ಗ್ರಾ.ಪಂ.ಪಿಡಿಒ, ಕಾರ್ಯದರ್ಶಿಗಳ ಇಲಾಖಾ ವಿಚಾರಣೆ – ಕಾಲಮಿತಿ ಪಾಲನೆಗೆ ಗ್ರಾಮೀಣಾಭಿವೃದ್ಧಿ ಇಲಾಖೆ ಸುತ್ತೋಲೆ

0

ಬೆಂಗಳೂರು: ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು,ಕಾರ್ಯದರ್ಶಿಗಳು ಮತ್ತು ಸಿಬ್ಬಂದಿ ವಿರುದ್ಧದ ಇಲಾಖಾ ವಿಚಾರಣೆ ಪ್ರಕರಣಗಳಲ್ಲಿ ಕಡ್ಡಾಯವಾಗಿ ಕಾಲಮಿತಿ ಪಾಲಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸುತ್ತೋಲೆ ಹೊರಡಿಸಿದೆ.
ಇಲಾಖಾ ವಿಚಾರಣೆಗಳು ವಿಳಂಬವಾಗುತ್ತಿರುವುದರಿಂದ ಮುಂಬಡ್ತಿ, ಕಾಲಮಿತಿ ವೇತನ ಬಡ್ತಿ ಮತ್ತು ಇತರ ಸೌಲಭ್ಯಗಳನ್ನು ಪಡೆಯಲು ತೊಂದರೆಯಾಗುತ್ತಿದ್ದು,ಈ ವಿಚಾರದಲ್ಲಿ ಒಂಬತ್ತು ತಿಂಗಳ ಕಾಲಮಿತಿ ಪಾಲಿಸಬೇಕು ಎಂದು ರಾಜ್ಯ ಪಿಡಿಒ ಕ್ಷೇಮಾಭಿವೃದ್ಧಿ ಸಂಘವು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.
ಮನವಿಗೆ ಸ್ಪಂದಿಸಿ ಇದೀಗ ಸುತ್ತೋಲೆ ಹೊರಡಿಸಿದ್ದು,`ಲೋಕಾಯುಕ್ತರು ಅಥವಾ ಉಪ ಲೋಕಾಯುಕ್ತರಿಂದ ಇಲಾಖಾ ವಿಚಾರಣೆಗೆ ಮೊದಲು ಸಕ್ಷಮ ಪ್ರಾಧಿಕಾರದಿಂದ ವಿಚಾರಣೆ ಆರಂಭಿಸಿರುವ ಕುರಿತು ಸ್ಪಷ್ಟಪಡಿಸಿಕೊಳ್ಳಬೇಕು.ಸಕ್ಷಮ ಪ್ರಾಧಿಕಾರದಲ್ಲಿ ವಿಚಾರಣೆ ನಡೆಯುತ್ತಿದ್ದು, ಸರ್ಕಾರವು ಪ್ರಕರಣವನ್ನು ವರ್ಗಾಯಿಸಲು ನಿರ್ಧರಿಸಿದರೆ ಆ ಹಂತದವರೆಗಿನ ಕಡತದೊಂದಿಗೆ ಲೋಕಾಯುಕ್ತರು ಅಥವಾ ಉಪ ಲೋಕಾಯುಕ್ತರಿಗೆ ಪ್ರಕರಣ ವರ್ಗಾವಣೆ ಮಾಡಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳು ಮತ್ತು ಕಾರ್ಯದರ್ಶಿಗಳಿಗೆ ಸೂಚಿಸಲಾಗಿದೆ.
ಪಿಡಿಒ, ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಹಾಗೂ ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ ಜರುಗಿಸಲು ನಿಗದಿಪಡಿಸಿದ ಕಾಲಮಿತಿಯನ್ನು ಕಡ್ಡಾಯವಾಗಿ ಪಾಲಿಸಬೇಕು.ಲೋಕಾಯುಕ್ತ ಸಂಸ್ಥೆಯು ಇಲಾಖಾ ವಿಚಾರಣೆಯನ್ನು ಪೂರ್ಣಗೊಳಿಸಿ ವರದಿ ಸಲ್ಲಿಸಿದ ಪ್ರಕರಣಗಳಲ್ಲಿ ಪ್ರಕರಣ ವರ್ಗಾವಣೆ ಸಂದರ್ಭದಲ್ಲಿ ನೀಡಿದ್ದ ಸೂಚನೆಗಳಂತೆ ಕ್ರಮ ಕೈಗೊಳ್ಳಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here