ಈಶ್ವರಮಂಗಲದಲ್ಲಿ ನ್ಯಾಯವಾದಿ ಶ್ರೀಕಾಂತ್‌ರವರ ಕಛೇರಿ ಶುಭಾರಂಭ

0

ಪುತ್ತೂರು: ಈಶ್ವರಮಂಗಲದ ಓಂ ಸಂಕೀರ್ಣದ 1ನೇ ಮಹಡಿಯಲ್ಲಿ ನ್ಯಾಯವಾದಿ ಶ್ರೀಕಾಂತ್ ಪಿ.ಎಸ್.ರವರ ಕಛೇರಿಯು ಸೆ.18ರಂದು ಶುಭಾರಂಭಗೊಂಡಿತು. ಈಶ್ವರಮಂಗಲದಲ್ಲಿ ಪ್ರಥಮ ವಕೀಲರ ಕಛೇರಿ ಇದಾಗಿದ್ದು ಈಶ್ವರಮಂಗಲ ಹನುಮಗಿರಿ ಧರ್ಮಶ್ರೀ ಪ್ರತಿಷ್ಠಾನದ ಮಹಾಪೋಷಕರಾದ ಜಿ.ಕೆ ಮಹಾಬಲೇಶ್ವರ ಭಟ್ ದೀಪ ಪ್ರಜ್ವಲನೆಯ ಮೂಲಕ ಕಛೇರಿಯನ್ನು ಉದ್ಘಾಟಿಸಿ ಮಾತನಾಡಿ, ಶ್ರೀಕಾಂತ್‌ರವರು ತಮ್ಮ ವಕೀಲರ ಕಛೇರಿಯನ್ನು ಆರಂಭಿಸಿದ್ದು ಖುಷಿ ತಂದಿದೆ. ನಿಮ್ಮ ವೃತ್ತಿಯಲ್ಲಿ ದೇವರು ನಿಮಗೆ ಒಳ್ಳೆಯದನ್ನು ಕರುಣಿಸಲಿ ಎಂದು ಶುಭ ಹಾರೈಸಿದರು.

ಶ್ರೀಕಾಂತ್‌ರವರ ವಕೀಲ ವೃತ್ತಿಯ ಗುರುಗಳಾಗಿರುವ ಹಿರಿಯ ವಕೀಲ ಬೆಟ್ಟ ಪಿ ಈಶ್ವರ ಭಟ್‌ರವರಿಗೆ ಈ ಸಂದರ್ಭದಲ್ಲಿ ಗುರುವಂದನೆ ನಡೆಯಿತು. ಗುರುವಂದನೆ ಸ್ವೀಕರಿಸಿದ ಬೆಟ್ಟ ಪಿ.ಈಶ್ವರ ಭಟ್‌ರವರು, ವಕೀಲ ವೃತ್ತಿ ಎಲ್ಲ ವೃತ್ತಿಯ ಹಾಗೆ ಅಲ್ಲ ಇದೊಂದು ಚಾಲೆಂಜಿಗ್ ವೃತ್ತಿ ಆಗಿದೆ. ಇಲ್ಲಿ ಶ್ರಮ ಬಹಳ ಅಗತ್ಯ, ಕಷ್ಟಪಟ್ಟು ದುಡಿಯಬೇಕಾಗಿದೆ. ವಕೀಲ ವೃತ್ತಿಯಲ್ಲಿ ಹೆಸರು, ಸಂಪಾದನೆ ಬರಬೇಕಾದರೆ ನಾವು ಬಹಳಷ್ಟು ಕಾಯಬೇಕು ಮತ್ತು ಅಷ್ಟೇ ಶ್ರಮಪಡಬೇಕು ಈ ಅವಧಿಯಲ್ಲಿ ಈ ವೃತ್ತಿಯೇ ಬೇಡ ಎಂದು ಬಿಟ್ಟು ಹೋದವರು ಇದ್ದಾರೆ. ಒಟ್ಟಿನಲ್ಲಿ ಒಂದು ಒಳ್ಳೆಯ ಶುಭ ಮುಹೂರ್ತದಲ್ಲಿ ಶ್ರೀಕಾಂತ್‌ರವರು ಈಶ್ವರಮಂಗಲದಲ್ಲಿ ಕಛೇರಿ ಆರಂಭಿಸಿದ್ದಾರೆ. ಈಶ್ವರಮಂಗಲದಲ್ಲಿ ಒಂದು ವಕೀಲರ ಕಛೇರಿಯ ಅಗತ್ಯತೆ ತುಂಬಾ ಇತ್ತು. ಏಕೆಂದರೆ ಈ ಭಾಗದಲ್ಲಿ ಎಲ್ಲಿಯೂ ವಕೀಲ ಕಛೇರಿ ಇಲ್ಲದೇ ಇರುವುದರಿಂದ ಎಲ್ಲರೂ ಪುತ್ತೂರು ಪೇಟೆಗೆ ಬರಬೇಕಾಗಿತ್ತು ಈ ನಿಟ್ಟಿನಲ್ಲಿ ಶ್ರೀಕಾಂತ್‌ರವರು ಸುಸಜ್ಜಿತವಾದ ಕಛೇರಿಯನ್ನು ಆರಂಭಿಸುವ ಮೂಲಕ ಜನರಿಗೆ ಸೇವೆ ನೀಡಲು ಮುಂದಾಗಿದ್ದಾರೆ ಅವರಿಗೆ ವೃತ್ತಿಯಲ್ಲಿ ಯಶಸ್ಸು ಸಿಗಲಿ ದೇವರ ಆಶೀರ್ವಾದ ಇರಲಿ ಎಂದು ಹೇಳಿ ಶುಭ ಹಾರೈಸಿದರು.


ಕಾವು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ನನ್ಯ ಅಚ್ಯುತ ಮೂಡೆತ್ತಾಯ ಮಾತನಾಡಿ, ವೃತ್ತಿಯಲ್ಲಿ ಅತ್ಯಂತ ಗೌರವದ ವೃತ್ತಿ ಎಂದರೆ ಅದು ವಕೀಲ ವೃತ್ತಿಯಾಗಿದೆ. ನಮ್ಮೂರಿನಲ್ಲಿ ಬೆಳೆದ ಯುವಕರು ವಕೀಲ ವೃತ್ತಿಯನ್ನು ಕಲಿತು ನಮ್ಮೂರಿನಲ್ಲೇ ಕಛೇರಿ ಆರಂಭಿಸಿದ್ದು ಹೆಮ್ಮೆಯ ವಿಷಯವಾಗಿದೆ ಆ ಮೂಲಕ ನಮ್ಮೂರಿನ ಜನರಿಗೆ ನ್ಯಾಯ ಹಾಗೂ ಇತರ ಕೆಲಸಗಳನ್ನು ಮಾಡಿಕೊಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿ ಶುಭ ಹಾರೈಸಿದರು. ಹಿರಿಯ ವಕೀಲರು ಹಾಗೂ ಜಾರಿ ನಿರ್ದೇಶನಾಲಯದ ವಿಶೇಷ ಸರಕಾರಿ ಅಭಿಯೋಜಕರಾಗಿರುವ ಮಹೇಶ್ ಕಜೆ ಮಾತನಾಡಿ, ವಕೀಲ ವೃತ್ತಿಯಲ್ಲಿ ಗುರುವಿನ ಬಳಿ ಕಲಿಯುವುದು ಬಹಳ ಅಗತ್ಯ, ವಕೀಲ ವೃತ್ತಿಯಲ್ಲಿ ಗುರುವಿನಿಂದ ಕಲಿಯುವಂತಹುದು ಬಹಳಷ್ಟಿದೆ ಆದ್ದರಿಂದಲೇ ಗುರುಶಿಷ್ಯ ಸಂಬಂಧ ಉಳಿದುಕೊಂಡು ಬಂದಿರುವುದು ಕೇವಲ ವಕೀಲ ವೃತ್ತಿಯಲ್ಲಿ ಮಾತ್ರ ಎಂಬುದು ಸತ್ಯ. ಈಶ್ವರಮಂಗಲದಂತಹ ಕೇಂದ್ರ ಸ್ಥಾನದಲ್ಲಿ ಶ್ರೀಕಾಂತ್‌ರವರು ತಮ್ಮ ವಕೀಲ ಕಛೇರಿ ಆರಂಭಿಸುವ ಮೂಲಕ ಗ್ರಾಮೀಣ ಭಾಗದ ಜನರಿಗೆ ಸೇವೆ ನೀಡಲು ಮುಂದಾಗಿದ್ದು ಹೆಮ್ಮೆಯ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿ ಯಶಸ್ಸು ಸಿಗಲಿ ಎಂದು ಹೇಳಿ ಶುಭ ಹಾರೈಸಿದರು. ವಕೀಲರ ಸಂಘದ ಕಾರ್ಯದರ್ಶಿ ಚಿನ್ಮಯ ರೈ ಮಾತನಾಡಿ, ಶ್ರೀಕಾಂತ್‌ರವರಿಗೆ ಹೈಕೋರ್ಟ್, ಸುಪ್ರೀಂಕೋರ್ಟ್‌ಗೆ ಹೋಗಬಹುದಿತ್ತು ಆದರೆ ತನ್ನ ಊರಿನಲ್ಲಿ ವಕೀಲ ಕಛೇರಿ ಆರಂಭಿಸುವ ಮೂಲಕ ಊರಿನ ಜನರಿಗೆ ಸೇವೆ ನೀಡಲು ಮುಂದಾಗಿದ್ದಾರೆ. ಈಶ್ವರಮಂಗಲದಲ್ಲಿ ಬಹುತೇಕ ಸರಕಾರಿ ಕಛೇರಿಗಳು ಇದ್ದರೂ ವಕೀಲರ ಇಲ್ಲದೇ ಇದ್ದದ್ದು ಈಗ ಪರಿಪೂರ್ಣವಾಗಿದೆ. ಶ್ರೀಕಾಂತ್‌ರವರಿಗೆ ಯಶಸ್ಸು ಸಿಗಲಿ ಎಂದು ಹೇಳಿ ಶುಭ ಹಾರೈಸಿದರು.


ವಕೀಲ ಶ್ರೀಕಾಂತ ಪಿ.ಎಸ್ ಮಾತನಾಡಿ, ಹುಟ್ಟೂರಿನಲ್ಲಿ ಕಛೇರಿಯನ್ನು ಆರಂಭಿಸಬೇಕು ಎನ್ನುವುದು ನನ್ನ ಬಹುದಿನ ಆಸೆಯಾಗಿತ್ತು. ಕಛೇರಿ ಆರಂಭ ಮಾಡುವುದು ಸುಲಭ ಆದರೆ ಅದನ್ನು ಮುಂದುವರಿಸಿಕೊಂಡು ಹೋಗುವುದು ಬಹಳ ಕಷ್ಟ. ಆರಂಭದ ದಿನಗಳಲ್ಲಿ ಪೈಲು ಸಿಗಬೇಕು ಇಲ್ಲದಿದ್ದರೆ ಕಷ್ಟವಾಗುತ್ತದೆ. ಈ ಕಛೇರಿ ಆರಂಭದ ಹಿಂದೆ ನನ್ನ ಸೀನಿಯರ್, ಗುರುಗಳ ಸಂಪೂರ್ಣ ಸಹಕಾರ, ಆಶೀರ್ವಾದ ಇದೆ. ನನಗೆ ಸದಾ ಬೆನ್ನು ತಟ್ಟಿ ಪ್ರೋತ್ಸಾಹ ನೀಡುವ ಮೂಲಕ ನನ್ನನ್ನು ನನ್ನ ಮನೆಯ ಒಬ್ಬನಂತೆ ಉಪಚರಿಸಿದವರು ನನ್ನ ಸೀನಿಯರ್ ಆದ್ದರಿಂದ ಅವರಿಗೆ ನಾನು ಚಿರಋಣಿಯಾಗಿದ್ದೇನೆ. ತಾವೆಲ್ಲರೂ ನನಗೆ ಸಹಕಾರ ನೀಡುವ ಮೂಲಕ ನನಗೆ ಪ್ರೋತ್ಸಾಹ ನೀಡುವಂತೆ ಕೇಳಿಕೊಂಡು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ನಾರಾಯಿಣಿ ಅಮ್ಮ, ಶ್ರೀಕಾಂತ್‌ರವರ ಪೋಷಕರಾದ ಶಿವರಾಮ್ ಪಿ ಮತ್ತು ಸುನಂದಾ, ವಕೀಲರಾದ ವಿರೂಪಾಕ್ಷ, ಕೃಷಿಕ ಮುಂಡ್ಯ ಶ್ರೀಕೃಷ್ಣ ಭಟ್, ನ್ಯಾಯವಾದಿ ಅನೀಶ್ ಸೇರಿದಂತೆ ಹಲವು ಮಂದಿ ವಕೀಲರು, ಗ್ರಾಮಸ್ಥರು ಉಪಸ್ಥಿತರಿದ್ದರು. ಶ್ರೀಕಾಂತ್‌ರವರ ಸಹೋದರ ವಿಶ್ವೇಶ್ ಪಿ.ಎಸ್ ಸ್ವಾಗತಿಸಿ ವಂದಿಸಿದರು.

ಈಶ್ವರಮಂಗಲದಲ್ಲಿ ಪ್ರಥಮ ವಕೀಲರ ಕಛೇರಿ
ಬೆಳೆಯುತ್ತಿರುವ ಈಶ್ವರಮಂಗಲ ಪೇಟೆಯು ಕೇರಳ ಗಡಿಭಾಗದ ಗಾಳಿಮುಖ, ಕರ್ನೂರು, ದೇಲಂಪಾಡಿ, ಸುಳ್ಯಪದವು, ಅಲ್ಲದೆ ಕಾವು, ಕುಂಬ್ರ ಇತ್ಯಾದಿ ಪೇಟೆಗಳ ಹೃದಯಭಾಗದಂತಿರುವ ಈಶ್ವರಮಂಗಲದಲ್ಲಿ ಪ್ರಥಮವಾಗಿ ವಕೀಲರ ಕಛೇರಿ ಆರಂಭಗೊಂಡಿದೆ. ಬಹುತೇಕ ಸರಕಾರಿ ಕಛೇರಿ ಇದ್ದರೂ ವಕೀಲರ ಕಛೇರಿ ಇರಲಿಲ್ಲ ಇದೀಗ ನ್ಯಾಯವಾದಿ ಶ್ರೀಕಾಂತ್‌ರವರ ಕಛೇರಿ ಆರಂಭದೊಂದಿಗೆ ಇದು ಪರಿಪೂರ್ಣವಾಗಿದೆ.


LEAVE A REPLY

Please enter your comment!
Please enter your name here