ಪುತ್ತೂರು: ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ಸಂದರ್ಭ ಅನಧಿಕೃತ ಹಣ ಪಡೆಯುತ್ತಿರುವ ಸಿಬ್ಬಂದಿಗಳ ವಿರುದ್ಧ ಚಿಕ್ಕಮುಡ್ನೂರು ಕಲಿಯುಗ ಸೇವಾ ಸಮಿತಿ ವತಿಯಿಂದ ನೀಡಿದ ದೂರಿಗೆ ಜಿಲ್ಲಾ ಆರೋಗ್ಯ ಅಧಿಕಾರಿಗಳಿಂದ ಸ್ಪಂದನೆ ದೊರೆತಿದೆ ಎಂದು ಸಮಿತಿಯ ಅಧ್ಯಕ್ಷರು ತಿಳಿಸಿದ್ದಾರೆ.
ಈ ವಿಚಾರವಾಗಿ ಪುತ್ತೂರು ತಾಲೂಕು ಆರೋಗ್ಯಾಧಿಕಾರಿಯವರ ಕಛೇರಿಯಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿಗಳಿಂದ ವಿಚಾರಣೆ ನಡೆದಿದ್ದು ಸಮಿತಿ ಸದಸ್ಯರು, ವೈದ್ಯಾಧಿಕಾರಿಗಳು, ಶವಾಗಾರ ನೌಕರರಿಂದ ಲಿಖಿತ ಹೇಳಿಕೆಗಳನ್ನು ಪಡೆದುಕೊಂಡು, ಘಟನೆಗಳ ವಿವರಗಳನ್ನು ಪರಿಶೀಲಿಸಿ ಲಂಚ ಕೇಳಿರುವ ಬಗ್ಗೆ ದೂರು ಬಂದಲ್ಲಿ ಸಂಬಂಧಪಟ್ಟ ನೌಕರರನ್ನು ಕೆಲಸದಿಂದ ವಜಾಗೊಳಿಸುವಂತೆ ಹಾಗೂ ಯಾವುದೇ ಲಂಚದ ಬೇಡಿಕೆ ಇಡದಂತೆ ಸೂಕ್ತ ನಿರ್ದೇಶನ ನೀಡುವಂತೆಯೂ ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮಕೈಗೊಳ್ಳಲು ಜಿಲ್ಲಾ ಆರೋಗ್ಯ ಅಧಿಕಾರಿಗಳು ಸೂಚಿಸಿರುವುದಾಗಿ ಜಿಲ್ಲಾ ಆರೋಗ್ಯಾಧಿಕಾರಿಗಳಿಂದ ಪತ್ರ ಬಂದಿದೆ ಎಂದು ಅವರು ತಿಳಿಸಿದ್ದಾರೆ.