ವ್ಯವಹಾರ ರೂ.252 ಕೋಟಿ 42 ಲಕ್ಷ, ನಿವ್ವಳ ಲಾಭ ರೂ.73.5 ಲಕ್ಷ, ಶೇ.10 ಡಿವಿಡೆಂಟ್ ಘೋಷಣೆ
ಪುತ್ತೂರು: ಒಳಮೊಗ್ರು ಗ್ರಾಮದ ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ 2022-23 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಸೆ.16 ರಂದು ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರರವರ ಅಧ್ಯಕ್ಷತೆಯಲ್ಲಿ ಸಂಘದ ಪ್ರಧಾನ ಕಛೇರಿಯ ನವೋದಯ ರೈತ ಸಭಾಭವನದಲ್ಲಿ ನಡೆಯಿತು. ಸಂಘದ 2022-23 ನೇ ಸಾಲಿನ ವಾರ್ಷಿಕ ವರದಿ ವಾಚಿಸಿದ ಸಂಘದ ಅಧ್ಯಕ್ಷರು, ಸಂಘಕ್ಕೆ ವರದಿ ವರ್ಷದಲ್ಲಿ 205 ಜನರ ಸೇರ್ಪಡೆಯೊಂದಿಗೆ ವರ್ಷಾಂತ್ಯಕ್ಕೆ 3,881 ಮಂದಿ ಸದಸ್ಯರನ್ನು ಹೊಂದಿದ್ದು ಒಟ್ಟು ರೂ.3,88,72,295 ಪಾಲು ಬಂಡವಾಳವನ್ನು ಹೊಂದಿದ್ದು ಸರಕಾರದ ಯಾವುದೇ ಪಾಲುಬಂಡವಾಳ ಇರುವುದಿಲ್ಲ ಎಂದು ತಿಳಿಸಿದರು. ಠೇವಣಿಗಳಲ್ಲಿ ವರ್ಷಾಂತ್ಯಕ್ಕೆ ವಿವಿಧ ಠೇವಣಿಗಳಾಗಿ ರೂ.23,35,87,549.24 ಇರುತ್ತದೆ. ಪಡೆದ ಸಾಲಗಳಲ್ಲಿ ವರದಿ ವರ್ಷದಲ್ಲಿ ರೂ.22,59,68,759 ಸಾಲವಾಗಿ ಪಡೆಯಲಾಗಿದ್ದು ರೂ.21,15,91,290 ಮರುಪಾವತಿಸಲಾಗಿದೆ. ವರ್ಷಾಂತ್ಯಕ್ಕೆ ಕೇಂದ್ರ ಬ್ಯಾಂಕ್‌ನಿಂದ ಪಡೆದ ಸಾಲವಾಗಿ ರೂ.28,40,42,320 ಇರುತ್ತದೆ ಈ ಪೈಕಿ ವಾಯಿದೆ ದಾಟಿದ ಸಾಲಗಳು ಇರುವುದಿಲ್ಲ ಎಂದು ತಿಳಿಸಿದರು.ಸದಸ್ಯರ ಸಾಲಗಳಲ್ಲಿ ವರದಿ ವರ್ಷದಲ್ಲಿ ರೂ.44,51,95,295 ಸಾಲ ವಿತರಿಸಿ ರೂ.42,12,64,555 ವಸೂಲಾತಿ ಆಗಿದೆ.ವರ್ಷಾಂತ್ಯಕ್ಕೆ ರೂ.3467,26,424 ಸಾಲ ಹೊರಬಾಕಿ ಇರುತ್ತದೆ. ಸಾಲ ವಸೂಲಾತಿಯಲ್ಲಿ ಶೇ.99 ಪ್ರಗತಿ ಸಾಧಿಸಲಾಗಿದೆ ಎಂದು ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ ತಿಳಿಸಿದರು.
ವ್ಯಾಪಾರ ವಹಿವಾಟುನಲ್ಲಿ ವರದಿ ವರ್ಷದಲ್ಲಿ ರೂ.8,39,845.58 ಮೌಲ್ಯದ ಸರಕು ಖರೀದಿಸಿ ರೂ.5,38,661.82 ಮೌಲ್ಯದ ಸರಕು ಮಾರಾಟ ಮಾಡಿ ರೂ.306892.22 ಲಾಭ ಗಳಿಸಲಾಗಿದೆ. ವರದಿ ವರ್ಷದಲ್ಲಿ ರೂ.252 ಕೋಟಿ 42 ಲಕ್ಷ ಒಟ್ಟು ವ್ಯವಹಾರ ನಡೆಸಿ ಸಂಘವು ರೂ.73,50,574.92 ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ.10 ಡಿವಿಡೆಂಟ್ ನೀಡುವುದಾಗಿ ಈ ಸಂದರ್ಭದಲ್ಲಿ ಅಧ್ಯಕ್ಷರು ಘೋಷಣೆ ಮಾಡಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿ ಬಿ.ಆರ್.ರವರು ಲೆಕ್ಕಪರಿಶೋಧನಾ ವರದಿ, ಅಂದಾಜು ಬಜೆಟ್ ಮಂಜೂರಾತಿ ಇತ್ಯಾದಿಗಳನ್ನು ಸಭೆಗೆ ಓದಿ ಮಂಜೂರಾತಿ ಪಡೆದುಕೊಂಡರು.
ವೇದಿಕೆಯಲ್ಲಿ ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಉಮೇಶ್ ಗೌಡ, ನಿರ್ದೇಶಕರುಗಳಾದ ವಿನೋದ್ ಶೆಟ್ಟಿ ಎ, ನಿತೀಶ್ ಕುಮಾರ್ ಶಾಂತಿವನ, ವಾರಿಜಾಕ್ಷಿ ಪಿ.ಶೆಟ್ಟಿ, ರಘುರಾಮ ಪಾಟಾಳಿ, ಸೂರ್ಯನಾರಾಯಣ ಭಟ್, ಉಷಾ ನಾರಾಯಣ ಎಚ್, ಸೂರಪ್ಪ, ರಾಮಕೃಷ್ಣ ನಾಯ್ಕ, ಸುಕುಮಾರ ಬಿ, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಶರತ್ ಬಿ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಘದ ನಿರ್ದೇಶಕ ಸಂತೋಷ್ ಕುಮಾರ್ ರೈ ವಂದಿಸಿದರು. ಸುಭಾಶ್ಚಂದ್ರ ರೈ ಬೆಳ್ಳಿಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಗಳಾದ ವೀಣಾ, ರಾಜ್‌ಪ್ರಕಾಶ್, ಉದಯಶಂಕರ್, ರಾಜ್‌ಕಿರಣ್, ಭರತ್ ಎಸ್.ನ್, ಶಾಂತ ಕುಮಾರ, ಹರೀಶ್, ವೆಂಕಪ್ಪ ಸಹಕರಿಸಿದ್ದರು.
ಸುಳ್ಯಪದವುನಲ್ಲಿ ಶೀಘ್ರದಲ್ಲಿ ನೂತನ ಕಟ್ಟಡ ನಿರ್ಮಾಣ
ಸಂಘದ ವತಿಯಿಂದ ಈಗಾಗಲೇ ಕೈಕಾರದಲ್ಲಿ ಹಾಗೂ ಸುಳ್ಯಪದವುನಲ್ಲಿ ಬ್ಯಾಂಕಿಂಗ್ ಸೇವೆಯನ್ನು ನೀಡಲಾಗುತ್ತಿದ್ದು ಸುಳ್ಯಪದವುನಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಇಲಾಖೆಯಿಂದ ಅನುಮತಿ ತೆಗೆದುಕೊಳ್ಳಲಾಗಿದ್ದು ಈಗಾಗಲೇ ಎರಡು ಸಲ ಮೀಟಿಂಗ್ ಕೂಡ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ನಡೆಸಲಾಗುವುದು ಎಂದು ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ ತಿಳಿಸಿದರು. ಗ್ರಾಹಕರ ಬೇಡಿಕೆಯಂತೆ ಬಡಗನ್ನೂರುನಲ್ಲಿ ಕೂಡ ಬ್ಯಾಂಕಿಂಗ್ ಸೇವೆ ನೀಡಬೇಕು ಎಂಬ ಆಗ್ರಹ ಬಂದಿದ್ದು ಸುಳ್ಯಪದವುನಲ್ಲಿ ನೂತನ ಕಟ್ಟಡ ನಿರ್ಮಾಣದ ಬಳಿಕ ಮುಂದಿನ ಹೆಜ್ಜೆಯಾಗಿ ಬಡಗನ್ನೂರುನಲ್ಲಿ ಬ್ಯಾಂಕಿಂಗ್ ಸೇವೆ ನೀಡಲು ಸಂಘ ಸಿದ್ದವಾಗಿದೆ ಎಂದು ಅವರು ತಿಳಿಸಿದರು.
ವಾರದಲ್ಲಿ ಒಂದು ದಿನ ತರಕಾರಿ ಮಾರುಕಟ್ಟೆ
ಈಗಾಗಲೇ ಎಲ್ಲಾ ಕಡೆಗಳಲ್ಲಿ ಅಡಿಕೆ ಕೃಷಿ ಹೆಚ್ಚುತ್ತಾ ಹೋಗುತ್ತಿದ್ದು ಮುಂದಿನ ದಿನಗಳಲ್ಲಿ ಅಡಿಕೆಗೆ ಬೆಲೆ ಕುಸಿಯುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಆದ್ದರಿಂದ ಪರ‍್ಯಾಯ ಬೆಳೆಗಳನ್ನು ಬೆಳೆಯುವುದು ಕೃಷಿಕನ ಜವಬ್ದಾರಿಯಾಗಿದೆ ಎಂದ ಪ್ರಕಾಶ್ಚಂದ್ರ ರೈ ಕೈಕಾರರವರು, ಈ ನಿಟ್ಟಿನಲ್ಲಿ ಸಂಘದ ವತಿಯಿಂದ ತರಕಾರಿ ಮಾರುಕಟ್ಟೆ ಮಾಡುವ ಉದ್ದೇಶವನ್ನು ಇಟ್ಟುಕೊಂಡಿದ್ದೇವೆ. ವಾರದಲ್ಲಿ ಒಂದು ದಿನ ತರಕಾರಿ ಮಾರುಕಟ್ಟೆ ಏರ್ಪಡಿಸಿ ರೈತರು ಬೆಳೆದ ತರಕಾರಿಗಳನ್ನು ನೇರವಾಗಿ ತಂದು ಮಾರಾಟ ಮಾಡುವ ವ್ಯವಸ್ಥೆ ಇದರಲ್ಲಿ ಇರಲಿದೆ. ಇದಲ್ಲದೆ ಕಡಿಮೆ ಬಂಡವಾಳದ ಮೂಲಕ ಹೆಚ್ಚು ಲಾಭ ಗಳಿಸಬಹುದಾದ ಜೇನು ಕೃಷಿಗೂ ಸದಸ್ಯರು ತೊಡಗಿಸಿಕೊಳ್ಳಬೇಕು ಒಟ್ಟಿನಲ್ಲಿ ಅಡಿಕೆಯೊಂದಿಗೆ ಪರ‍್ಯಾಯ ಬೆಳೆಗಳನ್ನು ಬೆಳೆಯುವ ಮೂಲಕ ರೈತರು ಲಾಭ ಗಳಿಸಿಕೊಳ್ಳಬೇಕು ಇದಕ್ಕೆ ಸಂಘವು ಸಂಪೂರ್ಣ ಸಹಕಾರ ನೀಡಲಿದೆ ಎಂದು ತಿಳಿಸಿದರು.
ಸಭೆಯಿಂದ ಕೇಳಿ ಬಂದ ಬೇಡಿಕೆಗಳು-ನಿರ್ಣಯ
ಯಶಸ್ವಿನಿ ವಿಮೆಗೆ ಈಗಾಗಲೇ ಪುತ್ತೂರಿನಲ್ಲಿ ಯಾವುದೇ ಆಸ್ಪತ್ರೆಗಳು ಸೇರ್ಪಡೆಗೊಳ್ಳದೇ ವಿಚಾರವಾಗಿ ಸಭೆಯಲ್ಲಿ ಸದಸ್ಯರು ಪ್ರಸ್ತಾಪ ಮಾಡಿದರು. ಈಗಾಗಲೇ ಬಹಳಷ್ಟು ಮಂದಿ ಯಶಸ್ವಿನಿ ವಿಮೆಯನ್ನು ಮಾಡಿಸಿದ್ದಾರೆ. ಆದರೆ ಪುತ್ತೂರಿನಲ್ಲಿ ಯಾವುದೇ ಆಸ್ಪತ್ರೆಯು ಯಶಸ್ವಿನಿ ವಿಮೆಗೆ ಒಳಪಟ್ಟಿರುವುದಿಲ್ಲ ಇದರಿಂದ ಜನರಿಗೆ ತುಂಬಾ ತೊಂದರೆಯಾಗಿದೆ ಈ ಬಗ್ಗೆ ಸರಕಾರಕ್ಕೆ ಹಾಗೂ ಶಾಸಕರಿಗೆ ಬರೆದುಕೊಳ್ಳಬೇಕು ಎಂದು ಸದಸ್ಯರುಗಳು ತಿಳಿಸಿದರು. ಈ ಬಗ್ಗೆ ಮಾತನಾಡಿದ ಅಧ್ಯಕ್ಷ ಪ್ರಕಾಶ್ವಂದ್ರ ರೈಯವರು ಪುತ್ತೂರಿನಲ್ಲಿ ಯಾವುದೇ ಆಸ್ಪತ್ರೆಯು ಯಶಸ್ವಿನಿ ವಿಮೆಗೆ ಒಳಪಡದೇ ಇರುವುದರಿಂದ ಈ ಬಗ್ಗೆ ಸಹಕಾರ ನಿಬಂಧಕರ ಮುಖಾಂತರ ಸರಕಾರಕ್ಕೆ ಹಾಗೂ ಶಾಸಕರಿಗೆ ಬರೆದುಕೊಳ್ಳುವುದು ಈ ಬಗ್ಗೆ ನಿರ್ಣಯ ದಾಖಲಿಸಲಾಗುವುದು ಎಂದು ತಿಳಸಿದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಸಿಬ್ಬಂದಿ ನೇಮಕಾತಿ ವಿಚಾರದಲ್ಲಿ ಜಿಲ್ಲಾ ಸಮಿತಿಗೆ ಅಧಿಕಾರ ಕೊಟ್ಟಿರುವ ಆದೇಶದ ವಿಚಾರದಲ್ಲಿ ಚರ್ಚೆ ನಡೆಸಲಾಯಿತು. ಸಂಘದ ಆಡಳಿತ ಮಂಡಳಿ ಹಾಗೂ ಸದಸ್ಯರ ಮತ್ತು ಸಿಬ್ಬಂದಿ ವರ್ಗದವರ ಹಕ್ಕನ್ನು ಕಸಿಯುವ ಪ್ರಯತ್ನ ಜಿಲ್ಲಾ ಸಮಿತಿ ಮಾಡಬಾರದು ಆದ್ದರಿಂದ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಸಿಬ್ಬಂದಿ ನೇಮಕಾತಿ ವಿಚಾರದಲ್ಲಿ ಹೊಸತಾಗಿ ಬಂದು ಮಸೂದೆಯನ್ನು ಪರಿಗಣಿಸದೆ ಹಳೆಯ ಮಸೂದೆಯನ್ನೇ ಮುಂದುವರಿಸಿಕೊಂಡು ಹೋಗಬೇಕು ಈ ಬಗ್ಗೆ ಇಲಾಖೆಗೆ ಬರೆದುಕೊಳ್ಳುವುದು ಎಂದು ನಿರ್ಣಯಿಸಲಾಯಿತು.
ಸಂಘದ ಬ್ಯಾಂಕಿಂಗ್ ವ್ಯವಹಾರದಲ್ಲಿ ಗ್ರಾಹಕರಿಗೆ ತಮ್ಮ ಉಳಿತಾಯದ ಮೆಸೇಜ್ ಮೊಬೈಲ್‌ಗೆ ತಲುಪಿಸುವ ಸಿಸ್ಟಮ್ ಅನ್ನು ಅಳವಡಿಸಿಕೊಳ್ಳಬೇಕು, ಗ್ರಾಹಕರು ತಾವು ತಮ್ಮ ಉಳಿತಾಯ ಖಾತೆಯಿಂದ ತೆಗೆದ ಹಣ ಹಾಗೂ ಉಳಿತಾಯ ಮಾಡಿದ ಹಣದ ಬಗ್ಗೆ ಅವರಿಗೆ ಮೆಸೇಜ್ ಹೋಗುವಂತಿರಬೇಕು ಎಂದು ಸದಸ್ಯರು ತಿಳಿಸಿದರು. ಈ ಬಗ್ಗೆ ಪ್ರಯತ್ನಿಸಲಾಗುತ್ತಿದೆ ಎಂದು ಅಧ್ಯಕ್ಷರು ತಿಳಿಸಿದರು. ಪ್ರತಿ ವರ್ಷ ಬೆಳೆ ಸಮೀಕ್ಷೆ ಮಾಡುವ ಬದಲು ೩ ವರ್ಷಕ್ಕೊಮ್ಮೆ ಬೆಳೆ ಸಮೀಕ್ಷೆ ಮಾಡಿದರೆ ಸಾಕಾಗುತ್ತದೆ ಈ ಬಗ್ಗೆ ಸರಕಾರಕ್ಕೆ ಬರೆಯಿರಿ ಎಂದು ಸದಸ್ಯರು ತಿಳಿಸಿದರು. ಕುಂಬ್ರಕ್ಕೆ ಜನ ಔಷಧಿ ಕೇಂದ್ರದ ಅಗತ್ಯತೆ ಇದೆ. ಈ ಬಗ್ಗೆ ಸಂಘವು ಪ್ರಯತ್ನಿಸಬೇಕು ಎಂದು ಸದಸ್ಯರು ಆಗ್ರಹಿಸಿದರು. ಇದಲ್ಲದೆ ಸಂಘದ ಸದಸ್ಯರಿಗೆ ಮೆಡಿಕಲ್ ವಿಮೆಯನ್ನು ಮಾಡಿಸುವ ಬಗ್ಗೆ ಸಂಘ ಪ್ರಯತ್ನಪಡಬೇಕು ಎಂದು ವಿಚಾರವೂ ಸಭೆಯಲ್ಲಿ ಕೇಳಿಬಂತು. ಗ್ರಾಮಕ್ಕೊಂದು ಸಹಕಾರಿ ಸಂಘ ಎಂಬ ಸರಕಾರದ ಆದೇಶದ ಬಗ್ಗೆಯೂ ಚರ್ಚೆ ನಡೆಯಿತು. ಆದರೆ ಈ ವಿಚಾರವು ಈಗಾಗಲೇ ಕೋರ್ಟ್‌ನಲ್ಲಿ ಇರುವುದರಿಂದ ಕೋರ್ಟ್ ಆದೇಶ ಬಂದ ಬಳಿಕ ಈ ಬಗ್ಗೆ ಸರಕಾರ ಮುಂದಿನ ನಿಲುವು ತಿಳಿಸುವುದು ಆ ಬಳಿಕ ಸರಕಾರ ಏನು ಆದೇಶ ಮಾಡುತ್ತದೋ ಅದಕ್ಕೆ ನಾವು ಕೈಜೋಡಿಸಬೇಕಾಗುತ್ತದೆ ಎಂದು ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ ತಿಳಿಸಿದರು. ಸಭೆಗೆ ಆಗಮಿಸಿದ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಮಾತನಾಡಿ, ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘವು ಉತ್ತಮ ರೀತಿಯಲ್ಲಿ ಅಭಿವೃದ್ಧಿ ಹೊಂದುತ್ತಿದ್ದು ಸಂಘದಿಂದ ಸದಸ್ಯರಿಗೆ ಇನ್ನಷ್ಟು ಪ್ರಯೋಜನಗಳು ಸಿಗಲಿ ಎಂದು ಹೇಳಿ ಶುಭ ಹಾರೈಸಿದರು.
ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ ಸಹಕಾರಿ ಸಂಘ
ಚಂದ್ರಯಾನ 3 ಮೂಲಕ ಇಸ್ರೋ ವಿಜ್ಞಾನಿಗಳು ಚಂದ್ರನ ದಕ್ಷಿಣ ಧ್ರುವಕ್ಕೆ ವಿಕ್ರಮ್ ಹೆಸರಿನ ಲ್ಯಾಡರ್ ಮತ್ತು ಪ್ರಗ್ಯಾನ್ ಹೆಸರಿನ ಚಂದ್ರನ ರೋವರ್ ಕಳುಹಿಸುವ ಮೂಲಕ ಭಾರತಕ್ಕೆ ಕೀರ್ತಿ ತಂದಿದ್ದಾರೆ. ಈ ಯಶಸ್ವಿನ ಹಿಂದೆ ಶ್ರಮಿಸಿದ ಇಸ್ರೋದ ಎಲ್ಲಾ ವಿಜ್ಞಾನಿಗಳಿಗೆ ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ವತಿಯಿಂದ ಅಭಿನಂದನೆಯನ್ನು ಸಲ್ಲಿಸಲಾಯಿತು.
“ ಸಂಘವು ವರದಿ ವರ್ಷದಲ್ಲಿ ರೂ.252 ಕೋಟಿ 42 ಲಕ್ಷ ಒಟ್ಟು ವ್ಯವಹಾರ ನಡೆಸಿ ರೂ.73,50,574 ನಿವ್ವಳ ಲಾಭ ಗಳಿಸಿದೆ. ಸಂಘವು ಎ ತರಗತಿ ವರ್ಗೀಕರಣದೊಂದಿಗೆ ಉತ್ತಮ ವ್ಯವಹಾರ ನಡೆಸಲು ಕಾರಣೀಕರ್ತರಾದ ಸರ್ವರಿಗೂ ಕೃತಜ್ಞತೆಗಳೊಂದಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.”
ಪ್ರಕಾಶ್ಚಂದ್ರ ರೈ ಕೈಕಾರ, ಅಧ್ಯಕ್ಷರು ಕುಂಬ್ರ ಪ್ರಾ.ಕೃ.ಪ.ಸ.ಸಂಘ
……….
ಚಿತ್ರ: ಕುಂಬ್ರ ೧,೨
ಚಿತ್ರ: ಜ್ಯೋತಿ ಸ್ಟುಡಿಯೋ ಕುಂಬ್ರ