ಕೇರಳದಲ್ಲಿ ನಿಫಾ ವೈರಸ್- ದ.ಕ.ದ ಗಡಿ ಭಾಗದಲ್ಲಿ ವಿಶೇಷ ನಿಗಾ

0

ಮಂಗಳೂರು: ಕೇರಳದಲ್ಲಿ ನಿಫಾ ವೈರಸ್ ದೃಢಪಟ್ಟಿದ್ದು, ಕೇರಳಕ್ಕೆ ಹೊಂದಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಪ್ರದೇಶದಲ್ಲಿ ವಿಶೇಷ ನಿಗಾ ಇಡಲಾಗಿದೆ.
ಜಿಲ್ಲೆಯಲ್ಲಿ ಜ್ವರ ಸಮೀಕ್ಷೆ ನಡೆಸಲು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸೂಚನೆ ನೀಡಲಾಗಿದ್ದು, ವೆನ್ಲಾಕ್ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ನಿಫಾ ಐಸೋಲೇಶನ್ ವಾರ್ಡ್ ಮೀಸಲಿಗೆ ಸೂಚಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪ್ರಭಾರ ಆರೋಗ್ಯಾಧಿಕಾರಿ ಡಾ. ಸುದರ್ಶನ್ ಹೇಳಿದರು.
ಸರ್ವೇಕ್ಷಣಾಧಿಕಾರಿ ನವೀನ್ ಚಂದ್ರ ಕುಲಾಲ್ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.


ಕಂಟೈನ್ಮೆಂಟ್ ವಲಯ ಘೋಷಿಸಿದ ಕೇರಳ ಸರಕಾರ :
ನಿಫಾ ವೈರಸ್ ಸೋಂಕಿನಿಂದ ಇಬ್ಬರು ಮೃತಪಟ್ಟ ಬಳಿಕ ಕೋಝಿಕ್ಕೋಡಿನ 7 ಗ್ರಾಮಗಳನ್ನು ಕಂಟೈನ್ಮೆಂಟ್ ವಲಯ ಎಂದು ಕೇರಳ ಸರಕಾರ ಘೋಷಿಸಿದೆ.
ಅಟಂಚೇರಿ, ಮರುತೊಂಕರಾ, ತಿರುವಳ್ಳೂರ್, ಕುಟ್ಟಿಯಾಡಿ, ಕಾಯಕ್ಕೋಡಿ, ವಿಲ್ಯಪಳ್ಳಿ ಹಾಗೂ ಕವಿಲುಂಪಾರ ಕಂಟೈನ್ಮೆಂಟ್ ವಲಯಗಳೆಂದು ಘೋಷಿಸಲಾದ ಗ್ರಾಮಗಳಾಗಿದ್ದು ಮುಂದಿನ ನೋಟೀಸ್ ನೀಡುವವರೆಗೆ ಈ ಕಂಟೈನ್ಮೆಂಟ್ ವಲಯದ ಒಳಗೆ ಹಾಗೂ ಹೊರಗೆ ಪ್ರಯಾಣಿಸಲು ಅವಕಾಶವಿಲ್ಲ.ಈ ಪ್ರದೇಶಗಳನ್ನು ಸುತ್ತುವರಿಯುವಂತೆ ಪೊಲೀಸರಿಗೆ ಸೂಚಿಸಲಾಗಿದೆ ಎಂದು ಕೋಝಿಕ್ಕೋಡ್ ಜಿಲ್ಲಾಧಿಕಾರಿ ಎ.ಗೀತಾ ತಿಳಿಸಿದ್ದಾರೆ.ಕೇರಳದಲ್ಲಿ ಪತ್ತೆಯಾದ ನಿಫಾ ವೈರಸ್ ಬಾಂಗ್ಲಾದೇಶದ ಪ್ರಭೇದ.ಇದು ಮಾನವನಿಂದ ಮಾನವನಿಗೆ ಹರಡುತ್ತದೆ.ಈ ವೈರಸ್ ಕಡಿಮೆ ಸಾಂಕ್ರಾಮಿಕವಾಗಿದ್ದರೂ ಅತ್ಯಧಿಕ ಮರಣಕ್ಕೆ ಕಾರಣವಾಗುತ್ತದೆ ಎಂದು ಕೇರಳ ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.


ಕೇರಳದಲ್ಲಿ ನಿಫಾ ವೈರಸ್
ಬ್ರೈನ್ ಫೀವರ್, ನಿಫಾ ಲಕ್ಷಣ ಕಂಡುಬಂದರೆ ಸೂಚನೆ ನೀಡುವಂತೆ ಖಾಸಗಿ ವೈದ್ಯಕೀಯ ಕಾಲೇಜು, ಆಸ್ಪತ್ರೆಗಳಿಗೂ ನಿರ್ದೇಶನ ನೀಡಲಾಗಿದೆ. ದ.ಕ. ಜಿಲ್ಲೆಯಲ್ಲಿ ಈವರೆಗೆ ಯಾವುದೇ ನಿಫಾ ವೈರಸ್ ಪ್ರಕರಣ ದೃಢಪಟ್ಟಿಲ್ಲ. ಆದರೂ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ಜಿಲ್ಲೆಯಲ್ಲಿ ಯಾವುದೇ ರೀತಿಯ ಔಷಧ ಕೊರತೆ ಇಲ್ಲ. ನಿಫಾ ವೈರಸ್ ಲಕ್ಷಣ ಕಂಡು ಬಂದರೆ ಅವರ ರಕ್ತದ ಮಾದರಿಯನ್ನು ಪುಣೆಯಲ್ಲಿರುವ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ ಎಂದು ಡಿ.ಎಚ್.ಓ ತಿಳಿಸಿದರು.

LEAVE A REPLY

Please enter your comment!
Please enter your name here