ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘ

0

2022-23ನೇ ಸಾಲಿನಲ್ಲಿ 3 ಕೋಟಿ 01 ಲಕ್ಷ ನಿವ್ವಳ ಲಾಭ
ನೆಕ್ಕಿಲಾಡಿ, ಇಳಂತಿಲದಲ್ಲಿ ನೂತನ ಶಾಖೆಯ ಯೋಜನೆ

ಉಪ್ಪಿನಂಗಡಿ: ದ.ಕ. ಜಿಲ್ಲೆಯ ಪ್ರಾಥಮಿಕ ಸಹಕಾರಿ ಸಂಘಗಳಲ್ಲಿ ಉತ್ತಮ ಸೇವೆಯಿಂದ ಹೆಸರು ಪಡೆದುಕೊಂಡಿರುವ ಉಪ್ಪಿನಂಗಡಿಯ ಸಹಕಾರಿ ವ್ಯವಸಾಯಿಕ ಸಂಘವು 2022-23ನೇ ಸಾಲಿನಲ್ಲಿ ಒಟ್ಟು ವ್ಯವಹಾರದಿಂದ 3,01,27,432.98 ರೂ. ಲಾಭ ಗಳಿಸಿದೆ. ಈಗಾಗಲೇ ಮೂರು ಶಾಖೆಗಳನ್ನು ಹೊಂದಿರುವ ಸಂಘವು 34 ನೆಕ್ಕಿಲಾಡಿ ಹಾಗೂ ಇಳಂತಿಲ ಗ್ರಾಮದಲ್ಲಿ ನೂತನ ಶಾಖಾ ಕಚೇರಿಯನ್ನು ತೆರೆಯುವ ಯೋಜನೆಯನ್ನು ಹೊಂದಿದೆ ಎಂದು ಸಂಘದ ಅಧ್ಯಕ್ಷ ಕೆ.ವಿ. ಪ್ರಸಾದ ತಿಳಿಸಿದರು.


ಉಪ್ಪಿನಂಗಡಿಯಲ್ಲಿರುವ ಸಂಘದ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, 7.80 ಕೋಟಿ ಶೇರು ಬಂಡವಾಳವನ್ನು ಸಂಘವು ಸಂಗ್ರಹಿಸಿದೆ. ವರದಿ ಸಾಲಿನಲ್ಲಿ 84.36 ಕೋಟಿ ಠೇವಣಿ ಹೊಂದಿದ್ದು, 115.28 ಕೋಟಿ ರೂ. ಸಾಲ ವಿತರಿಸಿದೆ. ವರ್ಷಾಂತ್ಯದಲ್ಲಿ ಶೇ. 98.31 ಸಾಲ ವಸೂಲಾತಿ ಆಗಿದ್ದು, ಸಂಘದ ಕಾಯ್ದಿಟ್ಟ ನಿಧಿ ಮತ್ತು ಇತರ ನಿಧಿಗಳು 12.41 ಕೋಟಿ ಇದೆ. ಸಂಘವು ಒಟ್ಟು 141.02 ಲಕ್ಷ ಸ್ಥಿರಾಸ್ತಿಯನ್ನು ಹೊಂದಿದೆ. ಸಂಘವು ವಾರ್ಷಿಕ 485 ಕೋಟಿ ವ್ಯವಹಾರ ಮಾಡಿದ್ದು, ಆಡಿಟ್ ವರ್ಗೀಕರಣದಲ್ಲಿ ಸತತ “ಎ” ಗ್ರೇಡನ್ನು ಪಡೆಯುತ್ತಾ ಬಂದಿದೆ. ಸೆ.24ರಂದು ಸಂಘದ ಮಹಾಸಭೆ ನಡೆಯಲಿದ್ದು, ಈ ಬಾರಿ ಶೇ.13 ಡಿವಿಡೆಂಟ್ ನೀಡುವಂತೆ ಮಹಾಸಭೆಗೆ ಶಿಫಾರಸ್ಸು ಮಾಡಲಾಗುತ್ತದೆ ಎಂದ ಅವರು, “ಸುವರ್ಣ ಸಂಗಮ ನಿಧಿ” ಯೋಜನೆಯಂತೆ ಮೃತಪಟ್ಟ ಸದಸ್ಯರ ವಾರೀಸುದಾರರಿಗೆ 20 ಸಾವಿರ ರೂ. ನೀಡಲಾಗುತ್ತಿದೆ. ಸಂಘದ ಕೃಷಿ ಸಾಲಗಾರರನ್ನು “ಪಾಯಸ್” (ವೈಯಕ್ತಿಕ ಅಪಘಾತ ವಿಮೆ) ವಿಮಾ ಮತ್ತು ಹವಾಮಾನ ಆಧಾರಿತ ವಿಮಾ ಯೋಜನೆಗೆ ಒಳಪಡಿಸಲಾಗಿದೆ. ‘ವಿದ್ಯಾಶ್ರೀ’ ಎಂಬ ಯೋಜನೆಯಡಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸಂಘದ ಕಾರ್ಯವ್ಯಾಪ್ತಿಯ ಬಿಪಿಎಲ್ ಪಡಿತರದಾರ ಎಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಹಾಗೂ ಅತ್ಯಧಿಕ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ ಎಂದರು.


ಎಲ್ಲಾ ರಸಗೊಬ್ಬರ ಉತ್ಪಾದಕ ಕಂಪೆನಿಗಳ ಡೀಲರ್‌ಶಿಪ್ ಪಡಕೊಂಡು ರಖಂ ನೆಲೆಯಲ್ಲಿ ಜಿಲ್ಯಾದ್ಯಂತ ಸ್ಪರ್ಧಾತ್ಮಕ ದರದಲ್ಲಿ ರಸಗೊಬ್ಬರಗಳನ್ನು ಪೂರೈಕೆ ಮಾಡುತ್ತಿರುವ ಏಕೈಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಎಂಬ ಹೆಗ್ಗಳಿಕೆ ನಮ್ಮ ಸಂಘದ್ದು ಆಗಿದ್ದು, ಸಂಘದ ಮುಖ್ಯ ಕಚೇರಿಯ ಸಮೀಪ ಇಳಂತಿಲ ಗ್ರಾಮದಲ್ಲಿ 0.20 ಎಕ್ರೆ ಜಾಗದಲ್ಲಿ ವಿಸ್ತೃತ ಗೋದಾಮು ಕಟ್ಟಡವನ್ನು ಕಟ್ಟಿದ್ದು, ಅದೀಗ ಕಾರ್ಯನಿರ್ವಹಿಸುತ್ತಿದೆ. ಸಂಘದ ಪ್ರಧಾನ ಕಚೇರಿಯ ಕೆಳಭಾಗದಲ್ಲಿ ಇನ್ನು ಕೆಲದಿನಗಳ ದಿನ ಬಳಕೆ ವಸ್ತುಗಳ ಸಹಕಾರಿ ಮಾರಾಟ ಕೇಂದ್ರವನ್ನು ಪ್ರಾರಂಭಿಸಲಿದ್ದೇವೆ. ಸಂಘದಲ್ಲಿ ಈಗಾಗಲೇ ಪಹಣಿ ಪತ್ರ (ಆರ್.ಟಿ.ಸಿ.) ಮತ್ತು ಇ-ಸ್ಟಾಂಪಿಂಗ್ ಸೌಲಭ್ಯ ನೀಡಲಾಗುತ್ತಿದ್ದು, ಚಿನ್ನಾಭರಣ ಪರಿಶುದ್ಧತೆಯನ್ನು ತಿಳಿಸುವ ಆತ್ಯಾಧುನಿಕ ತಂತ್ರಜ್ಞಾನದ ಚಿನ್ನಾಭರಣ ಪರಿಶುದ್ಧತೆ ಪರಿಶೀಲನಾ ಯಂತ್ರ ಹೊಂದಿದೆ. ಸದಸ್ಯರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದ್ದು, ಆರ್.ಟಿ.ಜಿ.ಎಸ್./ನೆಫ್ಟ್ ಹಾಗೂ ಸೇಫ್ ಲಾಕರ್ ವ್ಯವಸ್ಥೆಯನ್ನೂ ಸಂಘವು ಹೊಂದಿದೆ ಎಂದರು.


ವರದಿ ಸಾಲಿನಲ್ಲಿ ಸಂಘವು ಪ್ರಾರಂಭವಾಗಿ 75 ವರ್ಷ ಆಗಿರುದರಿಂದ ವರ್ಷ ಪೂರ್ತಿ ಜನಸ್ನೇಹಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಹಕಾರಿ ಕ್ಷೇತ್ರ ಸೇರಿದಂತೆ ಇತರ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಿ, ಗೌರವಿಸಲಾಗಿದೆ. ಅಮೃತ ಮಹೋತ್ಸವದ ಸಮಾರೋಪ ಸಮಾರಂಭವನ್ನು ಮುಂದಿನ ಕೆಲ ದಿನಗಳಲ್ಲಿ ಮಾಡುವ ಯೋಚನೆಯಿದೆ. 69ನೇ ಅನಿಲ ಭಾರತ ಸಹಕಾರ ಸಪ್ತಾಹ-2022ರ ಸಮಾರೋಪ ಸಮಾರಂಭವನ್ನು ಉಪ್ಪಿನಂಗಡಿಯಲ್ಲಿ ಯಶಸ್ವಿಯಾಗಿ ಆಯೋಜಿಸಲಾಗಿದೆ. 2022-23ನೇ ಸಾಲಿನಲ್ಲಿ ಸಂಘವು ಸಾಧಿಸಿದ ಗಣನೀಯ ಪ್ರಗತಿಗಾಗಿ ಸತತ 4ನೇ ಬಾರಿಗೆ ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಪ್ರಶಸ್ತಿಯನ್ನು ಪಡೆದಿದೆ ಎಂದ ಅವರು, ಸಂಘದ ಬಜತ್ತೂರು ಶಾಖಾ ಕಟ್ಟಡದ ಜಾಗವು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಭೂ ಸ್ವಾಧೀನವಾಗಿ ಹೋಗಿದ್ದು, ಅದರ ಸಮೀಪದಲ್ಲಿರುವ ಜಾಗದಲ್ಲಿ ಅಂದಾಜು 1.67 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಶಾಖಾ ಕಟ್ಟಡವನ್ನು ಕಟ್ಟುವ ಯೋಜನೆಯಿದೆ. ಸಂಘದ ಆಡಳಿತ ಮಂಡಳಿ ಸದಸ್ಯರ ಸಲಹೆ ಸೂಚನೆ, ನೌಕರರ ಪರಿಶ್ರಮ ಹಾಗೂ ಸದಸ್ಯರ ಮತ್ತು ಗ್ರಾಹಕರ ಉತ್ತಮ ಸ್ಪಂದನೆಯಿAದ ಸಂಘದ ಈ ಸಾಧನೆಗಳು ಸಾಧ್ಯವಾಗಿದೆ ಎಂದರು.


ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷರಾದ ಸುನಿಲ್ ಕುಮಾರ್ ದಡ್ಡು ಹಾಗೂ ನಿರ್ದೇಶಕರಾದ ಯತೀಶ್ ಶೆಟ್ಟಿ ಯು., ಎಂ. ಜಗದೀಶ ರಾವ್, ದಯಾನಂದ ಎಸ್., ಶ್ರೀ ರಾಮ ನಾಯ್ಕ, ಶ್ರೀಮತಿ ಶ್ಯಾಮಲ ಶೆಣೈ, ರಾಜೇಶ್, ಕುಂಞ ಎನ್., ಸಚಿನ್ ಎಂ., ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಕ್ಲೇರಿ ವೇಗಸ್ ಉಪಸ್ಥಿತರಿದ್ದರು.


ರಾಜ್ಯ ಸಹಕಾರಿ ಸಂಘಗಳ ನಿಬಂಧಕರು 2017 ರಲ್ಲಿ ಹೊರಡಿಸಿದ ಆದೇಶದ ಮುಂದುವರಿದ ಭಾಗದಲ್ಲಿ ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಹಕಾರಿ ಸಂಘಗಳನ್ನು ರಚಿಸಬೇಕೆಂದು ಸೂಚಿಸಿದ್ದು, ಸದ್ರಿ ಆದೇಶದಲ್ಲಿನ ತರಾತುರಿಯ ಅನುಷ್ಠಾನ ನಮ್ಮ ಸಂಘದ ಹಿತಾಸಕ್ತಿಗೆ ಸಮಸ್ಯಾತ್ಮಕವಾಗಲಿದೆ ಎಂದು ನಾವು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದೇವೆ. ಅದು ಬಿಟ್ಟು ಕೇಂದ್ರ ಸರಕಾರದ ಸಹಕಾರಿ ಸಚಿವ ಅಮಿತ್ ಶಾ ರವರ ಯಾವುದೇ ಆದೇಶಕ್ಕೆ ತಡೆಯಾಜ್ಞೆ ತಂದಿಲ್ಲ. ಆದರೆ ಕೆಲವು ಮಾಧ್ಯಮಗಳು ಈ ಬಗ್ಗೆ ಸಮರ್ಪಕ ಅಧ್ಯಯನ ನಡೆಸದೆ ಕೇಂದ್ರ ಸರಕಾರಕ್ಕೆ ಸಡ್ಡು ಹೊಡೆದ ಸಹಕಾರ ಭಾರತಿಗರು ಎಂದೆಲ್ಲಾ ತಪ್ಪು ಅರ್ಥ ಮೂಡಿಸಿದ ವರದಿಗಳನ್ನು ಪ್ರಕಟಿಸಿರುವುದು ವಿಷಾದನೀಯ ಎಂದರು.

LEAVE A REPLY

Please enter your comment!
Please enter your name here