ಅಂಬಿಕಾ ಮಹಾವಿದ್ಯಾಲಯದಲ್ಲಿ ಆಪ್ತಸಮಾಲೋಚನಾ ಕೇಂದ್ರದ ಚಟುವಟಿಕೆಗಳಿಗೆ ಚಾಲನೆ

0

ಪುಷ್ಟಿರಹಿತ ಆಹಾರ ಸೇವನೆಯಿಂದ ದೈಹಿಕ ದೃಢತೆ ಕ್ಷೀಣ : ಡಾ.ಪ್ರದೀಪ್ ಕುಮಾರ್


ಪುತ್ತೂರು: ನಾವು ತಿನ್ನುವ ಆಹಾರ ನಮ್ಮ ಆರೋಗ್ಯದ ಮೇಲೆ ನಿರ್ಣಾಯಕ ಪರಿಣಾಮ ಬೀರುತ್ತದೆ. ಬಾಯಿಗೆ ರುಚಿಯಾಗುವುದೆಲ್ಲವೂ ಆರೋಗ್ಯವರ್ಧಕವಲ್ಲ. ಇಂದು ಅನೇಕ ಕಲಬೆರಕೆ ವಸ್ತುಗಳೂ ಮಾರುಕಟ್ಟೆಯನ್ನು ಆವರಿಸಿಕೊಂಡಿವೆ. ಹಾಗಾಗಿ ನಮ್ಮ ಆಹಾರ ವ್ಯವಸ್ಥೆಯೇ ದೈಹಿಕ ದೃಢತೆಯನ್ನು ಕ್ಷೀಣಿಸುವಂತೆ ಮಾಡುತ್ತಿದೆ. ಈ ಬಗೆಗೆ ಪ್ರತಿಯೊಬ್ಬರೂ ಜಾಗರೂಕತೆ ವಹಿಸುವುದು ಅತ್ಯಂತ ಅಗತ್ಯ ಎಂದು ಪುತ್ತೂರಿನ ಡಾ.ಪ್ರದೀಪ್ ಕುಮಾರ‍್ಸ್ ಆಯುರ್ವೇದ ಆಸ್ಪತ್ರೆಯ ನಿರ್ದೇಶಕ ಡಾ.ಪ್ರದೀಪ್ ಕುಮಾರ್ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದ ಮನಃಶಾಸ್ತ್ರ ವಿಭಾಗ ಮುನ್ನಡೆಸುತ್ತಿರುವ ಚಿತ್ತ ಚಿಕಿತ್ಸಾ ಎಂಬ ಆಪ್ತ ಸಮಾಲೋಚನಾ ಕೇಂದ್ರದ ವಾರ್ಷಿಕ ಚಟುವಟಿಕೆಗಳನ್ನು ಶುಕ್ರವಾರ ಉದ್ಘಾಟಿಸಿ ಆಧುನಿಕ ಜೀವನಶೈಲಿಯ ಮುಂದಿನ ಪರಿಣಾಮಗಳು ಎಂಬ ವಿಷಯದ ಬಗೆಗೆ ಉಪನ್ಯಾಸ ನೀಡಿದರು.


ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ನಮ್ಮ ದೇಹಕ್ಕೆ ಅತ್ಯುತ್ತಮ ಪರಿಣಾಮ ಬೀರಬಹುದಾದ ಹಣ್ಣು ಹಂಪಲುಗಳಿವೆ. ವೈವಿಧ್ಯಮಯ ತರಕಾರಿಗಳಿವೆ. ಆದರೆ ವಾಟ್ಸಾಪ್‌ನಲ್ಲಿ ಚೆನ್ನಾಗಿ ಪ್ರಚಾರ ಇದೆ ಅನ್ನುವ ಕಾರಣಕ್ಕೆ ಯಾವುದೋ ವಿದೇಶೀ ಹಣ್ಣುಗಳನ್ನು ನಾವು ಆರೋಗ್ಯಕ್ಕೆ ಪೂರಕ ಎಂಬಂತೆ ಸ್ವೀಕರಿಸುತ್ತಿದ್ದೇವೆ. ಆದರೆ ನಮ್ಮ ಪರಿಸರದ ಫಲವಸ್ತುಗಳು ನೀಡಬಹುದಾದ ಆರೋಗ್ಯವನ್ನು ಇನ್ಯಾವುದೋ ದೇಶದಲ್ಲಿ ಬೆಳೆದ ಹಣ್ಣು ನೀಡುವುದಕ್ಕೆ ಸಾಧ್ಯವಿಲ್ಲ ಎಂಬುದನ್ನು ಅರಿಯಬೇಕು ಎಂದು ಹೇಳಿದರು.


ರೋಗಕ್ಕೆ ಪರಿಹಾರವನ್ನು ಕಂಡುಕೊಳ್ಳುವ ಮೊದಲು ರೋಗ ಬರದಂತೆ ದೇಹವನ್ನು ಕಾಪಾಡಿಕೊಳ್ಳುವ ಯೋಚನೆ ಮಾಡಬೇಕು. ಫಿಜ್ಜಾ, ಬರ್ಗರ್, ಐಸ್‌ಕ್ರೀಂ, ಚಾಕಲೇಟ್‌ನಂತಹ ವಸ್ತುಗಳಲ್ಲಿ ದೇಹಕ್ಕೆ ಬೇಕಾಗುವ ಧಾತುಗಳಿಲ್ಲ. ಅದರಿಂದ ದೇಹಕ್ಕೆ ಹಾನಿಯೇ ಹೊರತು ಉಪಯೋಗಗಳಿಲ್ಲ. ಆದ್ದರಿಂದ ಇಂತಹ ಆಹಾರದ ಬದಲಾಗಿ ಪಾರಂಪರಿಕ ಆಹಾರ ವ್ಯವಸ್ಥೆಗೆ ನಾವು ಮರಳಬೇಕಿದೆ. ನಿತ್ಯ ಯೋಗಾಭ್ಯಾಸ, ಪ್ರಾಣಾಯಾಮ ಮಾಡುವುದರಿಂದ ನಮ್ಮ ಬದುಕನ್ನು ಸುಂದರವಾಗಿ ರೂಪಿಸಿಕೊಳ್ಳಬಹುದು ಎಂದು ತಿಳಿಸಿದರು.


ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ ಮಾತನಾಡಿ ಮನಃಶಾಸ್ತ್ರ ವಿಷಯವನ್ನು ಬೋಧಿಸುತ್ತಿರುವ ಹಲವು ಕಾಲೇಜುಗಳು ರಾಜ್ಯದಲ್ಲಿದ್ದರೂ ವಿಭಾಗದ ಮೂಲಕ ಆಪ್ತ ಸಮಾಲೋಚನಾ ಕೇಂದ್ರವನ್ನು ಮುನ್ನಡೆಸುತ್ತಿರುವ ಕಾಲೇಜುಗಳು ಅತ್ಯಂತ ವಿರಳ. ಅಂತಹ ಕೇಂದ್ರವನ್ನು ಮುನ್ನಡೆಸುವುದಕ್ಕೆ ಮನಃಶಾಸ್ತ್ರ ಉಪನ್ಯಾಸಕರಿಗೆ ಸಾಕಷ್ಟು ತಜ್ಞತೆ ಬೇಕು. ಅಂಬಿಕಾ ಮಹಾವಿದ್ಯಾಲಯದ ಮನಃಶಾಸ್ತ್ರ ವಿಭಾಗ ಕಳೆದ ಒಂದು ವರ್ಷದಿಂದ ಆಪ್ತಸಮಾಲೋಚನಾ ಕೇಂದ್ರವನ್ನು ಮುನ್ನಡೆಸುತ್ತಿದ್ದು, ವಿದ್ಯಾರ್ಥಿಗಳಷ್ಟೇ ಅಲ್ಲದೆ ಸಾರ್ವಜನಿಕರೂ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ ಎಂದರು.


ವೇದಿಕೆಯಲ್ಲಿ ಕಾಲೇಜಿನ ಮನಃಶಾಸ್ತ್ರ ವಿಭಾಗದ ಮುಖ್ಯಸ್ಥ ಚಂದ್ರಕಾಂತ ಗೋರೆ, ಕಾರ್ಯಕ್ರಮ ಆಯೋಜನಾ ಸಮಿತಿಯ ಸದಸ್ಯ ಗಿರೀಶ ಭಟ್ ಕೂವೆತ್ತಂಡ, ವಿದ್ಯಾರ್ಥಿ ಸಂಯೋಜಕಿ ದೀಕ್ಷಾ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅಪರ್ಣಾ ಪ್ರಾರ್ಥಿಸಿದರು. ವಿದ್ಯಾರ್ಥಿ ನವೀನ್ ಶೆಟ್ಟಿ ಸ್ವಾಗತಿಸಿದರು. ವಿದ್ಯಾರ್ಥಿನಿ ಅಭೇದ ಗೋವಿಂದ ಭಟ್ ವಂದಿಸಿದರು.

LEAVE A REPLY

Please enter your comment!
Please enter your name here