ಹಕ್ಕುಪತ್ರ ಕೊಟ್ಟಿದ್ದಾರೆ, ಆರ್‌ಟಿಸಿಯೂ ಆಗಿದೆ ಆದರೆ ಜಾಗ ಮಾತ್ರ ಕೊಟ್ಟಿಲ್ಲ- ಕೊಳ್ತಿಗೆಯ 18 ದಲಿತ ಕುಟುಂಬಗಳಿಗೆ ಭೂಮಿಯೇ ಇಲ್ಲ: ಶಾಸಕರಿಗೆ ದೂರು

0

ಪುತ್ತೂರು: “ ನಮಗೆ ಹಕ್ಕು ಪತ್ರ ಕೊಟ್ಟಿದ್ದಾರೆ, ನಮಗೆ ಕೊಟ್ಟ ಹಕ್ಕು ಪತ್ರದ ಆಧಾರದಲ್ಲಿ ಆರ್ ಟಿಸಿಯೂ ಕೊಟ್ಟಿದ್ದಾರೆ ಆದರೆ ಜಾಗ ಮಾತ್ರ ಕೊಟ್ಟಿಲ್ಲ, ಕಳೆದ 9 ವರ್ಷಗಳಿಂದ ನಾವು ಜಾಗ ಕೊಡಿ ಎಂದು ಕಚೇರಿಗಳಿಗೆ ಅಲೆದಾಟ ಮಾಡುತ್ತಿದ್ದೇವೆ ನಮ್ಮ ನೋವನ್ನೂ ಯಾರೂ ಕೇಳಿಲ್ಲ, ನಮಗೆ ನ್ಯಾಯ ಕೊಡಿ ಎಂದು ಕೊಳ್ತಿಗೆ ಗ್ರಾಮದ ಮೇರುಸಿದ್ದಮೂಲೆಯ ಸುಮಾರು ದಲಿತ ಕುಟುಂಬಗಳು ಶಾಸಕರಾದ ಅಶೋಕ್ ರೈ ಯವರ ಬಳಿ ಬಂದು ದೂರು ನೀಡಿದ್ದು ನಮಗೆ ನ್ಯಾಯ ಕೊಡಿಸಿ ಎಂದು ಮನವಿ ಮಾಡಿದ್ದಾರೆ.

2014ರಲ್ಲಿ ಕೊಳ್ತಿಗೆ ಗ್ರಾಮದ ಮೇರು ಸಿದ್ದಮೂಲೆಯ 18 ದಲಿತ ಕುಟುಂಬಗಳು ಮತ್ತು 8 ಹಿಂದುಳಿದ ವರ್ಗಗಳ ಕುಟುಂಬಘಳಿಗೆ ಆಶ್ರಯ ಗ್ರಾಮೀಣ ನಿವೇಶನ ಯೋಜನೆಯಡಿ ನಿವೇಶನ ಹಕ್ಕು ಪತ್ರವನ್ನು ನೀಡಲಾಗಿದೆ. ಹಕ್ಕು ಪತ್ರ ನೀಡಿದ ಬಳಿಕ ಅದೇ ಸರ್ವೆ ನಂಬರ್‌ನಲ್ಲಿ ಆರ್ ಟಿಸಿಯನ್ನು ನೀಡಲಾಗಿದೆ. ಆದರೆ ಅದೇ ಜಾಗದಲ್ಲಿ ಮನೆ ನಿರ್ಮಾಣಕ್ಕೆ ಮುಂದಾದಾಗ ಅರಣ್ಯ ಇಲಾಖೆಯ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದು ಅದು ಮೀಸಲು ಅರಣ್ಯ ಜಾಗಕ್ಕೆ ಸೇರಿದೆ ಎಂದು ಅಲ್ಲಿ ಗಿಡಗಳನ್ನು ನೆಟ್ಟಿದ್ದಾರೆ. ಆ ಬಳಿಕ 26 ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ ಜಾಗವನ್ನೇ ಗೊತ್ತು ಮಾಡಿರಲಿಲ್ಲ. ಕಳೆದ 9 ವರ್ಷಗಳಿಂದ ಇವರು ಕಚೇರಿಗೆ ಅಲೆದಾಟ ಮಾಡುತ್ತಿದ್ದರೂ ಇವರಿಗೆ ನ್ಯಾಯ ಸಿಕ್ಕಿರಲಿಲ್ಲ.

ಶಾಸಕರ ಭೇಟಿ ತುರ್ತು ಪರಿಹಾರ
ಹಕ್ಕು ಪತ್ರವನ್ನು ಪಡೆದುಕೊಂಡಿದ್ದ ಕೆಲವು ಕುಟುಂಬಗಳು ಶಾಸಕರಾದ ಅಶೋಕ್ ರೈಯವರನ್ನು ಭೇಟಿಯಾಗಿ ತಮ್ಮ ಸಂಕಷ್ಟವನ್ನು ಹೇಳಿಕೊಂಡಿದ್ದಾರೆ. ಈ ಬಗ್ಗೆ ಇಲಾಖಾ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಅಲ್ಲಿನ ಜಾಗದ ಸಮಸ್ಯೆಗಳನ್ನು ಅರಿತುಕೊಂಡರು. ಕಂದಾಯ ಇಲಾಖೆಯವರು ಹಕ್ಕು ಪತ್ರ ನೀಡಿದ ಜಾಗ ಮೀಸಲು ಅರಣ್ಯಕ್ಕೆ ಸೇರಿದ ಕಾರಣ ಅಲ್ಲಿ ಮನೆ ಕಟ್ಟಲು ಅರಣ್ಯ ಇಲಾಖೆಯಿಂದ ಆಕ್ಷೇಪ ಸಲ್ಲಿಸಿದ ಬಗ್ಗೆ ಶಾಸಕರ ಗಮನಕ್ಕೆ ತಂದರು. ಇದೇ ಸರ್ವೆ ನಂಬರ್‌ನಲ್ಲಿ ಸರಕಾರಿ ಜಾಗವನ್ನು ಗುರುತಿಸಿ ಹಕ್ಕು ಪತ್ರವನ್ನು ಪಡೆದುಕೊಂಡಿರುವ ಎಲ್ಲಾ ಕುಟುಂಬಗಳಿಗೂ ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೆ ನಡೆಸಿ ಕುಟುಂಬಕ್ಕೆ ನ್ಯಾಯ ಕೊಡಿಸುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು. ತಾತ್ಕಾಲಿಕವಾಗಿ ಕೊಳ್ತಿಗೆಯಲ್ಲಿನ ಸರಕಾರಿ ಜಾಗದಲ್ಲಿ ಶೀಟ್ ಹಾಕಿ ಕೆಲವು ಕುಟುಂಬಗಳು ಮನೆ ನಿರ್ಮಾನ ಮಾಡಿಕೊಂಡಿದ್ದು ಅಲ್ಲಿಂದ ಬಡ ಕುಟುಂಬವನ್ನು ತೆರವು ಮಾಡದಂತೆ ಶಾಸಕರು ಸೂಚನೆ ನೀಡಿದ್ದಾರೆ.

ಶಾಸಕರು ನೋವಿಗೆ ಸ್ಪಂದಿಸಿದ್ದಾರೆ
ನಮ್ಮ ನೋವನ್ನು ಶಾಸಕ ಅಶೋಕ್ ರೈಯವರ ಬಳಿ ಹೇಳಿಕೊಂಡಾಗ ಅವರ ತಕ್ಷಣ ಸ್ಪಂದನೆ ನೀಡಿದ್ದಾರೆ. ಈಗ ನಾವು ತಾತ್ಕಾಲಿಕವಾಗಿ ಶೀಟ್ ಹಾಕಿ ಮನೆ ನಿರ್ಮಾಣ ಮಾಡಿಕೊಂಡಿದ್ದು ಅಲ್ಲೇ ವಾಸ್ತವ್ಯ ಇರುವಂತೆ ತಿಳಿಸಿದ್ದಾರೆ. ಮುಂದೆ ಇದೇ ಹಕ್ಕು ಪತ್ರವನ್ನು ಇಟ್ಟು ನ್ಯಾಯಾಲಯದ ಮೊರೆ ಹೋಗೋಣ ಎಂದು ಭರವಸೆಯನ್ನು ನೀಡಿದ್ದಾರೆ. ಇದುವರೆಗೆ ನಮ್ಮ ನೋವಿಗೆ ಯಾರೂ ಸ್ಪಂದನೆ ಮಾಡಿರಲಿಲ್ಲ. ಶಾಸಕರ ಬಳಿ ಬಂದು ನಮಗೆ ನ್ಯಾಯ ಸಿಕ್ಕಿದೆ
ಲವಕುಮಾರ್, ಫಲಾನುಭವಿ

ಹಕ್ಕುಪತ್ರ ಕೊಟ್ಟಿದ್ದಾರೆ ನಿವೇಶನ ಇಲ್ಲ..
26 ಬಡ ಕುಟುಂಬಗಳಿಗೆ ಹಕ್ಕು ಪತ್ರವನ್ನು ಕಂದಾಯ ಇಲಾಖೆ ನೀಡಿದೆ ಜಾಗ ಎಲ್ಲಿ ಎಂದು ತೋರಿಸಲಿಲ್ಲ, ಕಂದಾಯ ಇಲಾಖೆ ಗುರುತಿಸಿದ ಜಾಗ ಅರಣ್ಯಕ್ಕೆ ಸೇರಿದ್ದು ಎಂದು ಅರಣ್ಯ ಇಲಾಖೆಯವರು ಹೇಳುತ್ತಿದ್ದಾರೆ. ಹಕ್ಕು ಪತ್ರ ಕೊಡುವಾಗ ಸರಿಯಾಗಿ ನೋಡಿಕೊಡದೇ ಇರುವುದು ತಪ್ಪು. ನ್ಯಾಯ ಕೊಡಿ ಎಂದು ನನ್ನಲ್ಲಿ ಬಂದಿದ್ದಾರೆ. ಅಧಿಕಾರಿಗಳ ಜೊತೆ ಮಾತನಾಡಿ ನ್ಯಾಯ ಕೊಡಿಸುವ ಭರವಸೆಯನ್ನು ನೀಡಿದ್ದೇನೆ, ತಾತ್ಕಾಲಿಕವಾಗಿ ಈಗ ಶೀಟ್ ಹಾಕಿರುವ ಮನೆಯಲ್ಲೇ ವಾಸ್ತವ್ಯ ಮಾಡುವಂತೆ ತಿಳಿಸಿದ್ದೇನೆ.
ಅಶೋಕ್ ರೈ
ಶಾಸಕರು ಪುತ್ತೂರು

LEAVE A REPLY

Please enter your comment!
Please enter your name here