![](https://puttur.suddinews.com/wp-content/uploads/2024/09/Suddi-Web-Ad.jpg)
![](https://puttur.suddinews.com/wp-content/uploads/2024/10/Mark.gif)
417.90ಕೋಟಿ ರೂ.ವ್ಯವಹಾರ, 1.31ಕೋಟಿ ರೂ.ನಿವ್ವಳ ಲಾಭ-ಶೇ.9 ಡಿವಿಡೆಂಡ್ ಘೋಷಣೆ
![](https://puttur.suddinews.com/wp-content/uploads/2023/09/nelyadi-1-1.jpg)
![](https://puttur.suddinews.com/wp-content/uploads/2023/09/nelyadi-2-1.jpg)
ನೆಲ್ಯಾಡಿ: ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2022-23ನೇ ಸಾಲಿನ ವಾರ್ಷಿಕ ಮಹಾಸಭೆ ಸೆ.7ರಂದು ಸಂಘದ ಪ್ರಧಾನ ಕಚೇರಿಯ ಕಲ್ಪವೃಕ್ಷ ಸಹಕಾರಿ ಸೌಧದ ಕಾಮಧೇನು ಸಭಾಂಗಣದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಉಮೇಶ್ ಶೆಟ್ಟಿಯವರು ಸಂಘವು ಶಿರಾಡಿ, ಇಚ್ಲಂಪಾಡಿ, ಕೌಕ್ರಾಡಿ, ನೆಲ್ಯಾಡಿ, ಕೊಣಾಲು, ಆಲಂತಾಯ ಮತ್ತು ಗೋಳಿತ್ತೊಟ್ಟು ಕಂದಾಯ ಗ್ರಾಮಗಳ ವ್ಯಾಪ್ತಿಯನ್ನು ಹೊಂದಿದ್ದು 63 ವರ್ಷಗಳಿಂದ ಕಾರ್ಯಾಚರಿಸುತ್ತಿದೆ. ನೆಲ್ಯಾಡಿಯಲ್ಲಿ ಪ್ರಧಾನ ಕಚೇರಿ, ಗೋಳಿತ್ತೊಟ್ಟು ಹಾಗೂ ಶಿರಾಡಿಯಲ್ಲಿ ಶಾಖೆ, ಇಚ್ಲಂಪಾಡಿಯಲ್ಲಿ ಪಡಿತರ ವಿತರಣೆ ಶಾಖೆ ಇದೆ. 6034 ಸದಸ್ಯರಿದ್ದಾರೆ. ಸಿ ತರಗತಿ ಪಾಲು ಬಂಡವಾಳ ಸೇರಿ ವರದಿ ವರ್ಷಕ್ಕೆ 750 ಲಕ್ಷ ರೂ.ಪಾಲು ಬಂಡವಾಳವಿದೆ. 27.86 ಕೋಟಿ ರೂ.ಠೇವಣಿ ಹೊಂದಿದ್ದು 68.18 ಕೋಟಿ ರೂ. ಸಾಲ ವಿತರಣೆ ಮಾಡಲಾಗಿದೆ. ವರದಿ ವರ್ಷದಲ್ಲಿ 417,90,51,794 ರೂ.ವ್ಯವಹಾರ ನಡೆದಿದ್ದು 1,31,21,496 ರೂ.ನಿವ್ವಳ ಲಾಭಗಳಿಸಿದೆ ಎಂದರು. ಸಂಘದ ಉತ್ತಮ ವ್ಯವಹಾರವನ್ನು ಗಮನಿಸಿ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸತತ 5 ವರ್ಷಗಳಿಂದ ವಿಶೇಷ ಪ್ರೋತ್ಸಾಹ ಪ್ರಶಸ್ತಿ ನೀಡಿ ಗೌರವಿಸಿದೆ. 2020ನೇ ಸಾಲಿನಲ್ಲಿ ಮಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಸಹಕಾರಿ ಸಪ್ತಾಹದಲ್ಲಿ ಸಂಘಕ್ಕೆ ಜಿಲ್ಲೆಯಲ್ಲಿಯೇ ಉತ್ತಮ ಕೃಷಿ ಪತ್ತಿನ ಸಹಕಾರಿ ಸಂಘ ಎಂಬ ಪ್ರಶಸ್ತಿಯನ್ನು ಸಹಕಾರ ಇಲಾಖೆಯು ನೀಡಿ ಗೌರವಿಸಿದೆ ಎಂದು ಉಮೇಶ್ ಶೆಟ್ಟಿ ಹೇಳಿದರು.
ಶೇ.9 ಡಿವಿಡೆಂಡ್ ಘೋಷಣೆ:
ಆಡಳಿತ ಮಂಡಳಿ ಸಭೆಯಲ್ಲಿ 8.5 ಶೇ. ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಎಂದು ಉಮೇಶ್ ಶೆಟ್ಟಿ ಪಟ್ಟೆ ತಿಳಿಸಿದರು. ಇದನ್ನು ಹೆಚ್ಚಳ ಮಾಡುವಂತೆ ಸಂಘದ ಸದಸ್ಯರಾದ ಹರಿಪ್ರಸಾದ್, ರವಿಚಂದ್ರ ಹೊಸವೊಕ್ಲು, ಗಿರೀಶ್ ಬದನೆ, ಜಾರ್ಜ್‌ಕುಟ್ಟಿ ಉಪದೇಶಿ, ಜನಾರ್ದನ ಬಾಣಜಾಲು ಮತ್ತಿತರರು ಮಹಾಸಭೆಯಲ್ಲಿ ಆಗ್ರಹಿಸಿದರು. ಈ ಬಗ್ಗೆ ಚರ್ಚೆ ನಡೆದು ಅಂತಿಮವಾಗಿ 9 ಶೇ. ಡಿವಿಡೆಂಡ್ ನೀಡುವುದಾಗಿ ಅಧ್ಯಕ್ಷರು ಘೋಷಿಸಿದರು.
ಗ್ರಾ.ಪಂ.ಗೊಂದು ಸಹಕಾರ ಸಂಘಕ್ಕೆ ವಿರೋಧ:
ಗ್ರಾಮ ಪಂಚಾಯಿತಿಗೊಂದು ಸಹಕಾರ ಸಂಘ ಸ್ಥಾಪನೆಗೆ ಮುಂದಾಗಿರುವ ಸರ್ಕಾರದ ನಿರ್ಧಾರಕ್ಕೆ ಸಭೆಯಲ್ಲಿ ವಿರೋಧ ವ್ಯಕ್ತವಾಯಿತು. ಈ ಕುರಿತು ಮಾತನಾಡಿದ ಸಂಘದ ಕಾನೂನು ಸಲಹೆಗಾರರೂ ಆದ ನ್ಯಾಯವಾದಿ ಶಿವಪ್ರಸಾದ್‌ರವರು, ಸರಕಾರದ ಈ ನಿರ್ಧಾರದಿಂದ ಸಹಕಾರ ಸಂಘದ ನಿರ್ವಹಣೆಯೇ ಕಷ್ಟವಾಗಲಿದೆ. ಈ ಹಿಂದೆ ಶಿರಾಡಿ,ಗೋಳಿತ್ತೊಟ್ಟು ಗ್ರಾಮದಲ್ಲಿ ಪ್ರತ್ಯೇಕ ಸೊಸೈಟಿ ಇತ್ತು. ಬಳಿಕ ಸರಕಾರವೇ ಅದನ್ನು ಮುಟ್ಟುಗೋಲು ಹಾಕಿಕೊಂಡಿದೆ. ಈಗ ನೆಲ್ಯಾಡಿಯಲ್ಲಿ ಇರುವ ಸಂಘ ಲಾಭದಲ್ಲಿ ಮುನ್ನಡೆಯುತ್ತಿದೆ. ಮುಂದೆ ಗ್ರಾಮಕ್ಕೊಂದು ಸಹಕಾರ ಸಂಘ ಆದಲ್ಲಿ ಸಂಘ ನಷ್ಟ ಅನುಭವಿಸುವ ಸಾಧ್ಯತೆ ಇದೆ. ಆದ್ದರಿಂದ ನೆಲ್ಯಾಡಿಯಲ್ಲಿ ಈ ಯೋಜನೆ ಜಾರಿ ಬೇಡ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಘದ ಅಧ್ಯಕ್ಷ ಉಮೇಶ್ ಶೆಟ್ಟಿಯವರು, ಇದರ ವಿರುದ್ಧ ಈಗಾಗಲೇ ಕೋರ್ಟ್‌ಗೆ ಹೋಗಿದ್ದು ತಡೆಯಾಜ್ಞೆ ಸಿಕ್ಕಿದೆ. ಮಹಾಸಭೆಯಲ್ಲಿ ಬಂದಿರುವ ಅಭಿಪ್ರಾಯದ ಬಗ್ಗೆಯೂ ನಿರ್ಣಯ ಕೈಗೊಂಡು ಸರಕಾರಕ್ಕೆ ಬರೆಯುವುದಾಗಿ ತಿಳಿಸಿದರು.
ಹೊಸ ಬೈಲಾಕ್ಕೂ ವಿರೋಧ:
ಸಹಕಾರ ಸಂಘಗಳಿಗೆ ಸಂಬಂಧಿಸಿ ಸರಕಾರ ಹೊರಡಿಸಿರುವ ಹೊಸ ಬೈಲಾಕ್ಕೂ ಸಭೆಯಲ್ಲಿ ವಿರೋಧ ವ್ಯಕ್ತವಾಯಿತು. ಸಿಬ್ಬಂದಿಗಳ ವರ್ಗಾವಣೆ, ನೇಮಕಾತಿಗೆ ಸಂಬಂಧಿಸಿದ ತಿದ್ದುಪಡಿಗೂ ಸಭೆಯಲ್ಲಿ ವಿರೋಧ ವ್ಯಕ್ತವಾಯಿತು. ಸಹಕಾರ ಸಂಘಗಳು ಸದಸ್ಯರಿಂದ ಠೇವಣಿ ಸಂಗ್ರಹಿಸಿ ವ್ಯವಹಾರ ನಡೆಸುತ್ತಿದೆ. ಇದರಲ್ಲಿ ಸರಕಾರ ಮಧ್ಯ ಪ್ರವೇಶಿಸಿದಲ್ಲಿ ಸಂಘದ ಸಾರ್ವಭೌಮತ್ವಕ್ಕೆ ಚ್ಯುತಿ ಬರಲಿದೆ ಎಂದು ಸಂಘದ ಕಾನೂನು ಸಲಹೆಗಾರರಾದ ಶಿವಪ್ರಸಾದ್‌ರವರು ಅಭಿಪ್ರಾಯಿಸಿದರು. ಈ ಬಗ್ಗೆ ಚರ್ಚೆ ನಡೆದು ಸರಕಾರದ ಹೊಸ ಬೈಲಾ ವಿರೋಧಿಸಿ ಸರ್ಕಾರಕ್ಕೆ ಬರೆಯಲು ನಿರ್ಣಯ ಕೈಗೊಳ್ಳಲಾಯಿತು.
ಸಾಲಮನ್ನಾ ಹಣ ಬಂದಿಲ್ಲ:
2018ರಲ್ಲಿ ಸರಕಾರ ಘೋಷಿಸಿದ ಸಾಲ ಮನ್ನಾ ಹಣ ಇನ್ನೂ ಬಂದಿಲ್ಲ. ಈ ಬಗ್ಗೆ ಸರಕಾರಕ್ಕೆ ಒತ್ತಡ ತರಬೇಕೆಂದು ಸದಸ್ಯ ರಾಮಚಂದ್ರ ಅವರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾಕರ ರೈಯವರು ಸಾಲಮನ್ನಾ ಕುರಿತು ಈಗಿನ ಸರಕಾರವು ಮಾಹಿತಿ ಕೇಳಿದೆ. ಮಹಾಸಭೆಯಲ್ಲೂ ಬಂದ ಅಭಿಪ್ರಾಯದ ನಿರ್ಣಯಿಸಿ ಸರಕಾರಕ್ಕೆ ಕಳುಹಿಸಲಾಗುವುದು ಎಂದರು.
ಪರಿಹಾರ ನೀಡಿ:
ಸಂಘದ ಸದಸ್ಯರು ಆಕಸ್ಮಿಕವಾಗಿ ಸಾವನ್ನಪ್ಪಿದಲ್ಲಿ ಅವರ ಕುಟುಂಬ ಸದಸ್ಯರಿಗೆ ಪರಿಹಾರ ನೀಡುವ ಯೋಜನೆ ಜಾರಿಗೆ ತರಬೇಕೆಂದು ಜನಾರ್ದನ ಬಾಣಜಾಲು ಮನವಿ ಮಾಡಿದರು. ಮೈಲುತುತ್ತು, ಪಿಕ್ಕಾಸು ಸೇರಿದಂತೆ ರೈತರಿಗೆ ಅವಶ್ಯಕವಾದ ಸವಲತ್ತುಗಳನ್ನು ಸಂಘದಲ್ಲಿ ವಿತರಣೆ ಮಾಡಬೇಕೆಂದು ಸುರೇಶ್ ಪಡಿಪಂಡ ಆಗ್ರಹಿಸಿದರು. ವಾಹನ ಸಾಲದ ಮಿತಿ ಏರಿಸುವಂತೆಯೂ ಒತ್ತಾಯಿಸಲಾಯಿತು. ಯಶಸ್ವಿನಿ ಯೋಜನೆ ಸೌಲಭ್ಯ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿಯೂ ಸಿಗುವಂತೆ ಆಗಬೇಕೆಂದು ರವಿಚಂದ್ರ ಹೊಸವೊಕ್ಲು ಆಗ್ರಹಿಸಿದರು.
ಹೆಚ್ಚುವರಿ ಷೇರಿನ ಮೊತ್ತ ಹಿಂತಿರುಗಿಸಿ:
ವಾಹನ ಸಾಲ ಪಡೆಯುವ ಸಂದರ್ಭದಲ್ಲಿ ಸಾಲಗಾರ ಸಂಘಕ್ಕೆ ಹೆಚ್ಚುವರಿಯಾಗಿ ಷೇರು ಮೊತ್ತ ಪಾವತಿಸಬೇಕಾಗುತ್ತಿದೆ. ಸದಸ್ಯ ಪಡೆದ ಸಾಲ ಮರುಪಾವತಿ ಮಾಡಿದ ಬಳಿಕ ಆತ ಪಾವತಿಸಿದ್ದ ಹೆಚ್ಚುವರಿ ಷೇರಿನ ಮೊತ್ತವನ್ನು ಹಿಂತಿರುಗಿಸಲು ಕ್ರಮ ಕೈಗೊಳ್ಳಬೇಕೆಂದು ಸಂಘದ ಸದಸ್ಯರೂ ಆದ ನ್ಯಾಯವಾದಿ ಇಸ್ಮಾಯಿಲ್ ನೆಲ್ಯಾಡಿ ಆಗ್ರಹಿಸಿದರು. ಇದಕ್ಕೆ ಬೈಲಾ ಪ್ರಕಾರ ಅವಕಾಶವಿಲ್ಲ ಎಂದು ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ತಿಳಿಸಿದರು. ಚಂದ್ರಶೇಖರ ಭಟ್ ಮಾಪಲ, ನಾಸೀರ್ ಸಮರಗುಂಡಿ, ರಾಮಚಂದ್ರ ಗೌಡ ಪುಚ್ಚೇರಿ ಮತ್ತಿತರರು ವಿವಿಧ ವಿಚಾರ ಪ್ರಸ್ತಾಪಿಸಿದರು.
ಸಂಘದ ಉಪಾಧ್ಯಕ್ಷ ಕಮಲಾಕ್ಷ ಗೌಡ, ನಿರ್ದೇಶಕರಾದ ಜಯಾನಂದ ಬಂಟ್ರಿಯಾಲ್, ಬಾಲಕೃಷ್ಣ ಬಾಣಜಾಲು, ಸರ್ವೋತ್ತಮ ಗೌಡ, ಪ್ರಶಾಂತ ರೈ, ಸುದರ್ಶನ್, ಉಷಾ ಅಂಚನ್, ಸುಲೋಚನಾ ಡಿ.,ಅಣ್ಣು ಬಿ.,ಸುಮಿತ್ರಾ, ಗುರುರಾಜ ಭಟ್, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ವಲಯ ಮೇಲ್ವಿಚಾರಕ ವಸಂತ ಯಸ್., ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಯಂ.ದಯಾಕರ ರೈಯವರು ವರದಿ ಮಂಡಿಸಿದರು. ಉಮೇಶ್ ಶೆಟ್ಟಿ ಪಟ್ಟೆ ಸ್ವಾಗತಿಸಿದರು. ಸುದರ್ಶನ್ ವಂದಿಸಿದರು. ಜಯಾನಂದ ಬಂಟ್ರಿಯಾಲ್ ನಿರೂಪಿಸಿದರು. ಸುಲೋಚನಾ ಪ್ರಾರ್ಥಿಸಿದರು. ಸಂಘದ ಮೇನೇಜರ್‌ಗಳಾದ ಪಿ.ರತ್ನಾಕರ, ರಮೇಶ್ ನಾಯ್ಕ, ಸಿಬ್ಬಂದಿಗಳಾದ ಯಂ.ಟಿ.ಮಹೇಶ್, ಅನಿಶ್ ಕೆ.ಜೆ., ಸಂದೀಪ್ ಕುಮಾರ್, ಅಶೋಕ್ ಎಸ್., ಮುಕುಂದಪ್ರಸಾದ್ ಎಸ್., ರೋಶನ್ ಕುಮಾರ್ ಬಿ.ಜೆ., ಪಿ.ನಾಗೇಶ್, ತಾರಾನಾಥ, ಪ್ರಮೋದ್, ಪಿಗ್ಮಿ ಸಂಗ್ರಾಹಕ ಕೆ.ರಘುನಾಥರವರು ಸಹಕರಿಸಿದರು.
ವಿದ್ಯಾರ್ಥಿ ವೇತನ ವಿತರಣೆ:
ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ 5೦೦ಕ್ಕಿಂತ ಹೆಚ್ಚು ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ಮಹಾಸಭೆಯಲ್ಲಿ ವಿದ್ಯಾರ್ಥಿ ವೇತನ ನೀಡಲಾಯಿತು. ದ್ವಿತೀಯ ಪಿಯುಸಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದ ವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೂ ವಿದ್ಯಾರ್ಥಿ ವೇತನ ನೀಡಲಾಯಿತು. ನಿರ್ದೇಶಕಿ ಉಷಾ ಅಂಚನ್‌ರವರು ವಿದ್ಯಾರ್ಥಿಗಳ ಹೆಸರು ವಾಚಿಸಿದರು.