯಿಲ್ಲದೆ ಪ್ರಯೋಜನವಿಲ್ಲದಂತಾಗಿರುವ `ಪಂಜಿಗ ಸೇತುವೆ’-ರಸ್ತೆ ನಿರ್ಮಾಣಗೊಂಡರೆ ಕೆಮ್ಮಾಯಿ-ಪುರುಷರಕಟ್ಟೆ ಸಂಪರ್ಕ ಬಲು ಹತ್ತಿರ

0

*✒️ಯತೀಶ್‌ ಉಪ್ಪಳಿಗೆ

ಪುತ್ತೂರು: ಸಾಮಾನ್ಯವಾಗಿ ರಸ್ತೆ ಇದ್ದು ಸೇತುವೆಗಳಿಲ್ಲದೆ ಒಂದು ಊರಿನಿಂದ ಇನ್ನೊಂದು ಊರಿನ ಸಂಪರ್ಕವಿಲ್ಲದೇ ಇರುವುದು ಕಂಡಿದ್ದೇವೆ. ಆದರೆ ಇಲ್ಲೊಂದು ಕಡೆ ಸೇತುವೆ ನಿರ್ಮಾಣಗೊಂಡರೂ ರಸ್ತೆ ಸಂಪರ್ಕವಿಲ್ಲದೆ ಜನರ ಸಂಪರ್ಕ ಕೊಂಡಿ ಕಳಚಿಕೊಂಡಂತಾಗಿದೆ.
ಇಂತಹ ದಯನೀಯ ಸ್ಥಿತಿ ಕಾಣ ಸಿಗುವುದು ಚಿಕ್ಕಮುಡ್ನೂರು ಗ್ರಾಮದ ಎಣಿಮುಗೇರು ತಾರಕರೆಯಲ್ಲಿ. ಸೇತುವೆಯ ಒಂದು ಭಾಗ ಶಾಂತಿಗೋಡು ಗ್ರಾಮದ ಪಂಜಿಗವಾದರೆ ಇನ್ನೊಂದು ಭಾಗ ಚಿಕ್ಕಮುಡ್ನೂರು ಗ್ರಾಮದ ತಾರಕೆರೆಯಾಗಿದೆ. ಇಲ್ಲಿ ಸೇತುವೆಯ ಎರಡೂ ಭಾಗದಲ್ಲಿಯೂ ಖಾಸಗಿ ವ್ಯಕ್ತಿಗಳ ಜಮೀನು, ಅಡಿಕೆ ತೋಟಗಳಿವೆ. ರಸ್ತೆ ನಿರ್ಮಾಗೊಂಡರೆ ಶಾಂತಿಗೋಡು-ಆನಡ್ಕ ಮೂಲಕ ಕಾಣಿಯೂರು ಸುಬ್ರಹ್ಮಣ್ಯ ರಸ್ತೆಯ ಪುರುಷರಕಟ್ಟೆ ಸಂಪರ್ಕಿಸಲಿದೆ. ಇನ್ನೊಂದು ಭಾಗದಲ್ಲಿ ಚಿಕ್ಕಮುಡ್ನೂರು, ಬೀರ್‍ನಹಿತ್ಲು ಮೂಲಕ ಪುತ್ತೂರು-ಉಪ್ಪಿನಂಗಡಿ ರಸ್ತೆಯ ಕೆಮ್ಮಾಯಿಯನ್ನು ಸಂಪರ್ಕಿಸಲಿದೆ. ಇಲ್ಲಿ ಸೇತುವೆ ನಿರ್ಮಾಣವಾಗಬೇಕು ಎಂಬ ಈ ಭಾಗದ ಜನರ ಹಲವು ವರ್ಷದ ಬೇಡಿಕೆ ಈಡೇರಿದ್ದರೂ ಸಂಪರ್ಕ ರಸ್ತೆ ಕೊರತೆಯಿಂದಾಗಿ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ.
ರೂ.1.7೦ ಕೋಟಿಯ ಬ್ರಿಡ್ಜ್ ಕಂ ಬ್ಯಾರೇಜ್: ಅಂತರ್ಜಲ ವೃದ್ಧಿ ಹಾಗೂ ಕೃಷಿ ಕಾರ್ಯಗಳಿಗೆ ಅನುಕೂಲವಾಗುವ ಜೊತೆಗೆ ಜನತೆಗೆ ಸಂಪರ್ಕ ಕಲ್ಪಿಸಲು ಸಣ್ಣ ನೀರಾವರಿ ಇಲಾಖೆಯ ರೂ.1.7೦ ಕೋಟಿ ವೆಚ್ಚದಲ್ಲಿ ಕಿಂಡಿಅಣೆಕಟ್ಟು ಹಾಗೂ ಸಂಪರ್ಕ ಸೇತುವೆಯ ಕಾಮಗಾರಿಗಳು ಕಳೆದ ಮೇ ಅಂತ್ಯಕ್ಕೆ ಪೂರ್ಣಗೊಂಡಿದೆ. ಆದರೆ ಸೇತುವೆಗೆ ರಸ್ತೆ ಸಂಪರ್ಕ ಕಲ್ಪಿಸದೇ ಇರುವುದರಿಂದ ಸೇತುವೆ ನಿರ್ಮಾಣಗೊಂಡರೂ ಜನರಿಗೆ ಯಾವುದೇ ಪ್ರಯೋಜನವಿಲ್ಲದಂತಾಗಿದೆ. ಸಂಪರ್ಕಕ್ಕಾಗಿ ಹಳೆಯ ಕಾಲು ಸಂಕವನ್ನೇ ಅವಲಂಬಿಸುವಂತಾಗಿದೆ.


ಪರಿಹಾರ ನೀಡಿದರೆ ಜಾಗ ನೀಡಲು ಬದ್ಧ:
ಈಗಾಗಲೇ ನಿರ್ಮಾಣಗೊಂಡಿರುವ ಸೇತುವೆ ರಸ್ತೆ ಸಂಪರ್ಕ ಕಲ್ಪಿಸಬೇಕಾದರೆ ನಮ್ಮ ವರ್ಗ, ಕೃಷಿ ಜಾಗದ ಮೂಲಕ ಹಾದು ಹೋಗುತ್ತದೆ. ನಮಗಿರುವುದು ಅಲ್ಪ ಸ್ವಲ್ಪ ಜಾಗ. ಇದರಲ್ಲಿರುವ ಅಡಿಕೆ, ತೆಂಗಿನ ಮರಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಅಲ್ಲದೆ ಮನೆ, ಕೊಟ್ಟಿಗೆಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಇಲ್ಲಿ ರಸ್ತೆ ನಿರ್ಮಾಣವಾದರೆ ಈ ಭಾಗದ ಜನರಿಗೆ ಬಹಳಷ್ಟು ಪ್ರಯೋಜನವಾಗಲಿದೆ. ಹೀಗಾಗಿ ನಮಗೆ ಸೂಕ್ತ ಪರಿಹಾರ ನೀಡಿದರೆ ರಸ್ತೆಗಾಗಿ ನಾವು ಜಾಗ ನೀಡಲು ಬದ್ದ ಎಂದು ಸೇತುವೆಯ ಒಂದು ಭಾಗವಾದ ಶಾಂತಿಗೋಡು ಪಂಜಿಗದ ನಿವಾಸಿಗಳು ತಿಳಿಸಿದ್ದಾರೆ. ಸೇತುವೆ ಕಾಮಗಾರಿ ಸಂದರ್ಭದಲ್ಲಿಯೂ ನನ್ನ ಜಾಗ ಸಾಕಷ್ಟು ನೀಡಿದ್ದೇನೆ. ಇನ್ನು ರಸ್ತೆ ನಿರ್ಮಾಣಕ್ಕೆ ತೋಟದ ಮಧ್ಯೆ ಅವಕಾಶ ಕೊಡುವುದಿಲ್ಲ. ತನ್ನ ಕೃಷಿಗೆ ಹಾನಿಯಾಗದಂತೆ ಅಡಿಕೆ ತೋಟದ ಬದಿಯಿಂದಾಗಿ ಹೊಳೆಗೆ ತಡೆಗೋಡೆ ನಿರ್ಮಿಸಿಕೊಂಡು ರಸ್ತೆ ನಿರ್ಮಿಸುವುದಾದರೆ ಜಾಗ ನೀಡುವುದಾಗಿ ಇನ್ನೊಂದು ಭಾಗವಾದ ತಾರಕೆರೆಯವರು ಸುದ್ದಿಗೆ ತಿಳಿಸಿದ್ದಾರೆ. ಖಾಸಗಿ ಜಮೀನು ಇರುವುದರಿಂದ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಅಡ್ಡಿಯಾಗುವುದಾದರೆ ಸೇತುವೆ ನಿರ್ಮಿಸುವ ಮೊದಲೇ ಈ ಕುರಿತು ಸಂಬಂಧಿಸಿದವರು ಗಮನಿಸಿರಲಿಲ್ಲವೇ ಎನ್ನುವುದು ನಾಗರಿಕರ ಪ್ರಶ್ನೆ.


ಕೆಮ್ಮಾಯಿ-ಪುರುಷರಕಟ್ಟೆ ಬಲು ಹತ್ತಿರ:
ಈಗಾಗಲೇ ನಿರ್ಮಾಣ ಗೊಂಡ ಸೇತುವೆಯು ಕೆಮ್ಮಾಯಿ ಹಾಗೂ ಪುರುಷರಕಟ್ಟೆ ರಸ್ತೆಯ ಮಧ್ಯ ಭಾಗದಲ್ಲಿದೆ. ಸೇತುವೆ ನಿರ್ಮಾಣಗೊಂಡ ಜಾಗಕ್ಕೆ ಕೆಮ್ಮಾಯಿ ಸುಮಾರು 4 ಕಿ.ಮೀ ಹಾಗೂ ಪುರುಷರಕಟ್ಟೆಯಿಂದ ಸುಮಾರು 4 ಕಿ.ಮೀ ದೂರದಲ್ಲಿದೆ. ರಸ್ತೆ ನಿರ್ಮಾಣಗೊಂಡರೆ ಕೆಮ್ಮಾಯಿ-ಪುರುಷರಕಟ್ಟೆ ಮಧ್ಯೆ ಸಂಪರ್ಕಿಸಲು ಕೇವಲ 8 ಕಿಮೀ ಅಂತರವಾಗಲಿದೆ. ಪುತ್ತೂರು ಪೇಟೆಯಿಂದಾಗಿ ಸುತ್ತು ಬಳಸಿ ಬರುವುದು ತಪ್ಪಲಿದೆ. ಇದರಿಂದ ಸಮಯ, ಇಂಧನ, ದೂರ ಉಳಿಯಲಿದೆ. ನಗರದಲ್ಲಿ ವಾಹನ ದಟ್ಟಣೆಗೂ ಸ್ವಲ್ಪ ಕಡಿವಾಣ ಬೀಳಲಿದೆ. ಇಲ್ಲಿ ರಸ್ತೆಗಾಗಿ ತಮ್ಮ ಜಾಗವನ್ನು ನೀಡಲು ಜಾಗದ ಮ್ಹಾಲಕರು ಬದ್ದವಾಗಿದ್ದಾರೆ. ಅಲ್ಲದೆ ಸೇತುವೆಯ ಎರಡೂ ಭಾಗದಿಂದ ಸುಮಾರು 5೦೦ ಮೀಟರ್ ದೂರದಲ್ಲಿ ಸಾರ್ವಜನಿಕ ರಸ್ತೆಯಿರುವುದರಿಂದ ಇಲ್ಲಿ ರಸ್ತೆ ನಿರ್ಮಿಸುವುದು ಅಷ್ಟೊಂದು ದೊಡ್ಡ ಸವಾಲಿನ ಕೆಲಸವಲ್ಲ. ಜನಪ್ರತಿನಿಧಿಗಳು, ಅಧಿಕಾರಿಗಳು ಮುತುವರ್ಜಿ ವಹಿಸಿ ರಸ್ತೆ ಸಂಪರ್ಕ ಕಲ್ಪಿಸುವ ಮೂಲಕ ಸರಕಾರದ ಅನುದಾನ ಸದುಪಯೋಗ ಪಡಿಸುವಂತಾಗಲಿ ಎಂಬುದು ನಾಗರಿಕರ ಆಶಯವಾಗಿದೆ.

ಶಾಸಕ ಅಶೋಕ್ ಕುಮಾರ್ ರೈ ಭೇಟಿ: ಇಲ್ಲಿನ ಸಮಸ್ಯೆಯ ಕುರಿತು ಸ್ಥಳೀಯರು ಶಾಸಕ ಅಶೋಕ್ ಕುಮಾರ್ ರೈಯವರ ಗಮನಕ್ಕೆ ತಂದಿದ್ದು ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೊಳೆಯ ಬದಿಗೆ ತಡೆಗೋಡೆ ಕಟ್ಟಿ ರಸ್ತೆ ನಿರ್ಮಿಸಲು ಅವರಲ್ಲಿಯೂ ತಿಳಿಸಲಾಗಿದೆ ಎಂದು ಆನಂದ ಪೂಜಾರಿಯವರು ತಿಳಿಸಿದ್ದಾರೆ.
ರಸ್ತೆಗೆ ಎಷ್ಟು ಬೇಕೋ ಅಷ್ಟು ಜಾಗ ನೀಡುತ್ತೇನೆ
ನನ್ನ ಜಾಗದ ಸಮೀಪ ಸೇತುವೆ ನಿರ್ಮಿಸಿದ್ದಾರೆ. ಇದರಿಂದ ನನಗೆ ಯಾವುದೇ ಸಮಸ್ಯೆ ಆಗಬಾರದು. ಮೊದಲು ನಮಗೆ ತಡೆಗೋಡೆ ಕಟ್ಟಿಕೊಡುತ್ತೇವೆ ಎಂದು ಹೇಳಿ ಮೋಸ ಮಾಡಿದ್ದಾರೆ. ನನ್ನ ಅಡಿಕೆ, ತೆಂಗಿನ ಮರಗಳೆಲ್ಲವೂ ಹೋಗಿದೆ. ಇದಕ್ಕೆ ಪರಿಹಾರ ನೀಡುತ್ತೇವೆ ಎಂದು ಹೇಳಿದ್ದರೂ ಮಾಡಿಲ್ಲ. ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಇಲ್ಲಿನ ಅಣೆಕಟ್ಟಿನಲ್ಲಿ ಕಸ ತುಂಬಿಕೊಂಡು, ನೀರು ನುಗ್ಗಿ ನನ್ನ ಕೃಷಿಭೂಮಿ ಕೊರೆತಕ್ಕೆ ಒಳಗಾಗುತ್ತಿದೆ. ಹೊಳೆಯ ಬದಿಯವರೆಗೆ ಈಗಾಗಲೇ ರಸ್ತೆ ಇದೆ. ಹೀಗಾಗಿ ನನ್ನ ಜಾಗದ ಅಂಚಿನಲ್ಲಿ ಹೊಳೆಯ ಬದಿಯಲ್ಲಿ ರಸ್ತೆ ನಿರ್ಮಿಸುತ್ತೇವೆ ಎಂದು ಹೇಳಿದ್ದಾರೆ. ಶಾಸಕರು ಕೂಡ ಬಂದು ನೋಡಿದ್ದಾರೆ. ಅವರಿಗೂ ಮನವಿ ಸಲ್ಲಿಸಿದ್ದೇನೆ.ತೋಟವೇ ನಮಗೆ ಜೀವನಾಧಾರ. ರಸ್ತೆ ನಿರ್ಮಾಣ ಮಾಡುವಾಗ ತೋಟಕ್ಕೆ ತೊಂದರೆ ಮಾಡಬಾರದು.ಇಲ್ಲಿ ತಡೆಗೋಡೆ ನಿರ್ಮಿಸಿ ರಸ್ತೆ ಮಾಡುವುದಾದರೆ ಜಾಗ ಬಿಟ್ಟುಕೊಡಲು ಸಿದ್ದನಿದ್ದೇನೆ. ಆದರೆ ಅವರು ಹೇಳಿದಷ್ಟು ಜಾಗ ಬಿಡಲು ಸಾಧ್ಯವಿಲ್ಲ. ರಸ್ತೆಗೆ ಎಷ್ಟು ಬೇಕೋ ಅಷ್ಟು ನೀಡುತ್ತೇನೆ.'' - ಆನಂದ ಪೂಜಾರಿ,ಸ್ಥಳೀಯರು

- ಆನಂದ ಪೂಜಾರಿ,ಸ್ಥಳೀಯರು


ಪರಿಹಾರ ನೀಡಿದರೆ ಜಾಗ ನೀಡಲು ಸಿದ್ದ
ಇಲ್ಲಿ ರಸ್ತೆ ನಿರ್ಮಾಣವಾಗಬೇಕಾದರೆ ನಮ್ಮ 2-3 ಮನೆಯವರ ಜಾಗ ಹೋಗುತ್ತದೆ. ಅಡಿಕೆ, ತೆಂಗಿನ ಮರ ಹೋಗುತ್ತದೆ. ನಾವು ಜಾಗ ಬಿಡಲು ಸಿದ್ಧರಿದ್ದೇವೆ. ಆದರೆ ಸೂಕ್ತ ಪರಿಹಾರ ನೀಡಬೇಕು. ಜೊತೆಗೆ ತಡೆಗೋಡೆ ಕಟ್ಟಿ ರಸ್ತೆ ನಿರ್ಮಿಸಬೇಕು. ಇಲ್ಲಿ 2-3 ಪಾಲು ಜಾಗದವರು ಇದ್ದೇವೆ. ಎಲ್ಲರ ಅಭಿಪ್ರಾಯವನ್ನೂ ಕೇಳಬೇಕಾಗುತ್ತದೆ. ಪರಿಹಾರ ಸಿಕ್ಕಿದರೆ ನೀಡಲು ಸಿದ್ಧರಿದ್ದೇವೆ. ಇಲ್ಲಿ ರಸ್ತೆ ನಿರ್ಮಾಣವಾದರೆ ಕೆಮ್ಮಾಯಿಯಿಂದ ಪುರುಷರಕಟ್ಟೆ ಸಂಪರ್ಕ ಸುಲಭವಾಗಲಿದೆ. ಇಲ್ಲಿ ಅಣೆಕಟ್ಟು ಬೇಕೆಂದು ನಾವು ಕೇಳಿರಲಿಲ್ಲ. ಅವರೇ ಬಂದು ನಿರ್ಮಿಸಿ ಹೋಗಿದ್ದಾರೆ. ಈಗ ರಸ್ತೆಯಿಲ್ಲದೆ ಸೇತುವೆ ಉಪಯೋಗಕ್ಕೆ ಬರುತ್ತಿಲ್ಲ. ಊರಿಗೆ ಉಪಕಾರ ಆಗಬೇಕು, ನಮ್ಮೂರಿಗೆ ಬಸ್ಸು ಬರಬೇಕು. ಹೀಗಾಗಿ ಪರಿಹಾರ ಸಿಕ್ಕರೆ ಜಾಗ ನೀಡುತ್ತೇವೆ. – ಲಿಂಗಪ್ಪ ಮೂಲ್ಯ, ಸ್ಥಳೀಯರು

ಲಿಂಗಪ್ಪ ಮೂಲ್ಯ, ಸ್ಥಳೀಯರು


ಸಂಸದರಿಂದ ರೂ.1.8೦ಕೋಟಿ ಅನುದಾನದ ಭರವಸೆ :
ಎರಡು ಗ್ರಾಮಗಳನ್ನು ಸಂಪರ್ಕಿಸುವ ಹೊಳೆಗೆ ಸೇತುವೆ ನಿರ್ಮಾಣವಾಗಬೇಕು ಎಂಬ ಈ ಭಾಗದ ನಾಗರಿಕರ ಬೇಡಿಕೆಯಿತ್ತು. ಈಗ ಅಲ್ಲಿ ಸೇತುವೆ ನಿರ್ಮಾಣವಾಗಿದೆ. ಹೊಳೆಯ ಬದಿಗೆ ತಡೆಗೋಡೆ ಕಟ್ಟಿ ರಸ್ತೆ ನಿರ್ಮಿಸಲು ರೂ.1.8೦ಕೋಟಿಯ ಎಸ್ಟಿಮೇಟ್ ರಚಿಸಿ, ಕ್ರಿಯಾ ಯೋಜನೆ ಮಾಡಿ ಈಗಾಗಲೇ ಸಂಸದರಿಗೆ ಸಲ್ಲಿಸಿದ್ದು ಅವರು ಸಂಸದರ ವಿಶೇಷ ಅನುದಾನದಲ್ಲಿ ರಸ್ತೆ ನಿರ್ಮಾಣಕ್ಕೆ ಅನುದಾನ ನೀಡುವ ಭರವಸೆ ನೀಡಿದ್ದಾರೆ ಎಂದು ಬನ್ನೂರು ಗ್ರಾ.ಪಂ ಸದಸ್ಯೆ ಜಯ ಏಕ ತಿಳಿಸಿದ್ದಾರೆ.

ಗ್ರಾ.ಪಂ ಸದಸ್ಯೆ ಜಯ ಏಕ

LEAVE A REPLY

Please enter your comment!
Please enter your name here