ಉಪ್ಪಿನಂಗಡಿಯಲ್ಲಿ ಕೋಟಿ ವೆಚ್ಚದ ಲೈಬ್ರೆರಿ, ವಾಣಿಜ್ಯ ಸಂಕೀರ್ಣದ ಯೊಜನೆ-ಗ್ರಂಥಾಲಯ ಸ್ಥಳಾಂತರಕ್ಕೆ ನಾಡ ಕಚೇರಿ ಅಡ್ಡಿ!

0

ಉಪ್ಪಿನಂಗಡಿ: ಇಲ್ಲಿನ ಹೊಸ ಬಸ್ ನಿಲ್ದಾಣ ಬಳಿ ಇರುವ ಹಳೆ ಗ್ರಂಥಾಲಯ ಕಟ್ಟಡವನ್ನು ತೆರವುಗೊಳಿಸಿ ಅಲ್ಲಿ ಎರಡು ಮಹಡಿಗಳನ್ನೊಳಗೊಂಡ ಅತ್ಯಾಧುನಿಕ ಗ್ರಂಥಾಲಯದ ನಿರ್ಮಾಣಕ್ಕೆ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಮುಂದಾಗಿದ್ದು, ಅದಕ್ಕಾಗಿ ಸುಮಾರು ಒಂದು ಕೋಟಿ ರೂ. ವೆಚ್ಚದ ಕಟ್ಟಡಕ್ಕೆ ಈಗಾಗಲೇ ನೀಲ ನಕಾಶೆಯನ್ನು ಸಿದ್ದಪಡಿಸಿದೆ.
ಜಿಲ್ಲೆಯಲ್ಲಿ ಗರಿಷ್ಟ ಸ್ವಂತ ಆದಾಯವನ್ನು ಹೊಂದಿರುವ ಗ್ರಾ.ಪಂ. ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಉಪ್ಪಿನಂಗಡಿ ಗ್ರಾ.ಪಂ. ಇದೀಗ ತನ್ನ ಜಾಗದಲ್ಲಿ ಈಗಾಗಲೇ ಇರುವ ಗ್ರಂಥಾಲಯವನ್ನು ತೆರವುಗೊಳಿಸಿ ಅಲ್ಲಿ ವಾಣಿಜ್ಯ ಸಂಕೀರ್ಣ, ಗ್ರಂಥಾಲಯ, ವಸತಿ ಗೃಹ, ಮಿನಿ ಸಭಾಂಗಣಗಳನ್ನೊಳಗೊಂಡ ನೂತನ ಕಟ್ಟಡವನ್ನು ನಿರ್ಮಿಸಲು ಮುಂದಾಗಿದೆ. ಇದಕ್ಕಾಗಿ ಸುಮಾರು 1ಕೋಟಿ ರೂಪಾಯಿ ನಿರ್ಮಾಣ ವೆಚ್ಚದ ಸಾಧ್ಯತೆಯನ್ನು ಅಂದಾಜಿಸಲಾಗಿದ್ದು, ನೂತನ ಗ್ರಂಥಾಲಯದ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ವರೆಗೆ ಈಗ ಇರುವ ಗ್ರಂಥಾಲಯವನ್ನು ಪಂಚಾಯತ್ ಕಟ್ಟಡಕ್ಕೆ ತಾತ್ಕಾಲಿಕವಾಗಿ ವರ್ಗಾವಣೆಗೊಳಿಸಲು ಸಂಕಲ್ಪಿಸಲಾಗಿದೆ.


ನಾಡಕಚೇರಿಯಿಂದಾಗಿ ಗ್ರಾ.ಪಂ. ಇಕ್ಕಟ್ಟಿನಲ್ಲಿ: ಹೋಬಳಿ ಕೇಂದ್ರವಾಗಿರುವ ಉಪ್ಪಿನಂಗಡಿಯ ನಾಡ ಕಚೇರಿಯ ಕಟ್ಟಡವು ಶಿಥಿಲವಾಗಿ, ಬೀಳುವ ಸ್ಥಿತಿಯಲ್ಲಿದ್ದಾಗ ನೂತನ ನಾಡ ಕಚೇರಿಯನ್ನು ನಿರ್ಮಿಸುವ ಭರವಸೆ ಸಿಕ್ಕಿದ್ದರಿಂದ 6 ತಿಂಗಳ ಕಾಲಾವಕಾಶಕ್ಕೆ ಉಪ್ಪಿನಂಗಡಿ ಗ್ರಾ.ಪಂ. ತನ್ನ ಮೀಟಿಂಗ್ ಹಾಲ್ ಅನ್ನು ನಾಡಕಚೇರಿಗಾಗಿ ಬಿಟ್ಟು ಕೊಟ್ಟಿತ್ತು. ಅಲ್ಲಿ ನಾಡಕಚೇರಿ ನೆಲೆಯೂರಿ ಮೂರು ವರ್ಷ ಸಂದುತ್ತಾ ಬಂದರೂ, ಹೊಸ ನಾಡಕಚೇರಿ ನಿರ್ಮಾಣವಾದರೂ, ಈಗ ಗ್ರಾ.ಪಂ.ನಲ್ಲಿ ಇರುವ ನಾಡಕಚೇರಿಯನ್ನು ಹೊಸ ಕಟ್ಟಡಕ್ಕೆ ಶಿಫ್ಟ್ ಮಾಡುವಲ್ಲಿ ಕಂದಾಯ ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ. ಇಲ್ಲಿ ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ನೂತನ ನಾಡಕಚೇರಿ ನಿರ್ಮಾಣವಾಗಿದೆಯಾದರೂ ಅಲ್ಲಿ ಮೂಲಭೂತ ಸೌಕರ್ಯವಾದ ಶೌಚಾಲಯ ನಿರ್ಮಾಣವಾಗಿಲ್ಲ. ಕಚೇರಿಯೊಳಗಿನ ಅನ್ಯಾನ್ಯ ಸೌಕರ್ಯಗಳನ್ನು ವ್ಯವಸ್ಥೆಗೊಳಿಸಿಲ್ಲ. ಹಾಗಾಗಿ ನೂತನ ನಾಡಕಚೇರಿಗೆ ಹೋಗಲು ಸಾಧ್ಯವಾಗುತ್ತಿಲ್ಲ ಎನ್ನುವುದು ಅಧಿಕಾರಿಗಳು ನೀಡುವ ಕಾರಣವಾಗಿದೆ.


ಸತತ ಮನವಿಗೂ ನಿರ್ಲಕ್ಷ್ಯ : ವಿದ್ಯಾಲಕ್ಷ್ಮಿ ಪ್ರಭು
ಹೊಸದಾಗಿ ಅತ್ಯಾಧುನಿಕ ಗ್ರಂಥಾಲಯ ನಿರ್ಮಿಸುವ ಕನಸು ಹೊತ್ತು ಪಂಚಾಯತ್ ಆಡಳಿತ ಕಾರ್ಯೋನ್ಮುಖವಾಗಿದೆ. ಹಳೆ ಕಟ್ಟಡವನ್ನು ಕೆಡವಿ ಹೊಸ ಕಟ್ಟಡವನ್ನು ನಿರ್ಮಿಸಬೇಕಾದರೆ ಈಗಿನ ಗ್ರಂಥಾಲಯವನ್ನು ಪಂಚಾಯತ್ ಕಟ್ಟಡಕ್ಕೆ ಸ್ಥಳಾಂತರಿಸಬೇಕಾಗುತ್ತದೆ. ಪಂಚಾಯತ್ ಕಟ್ಟಡದಲ್ಲಿ ಆಶ್ರಯ ಪಡೆದಿರುವ ನಾಡಕಚೇರಿಯನ್ನು ಅವರದ್ದೇ ಸ್ವಂತ ಕಟ್ಟಡಕ್ಕೆ ಹೋಗಲು ಪದೇ ಪದೇ ವಿನಂತಿಸುತ್ತಾ ಬಂದರೂ ಹೊಸ ನಾಡಕಚೇರಿ ಕಟ್ಟಡದಲ್ಲಿ ಶೌಚಾಲಯವಿಲ್ಲ ಎಂಬ ಕಾರಣ ನೀಡಿ ಪಂಚಾಯತ್ ಕಟ್ಟಡದಲ್ಲೇ ಉಳಿಯುತ್ತಿದ್ದಾರೆ. ಶೌಚಾಲಯಕ್ಕೆ ಬೇಕಾದರೆ ಪಂಚಾಯತ್ ಕಚೇರಿಯ ಶೌಚಾಲಯವನ್ನು ಬಳಸಿಕೊಳ್ಳಿ ಎಂದರೂ ಕೇಳುತ್ತಿಲ್ಲ. ಇನ್ನು ಹೋರಾಟವೇ ನಮಗಿರುವ ದಾರಿ ಎಂದು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ವಿದ್ಯಾಲಕ್ಷ್ಮಿ ಪ್ರಭು ತಿಳಿಸಿದ್ದಾರೆ.

ಸ್ವಂತ ಕಟ್ಟಡಕ್ಕೆ ಹೋಗಲು ನಿರ್ದೇಶಿಸಿದ್ದೇನೆ: ಸಹಾಯಕ ಕಮಿಷನರ್
ಈ ವಿದ್ಯಮಾನದ ಬಗ್ಗೆ ಸ್ಪಷ್ಟನೆ ನೀಡಿರುವ ಪುತ್ತೂರು ಉಪ ವಿಭಾಗದ ಸಹಾಯಕ ಕಮಿಷನರ್ ಗಿರೀಶ್ ನಂದನ್ ಅವರು, ಕಂದಾಯ ಇಲಾಖೆಯ ನಿವೇಶನದಲ್ಲಿ ಈಗಾಗಲೇ ಹೊಸದಾಗಿ ನಾಡಕಚೇರಿ ನಿರ್ಮಾಣವಾಗಿದೆ. ಅಲ್ಲಿನ ಪಂಚಾಯತ್ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ನಾಡಕಚೇರಿಯನ್ನು ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಳಿಸಬೇಕೆಂದು ಪುತ್ತೂರು ತಹಶೀಲ್ದಾರ್ ರವರಿಗೆ ಈಗಾಗಲೇ ನಿರ್ದೇಶನ ನೀಡಿರುವೆ. ಮುಂದಿನ ಕ್ರಮವನ್ನು ತಹಶೀಲ್ದಾರ್ ರವರು ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here