ಪುತ್ತೂರು:ವೃತ್ತಿಪರ ಇಂಜಿನಿಯರ್‌ಗಳಿಗೆ ಸಹಕಾರ ನೀಡುವುದು, ಕಾಮಗಾರಿಯಲ್ಲಿ ಗುಣಮಟ್ಟ ವೃದ್ಧಿಸುವ ನಿಟ್ಟಿನಲ್ಲಿ ಹೊಸ ಹೊಸ ತಂತ್ರಜ್ಞಾನಗಳನ್ನು ಪರಿಚಯಿಸಲು ಹುಟ್ಟಿಕೊಂಡ ರಾಷ್ಟ್ರೀಯ ಸಂಸ್ಥೆಯಾಗಿರುವ ಎಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂನಿಜಿಯರ್‍ಸ್‌ನ ಪುತ್ತೂರು ಕೇಂದ್ರದ ಉದ್ಘಾಟನೆ ಹಾಗೂ ಪದಪ್ರದಾನ ಸಮಾರಂಭವು ಸೆ.17ರಂದು ಸಂಜೆ ಪಡೀಲು ಎಂಡಿಎಸ್ ಟ್ರಿನಿಟಿ ಹಾಲ್‌ನಲ್ಲಿ ನಡೆಯಲಿದೆ ಎಂದು ಪುತ್ತೂರು ಕೇಂದ್ರದ ಅಧ್ಯಕ್ಷ ಪ್ರಮೋದ್ ಕುಮಾರ್ ಕೆ.ಕೆ ಹೇಳಿದರು.
ಸೆ.14ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1985ರಲ್ಲಿ ಬೆಂಗಳೂರಿನಲ್ಲಿ ಎಸೋಸಿಯೇಶನ್ ಆಫ್ ಸ್ಟ್ರಕ್ಚರಲ್ ಇಂಜಿನಿಯರ್‍ಸ್ ಎಂದು ಬೆಂಗಳೂರಿನ ಇಂಜಿನಿಯರ್‍ಸ್‌ಗಳಿಂದ ಪ್ರಾರಂಭವಾದ ಈ ಸಂಸ್ಥೆ 1987ರಲ್ಲಿ ಎಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂನಿಜಿಯರ್‍ಸ್‌ನ ಮರು ನಾಮಕರಣಗೊಂಡಿದೆ. ಇದು ರಾಷ್ಟ್ರೀಯ ಸಂಸ್ಥೆಯಾಗಿದ್ದು ರಾಷ್ಟ್ರವ್ಯಾಪಿ ಈಗಾಗಲೇ ಸುಮಾರು 44 ಕೇಂದ್ರಗಳು ಕಾರ್ಯನಿರ್ವಹಿಸುತ್ತಿದೆ. ಜಿಲ್ಲೆಯಲ್ಲಿ ಮಂಗಳೂರು ಹಾಗೂ ಬೆಳ್ತಂಗಡಿಯಲ್ಲಿ ಈಗಾಗಲೇ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಇದೀಗ ಮೂರನೇ ಕೇಂದ್ರವಾಗಿ ಬೆಳ್ತಂಗಡಿ ಕೇಂದ್ರದಿಂದ ಪ್ರಯೊಜಿತಗೊಂಡಿರುವ ಪುತ್ತೂರು ಕೇಂದ್ರ ಪ್ರಾರಂಭವಾಗಲಿದೆ. ಇಲ್ಲಿ ಈಗಾಗಲೇ 45 ಸದಸ್ಯರು ಈಗಾಗಲೇ ನೋಂದಾಯಿಸಿಕೊಂಡಿದ್ದಾರೆ. ಪುತ್ತೂರು ಕೇಂದ್ರವು ಪುತ್ತೂರು, ಸುಳ್ಯ, ಕಡಬ ಹಾಗೂ ಬಂಟ್ವಾಳ ತಾಲೂಕಿನ ವಿಟ್ಲ ಭಾಗಗಳನ್ನು ಒಳಗೊಂಡಿದೆ.
ಸಿವಿಲ್ ಇಂಜಿನಿಯರ್‍ಸ್‌ಗಳ ಧ್ಯೇಯೋದ್ದೇಶ, ವೃತ್ತಿ ಆದರ್ಶಗಳ ಬಗ್ಗೆ ಎಲ್ಲಾ ಸದಸ್ಯರಿಗೆ ಉತ್ತೇಜನ ನೀಡಿ ಆ ಮನೋಭಾವ ಬೆಳೆಸುವುದು. ಸಿವಿಲ್ ಇಂಜಿನಿಯರ್‍ಸ್ ಸಾಮಾಜಿಕ ಜವಾಬ್ದಾರಿಯನ್ನು ತಿಳಿಸುವುದು, ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡಲು ವಿಶ್ವವ್ಯಾಪಿಯಿರುವ ಹೊಸ ಹೊಸ ತಂತ್ರಜ್ಞಾನ, ಮಾನದಂಡಗಳನ್ನು ಪರಿಚಯಿಸುವುದೇ ಇದರ ಮುಖ್ಯ ಉದ್ದೇಶವಾಗಿದೆ. ಬಿಇ ಇಂಜಿನಿಯರ್ ಆದವರಿಗೆ ನೇರವಾಗಿ ಸದಸ್ಯತ್ವ ಪಡೆಯಬಹುದು. ಡಿಪ್ಲೋ ಆದವರಿಗೆ ಮೂರು ವರ್ಷದ ಸೇವಾನುಭವಹೊಂದಿರಬೇಕು. ಅಜೀವ ಸದಸ್ಯತ್ವ ಪಡೆಯಲು ಬಿಇ ಇಂಜಿನಿಯರಿಂಗ್ ಆದವರಿಗೆ 5 ವರ್ಷ ಹಾಗೂ ಡಿಪ್ಲೋಮ ಆದವರಿಗೆ 10 ವರ್ಷದ ಸೇವಾನುಭವ ಹೊಂದಿರಬೇಕು. ವಿದ್ಯಾರ್ಥಿಗಳಿಗೂ ಸದಸ್ಯತ್ವ ಪಡೆಯಲು ಅವಕಾಶವಿದ್ದು ಶಿಕ್ಷಣ ಸಂಸ್ಥೆಯವರು ತಿಳಿಸಿದಾಗ ಅಂತಹವರಿಗೆ ಶುಲ್ಕ ರಹಿತ ಸದಸ್ಯತ್ವ ನೀಡಲಾಗುವುದು. ಕೇಂದ್ರದ ಮೂಲಕ ಆನ್‌ಲೈನ್ ಕಾರ್ಯಕ್ರಮಗಳ ಮೂಲಕ ವೃತ್ತಿ ನೀತಿ, ನಿಯಮಗಳ ಪಾಲನೆ, ಗುಣಮಟ್ಟದ ವೃದ್ಧಿಗೆ ಹೊಸ ಹೊಸ ತಂತ್ರಜ್ಞಾನಗಳ ಪರಿಚಯ, ಅಧ್ಯಯನ ಪ್ರವಾಸಗಳು ಹಾಗೂ ವಿದ್ಯಾರ್ಥಿಗಳಿಗೆ ವೃತ್ತಿಯ ನಿರ್ದೇಶನಗಳನ್ನು ನೀಡಲಾಗುವುದು. ಪುತ್ತೂರು ಕೇಂದ್ರದ ಕಚೇರಿಯು ಸೈನಿಕ ಭವನ ರಸ್ತೆಯ ಸಾರಥಿ ಭವನ ಕಟ್ಟಡದಲ್ಲಿ ಕಾರ್ಯನಿರ್ವಹಿಸಲಿದೆ ಎಂದರು.
ಉದ್ಘಾಟನೆ, ಪದಪ್ರದಾನ:
ಪುತ್ತೂರು ಕೇಂದ್ರದ ಉದ್ಘಾಟನೆ ಹಾಗೂ ಪದಪ್ರದಾನ ಕಾರ್ಯಕ್ರಮದಲ್ಲಿ ಎಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂನಿಜಿಯರ್‍ಸ್‌ನ ರಾಷ್ಟ್ರೀಯ ಅಧ್ಯಕ್ಷ ವಿಜಯ್ ಕೆ ಸನಪ್ ಅಧ್ಯಕ್ಷತೆ ವಹಿಸಿ ನೂತನ ಪದಾಧಿಕಾರಿಗಳಿಗೆ ಪದಪ್ರದಾನ ನಡೆಸಿಕೊಡಲಿದ್ದಾರೆ. ಸಿವಿಲ್ ಇಂಜಿನಿಯರ್‌ನಲ್ಲಿ ಆವಿಷ್ಕಾರ ಹಾಗೂ ಸಾಧಕರಾಗಿರುವ ಮಾಸ್ಟರ್ ಪ್ಲಾನರಿಯ ಆನಂದ್ ಕುಮಾರ್ ಎಸ್.ಕೆಯವರನ್ನು ಸನ್ಮಾನಿಸಲಾಗುವುದು. ಮುಖ್ಯ ಅತಿಥಿಗಳಾಗಿ ಶಾಸಕ ಅಶೋಕ್ ಕುಮಾರ್ ರೈ, ಸುರತ್ಕಲ್ ಎನ್‌ಐಟಿಕೆಯ ಸಿವಿಲ್ ಇಂಜಿನಿಯರಿಂಗ್ ವಿಭಾದ ಡೀನ್ ಪ್ರೊಫೇಸರ್ ಡಾ.ಕೆ.ಎಸ್ ಬಾಬು ನಾರಾಯಣ್, ಲೋಕೋಪಯೋಗಿ ಇಲಾಖೆಯ ಮಂಗಳೂರು ವೃತ್ತ ಅಧೀಕ್ಷಕ ಇಂಜಿನಿಯರ್, ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲಾ ಇಂಜಿನಿಯರ್‍ಸ್ ಎಸೋಸಿಯೇಶನ್ ಅಧ್ಯಕ್ಷ ಗೋಕುಲ್‌ದಾಸ್, ಎಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂನಿಜಿಯರ್‍ಸ್‌ನ ಉಪಾಧ್ಯಕ್ಷರಾದ ಪುನೀತ್ ದಿನೇಶ್ ಚಂದ್ರ ರೈ, ಕಚಾರ್ಲ ರಾಜ್‌ಕುಮಾರ್ , ಕಾರ್ಯದರ್ಶಿ ರಾಜೇಂದ್ರ ಕಲ್ಬಾವಿ ರಾವ್, ಕೋಶಾಧಿಕಾರಿ ಆರ್. ಶ್ರೀನಿವಾಸನ್, ಮಾಜಿ ಕಾರ್ಯದರ್ಶಿ ವಿಜಯ ವಿಷ್ಣು ಮಯ್ಯ ಆಗಮಿಸಲಿದ್ದಾರೆ ಎಂದು ಅವರು ತಿಳಿಸಿದರು.
ಪುತ್ತೂರು ಕೇಂದ್ರದ ಕಾರ್ಯದರ್ಶಿ ವಿನೋದ್ ಕುಮಾರ್ ಕೆ., ಕೋಶಾಧಿಕಾರಿ ಚೇತನ್, ಸದಸ್ಯರಾದ ವೆಂಕಟ್‌ರಾಜ್ ಪಿ.ಜಿ ಹಾಗೂ ಪ್ರಸನ್ನ ದರ್ಬೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.