ಪರ್ಪುಂಜ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ

0

ನಿವ್ವಳ ಲಾಭ ರೂ.2 ಲಕ್ಷ, ಲೀ.64 ಪೈಸೆ ಬೋನಸ್, ಶೇ.15 ಡಿವಿಡೆಂಟ್ ಘೋಷಣೆ

ಪುತ್ತೂರು: ಪರ್ಪುಂಜ ಹಾಲು ಉತ್ಪಾದಕರ ಸಹಕಾರ ಸಂಘದ 2022-23 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯು ಸೆ.7 ರಂದು ಸಂಘದ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈಯವರ ಅಧ್ಯಕ್ಷತೆಯಲ್ಲಿ ಸಂಘದ ಕಛೇರಿಯ ಎದುರು ಭಾಗದಲ್ಲಿರುವ ರಾಜ್ ಕಾಂಪ್ಲೆಕ್ಸ್ನಲ್ಲಿ ನಡೆಯಿತು. ಸಂಘದ ಕಾರ್ಯದರ್ಶಿ ಸರೋಜ ಆರ್.ಶೆಟ್ಟಿಯವರು ವಾರ್ಷಿಕ ವರದಿಯನ್ನು ಮಂಡಿಸಿದರು.ಸಂಘವು ಒಳಮೊಗ್ರು ಗ್ರಾಮದ ಪರ್ಪುಂಜ, ಕುಟ್ಟಿನೋಪಿನಡ್ಕ, ಕುರಿಯ ಗ್ರಾಮದ ಡಿಂಬ್ರಿಬೈಲು, ಆರ್ಯಾಪು ಗ್ರಾಮದ ಸಂಟ್ಯಾರು ಕೂರೇಲು ಪ್ರದೇಶವನ್ನು ಒಳಗೊಂಡಿದ್ದು ವರದಿ ವರ್ಷದಲ್ಲಿ ಸಂಘದಲ್ಲಿ 117 ಸದಸ್ಯರಿದ್ದು 5 ಹೊಸ ಸದಸ್ಯರ ಸೇರ್ಪಡೆಯಾಗಿ ಒಟ್ಟು 122 ಮಂದಿ ಸದಸ್ಯರಿರುತ್ತಾರೆ. ವರದಿ ವರ್ಷದಲ್ಲಿ ರೂ.40800 ಸದಸ್ಯರ ಪಾಲು ಮೊಬಲಗು ಇದ್ದು ರೂ.1000 ಜಮೆಯಾಗಿ ವರ್ಷಾಂತ್ಯಕ್ಕೆ ರೂ.41800 ಪಾಲು ಬಂಡವಾಳವಿರುತ್ತದೆ ಎಂದು ತಿಳಿಸಿದರು.ವರದಿ ಸಾಲಿನಲ್ಲಿ ಹಾಲು ಉತ್ಪಾದಕ ಸದಸ್ಯರಿಂದ ರೂ.46,83,569.45 ಮೌಲ್ಯದ 148010 ಲೀಟರ್ ಹಾಲನ್ನು ಖರೀದಿಸಿ ಅದರಲ್ಲಿ ರೂ.48,26,085 ಮೌಲ್ಯದ 1,43,543.30 ಲೀಟರ್ ಹಾಲನ್ನು ದ.ಕ ಹಾಲು ಒಕ್ಕೂಟಕ್ಕೆ ಹಾಗೂ 3,80,490 ಮೌಲ್ಯದ 8647 ಲೀಟರ್ ಹಾಲನ್ನು ಸ್ಥಳೀಯವಾಗಿ ಹಾಲನ್ನು ಮಾರಾಟ ಮಾಡಿರುತ್ತದೆ. ಸಂಘವು 2022-23 ನೇ ಸಾಲಿನಲ್ಲಿ 1037 ಚೀಲ ಪಶು ಆಹಾರ ಮಾರಾಟ, 825 ಕೆಜಿ ಲವಣ ಮಿಶ್ರಣ ಮಾರಾಟ ಕರುಗಳ ಹಿಂಡಿ ಮಾರಾಟ ಹಾಗೂ ನೆಕ್ಕು ಬಿಲ್ಲೆ ಮಾರಾಟದಲ್ಲಿ ಒಟ್ಟು ವ್ಯಾಪಾರ ಲಾಭ ರೂ.5,72,122.09 ಬಂದಿರುತ್ತದೆ ಎಂದು ತಿಳಿಸಿದರು.


ಸಂಘವು ವರದಿ ಸಾಲಿನಲ್ಲಿ ಹಾಲು ವ್ಯಾಪಾರ ಹಾಗೂ ಪಶು ಆಹಾರ ವ್ಯಾಪಾರದಲ್ಲಿ ಹಾಗೂ ಇತರ ಆದಾಯ ಸೇರಿ ಒಟ್ಟು ರೂ.6,35,687.36 ಲಾಭ ಗಳಿಸಿ ಇದರಲ್ಲಿ ಆಡಳಿತ ವೆಚ್ಚ ಮತ್ತು ಇತರ ಖರ್ಚು ಸೇರಿ ಒಟ್ಟು ರೂ.4,35,104,56 ಕಳೆದು ನಿವ್ವಳ ಲಾಭ ರೂ.2,00,582.80 ಗಳಿಸಿರುತ್ತದೆ ಎಂದು ಕಾರ್ಯದರ್ಶಿ ಸರೋಜ ಆರ್.ಶೆಟ್ಟಿಯವರು ತಿಳಿಸಿದರು. ಸಂಘದ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈಯವರು ನಿವ್ವಳ ಲಾಭ ಹಂಚಿಕೆಯ ಬಗ್ಗೆ ಮಾತನಾಡಿ, ರೂ.2,00,582.80 ರಲ್ಲಿ ಸದಸ್ಯರಿಗೆ ಲೀಟರಿಗೆ 0.64 ಪೈಸೆ ಬೋನಸ್ ಹಾಗೂ ಶೇ.15 ಡಿವಿಡೆಂಟ್ ನೀಡುವುದಾಗಿ ಘೋಷಿಸಿದರು.


ದ.ಕ ಹಾಲು ಒಕ್ಕೂಟದ ಪಶು ವೈದ್ಯಾಧಿಕಾರಿ ಡಾ.ಅನುದೀಪ್‌ರವರು ಮಾತನಾಡಿ, ಒಕ್ಕೂಟದಿಂದ ಹೆಣ್ಣು ಕರು ಪೋಷಣ್ ಯೋಜನೆ ಇದ್ದು ಇದರಲ್ಲಿ ಸದಸ್ಯರ ದನದ ಒಂದು ಹೆಣ್ಣು ಕರುವಿಗೆ ಈ ಯೋಜನೆಯ ಪ್ರಯೋಜನ ಸಿಗಲಿದ್ದು ಸದಸ್ಯರು ನೋಂದಾವಣೆ ಮಾಡಿಕೊಳ್ಳುವಂತೆ ತಿಳಿಸಿದರು. ಇದರಲ್ಲಿ 3 ತಿಂಗಳು ಉಚಿತ ಕರುವಿನ ಹಿಂಡಿ ಲಭಿಸಲಿದೆ ಎಂದು ತಿಳಿಸಿದರು. ಇದಲ್ಲದೆ ದನಗಳಿಗೆ ಬರುವ ಚರ್ಮಗಂಟು ರೋಗ, ಕಾಲು ಬಾಯಿ ರೋಗದ ಬಗ್ಗೆ ಮಾಹಿತಿ ನೀಡಿ ಸೂಕ್ತವಾದ ಚಿಕಿತ್ಸೆ ಪಡೆದುಕೊಳ್ಳುವಂತೆ ತಿಳಿಸಿದರು. ದ.ಕ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಕೆ.ನಾಗೇಶ್‌ರವರು ಮಾತನಾಡಿ, ಪಶುಗಳ ಬೆಳವಣಿಗೆ ಮತ್ತು ಹೆಚ್ಚು ಹಾಲು ದೊರೆಯುವ ಬಗ್ಗೆ ದನಗಳಿಗೆ ನೀಡಬೇಕಾದ ಆಹಾರದ ಬಗ್ಗೆ ಮಾಹಿತಿ ನೀಡಿದರು.


ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈಯವರು ಮಾತನಾಡಿ, ವೈಜ್ಷಾನಿಕವಾಗಿ ಹೈನುಗಾರಿಕೆ ಮಾಡಿದಾಗ ಮಾತ್ರ ಲಾಭ ಪಡೆಯಲು ಸಾಧ್ಯವಿದ್ದು ಕೇವಲ ಹಾಲಿನಿಂದ ಮಾತ್ರ ಲಾಭ ಪಡೆಯುವುದು ಅಸಾಧ್ಯ ಅದರ ಬದಲಾಗಿ ಹೈನುಗಾರಿಕೆಯ ಇತರ ಉತ್ಪನ್ನಗಳನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿದಾಗ ಮಾತ್ರ ಲಾಭ ಪಡೆಯಲು ಸಾಧ್ಯ ಎಂದರು.


ಹೆಚ್ಚು ಹಾಲು ಹಾಕಿದವರಿಗೆ ಬಹುಮಾನ
ವರದಿ ಸಾಲಿನಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಹಾಕಿದ ಸದಸ್ಯರಿಗೆ ವಿಶೇಷ ಬಹುಮಾನ ನೀಡಿ ಗೌರವಿಸಲಾಯಿತು. ಅದರಲ್ಲಿ ಫ್ರಥಮ ಬಹುಮಾನವನ್ನು ವಿನಯ ಕುಮಾರ್ ರೈ, ದ್ವಿತೀಯ ರಾಮಣ್ಣ ಗೌಡ ಹಾಗೂ ತೃತೀಯ ಬಹುಮಾನವನ್ನು ಸುಧಾಕರ ಆಳ್ವ ಪಡೆದುಕೊಂಡರು. ಉಳಿದಂತೆ ಶ್ಯಾಮ್‌ಸುಂದರ ರೈ ಕೊಪ್ಪಳ, ನಾರಾಯಣ ಪೂಜಾರಿ, ಕಸ್ತೂರಿ ಟಿ ಶೆಟ್ಟಿ, ವೀರಪ್ಪ ಮೂಲ್ಯ, ರಾಜೇಶ್, ಸದಾಶಿವ ಮತ್ತು ಗೀತಾ ರೈ ಪ್ರೋತ್ಸಾಹಕ ಬಹುಮಾನ ಪಡೆದುಕೊಂಡರು. ಉಳಿದಂತೆ ಸದಸ್ಯರಿಗೆ ಪ್ರೋತ್ಸಾಹ ಬಹುಮಾನ ನೀಡಲಾಯಿತು.
ಸಂಘದ ಉಪಾಧ್ಯಕ್ಷ ಸುಧಾಕರ ಆಳ್ವ ಕಲ್ಲಡ್ಕರವರು ನಿವ್ವಳ ಲಾಭ ವಿಲೇವಾರಿ ಮತ್ತು ವಿತರಣೆಯ ಬಗ್ಗೆ ವರದಿ ಮಂಡಿಸಿದರು. ವೇದಿಕೆಯಲ್ಲಿ ನಿರ್ದೇಶಕರುಗಳಾದ ಬಿ.ನಾರಾಯಣ ರೈ ಬಾರಿಕೆ, ಪ್ರೇಮ್‌ರಾಜ್ ರೈ ಪರ್ಪುಂಜ, ರಾಮಣ್ಣ ಗೌಡ ಪರನೀರು, ವೀರಪ್ಪ ಮೂಲ್ಯ ಬೈರಮೂಲೆ, ಕಸ್ತೂರಿ ಟಿ.ಶೆಟ್ಟಿ ಕೂರೇಲು, ಹರಿಣಾಕ್ಷಿ ಆಳ್ವ ಕುರಿಯ ಉಪಸ್ಥಿತರಿದ್ದರು. ನಿರ್ದೇಶಕ ಶ್ಯಾಮಸುಂದರ ರೈ ಕೊಪ್ಪಳ ಸ್ವಾಗತಿಸಿದರು. ನಿರ್ದೇಶಕ ಮಿತ್ರದಾಸ ರೈ ಡೆಕ್ಕಳ ವಂದಿಸಿದರು. ಸಂಘದ ಹಾಲು ಪರೀಕ್ಷಕಿ ಬೇಬಿ ಪರ್ಪುಂಜ ಸಹಕರಿಸಿದ್ದರು.


ಕಟ್ಟಡಕ್ಕೆ ಜಾಗ ಬೇಕಾಗಿದೆ
2006 ರಿಂದಲೇ ಪರ್ಪುಂಜ ಹಾಲು ಉತ್ಪಾದಕರ ಸಹಕಾರ ಸಂಘವು ಸ್ವಂತ ಕಟ್ಟಡ ನಿರ್ಮಿಸಲು ಜಾಗ ಹುಡುಕಾಟ ನಡೆಸುತ್ತಿದೆ. ಇದುವರೇಗೆ ನಮಗೆ ಜಾಗ ಸಿಗಲಿಲ್ಲ. ಯಾರಾದರೂ 3 ಸೆಂಟ್ಸ್ ಜಾಗ ಕೊಡುವವರು ಇದ್ದರೆ ಸಂಘಕ್ಕೆ ಒಂದು ಒಳ್ಳೆಯ ಕಟ್ಟಡವನ್ನು ನಿರ್ಮಿಸುವ ಗುರಿ ಇದೆ ಎಂದು ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಹೇಳಿದರು.

ಕಾಸರಗೋಡಿನಲ್ಲಿ 46 ರೂ. ದ.ಕ ದಲ್ಲಿ 39 ರೂ. ಹಾಲಿನ ದರ ಹೆಚ್ಚಿಸಲು ಆಗ್ರಹ
ಸಂಘದ ನಿರ್ದೇಶಕ ಶ್ಯಾಮ್‌ಸುಂದರ ರೈ ಕೊಪ್ಪಳರವರು ಮಾತನಾಡಿ, ಹೈನುಗಾರರ ಬಗ್ಗೆ ಒಕ್ಕೂಟವು ಚಿಂತನೆ ಮಾಡಬೇಕಾದ ಅಗತ್ಯತೆ ಇದೆ ಏಕೆಂದರೆ ದಕ್ಷಿಣ ಕನ್ನಡದಲ್ಲಿ ಸದಸ್ಯರಿಗೆ 1 ಲೀಟರ್ ಹಾಲಿಗೆ ಹಾಲಿನ ಗುಣಮಟ್ಟ, ಫ್ಯಾಟ್ ಎಲ್ಲಾ ಸರಿ ಇದ್ದರೆ 39 ರೂಪಾಯಿ ಸಂಘದಿಂದ ಸಿಗುತ್ತದೆ. ಅದೇ ನಾವು ಕಾಸರಗೋಡಿಗೆ ಹೋದರೆ ಅಲ್ಲಿ ಏನಿಲ್ಲದಿದ್ದರೂ 1 ಲೀಟರ್ ಹಾಲಿಗೆ ಸಂಘದಿಂದ 46 ರೂಪಾಯಿ ಸಿಗುತ್ತದೆ. ಇದಲ್ಲದೆ ಹುಂಡಿಗೆ ಸಬ್ಸಿಡಿ ಕೂಡ ಇದೆ. ಆದರೆ ನಮ್ಮಲ್ಲಿ ಇಲ್ಲ ಎಂದ ಅವರು ಹೈನುಗಾರರ ಬಗ್ಗೆ ಒಕ್ಕೂಟ ಕಾಳಜಿ ವಹಿಸಬೇಕು ಹಾಲಿನ ದರ ಜಾಸ್ತಿ ಮಾಡಬೇಕಾಗಿದೆ ಈ ಬಗ್ಗೆ ಒಕ್ಕೂಟಕ್ಕೆ ಬರೆದುಕೊಳ್ಳಬೇಕಾಗಿದೆ ಎಂದು ಶ್ಯಾಮ್‌ಸುಂದರ ರೈ ಹೇಳಿದರು. ಇದಕ್ಕೆ ಉತ್ತರಿಸಿದ ವಿಸ್ತರಣಾಧಿಕಾರಿ ಕೆ.ನಾಗೇಶ್‌ರವರು, ದ.ಕದಲ್ಲಿ ಪ್ರೋತ್ಸಾಹ ಧನ ಸೇರಿ ರೂ.42 ತನಕ ನೀಡಲಾಗುತ್ತದೆ ಕೇರಳಕ್ಕೆ ಹೋಲಿಸಿದರೆ ದ.ಕದಲ್ಲಿ ಕಡಿಮೆ ಎಂದರು. ಹಾಲಿನ ದರ ನಿಗದಿ ಪಡಿಸುವುದು ಸರಕಾರ ಆದ್ದರಿಂದ ಸಂಘದಿAದ ನಿರ್ಣಯ ಮಾಡಿ ಕಳುಹಿಸಿ ಈ ಬಗ್ಗೆ ಒಕ್ಕೂಟದಲ್ಲೂ ಪ್ರಸ್ತಾಪ ಮಾಡಲಾಗುವುದು ಎಂದು ತಿಳಿಸಿದರು.


ದನದ ವಿಮೆ ವಯಸ್ಸು ಹೆಚ್ಚಿಸಿ
ದನಗಳ ವಿಮೆ ವಯಸ್ಸು 2 ರಿಂದ 8 ವರ್ಷ ಆಗಿದ್ದು ಇದರಿಂದ ಹೈನುಗಾರರಿಗೆ ತೊಂದರೆಯಾಗುತ್ತದೆ. 8 ವರ್ಷ ಕಳೆದ ದನಕ್ಕೆ ವಿಮೆ ಆಗುವುದಿಲ್ಲ ಇದರಿಂದಾಗಿ ದನವನ್ನು ಮಾರಾಟ ಮಾಡಬೇಕಾದ ಅನಿವಾರ್ಯತೆ ಇದೆ. ಇದರಿಂದ ಹೈನುಗಾರರಿಗೆ ನಷ್ಟ ಆಗುತ್ತದೆ, ಆದ್ದರಿಂದ ವಿಮೆ ವಯಸ್ಸು ಹೆಚ್ಚಿಸಬೇಕು ಎಂದು ಸದಸ್ಯ ವಿನಯ ಕುಮಾರ್ ತಿಳಿಸಿದರು. ಈ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಈ ಬಗ್ಗೆ ಒಕ್ಕೂಟಕ್ಕೆ ಬರೆದುಕೊಳ್ಳುವುದು ಎಂದು ನಿರ್ಣಯಿಸಲಾಯಿತು.

` ಸಂಘವು ಸದಸ್ಯರ ಸಹಕಾರದೊಂದಿಗೆ ಉತ್ತಮವಾಗಿ ಬೆಳೆಯುತ್ತಾ ಸಾಗುತ್ತಿದೆ. ಸದಸ್ಯರಿಗೆ ಶೇ.15 ಡಿವಿಡೆಂಟ್ ಹಾಗೂ ಲೀ.64 ಪೈಸೆ ಬೋನಸ್ ಕೂಡ ನೀಡಿದ್ದೇವೆ. ಸಂಘದ ಕಟ್ಟಡಕ್ಕೆ ಜಾಗದ ಅವಶ್ಯಕತೆ ಇದೆ. ಸಹಕರಿಸಿದ ಎಲ್ಲರಿಗೂ ಧನ್ಯವಾದಗಳೊಂದಿಗೆ ಮುಂದೆಯೂ ತಮ್ಮೆಲ್ಲರ ಸಹಕಾರ ಬಯಸುತ್ತೇವೆ.’
-ಬೂಡಿಯಾರ್ ರಾಧಾಕೃಷ್ಣ ರೈ, ಅಧ್ಯಕ್ಷರು ಪರ್ಪುಂಜ ಹಾ.ಉ.ಸ.ಸಂಘ

LEAVE A REPLY

Please enter your comment!
Please enter your name here