ಅಂಬಿಕಾ ಮಹಾವಿದ್ಯಾಲಯದ ಇಂಗ್ಲಿಷ್ ವಿಭಾಗದಿಂದ ಉಪನ್ಯಾಸ ಕಾರ್ಯಕ್ರಮ

0

ಮೂಲ ಸಂಸ್ಕೃತಿಯನ್ನು ಮರೆಯದೆ ಇಂಗ್ಲಿಷನ್ನು ಬೆಳೆಸಿಕೊಳ್ಳಬೇಕು : ಸುಚಿತ್ರಾ ಪ್ರಭು


ಪುತ್ತೂರು: ಇಂಗ್ಲಿಷ್ ಭಾಷೆ ಇಂದು ಅಂತರಾಷ್ಟ್ರೀಯ ಭಾಷೆಯಾಗಿ ಬೆಳೆದು ನಿಂತಿದೆ. ಹಾಗಾಗಿ ಇಂಗ್ಲಿಷನ್ನು ಕಲಿಯುವುದು ನಮ್ಮ ಬೆಳವಣಿಗೆಯ ದೃಷ್ಟಿಯಿಂದ ಉತ್ತಮ. ಹಾಗೆಂದು ಇಂಗ್ಲಿಷನ್ನು ಕಲಿತ ತಕ್ಷಣ ನಮ್ಮ ಮೂಲ ಸಂಸ್ಕೃತಿ, ಆಚಾರ ವಿಚಾರಗಳಿಂದ ದೂರವಾಗುವುದು ಸರಿಯಲ್ಲ. ನಮ್ಮ ಮಾತೃಭಾಷೆ, ಮೂಲ ಬೇರುಗಳನ್ನು ಮರೆಯದೆ ಇಂಗ್ಲಿಷನ್ನು ನಮ್ಮದಾಗಿಸುವ ಪ್ರಕ್ರಿಯೆಗೆ ನಮ್ಮನ್ನು ನಾವು ಒಡ್ಡಿಕೊಳ್ಳಬೇಕು ಎಂದು ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಂಶುಪಾಲೆ ಸುಚಿತ್ರಾ ಪ್ರಭು ಹೇಳಿದರು.


ಅವರು ನಗರದದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದ ಇಂಗ್ಲಿಷ್ ವಿಭಾಗದ ಆಶ್ರಯದಲ್ಲಿ ಆಯೋಜಿಸಲಾದ ಸಾಹಿತ್ಯಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ‘ಕಾಮನ್ ಎರರ್‍ಸ್ ಆಫ್ ಇಂಗ್ಲಿಷ್ ಲಾಂಗ್ವೇಜ್’ ಎಂಬ ವಿಷಯದ ಬಗೆಗೆ ಸೋಮವಾರ ಮಾತನಾಡಿದರು.


ಇಂಗ್ಲಿಷನ್ನು ಕಲಿಯುವುದು ಕಷ್ಟಕರವಾದದ್ದೇನೂ ಅಲ್ಲ. ಸರಿಯಾಗಿ ಕೇಳಿಸಿಕೊಳ್ಳುವಿಕೆ, ಬರೆಯುವಿಕೆ, ಮಾತನಾಡುವಿಕೆಯೇ ಮೊದಲಾದ ಚಟುವಟಿಕೆಗಳು ಇಂಗ್ಲಿಷ್ ಪಾರಮ್ಯವನ್ನು ಒದಗಿಸಿಕೊಡಬಲ್ಲವು. ಅದರಲ್ಲೂ ಇಂಗ್ಲಿಷ್ ಭಾಷೆಯಲ್ಲೇ ಯೋಚಿಸುವುದನ್ನೂ ರೂಢಿಸಿಕೊಂಡರೆ ಭಾಷಾ ಕಲಿಕೆ ಮತ್ತಷ್ಟು ಸುಲಭಸಾಧ್ಯವೆನಿಸುತ್ತದೆ. ಮುಜುಗರ, ತಪ್ಪಾಗಬಹುದೆಂಬ ಭಯವನ್ನು ಮೀರಿ ಇಂಗ್ಲಿಷ್‌ನಲ್ಲಿ ವ್ಯವಹರಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ತಪ್ಪಾಗುವುದು ಸಹಜ, ಹಾಗೆಂದು ಅದಕ್ಕಾಗಿ ಬೆದರಿ ಕುಳಿತುಕೊಳ್ಳಬೇಕಿಲ್ಲ ಎಂದು ಕಿವಿಮಾತು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ನಮ್ಮ ದೇಸೀಯವಾದ ಆಚಾರ ವಿಚಾರಗಳು, ಉತ್ಕೃಷ್ಟ ಸಂಸ್ಕಾರ, ಸಂಸ್ಕೃತಿಗಳು ಜಗದಗಲ ಪ್ರಸಾರಗೊಳ್ಳಬೇಕು. ಹಾಗಾಗಬೇಕಾದರೆ ಇಂಗ್ಲಿಷ್ ಭಾಷೆಯ ಅಗತ್ಯವಿದೆ. ಅದನ್ನು ಚೆನ್ನಾಗಿ ಕರಗತ ಮಾಡಿಕೊಂಡು ನಮ್ಮತನವನ್ನು ವಿದೇಶಗಳಲ್ಲೂ ಬಿತ್ತರಿಸುವ ಹೊಣೆ ವಿದ್ಯಾರ್ಥಿ ಸಮುದಾಯದ ಮೇಲಿದೆ. ಇಂಗ್ಲಿಷ್ ಭಾಷೆ ಎಂದ ತಕ್ಷಣ ನಾವು ವಿದೇಶೀಯರಂತೆಯೇ ವ್ಯವಹರಿಸುವುದಲ್ಲ. ಬದಲಾಗಿ ಆ ಭಾಷೆಯನ್ನು ಭಾರತೀಯಗೊಳಿಸಿ ಮಾತನಾಡುವುದು. ಮಿಸ್ಟರ್, ಮಿಸ್‌ಗಳ ಬದಲಾಗಿ ಶ್ರೀ, ಶ್ರೀಮತಿ ಎಂಬ ಭಾರತೀಯ ಪದಗಳನ್ನೇ ಬಳಸಬೇಕು ಎಂದು ಕರೆ ನೀಡಿದರು.


ಇಂಗ್ಲಿಷ್ ಭಾಷೆಯಲ್ಲಿನ ಮಿತಿಗಳನ್ನೂ ಅರಿಯಬೇಕು. ಅಪರಿಚಿತನನ್ನೂ ಅಂಕಲ್ ಎನ್ನುವುದು, ಯಾರೋ ಹಾದಿಬದಿಯಲ್ಲಿ ಸಂಚರಿಸುತ್ತಿರುವವರನ್ನೂ ಆಂಟಿ ಅನ್ನುವುದು ರೂಢಿಯಾಗಿದೆ. ಇತ್ತ ನಮ್ಮ ನಿಜವಾದ ಮಾವ, ಅತ್ತೆ ಬಂದಾಗಲೂ ಅದೇ ಶಬ್ದದಿಂದ ಗುರುತಿಸುತ್ತಿದ್ದೇವೆ. ಹಾಗಾದರೆ ಅಪರಿಚಿತ ಅಂಕಲ್‌ಗೂ ನಿಜವಾದ ಅಂಕಲ್‌ಗೂ ವ್ಯತ್ಯಾಸವೇ ಇಲ್ಲವೆಂದಾಗುತ್ತದೆ. ಆದ್ದರಿಂದ ಭಾಷೆಯನ್ನು ಭಾರತೀಯಗೊಳಿಸಿದಾಗ ಇಂತಹ ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ. ಇಂಗ್ಲಿಷ್ ಅಗತ್ಯ. ಆದರೆ ಅದು ಭಾರತೀಯತೆ ಸಹಿತವಾಗಿರಬೇಕು ಎಂದರು.
ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ, ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಗಣೇಶ ಪ್ರಸಾದ್ ಎ, ಐಕ್ಯುಎಸಿ ಘಟಕದ ಸಂಯೋಜಕ ಚಂದ್ರಕಾಂತ ಗೋರೆ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಪಂಚಮಿ ಬಾಕಿಲಪದವು ಪ್ರಾರ್ಥಿಸಿದರು. ವಿದ್ಯಾರ್ಥಿನಿ ಸ್ಪೂರ್ತಿ ಸ್ವಾಗತಿಸಿ, ದೀಕ್ಷಾ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿನಿ ಅಂಕಿತಾ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here