ಸಾಂಸ್ಕೃತಿಕ ,ಧಾರ್ಮಿಕ ಕಾರ್ಯಕ್ರಮದ ಜೊತೆಗೆ ವೈಭವದ ಶ್ರೀ ಕೃಷ್ಣನ ರಥೋತ್ಸವ

0

*ಪುತ್ತೂರು ಯುವಕ ವೃಂದದಿಂದ 2 ದಿನಗಳಿಂದ ನಡೆದ 44ನೇ ಮೊಸರು ಕುಡಿಕೆ ಅದ್ಧೂರಿ ಕಾರ್ಯಕ್ರಮ

*ಧರ್ಮದ ರಕ್ಷಣೆಯೇ ನಮ್ಮ ರಕ್ಷಣೆ – ಪ್ರಮೋದ್ ಕುಮಾರ್

ಪುತ್ತೂರು : ಧರ್ಮವನ್ನು ನಾವೆಲ್ಲರೂ ರಕ್ಷಣೆ ಮಾಡುವ ಕಾರ್ಯವನ್ನು ಮಾಡಿದರೆ, ಅದು ನಮ್ಮೆಲ್ಲರ ರಕ್ಷಣೆಯಾಗುತ್ತದೆಯೆಂದು ಲೋಕಪಯೋಗಿ ಇಲಾಖೆ ಕುಕ್ಕೆಸುಬ್ರಹ್ಮಣ್ಯ ವಿಭಾಗದ ಸಹಾಯಕ ಇಂಜಿನಿಯರ್ ಪ್ರಮೋದ್ ಕುಮಾರ್ ಆಶಯ ವ್ಯಕ್ತಪಡಿಸಿದ್ದರು. ಇಲ್ಲಿನ ಕಲ್ಲಾರೆ ಶ್ರೀ ಗುರು ರಾಘವೇಂದ್ರ ಮಠ ಇದರ ಸಭಾಂಗಣದಲ್ಲಿ ಸೆ.7 ರಂದು ಪುತ್ತೂರು ಯುವಕ ಕಲ್ಲಾರೆ (ರಿ) , ವತಿಯಿಂದ ಆಯೋಜಿಸಿದ್ದ 44ನೇ ಮೊಸರು ಕುಡಿಕೆ ಉತ್ಸವ ಕಾರ್ಯಕ್ರಮದಲ್ಲಿ ಅತಿಥಿಯಾಗಿ
ಭಾಗವಹಿಸಿ, ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಪುಟಾಣಿಗಳ ಸಹಿತ ಹಿರಿಯ ಮಕ್ಕಳಿಗೂ ಬಹುಮಾನ ವಿತರಣೆ ನೆರವೇರಿಸಿ, ಬಳಿಕ ಮಾತನಾಡಿ, ಇಲ್ಲಿರುವಂತಹ ಅದ್ಭುತ ಪ್ರತಿಭೆಗಳಿಗೆ ಬಹುಮಾನ ವಿತರಿಸೋ ಭಾಗ್ಯ ನನಗೂ ಸಿಕ್ಕಿದೆಯೆಂದ ಅವರು, ಭುವಿಯಲ್ಲಿ ಅಧರ್ಮವೂ ಹೆಚ್ಚಾದಾಗ ಭಗವಾನ್ ಶ್ರೀಕೃಷ್ಣ ಅವತಾರವೆತ್ತುವುದು ಕೂಡ ಖಂಡಿತ. ಬಡತನದ ಸಾಲಿನಲ್ಲಿದ್ದ ಭಾರತ ಇದೀಗ ಪ್ರಬಲ ಆರ್ಥಿಕ ಶಕ್ತಿಯೊಂದಿಗೆ ಜಗತ್ತಿನಲ್ಲಿ ಮೂರನೇ ಸಾಲಿಗೆ ಬಂದು ನಿಂತಿದ್ದು ನಾವೆಲ್ಲರೂ ಪ್ರತಿಯೊಬ್ಬರ ಒಳಿತಿಗಾಗಿ ಹರಸೋಣವೆಂದು ಹೇಳಿದರು.
ಶ್ರೀ ಗುರು ರಾಘವೇಂದ್ರ ಮಠದ ಕಾರ್ಯದರ್ಶಿ ಯು.ಪೂವಪ್ಪ ಮಾತನಾಡಿ , ಕಳೆದ 43 ವರ್ಷಗಳಿಂದ ಮೊಸರು ಕುಡಿಕೆ ಉತ್ಸವ ನಿರಂತರವಾಗಿ ಸಾಗಿ ಬಂದಿದೆ. ಎರಡು ದಿನಗಳಲ್ಲಿ ಎಲ್ಲಾ ಕಾರ್ಯಕ್ರಮವೂ ಕೂಡ ಅತ್ಯಂತ ಸುಸೂತ್ರವಾಗಿ ನಡೆದಿದೆ. ಹಿಂದೂ ರಾಷ್ಟ್ರದಲ್ಲಿದ್ದು ಹಿಂದು ಧಾರ್ಮಿಕ ಕ್ಷೇತ್ರ ,ಸನಾತನ ಧರ್ಮವನ್ನೇ ಮಹಾಮಾರಿಗಳಿಗೆ ಹೋಲಿಕೆ ಮಾಡುವಂಥದ್ದು ದೊಡ್ಡ ದುರಂತವೇ ಸರಿ. ಮಠ-ಮಂದಿರಗಳ ಮೂಲಕ ಧಾರ್ಮಿಕ ಆಚರಣೆಯೂ ನಿರಂತರ ನಡೆದು ಧರ್ಮ ರಕ್ಷಣೆ ಬೆಳಗಲಿಯೆಂದು ಹಾರೈಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಮೆತ್ತಡ್ಕ ಗೋಪಾಲಕೃಷ್ಣ ಭಟ್ ವಹಿಸಿದರು.
ಪುತ್ತೂರು ಯುವಕ ವೃಂದ ಇದರ ಅಧ್ಯಕ್ಷ ಭವಿಷ್ಯತ್ , ಕಾರ್ಯದರ್ಶಿ ಲಿಖಿತ್ ವೇದಿಕೆಯಲ್ಲಿ ಆಸೀನರಾಗಿದ್ದರು. ಸದಸ್ಯರಾದ ಪ್ರಕಾಶ್, ಶಮಂತ್ ಹಾಗೂ ರಕ್ಷಿತ್ ಇವರುಗಳು ಅತಿಥಿಗಳನ್ನು ಗೌರವಿಸಿದರು. ಕಾರ್ಯಕ್ರಮಕ್ಕೂ ಮುಂಚಿತ ಮಠದ ಅವರಣದೊಳಗೆ ಶ್ರೀ ಕೃಷ್ಣನ ಭವ್ಯ ರಥೋತ್ಸವ ನಡೆದು ,ಪ್ರಸಾದ ವಿತರಣೆ ಬಳಿಕ ಕಾರ್ಯಕ್ರಮದ ವೇದಿಕೆ ಮುಂಭಾಗದಲ್ಲಿ ಇರಿಸಿದ್ದ ಭಾರತಮಾತೆಯ ಭಾವಚಿತ್ರಕ್ಕೆ ವಂದಿಸಿ , ಪುಪ್ಪಾರ್ಚಾನೆ ಮಾಡಿದ ಬಳಿಕ ಕಾರ್ಯಕ್ರಮ ನೆರವೇರಿತು.
ರಚಿತಾ ಕಲ್ಲಾರೆ ಪ್ರಾರ್ಥನೆ ನೆರವೇರಿಸಿ , ಅರುಣ್ ಕಲ್ಲಾರೆ ಪ್ರಸ್ತಾವನೆಗೈದರು. ಉದಯ್ ಕುಮಾರ್ ಹೆಚ್ ನಿರೂಪಿಸಿ ,ನಗರಸಭಾ ಸದಸ್ಯ ಮನೋಹರ್ ಕಲ್ಲಾರೆ ವಂದಿಸಿದರು.ತದನಂತರ ನೃತ್ಯ ವೈಭವ -2K23 ನೆರವೇರಿತು.

ಕಾರ್ಯಕ್ರಮಗಳ ವಿವರ – ಎರಡು ದಿನಗಳ ಕಾಲ ನಡೆಯುವ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಜೊತೆಗೆ ವಿವಿಧ ರೀತಿಯ ಸ್ಪರ್ಧೆಗಳನ್ನೂ ಸೆ.6ರ ಬೆಳಗ್ಗೆ ಎನ್. ಗಣಪತಿ ನಾಯಕ್ ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮಗಳಿಗೆ ವಿದ್ಯುಕ್ತವಾಗಿ ಚಾಲನೆ ನೀಡಿ, ಹಾರೈಸಿದರು.
ಬಳಿಕ ಕ್ರಾಸ್ ಕಂಟ್ರಿ ರೇಸ್ ಸ್ಪರ್ಧೆ ನಡೆದು , ನಂತರ ರಂಗೋಲಿ ಹಾಗೂ ಸಂಗೀತ ಸ್ಪರ್ಧೆಗಳು ನಡೆದವು. ಅಪರಾಹ್ನ ಶ್ರೀಕೃಷ್ಣನ ಚಿತ್ರ ಬಿಡಿಸುವ ಸ್ಪರ್ಧೆ , ರಸಪ್ರಶ್ನೆ ,ಗೋಣಿಚೀಲ ಓಟ , ಲಿಂಬೆ ಚಮಚ ಓಟ , ಸ್ಮರಣ ಶಕ್ತಿ , ಗುಂಡು ಎಸೆತ , ಜಸ್ಟ್ ಮಿನಿಟ್ ಗೇಮ್ ,ಸಂಗೀತ ಕುರ್ಚಿ , ಮಡಕೆ ಒಡೆಯೋ ಸ್ಪರ್ಧೆಗಳೆಲ್ಲಾ ನಡೆದವು.
ರಾತ್ರಿ ಭಜನೆ, ವಿಶೇಷ ಪೂಜೆ, ಪ್ರಸಾದ ವಿತರಣೆಯೂ ನಡೆಯಿತು.
ಸೆ. 7 ರ ಸಂಜೆ 4 ರಿಂದ ಮೊಸರು ಕುಡಿಕೆ ಕಂಬ ಏರುವ ಸ್ಪರ್ಧೆ , ಪುಟಾಣಿ ಮಕ್ಕಳಿಂದ ಶ್ರೀಕೃಷ್ಣನ ವೇಷ ಹಾಗೂ ರಾಧೆ ವೇಷ ,ವಿವಿಧ ಮಾದರಿಯ ಛದ್ಮವೇಷ ಸ್ಪರ್ಧೆ ಯ ಬಳಿಕ ತೇರಿನ ಮೂಲಕ ,ಜಯಘೋಷದೊಂದಿಗೆ ಶ್ರೀಕೃಷ್ಣನ ರಥೋತ್ಸವ ಕಾರ್ಯ ನೆರವೇರಿತು. ಬಳಿಕ ಸಭಾ ಕಾರ್ಯಕ್ರಮ ಜರುಗಿ , ವಿವಿಧ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ “ನೃತ್ಯ ವೈಭವ-2K23″ ಆರಂಭಗೊಂಡು , ವಿಜೇತ ತಂಡಗಳಿಗೆ ನಗದು , ಸ್ಮರಣಿಕೆ ನೀಡಲಾಯಿತು. ಪುತ್ತೂರು ಯುವಕ ವೃಂದದ ಎಲ್ಲಾ ಪದಾಧಿಕಾರಿಗಳು ,ಸದಸ್ಯರು , ಮಠದ ಆಡಳಿತ ಮಂಡಳಿ ಹಾಗೂ ಅರ್ಚಕ ವೃಂದ ಮತ್ತು ಭಕ್ತಾಧಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here