-ಸಂತೋಷ್ ಮೊಟ್ಟೆತ್ತಡ್ಕ
ಪುತ್ತೂರು: ಹಲವಾರು ವರ್ಷಗಳ ಬಳಿಕ ಕೊಂಕಣಿ ಭಾಷೆ, ಕೊಂಕಣಿ ಭಾಷೆ ಎಲ್ಲಿಂದ ಹುಟ್ಟಿಕೊಂಡಿತು, ಕೊಂಕಣಿ ಭಾಷೆಯ ಸಂಸ್ಕೃತಿ ಹಾಗೂ ಹಾದಿ ಹೀಗೆ ಕೊಂಕಣಿ ಭಾಷೆಯ ಬಗ್ಗೆ ಮೆಚ್ಚುಗೆಯನ್ನು ಪುನರುಜ್ಜೀವನಗೊಳಿಸುವ ಉದ್ದೇಶ ಹೊಂದಿರುವ ಕೊಂಕಣಿ ಸಿನೆಮಾ ‘ಆಸ್ಮಿತಾಯ್ ಸೆ.15 ರಂದು ಮಂಗಳೂರು, ಉಡುಪಿ ಹಾಗೂ ಪುತ್ತೂರಿನ ಭಾರತ್ ಸಿನೆಮಾಸ್‌ನಲ್ಲಿ ಏಕಕಾಲದಲ್ಲಿ ತೆರೆಕಾಣಲಿದೆ.
ಕಿವಿಗಿಂಪಾಗಿಸುವ ಆರು ಹಾಡುಗಳು, ಭಾವನೆಗಳು, ಆಕ್ಷನ್, ಹಾಸ್ಯ ಮತ್ತು ಗಂಭೀರತೆ ಒಳಗೊಂಡ ಸಂಪೂರ್ಣ ಪ್ಯಾಕೇಜ್‌ವುಳ್ಳ ಸಿನೆಮಾ ಇದಾಗಿದ್ದು ಕೊಂಕಣಿಯ ಪ್ರಮುಖ ಸಾಂಸ್ಕೃತಿಕ ಸಂಸ್ಥೆ ಮಾಂಡ್ ಸೊಭಾಣ್ ಪ್ರೊಡಕ್ಷನ್ಸ್ ಬ್ಯಾನರ್‌ನಡಿಯಲ್ಲಿ ಪ್ರಥಮ ಬಾರಿಗೆ ನಿರ್ಮಿಸಲ್ಪಟ್ಟಿದೆ ಮಾತ್ರವಲ್ಲ ಕೊಂಕಣಿ ಐಡೆಂಟಿಟಿಯ ಹುಡುಕಾಟದಲ್ಲಿ(ಇನ್ ಸರ್ಚ್ ಆಫ್ ಕೊಂಕಣಿ ಐಡೆಂಟಿಟಿ) ಎಂಬ ಟ್ಯಾಗ್‌ಲೈನ್‌ನೊಂದಿಗೆ ಈ ಚಿತ್ರವು ಮೂಡಿ ಬಂದಿದೆ.
ಪ್ರೀಮಿಯರ್ ಶೋಗೆ ಉತ್ತಮ ಪ್ರತಿಕ್ರಿಯೆ:
ಸೆ.10 ರಂದು ಮಂಗಳೂರು, ಉಡುಪಿಯ ಭಾರತ್ ಸಿನೆಮಾಸ್‌ನಲ್ಲಿ ಹಾಗೂ ಪುತ್ತೂರಿನ ಜಿ.ಎಲ್ ಮಾಲ್‌ನಲ್ಲಿನ ಭಾರತ್ ಸಿನೆಮಾಸ್‌ನಲ್ಲಿ ಪ್ರದರ್ಶನಗೊಂಡ ಚಿತ್ರದ ಪ್ರೀಮಿಯರ್ ಶೋ ಹೌಸ್‌ಫುಲ್ ಪ್ರದರ್ಶನ ಕಂಡಿದ್ದು ಚಿತ್ರವನ್ನು ವೀಕ್ಷಿಸಿದ ಸಿನಿರಸಕರಿಂದ ಪ್ರಶಂಸೆ ವ್ಯಕ್ತವಾಗಿದೆ. ಪ್ರೇಮದ ಮೂಲಕ, ಕೊಂಕಣಿ ಅಸ್ಮಿತೆಯ ಹುಡುಕಾಟದ ಬಗೆಗಿನ ‘ಆಸ್ಮಿತಾಯ್’ ಚಿತ್ರದ ಕಥೆಯನ್ನು ಬರಹಗಾರ ಹಾಗೂ ಹಾಡುಗಾರ ಎರಿಕ್ ಓಜಾರಿಯೊರವರು ಬರೆದಿದ್ದು ಜೋಯೆಲ್ ಪಿರೇರಾರವರು ಚಿತ್ರಕಥೆ ಹೆಣೆದಿರುವುದರೊಂದಿಗೆ ಸಹ ನಿರ್ದೇಶಕರಾಗಿ ಸೇವೆ ನೀಡಿದ್ದಾರೆ. ಅನೇಕ ಘಟಾನುಘಟಿಗಳು ಚಿತ್ರದ ಹಿಂದೆ ಕೆಲಸ ಮಾಡಿದ್ದು ಚಿತ್ರಕ್ಕೆ ನಿರ್ದೇಶಕ ವಿಲಾಸ್ ರತ್ನಾಕರ್ ಕ್ಷತ್ರಿಯರವರು ಆಕ್ಷನ್ ಕಟ್ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಚಿತ್ರವು ಬೆಂಗಳೂರು, ಗೋವಾ, ಮುಂಬಯಿ, ಯುಎಇ, ಜರ್ಮನಿ, ಇಸ್ರಾಯೆಲ್, ಓಮನ್, ಬಾಹ್ರೇಯ್ನ್, ಕತಾರ್, ಕುವೈಟ್‌ನಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಚಿತ್ರತಂಡ ತಿಳಿಸಿದೆ.
ಪುತ್ತೂರಿನಲ್ಲಿ ಸಂಜೆ 5.30 ಗಂಟೆಗೆ ಶೋ…
ಸೆ.15 ರಿಂದ ಪುತ್ತೂರಿನ ಭಾರತ್ ಸಿನೆಮಾಸ್ ಸೇರಿದಂತೆ ಮಂಗಳೂರು, ಪಡುಬಿದ್ರಿ, ಮಣಿಪಾಲ, ಬೆಳ್ತಂಗಡಿ, ಸುರತ್ಕಲ್, ಉಡುಪಿ, ಹೊನ್ನಾವರ ಮುಂತಾದೆಡೆ ಸಿನೆಮಾ ಪ್ರದರ್ಶನಗೊಳ್ಳುತ್ತಿದ್ದು ಪುತ್ತೂರಿನಲ್ಲಿ ಸಂಜೆ 5.30 ಗಂಟೆಗೆ ಚಿತ್ರವು ಪ್ರದರ್ಶನಗೊಳ್ಳಲಿದೆ. ಕೆಲವೊಮ್ಮೆ ಇತರ ಚಿತ್ರಗಳ ಪ್ರದರ್ಶನದ ಹಿನ್ನೆಲೆಯಲ್ಲಿ ಚಿತ್ರದ ಸಮಯದಲ್ಲಿ ಬದಲಾವಣೆಗೊಳ್ಳಲಿದ್ದು ಸಿನಿ ಪ್ರೇಕ್ಷಕರು ‘ಸುದ್ದಿ ಪತ್ರಿಕೆ’ಯಲ್ಲಿ ನೀಡುವ ಸಮಯದ ಬದಲಾವಣೆಯನ್ನು ಗಮನಿಸಬೇಕಾಗುತ್ತದೆ. ಪುತ್ತೂರು, ಸುಳ್ಯ, ಉಪ್ಪಿನಂಗಡಿ ಹೀಗೆ ನೆರೆಯ ಕೊಂಕಣಿ ಭಾಷಿಗರು ಈ ಚಿತ್ರವನ್ನು ವೀಕ್ಷಿಸಿ ಚಿತ್ರತಂಡಕ್ಕೆ ಪ್ರೋತ್ಸಾಹ ನೀಡಬೇಕಿದೆ ಎಂದು ಆಸ್ಮಿತಾಯ್ ಚಿತ್ರತಂಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.