ಮುಖ್ಯ ಅತಿಥಿಯಾಗಿದ್ದರೂ ವೇದಿಕೆಗೆ ಕರೆಯದೆ ಕಡೆಗಣನೆ -ತಾ|ಯಾದವ ಸಭಾಧ್ಯಕ್ಷರ ಆಕ್ರೋಶ-ಎಸಿಯವರಿಗೆ ದೂರು

0

ತಾ|ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಶ್ರೀಕೃಷ್ಣ ಜಯಂತಿ ದಿನಾಚರಣೆ ಕಾರ್ಯಕ್ರಮದಲ್ಲಿ ನಡೆದ ಘಟನೆ

ಪುತ್ತೂರು:ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಸೆ.6ರಂದು ಪುತ್ತೂರು ತಾಲೂಕು ಆಡಳಿತ ಸೌಧದಲ್ಲಿನ ತಹಶೀಲ್ದಾರ್ ಸಭಾಂಗಣದಲ್ಲಿ ನಡೆದ ಶ್ರೀಕೃಷ್ಣ ಜಯಂತಿ ದಿನಾಚರಣೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಹ್ವಾನಿತರಾಗಿದ್ದ ತಾಲೂಕು ಯಾದವ ಸಭಾ ಅಧ್ಯಕ್ಷರು ಸಭೆಯಲ್ಲಿ ಆಸೀನರಾಗಿದ್ದರೂ ಅವರನ್ನು ವೇದಿಕೆಗೆ ಕರೆಯಲಾಗಿಲ್ಲ ಎಂದು ಸಂಘಟಕರ ವಿರುದ್ಧ ಆಕ್ಷೇಪ ಆಕ್ರೋಶ ವ್ಯಕ್ತವಾಗಿದೆ.ಈ ಕುರಿತು ಸಹಾಯಕ ಆಯುಕ್ತರ ಗಮನಕ್ಕೆ ತರಲಾಗಿದ್ದು ಲಿಖಿತವಾಗಿ ನೀಡುವಂತೆ ಅವರು ಸೂಚಿಸಿರುವುದಾಗಿ ತಿಳಿದು ಬಂದಿದೆ.


ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ನಡೆದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ಸಹಾಯಕ ಕಮಿಷನರ್ ಗಿರೀಶ್‌ನಂದನ್ ಎಂ ಅವರು ಸಂಸ್ಮರಣಾ ಜ್ಯೋತಿ ಪ್ರಜ್ವಲನೆ ಮಾಡಿದರು.ಮುಖ್ಯ ಅತಿಥಿಯಾಗಿ ತಾಲೂಕು ಗೊಲ್ಲ(ಯಾದವ)ಸಂಘದ ಅಧ್ಯಕ್ಷ ಇ.ಎಸ್.ವಾಸುದೇವ ಉಪಸ್ಥಿತರಿದ್ದರು.ನ್ಯಾಯವಾದಿ ಹರಿಣಾಕ್ಷಿ ಜೆ ಶೆಟ್ಟಿಯವರು ಸಂಸ್ಮರಣಾ ಉಪನ್ಯಾಸ ನೀಡಿದರು.ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರಾಗಿರುವ ತಹಸೀಲ್ದಾರ್ ಶಿವಶಂಕರ್ ಜೆ., ಸಾಂಸ್ಕೃತಿಕ ಸಮಿತಿ ಸಂಚಾಲಕರಾಗಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಾಲೂಕು ಕಚೇರಿ ಶಿರಸ್ತೇದಾರ್ ಕವಿತಾ ಕಾರ್ಯಕ್ರಮ ನಿರೂಪಿಸಿದರು. ದಯಾನಂದ ಸ್ವಾಗತಿಸಿ,ವಂದಿಸಿದರು.


ಆಹ್ವಾನಿಸಿದ್ದರೂ ವೇದಿಕೆಗೆ ಕರೆದಿಲ್ಲ:
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಹ್ವಾನಿತರಾಗಿ, ಆಮಂತ್ರಣ ಪತ್ರದಲ್ಲಿ ಹೆಸರು ಮುದ್ರಿತವಾಗಿದ್ದ ತಾಲೂಕು ಯಾದವ ಸಭಾ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ ಅವರು ಸಭೆಯಲ್ಲಿ ಉಪಸ್ಥಿತರಿದ್ದರೂ ಅವರನ್ನು ವೇದಿಕೆಗೆ ಕರೆದಿಲ್ಲ ಎಂಬ ಆರೋಪ ವ್ಯಕ್ತವಾಗಿದೆ.ಸಭೆಯ ಕೊನೆಯ ತನಕವೂ ಆಸೀನರಾಗಿದ್ದ
ಶ್ರೀಪ್ರಸಾದ್ ಪಾಣಾಜೆ ಅವರು ಸಭೆ ಮುಗಿದ ಬಳಿಕ, ತನ್ನನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿ, ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಮುದ್ರಿಸಿದ್ದರೂ ವೇದಿಕೆಗೆ ಕರೆಯದೆ ಕಡೆಗಣಿಸಿರುವ ಕುರಿತು ಸಹಾಯಕ ಕಮಿಷನರ್ ಗಿರೀಶ್‌ನಂದನ್ ಅವರಲ್ಲಿ ಪ್ರಶ್ನಿಸಿದರು.ಈ ಕುರಿತು ರಾಷ್ಟೀಯ ಹಬ್ಬಗಳ ಆಚರಣಾ ಸಮಿತಿಯವರಲ್ಲಿ ವಿಚಾರಿಸಬೇಕಾಗಿದೆ.ಈ ನಿಟ್ಟಿನಲ್ಲಿ ನೀವು ರೈಟಿಂಗ್‌ನಲ್ಲಿ ಕೊಡಿ ಎಂದು ಸಹಾಯಕ ಆಯುಕ್ತರು ತಿಳಿಸಿದರೆಂದು ತಿಳಿದು ಬಂದಿದೆ. ತಹಶೀಲ್ದಾರ್ ಅವರು ಶ್ರೀಪ್ರಸಾದ್‌ರವರೊಂದಿಗೆ ಮಾತುಕತೆ ನಡೆಸಿ ಮುಂದೆ ಈ ರೀತಿಯಾಗದಂತೆ ನೋಡಿಕೊಳ್ಳುವುದಾಗಿ ತಿಳಿಸಿದರು ಎಂದು ತಿಳಿದು ಬಂದಿದೆ.ಸರಕಾರದ ವತಿಯಿಂದ ನಡೆಯುವುದಾದರೂ ಕಾರ್ಯಕ್ರಮದ ಕುರಿತು ಪತ್ರಿಕೆಗೂ ಮಾಹಿತಿ ನೀಡಿರಲಿಲ್ಲ.


ಕಾರ್ಯಕ್ರಮ ಮುಗಿಯುವ ಹಂತದಲ್ಲಿ ಬಂದಿದ್ದರು
ಗೊಂದಲದ ಕುರಿತು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಸಾಂಸ್ಕೃತಿಕ ಸಮಿತಿ ಸಂಚಾಲಕರಾಗಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್.ಅವರನ್ನು ಸಂಪರ್ಕಿಸಿದಾಗ, ತಾಲೂಕು ಯಾದವ ಸಭಾದ ಅಧ್ಯಕ್ಷರನ್ನು ಮುಖ್ಯ ಅತಿಥಿಯಾಗಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು.ಆದರೆ ಅವರು ಕಾರ್ಯಕ್ರಮ ಮುಗಿಯುವ ಹಂತದಲ್ಲಿ ಬಂದಿದ್ದರಿಂದ ವೇದಿಕೆಗೆ ಆಹ್ವಾನಿಸಲು ಸಾಧ್ಯವಾಗಲಿಲ್ಲ ಎಂದು ಸ್ಪಷ್ಟಣೆ ನೀಡಿದ್ದಾರೆ.ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರಾಗಿರುವ ತಹಸಿಲ್ದಾರ್ ಅವರು ದೂರವಾಣಿ ಕರೆ ಸ್ವೀಕರಿಸಲಿಲ್ಲ.


ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದರೂ ವೇದಿಕೆಗೆ ಕರೆಯಲಿಲ್ಲ
ಪುತ್ತೂರಿನಲ್ಲಿ ನಮ್ಮ ಯಾದವ ಸಭಾದ ಜನರು ಸುಮಾರು 3 ಸಾವಿರ ಮಂದಿ ಇದ್ದಾರೆ.2014-15ರಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಸಾರ್ವಜನಿಕವಾಗಿ ಆಚರಿಸಬೇಕೆಂದು ಮತ್ತು ಯಾದವ ಸಭಾದ ಸಲಹೆ ಸೂಚನೆ ಪಡೆಯಬೇಕೆಂದು ಸರಕಾರಿ ಸುತ್ತೋಲೆ ಇದೆ.ಆದರೆ ಇಷ್ಟು ವರ್ಷ ಯಾದವ ಸಮಾಜದ ನಮ್ಮನ್ನು ಕರೆಯುತ್ತಿರಲಿಲ್ಲ.ಅದಲ್ಲದೆ ಸುಮಾರು ರೂ.೨೫ ಸಾವಿರ ಕಾರ್ಯಕ್ರಮಕ್ಕೆಂದು ಬರುತ್ತದೆ.ಈ ಬಾರಿ ನನ್ನನ್ನೂ ಕಾರ್ಯಕ್ರಮದ ಅತಿಥಿಯಾಗಿ ಆಹ್ವಾನಿಸಿದ್ದರು.ನಾನು ಬೆಳಿಗ್ಗೆ ಪಾಣಾಜೆಯಲ್ಲಿ ಶಾಸಕರೊಂದಿಗೆ ಯಾದವ ಸಭಾ ಕಾರ್ಯಕ್ರಮ ಮುಗಿಸಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಕಾರ್ಯಕ್ರಮಕ್ಕೆ ಹೋಗಿದ್ದೆ.ಅಲ್ಲಿ ನಾನು ಹೋಗುವಾಗ ಸ್ವಾಗತ ಕಾರ್ಯಕ್ರಮ ಆಗಿತ್ತು.ದೀಪ ಪ್ರಜ್ವಲನೆ ಆಗಿರಲಿಲ್ಲ.ದೀಪ ಪ್ರಜ್ವಲನೆ ಸಮಯ ನಾನು ಒಳಗೆ ಸಭೆಯಲ್ಲಿ ಕೂತಿದ್ದೆ.ಆದರೆ ನನ್ನನ್ನು ಅವರು ವೇದಿಕೆಗೆ ಕರೆದಿಲ್ಲ.ಕಾರ್ಯಕ್ರಮದ ಅತಿಥಿಯಾಗಿ ಕರೆದ ಬಳಿಕ ಸ್ವಾಗತ ಮಾಡಿ, ಗುರುತಿಸಬೇಕಾಗಿತ್ತು.ಜಿಲ್ಲೆಯಲ್ಲಿ ಮತ್ತು ಸುಳ್ಯದಲ್ಲಿ ನಡೆದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ನಮ್ಮ ಯಾದವ ಸಭಾ ಅಧ್ಯಕ್ಷರನ್ನು ವೇದಿಕೆಗೆ ಕರೆದಿದ್ದಾರೆ.ಪುತ್ತೂರಿನಲ್ಲಿ ಮಾತ್ರ ಕರೆದಿಲ್ಲ.ಹಾಗಾಗಿ ಸಭೆ ಮುಗಿದ ಬಳಿಕ ಸಹಾಯಕ ಕಮಿಷನರ್ ಅವರನ್ನು ಪ್ರಶ್ನೆ ಮಾಡಿದ್ದೇನೆ.
ಅವರು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯೊಂದಿಗೆ ಮಾತುಕತೆ ಮಾಡಿ ರೈಟಿಂಗ್‌ನಲ್ಲಿ ಕೊಡಿ ಎಂದು ತಿಳಿಸಿದ್ದಾರೆ-

ಶ್ರೀಪ್ರಸಾದ್ ಪಾಣಾಜೆ, ತಾಲೂಕು ಯಾದವ ಸಭಾ ಅಧ್ಯಕ್ಷರು

LEAVE A REPLY

Please enter your comment!
Please enter your name here