ಸಂಘ ಕೆಲವೇ ತಿಂಗಳಲ್ಲಿ ವಿಸ್ತೃತ ಸ್ವಂತ ಕಟ್ಟಡಕ್ಕೆ ಸ್ಥಳಾಂತರ: ಸೌಂದರ್ಯ ಪಿ.ಮಂಜಪ್ಪ
ಪುತ್ತೂರು: ಬೆಂಗಳೂರಿನ ಹಾವನೂರು ಬಡಾವಣೆಯ ಹೆಸರಘಟ್ಟ ಮುಖ್ಯರಸ್ತೆಯ ಸೌಂದರ್ಯ ಆರ್ಕೆಡ್ ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ, ಪುತ್ತೂರಿನ
ಎಸ್‌ಬಿಬಿ ಸೆಂಟರ್ ನಲ್ಲಿ ಶಾಖೆಯನ್ನು ಹೊಂದಿರುವ ಸೌಂದರ್ಯ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಲಿಮಿಟೆಡ್ ನ 2022-23ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ.10ರಂದು ಬೆಂಗಳೂರಿನ ಹಾವನೂರು ಬಡಾವಣೆಯಲ್ಲಿರುವ ಸೌಂದರ್ಯ ಶಾಲೆಯ ಆವರಣದಲ್ಲಿ ನಡೆಯಿತು.
ಸಹಕಾರಿಯ ಅಧ್ಯಕ್ಷರಾದ ಸೌಂದರ್ಯ ಪಿ.ಮಂಜಪ್ಪರವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿ ಸಹಕಾರ ಸಂಘದ ಪ್ರಧಾನ ಕಚೇರಿಗೆ 2,400 ಚದರ ಅಡಿ ವಿಸ್ತೀರ್ಣದ ಜಾಗದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗುತ್ತಿದ್ದು, ಕೆಲವೇ ತಿಂಗಳಲ್ಲಿ ಉದ್ಘಾಟನೆಗೊಳ್ಳಲಿದೆ. 8 ವರ್ಷಗಳ ಹಿಂದೆ 20 ಲಕ್ಷ ಷೇರು ಬಂಡವಾಳದಲ್ಲಿ ಪ್ರಾರಂಭವಾದ ಸಹಕಾರಿಯು ಪ್ರಸ್ತುತ 200 ಕೋಟಿಯಷ್ಟು ವ್ಯವಹಾರ ನಡೆಸಿ 2.98 ಕೋಟಿ ನಿವ್ವಳ ಲಾಭಗಳಿಸಿದೆ. ಸದಸ್ಯರಿಗೆ 17% ಡಿವಿಡೆಂಡ್ ನೀಡಲಾಗುವುದು. ಕೋರ್ ಬ್ಯಾಂಕಿಂಗ್ ಸೌಲಭ್ಯ ಹೊಂದಿರುವ ಸಂಪೂರ್ಣ ಗಣಕೀಕೃತ ಸಹಕಾರಿ ಸಂಸ್ಥೆ ನಮ್ಮದಾಗಿದೆ. ಸದಸ್ಯರ ಆರೋಗ್ಯದ ಕಾಳಜಿಯಿಂದ ಈಗಾಗಲೇ ಪ್ರಧಾನ ಕಚೇರಿ ಬಳಿ ಡಯೋಗ್ನೊಸ್ಟಿಕ್ ಸೆಂಟರ್ ಕಾರ್ಯ ನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಸುಸಜ್ಜಿತ ಆಸ್ಪತ್ರೆ ಪ್ರಾರಂಭಿಸುವ ಯೋಚನೆ ಇದೆ ಎಂದರು.
ವ್ಯವಸ್ಥಾಪಕ ನಿರ್ದೇಶಕರಾದ ಕೆ.ಕೃಷ್ಣಶೆಟ್ಟಿರವರು ಮಾತನಾಡಿ ನೂರಾರು ವರ್ಷಗಳ ಇತಿಹಾಸ ಹೊಂದಿರುವ ಸಹಕಾರಿ ಕ್ಷೇತ್ರ ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ಬಹುಮುಖ್ಯ ಪಾತ್ರ ವಹಿಸಿದೆ. ಬೆರಳೆಣಿಕೆಯಷ್ಟು ಸಹಕಾರಿಗಳು ಸಮಸ್ಯಾತ್ಮಕವಾಗಿ ಕಾರ್ಯ ನಿರ್ವಹಿಸಿರುವುದು ಸತ್ಯದ ಸಂಗತಿ. ಆದರೆ ಅದನ್ನು ಎಲ್ಲಾ ಸಹಕಾರಿಗಳಿಗೆ ಅನ್ವಯಿಸುವುದು ತಪ್ಪು. ಸಹಕಾರಿ ಕ್ಷೇತ್ರದಿಂದ ಕೋಟ್ಯಂತರ ಜನರು ಹಲವು ರೀತಿಯ ಪ್ರಯೋಜನಗಳನ್ನು ಪಡೆದು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ ಎಂದರು.
ಕೋ ಅಪರೇಟೀವ್ ಸೊಸೈಟಿಗಳ ಸಂಘಟನೆಯ ರಾಜ್ಯ ಅಧ್ಯಕ್ಷ ವೈ.ಕುಮಾರ್ ಮಾತನಾಡಿ, ಸೌಂದರ್ಯ ಸಹಕಾರಿಯು ರಾಜ್ಯದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಸಾವಿರಕ್ಕೂ ಹೆಚ್ಚು ಸಹಕಾರಿಗಳಲ್ಲಿ ಒಂದಾಗಿದೆ ಎಂದು ಹೇಳಿ ಸಹಕಾರಿಯ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಇದೇ ಸಂದರ್ಭದಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಉಪಾಧ್ಯಕ್ಷರಾದ ಸುನಿತಾ ಎಂ.,ನಿರ್ದೇಶಕರಾದ ಕೀರ್ತನ್‌ಕುಮಾರ್ ಎಂ., ಸುರೇಶ್ ಸಿ.ಹೆಗಡಿ, ಚಿನ್ನಮ್ಮ ಪಿ.ಪಿ., ಪ್ರತೀಕ್ಷಾ ಕೀರ್ತನ್, ವರುಣ್ ಕುಮಾರ್ ಎಂ., ಕೇಶವ್ ಎಸ್., ಅರುಣ್ ಕುಮಾರ್ ಹೆಚ್, ರಾಜಶೇಖರಮೂರ್ತಿ ಹೆಚ್.ಎಂ., ಮಂಜುನಾಥ ಭಟ್, ಪುತ್ತೂರು ಶಾಖಾ ಸಹಾಯಕ ವ್ಯವಸ್ಥಾಪಕರಾದ ಸುಧೀರ್ ಬಿ. ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಹಕಾರಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಹೇಮಂತ ಬಿ.ವಿ. ವರದಿವಾಚಿಸಿದರು. ನಿರ್ದೇಶಕರಾದ ರಜನಿ ಪಿ. ಸೂರಿ ಪ್ರಾರ್ಥನೆ ಹಾಡಿದರು. ರೇವತಿ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ನೆಲಮಂಗಲ ಶಾಖಾ ವ್ಯವಸ್ಥಾಪಕ ಮಹಾಂತೇಶ್ ವಂದಿಸಿದರು.
ಪುತ್ತೂರು ಶಾಖೆಯಲ್ಲಿ ರೂ.31,64,598 ಲಕ್ಷ ಲಾಭ
ಪುತ್ತೂರು ಶಾಖೆಯಲ್ಲಿ ಒಟ್ಟು 1134ಸದಸ್ಯರಿದ್ದು 12,27,19,164 ರೂಪಾಯಿ ಠೇವಣಿ ಇದೆ. 10,09,94,744 ರೂಪಾಯಿ ಹೊರಬಾಕಿ ಸಾಲವಿದೆ. ಒಟ್ಟು 82 ಕೋಟಿ ರೂಪಾಯಿಯ ವ್ಯವಹಾರ ನಡೆಸಿ 31,64,598 ರೂಪಾಯಿ ಲಾಭಗಳಿಸಿದೆ. ಪುತ್ತೂರು ಶಾಖೆಯ ಸದಸ್ಯರಾದ ಪುಷ್ಪಾ ಎಸ್. ಕೆದಿಲಾಯರ ಪುತ್ರಿ ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಸಂಗಿನಿ ಹೆಚ್. ಕೆದಿಲಾಯ ಹಾಗೂ ಶಾಖೆಯ ಸದಸ್ಯರಾದ ಲತಾರವರ ಪುತ್ರಿ ಎಸ್.ಎಸ್.ಎಲ್.ಸಿ.ಯಲ್ಲಿ ಹೆಚ್ಚಿನ ಅಂಕಗಳಿಸಿದ ಅಶ್ವಿತಾ ಎ.ರವರಿಗೆ ಪ್ರತಿಭಾ ಪುರಸ್ಕಾರ ನೀಡಲಾಗಿದೆ. ಪುತ್ತೂರು ಶಾಖಾ ವ್ಯವಸ್ಥಾಪಕರಾಗಿ ಶ್ಯಾಮಲ ಕೆ., ಸಹಾಯಕ ವ್ಯವಸ್ಥಾಪಕರಾದ ಸುಧೀರ್ ಬಿ., ಸಿಬ್ಬಂದಿಗಳಾಗಿ ಪ್ರಿಯದರ್ಶಿನಿ ನಿಶಾಕಿರಣ್, ಜಿನಿತ್ ಕೆ.ಕೆ. ಕರ್ತವ್ಯ ನಿರ್ವಹಿಸುತ್ತಿದ್ದಾರೆ.