ಪುತ್ತೂರು: 2 ವರ್ಷದ ಹಿಂದೆ ಪುತ್ತೂರು ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕದಲ್ಲಿ ಸ್ಕೂಟರ್ ಮತ್ತು ಪಿಕಪ್ ಜೀಪು ನಡುವೆ ಡಿಕ್ಕಿ ಸಂಭವಿಸಿ ಸ್ಕೂಟರ್ ಸವಾರ ಮೃತಪಟ್ಟ ಘಟನೆಗೆ ಸಂಬಂಧಿಸಿ ಅಪಘಾತ ಎಸಗಿದ ಆರೋಪಿ ಜೀಪು ಚಾಲಕ ಹಮೀದ್ ಅವರನ್ನು ದೋಷಿ ಎಂದು ಪರಿಗಣಿಸಿದ ಪುತ್ತೂರು ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
2021ರ ಫೆ.8ರಂದು ಸಾಮೆತ್ತಡ್ಕ ನಿವಾಸಿ, ಪುತ್ತೂರು ಕೆಎಸ್‌ಆರ್‌ಟಿಸಿ ಸಿಬ್ಬಂದಿ ಕರುಣಾಕರ ಪಿ., ಎಂಬವರ ಪುತ್ರ ಪ್ರಸಾದ್ (25ವ.)ರವರು ಚಲಾಯಿಸುತ್ತಿದ್ದ ಸ್ಕೂಟರ್ ಮತ್ತು ವಿರುದ್ಧ ದಿಕ್ಕಿನಿಂದ ಹಮೀದ್(49ವ)ರವರು ಚಲಾಯಿಸಿಕೊಂಡು ಬರುತ್ತಿದ್ದ ಪಿಕಪ್ ಜೀಪು ನಡುವೆ ಮೊಟ್ಟೆತ್ತಡ್ಕದಲ್ಲಿ ಅಪಘಾತ ಸಂಭವಿಸಿತ್ತು. ಡಿಕ್ಕಿಯ ರಭಸಕ್ಕೆ ಸ್ಕೂಟರ್ ಸವಾರ ಪ್ರಸಾದ್‌ರವರ ಕಾಲು ಮುರಿತಗೊಂಡು ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದರು. ಘಟನೆ ಕುರಿತು ಪುತ್ತೂರು ಸಂಚಾರ ಪೊಲೀಸರು ಆರೋಪಿ ಜೀಪು ಚಾಲಕ ಹಮೀದ್ ಅವರ ವಿರುದ್ಧ ಸೆಕ್ಷನ್ 279, 304(ಎ) ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿ ಹಮೀದ್ ಅವರನ್ನು ದೋಷಿ ಎಂದು ಪರಿಗಣಿಸಿ 1 ವರ್ಷ 6 ತಿಂಗಳು ಜೈಲು ಶಿಕ್ಷೆ ಮತ್ತು ರೂ. ೪ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ. ಪ್ರಾಸಿಕ್ಯೂಷನ್ ಪರ ಸಹಾಯಕ ಸರಕಾರಿ ಅಭಿಯೋಜಕಿ ಕವಿತಾ ಅವರು ವಾದಿಸಿದರು.