ಪಡುವನ್ನೂರು ಮನೆ ದರೋಡೆ ಪ್ರಕರಣ: ಪೊಲೀಸ್ ತನಿಖೆ ಚುರುಕು-ಹಲವರ ವಿಚಾರಣೆ

0

ಪುತ್ತೂರು: ಬಡಗನ್ನೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ, ಪಡುವನ್ನೂರು ಕುದ್ಕಾಡಿ ಗುರುಪ್ರಸಾದ್ ರೈ ಅವರ ಮನೆಯಲ್ಲಿ ಸೆ.6ರಂದು ತಡರಾತ್ರಿ ನಡೆದಿರುವ ದರೋಡೆ ಪ್ರಕರಣದ ಕುರಿತು ಪೊಲೀಸ್ ತನಿಖೆ ಚುರುಕುಗೊಂಡಿದೆ.
ಪ್ರಕರಣದ ಪತ್ತೆಗಾಗಿ ಪೊಲೀಸರು ಪ್ರತ್ಯೇಕ ತಂಡಗಳ ರಚನೆ ಮಾಡಿದ್ದು ಬೇರೆ ಬೇರೆ ಆಯಾಮದಲ್ಲಿ ತನಿಖೆ ನಡೆಯುತ್ತಿದೆ.ಸೆ.8ರಂದು ಗುರುಪ್ರಸಾದ್ ರೈಯವರಲ್ಲಿ ಪ್ರಕರಣದ ಕುರಿತು ಪೊಲೀಸರು ಇನ್ನಷ್ಟು ಮಾಹಿತಿ ಪಡೆದುಕೊಂಡಿದ್ದಾರೆ. ಪೊಲೀಸರ ಒಂದು ತಂಡ ಕೇರಳಕ್ಕೆ ತೆರಳಿದೆ. ಗುರುಪ್ರಸಾದ್ ರೈಯವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಕೇರಳ ಮೂಲದ ಕೆಲಸದಾಳು ಐದು ದಿನಗಳ ಹಿಂದೆ ರಜೆ ಮಾಡಿ ಊರಿಗೆ ಹೋಗಿದ್ದರಿಂದ ಆತನ ಕುರಿತು ಮಾಹಿತಿಗಾಗಿ ಪೊಲೀಸರ ತಂಡ ಕೇರಳಕ್ಕೆ ತೆರಳಿದೆ. ಕೃತ್ಯದ ಹಿಂದೆ ಪರಿಚಿತರ ಕೈವಾಡ ಇರುವ ಬಲವಾದ ಸಂಶಯಗಳ ಹಿನ್ನೆಲೆಯಲ್ಲಿಯೂ ಪೊಲೀಸ್ ತನಿಖೆ ಮುಂದುವರಿಯುತ್ತಿದೆ. ಗುರುಪ್ರಸಾದ್ ರೈಯವರ ಕೆಲವು ಆಪ್ತರನ್ನೂ ಪೊಲೀಸರು ವಿಚಾರಣೆಗೊಳಪಡಿಸಿ ಕೆಲವೊಂದು ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ. ಎಸ್ಪಿ ಸಿ.ಬಿ.ರಿಷ್ಯಂತ್ ಅವರು ಸೆ.8ರಂದೂ ಆಗಮಿಸಿ ಪೊಲೀಸರಿಗೆ ಮಾರ್ಗದರ್ಶನ ಮಾಡಿದ್ದಾರೆ. ಡಿವೈಎಸ್ಪಿ ಡಾ.ಗಾನಾ ಪಿ.ಕುಮಾರ್ ಅವರ ನಿರ್ದೇಶನದಲ್ಲಿ ಪೊಲೀಸರ ತನಿಖೆ ಚುರುಕುಗೊಂಡಿದೆ.
ಸೆ.೬ರಂದು ತಡರಾತ್ರಿ 2 ಗಂಟೆ ಸುಮಾರಿಗೆ ಮನೆಯ ಹಿಂಬಾಗಿಲಿನ ಚಿಲಕ ಮುರಿದು ಒಳನುಗ್ಗಿದ್ದ ಸುಮಾರು 5 ಮಂದಿಯಿದ್ದ ದರೋಡೆಕೋರರ ತಂಡ ಗುರುಪ್ರಸಾದ್ ರೈ ಮತ್ತವರ ತಾಯಿ ಕಸ್ತೂರಿ ರೈಯವರನ್ನು ಹಗ್ಗ, ಬಟ್ಟೆಯಿಂದ ಕಟ್ಟಿ ಹಾಕಿ ಬಾಯಿಯನ್ನು ಬಿಗಿದು,ಕತ್ತಿನ ಭಾಗಕ್ಕೆ ಮಾರಕಾಸ್ತ್ರಗಳನ್ನಿಟ್ಟು ಬೆದರಿಸಿ 2.4 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಹಾಗೂ 30 ಸಾವಿರ ರೂ.ನಗದು ದರೋಡೆ ಮಾಡಿ, ಈ ವಿಚಾರವನ್ನು ಬೇರೆಯವರಿಗೆ ತಿಳಿಸಿದಲ್ಲಿ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ತೆರಳಿದ್ದರು ಎಂದು ಗುರುಪ್ರಸಾದ್ ರೈಯವರು ನೀಡಿದ ದೂರಿನಂತೆ ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here