ಕುಂಬ್ರ ಶ್ರೀರಾಮ ಭಜನಾ ಮಂದಿರದಲ್ಲಿ 42 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಂಭ್ರಮ

0


ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳುವುದೇ ನಿಜವಾದ ಧರ್ಮವಾಗಿದೆ: ಶಾಸಕ ಅಶೋಕ್ ರೈ

ಪುತ್ತೂರು: ಧರ್ಮ ಯಾವುದೇ ಎಂದು ಕೇಳಿದರೆ ಎಲ್ಲರನ್ನೂ ಒಂದೇ ಮನಸ್ಸಿನಿಂದ ಪ್ರೀತಿಸುವುದೇ ಧರ್ಮವಾಗಿದೆ, ತನ್ನ ಹೆತ್ತವರಾದ ತಂದೆ ತಾಯಿಯನ್ನು ಕಡೆತನಕ ಚೆನ್ನಾಗಿ ನೋಡಿಕೊಳ್ಳುವುದೇ ನಿಜವಾದ ಧರ್ಮವಾಗಿದೆ. ಇಂತಹ ಧರ್ಮ ಜಾಗೃತಿಯನ್ನು ನಾವು ಇಂದು ನಮ್ಮ ಮಕ್ಕಳಲ್ಲಿ ಬೆಳೆಸಬೇಕಾಗಿದೆ. ನಮಗೆ ತಂದೆ ತಾಯಿಯ ಪ್ರೀತಿ ಸಿಗದೇ ಇದ್ದಾಗ ನಮಲ್ಲಿ ಎಷ್ಟು ಹಣವಿದ್ದರೂ ಪ್ರಯೋಜನವಿಲ್ಲ ಹಣಕ್ಕಿಂತ ದೊಡ್ಡದು ನಮ್ಮ ಹೆತ್ತವರು ಅವರಲ್ಲಿ ನಾವು ದೇವರನ್ನು ಕಾಣುವವರಾಗಬೇಕು ಆ ಮೂಲಕ ನಮ್ಮ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯಗಳನ್ನು ಬೆಳೆಸುವವರಾಗಬೇಕು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಅವರು ಕುಂಬ್ರ ಶ್ರೀ ರಾಮ ಭಜನಾ ಮಂದಿರದಲ್ಲಿ ನಡೆಯುತ್ತಿರುವ 42ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಮೊದಲ ದಿನವಾದ ಸೆ.19 ರಂದು ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಜಗತ್ತಿನಲ್ಲಿ ಎಲ್ಲರೂ ಒಗ್ಗಟ್ಟಿನಲ್ಲಿ ಇರಬೇಕು ಎಂಬ ಪರಿಕಲ್ಪನೆಯೊಂದಿಗೆ ಬಾಲಗಂಗಾಧರನಾಥ ತಿಲಕರು ಅಂದು ಸಾರ್ವಜನಿಕ ಗಣೇಶೋತ್ಸವವನ್ನು ಆಚರಣೆಗೆ ತಂದರು. ಭಾರತ ವಿಶ್ವಗುರು ಆಗಬೇಕು ಎಂಬ ಕಲ್ಪನೆ ನಮ್ಮಲ್ಲಿದೆ. ನಮ್ಮ ಆಚಾರ, ವಿಚಾರ, ಸಂಸ್ಕೃತಿ, ಸಂಸ್ಕಾರ ಇಡೀ ಜಗತ್ತಿಗೆ ತಿಳಿಯಬೇಕು ಎನ್ನುವ ನಿಟ್ಟಿನಲ್ಲಿ ನಾವು ಹೆಜ್ಜೆ ಹಾಕಬೇಕಾಗಿದೆ ಎಂದ ಶಾಸಕ ಅಶೋಕ್ ಕುಮಾರ್ ರೈಯವರು, ತಾಲೂಕಿನಲ್ಲಿ ಬಹಳಷ್ಟು ದೈವಸ್ಥಾನ, ಭಜನಾ ಮಂದಿರದ ಜಾಗವು ರೇಕಾರ್ಡ್ ಸಮಸ್ಯೆಯಿಂದ ಉಳಿದಿದೆ. ಇಂತಹ ಜಾಗವನ್ನು ಸಮಿತಿಯವರ ಹೆಸರಿನಲ್ಲಿ ಜಾಯಿಂಟ್ ಆರ್‌ಟಿಸಿ ಮಾಡಿಸುವ ಮೂಲಕ ರೇಕಾರ್ಡ್ ಮಾಡಿಕೊಡಬೇಕು ಎಂಬ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡಿದ್ದೇನೆ ಮುಂದಿನ ದಿನಗಳಲ್ಲಿ ಇದು ಸಾಧ್ಯವಾಗಲಿದೆ ಎಂದರು.

ಸಮಾಜವೇ ಸೇರಿಕೊಂಡು ಆಚರಿಸುವ ಹಬ್ಬ ಇದಾಗಿದೆ : ತ್ರಿವೇಣಿ ಪಲ್ಲತ್ತಾರು
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸುವ ಮೂಲಕ ಸಭಾಧ್ಯಕ್ಷತೆ ವಹಿಸಿದ್ದ ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರು ಮಾತನಾಡಿ, ಗಣೇಶೋತ್ಸವಕ್ಕೆ ತನ್ನದೇ ಆದ ವಿಶೇಷತೆ, ವಿಶಿಷ್ಠತೆಯೊಂದಿಗೆ ಪೌರಾಣಿಕ, ಆಧ್ಯಾತ್ಮಿಕ ಹಿನ್ನಲೆ ಇದೆ. ಅಂದು ತಿಲಕರು ಜನರನ್ನು ಒಗ್ಗೂಡಿಸಲು ಈ ಹಬ್ಬವನ್ನು ಸಾರ್ವಜನಿಕವಾಗಿ ಆಚರಣೆ ತಂದರು. ಅಂದಿನಿಂದ ಇಂದಿನವರೇಗೆ ಜಾತಿ,ಮತ,ಧರ್ಮವಿಲ್ಲದೆ ಇಡೀ ಸಮಾಜವೇ ಸೇರಿಕೊಂಡು ಆಚರಿಸುವ ಹಬ್ಬವಾಗಿ ಗಣೇಶೋತ್ಸವ ಉಳಿದುಕೊಂಡು ಬಂದಿದೆ. ವಿಘ್ನನಿವಾರಕ ನಮಗೆಲ್ಲರಿಗೂ ಒಳ್ಳೆಯದನ್ನು ಕರುಣಿಸಲಿ ಎಂದು ಹೇಳಿ ಶುಭ ಹಾರೈಸಿದರು.

ಮಾತಿಗಿಂತ ಆಚರಣೆ ಶ್ರೇಷ್ಠ: ಆಶಾ ಬೆಳ್ಳಾರೆ
ಮಾತೃದೇವೋ ಭವ ಎಂಬ ವಿಷಯದಲ್ಲಿ ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮುಖ್ಯಗುರು ಆಶಾ ಬೆಳ್ಳಾರೆಯವರು ಧಾರ್ಮಿಕ ಉಪನ್ಯಾಸ ನೀಡುತ್ತಾ, ಮಂಗಳಕರವಾ ಪ್ರಥಮ ವಂದಿತ ಗಣೇಶನನ್ನು ಸ್ಮರಿಸಿಕೊಳ್ಳುವ ವಿಶೇಷ ವಿಶಿಷ್ಠ ಹಿನ್ನಲೆಯಲ್ಲೂ ಹಬ್ಬ ಇದಾಗಿದೆ. ಗಣೇಶ ಹಬ್ಬದ ಹಿಂದೆ ಹಲವು ಕಥೆಗಳಿವೆ. ಈ ಹಬ್ಬವನ್ನು ಸಾರ್ವಜನಿಕವಾಗಿ ಆಚರಣೆಗೆ ತಂದವರು ಬಾಲ ಗಂಗಾಧರನಾಥ ತಿಲಕರು, ಸ್ವಾತಂತ್ರö್ಯ ಸಂಗ್ರಾಮದ ಸಮಯದಲ್ಲಿ ಜನರನ್ನು ಒಗ್ಗೂಡಿಸಲು ಜನರಲ್ಲಿ ಜಾಗೃತಿ ಮೂಡಿಸಲು ಈ ಹಬ್ಬವನ್ನು ಸಾರ್ವಜನಿಕವಾಗಿ ಆಚರಣೆಗೆ ತಂದರು. ಅಂದಿಗೆ ಇದು ಸರಿಯಾಗಿತ್ತು ಆದರೆ ಇಂದು ನಾವು ಯೋಚನೆ ಮಾಡಬೇಕಾಗಿದೆ. ನಾವು ಯಾವ ಮಟ್ಟಕ್ಕೆ ಇಳಿದಿದ್ದೇವೆ ಎಂಬ ಬಗ್ಗೆ ಚಿಂತನೆ ಮಾಡಬೇಕಾಗಿದೆ. ನಾವು ಪ್ರತಿದಿನ ಪ್ರಕೃತಿಯ ಮೇಲೆ ಹಸ್ತಕ್ಷೇಪ ಮಾಡುತ್ತಿದ್ದೇವೆ. ಆದ್ದರಿಂದ ಮಳೆಗಾಲದಲ್ಲಿ ಮಳೆ ಇಲ್ಲ, ಚಳಿಗಾಲದಲ್ಲಿ ಚಳಿ ಇಲ್ಲದಾಗಿದೆ. ಆದ್ದರಿಂದಲೇ ನಾವು ದೇವರ ಮೊರೆ ಹೋಗಬೇಕಾದ ಅಗತ್ಯತೆ ಇಂದು ಎದುರಾಗಿದೆ. ಆಚರಣೆಯ ಹಿಂದಿನ ಮಹತ್ವವನ್ನು ನಾವು ತಿಳಿದುಕೊಳ್ಳುವುದು ಅಗತ್ಯ ಏಕೆಂದರೆ ಮಾತಿಗಿಂದ ಆಚರಣೆ ಬಹಳ ಶ್ರೇಷ್ಠ. ನಾವು ನಮ್ಮ ಹೆತ್ತವರನ್ನು ಹೇಗೆ ನೋಡಿಕೊಳ್ಳಬೇಕು ಎಂಬ ಬಗ್ಗೆ ಗಂಟೆಗಟ್ಟಲೆ ಮಾತನಾಡಬಹುದು, ಪುಟಗಟ್ಟಲೆ ಬರೆಯಬಹುದು ಆದರೆ ಹಾಗೆ ನಾವು ನೋಡಿಕೊಂಡಿದ್ದೇವೋ ಎನ್ನುವುದೇ ಇಲ್ಲಿ ಶ್ರೇಷ್ಠವಾಗುತ್ತದೆ. ಆದ್ದರಿಂದ ನಮ್ಮ ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳುವುದೇ ಶ್ರೇಷ್ಠ ಧರ್ಮವಾಗಿದೆ ಎಂದು ಹೇಳಿ ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿದ್ದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಧಾಕರ ರಾವ್ ಆರ್ಯಾಪುರವರು ಮಾತನಾಡಿ, ಕಲ್ಲಿಗೂ ಒಂದು ಅದ್ಭುತ ಶಕ್ತಿಯನ್ನು ಕೊಡಬಲ್ಲವರು ನಾವಾಗಿದ್ದೇವೆ. ಎಲ್ಲಿ ಭಕ್ತಿಯಿಂದ ಆರಾಧನೆ ನಡೆಯುತ್ತದೋ ಅಲ್ಲಿ ಕಾರಣಿಕತೆಯೂ ನೆಲೆಗೊಳ್ಳುತ್ತದೆ. ಕುಂಬ್ರದ ಗಣೇಶ ಆಚರಣೆಗೆ ಬರೋಬ್ಬರಿ 42 ವರ್ಷಗಳು ಸಂದಿವೆ. ಇಲ್ಲಿನ ಗಣೇಶ ದೇವರ ಬಹಳ ಕಾರಣಿಕತೆಯನ್ನು ಹೊಂದಿದ್ದಾರೆ ಎಂಬುದನ್ನು ಇಲ್ಲಿ ನಡೆಯುವ ಕಾರ್ಯಕ್ರಮಗಳೇ ಸಾಕ್ಷಿಯಾಗಿವೆ. ಮುಂದಿನ ದಿನಗಳಲ್ಲಿ ಕುಂಬ್ರದಲ್ಲಿ ಒಂದು ಭವ್ಯವಾದ ಶ್ರೀರಾಮ ಮಂದಿರ ನಿರ್ಮಾಣಗೊಳ್ಳಲಿ ಎಂದು ಹೇಳಿ ಶುಭ ಹಾರೈಸಿದರು.

ಕಬಕ ಸರಕಾರಿ ಹಿ.ಪ್ರಾ.ಶಾಲಾ ಮುಖ್ಯಗುರು ಬಾಬು ಮಾಸ್ತರ್ ತೆಗ್ಗು ಮಾತನಾಡಿ, ಒಳ್ಳೆಯ ಸಂಸ್ಕಾರಗಳು ಬೆಳೆದಾಗ ಮಾತ್ರ ನಮ್ಮ ಸಂಸ್ಕೃತಿ ಉಳಿಯಲು ಸಾಧ್ಯ ಈ ನಿಟ್ಟಿನಲ್ಲಿ ನಮ್ಮ ಮಕ್ಕಳಲ್ಲಿ ಸಂಸ್ಕಾರಯುತ ಮೌಲ್ಯಗಳನ್ನು ಬೆಳೆಸಬೇಕಾಗಿದೆ. ತಂದೆ ತಾಯಿಯನ್ನು ಗೌರವಿಸುವ ಮೂಲಕ ನಮ್ಮ ಆಚಾರ,ವಿಚಾರಗಳನ್ನು ಅರಿತುಕೊಳ್ಳುವ ಪಾಠವನ್ನು ಮಕ್ಕಳಿಗೆ ತಿಳಿಸಿಕೊಡಬೇಕಾಗಿದೆ ಎಂದು ಹೇಳಿ ಶುಭ ಹಾರೈಸಿದರು. ಮಂಗಳೂರು ಶ್ರೀ ಕಟೀಲ್ ಲಾಜಿಸ್ಟಿಕ್‌ನ ಉದ್ಯಮಿ ಜನಾರ್ದನ ಪೂಜಾರಿ ಪದಡ್ಕ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.

ವೇದಿಕೆಯಲ್ಲಿ ಕುಂಬ್ರ ಶ್ರೀ ರಾಮ ಭಜನಾ ಮಂದಿರದ ಮಾಜಿ ಅಧ್ಯಕ್ಷರುಗಳಾದ ಎಂ.ಎಸ್.ಕೇಶವ ಶಾಂತಿವನ ಮತ್ತು ರಾಮಯ್ಯ ಗೌಡ ಬೊಳ್ಳಾಡಿ, ಮಂದಿರದ ಆಡಳಿತ ಸಮಿತಿ ಅಧ್ಯಕ್ಷ ಪದ್ಮನಾಭ ರೈ ಅರೆಪ್ಪಾಡಿ ಉಪಸ್ಥಿತರಿದ್ದರು. ಶುÈತಿ ಪಲ್ಲತ್ತಾರು ಪ್ರಾರ್ಥಿಸಿದರು. ಶ್ರೀ ಗಣೇಶೋತ್ಸವ ಸಮಿತಿ ಸಂಚಾಲಕ ರತನ್ ರೈ ಕುಂಬ್ರ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ಮಂದಿರದ ಆಡಳಿತ ಸಮಿತಿ ಜತೆ ಕಾರ್ಯದರ್ಶಿ ಆಶಾಲತಾ ಎಂ.ರೈ, ರವಿಕಲಾ ಉಮೇಶ್, ಕೃತಿಕ್, ಸಚಿನ್, ನಿಶಾನ್, ಪ್ರಶಾಂತ್, ಮೇಘರಾಜ್ ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಅಂಕಿತ್ ರೈ ಕುಯ್ಯಾರು ವಂದಿಸಿದರು.ಅರ್ಧ ಏಕಾಹ ಭಜನೆಯ ಸಂಚಾಲಕ ಹರೀಶ್ ರೈ ಮುಗೇರು ಕಾರ್ಯಕ್ರಮ ನಿರೂಪಿಸಿದರು.

ಸರಕಾರಿ ಕೆಲಸಗಳಿಗೆ ಲಂಚ ಕೊಡಬೇಡಿ:
ಸರಕಾರ ಮಾತೆಯರ ಕೈ ಗಟ್ಟಿ ಮಾಡುವ ಕೆಲಸವನ್ನು ಮಾಡುತ್ತಿದ್ದು ಈಗಾಗಲೇ ಗ್ಯಾರಂಟಿಗಳನ್ನು ಜನರಿಗೆ ತಲುಪಿಸಿದೆ. ನಾನು ಶಾಸಕನಾಗಿ ಜನರ ಸೇವೆಯನ್ನು ಮಾಡಲು ಸದಾ ಸಿದ್ದನಿದ್ದು ನಿಮ್ಮ ಯಾವುದೇ ಸರಕಾರಿ ಕೆಲಸಗಳಿಗೆ ಲಂಚವನ್ನು ಕೊಡಬೇಡಿ ಅಧಿಕಾರಿಗಳು ಲಂಚ ಕೇಳಿದರೆ ನನ್ನ ಗಮನಕ್ಕೆ ತನ್ನಿ ಎಂಬ ವಿಷಯವನ್ನು ಈ ಸಂದರ್ಭದಲ್ಲಿ ಅವರು ಹೇಳಿದರು.

ವೈಧಿಕ/ ಸಾಂಸ್ಕೃತಿಕ ಕಾರ್ಯಕ್ರಮಗಳು:

ಅರ್ಚಕರಾದ ಪ್ರಕಾಶ್ ನಕ್ಷತ್ರಿತ್ತಾಯ ಮತ್ತು ತಂಡದವರಿಂದ ವಿವಿಧ ವೈಧಿಕ ಕಾರ್ಯಕ್ರಮಗಳು ನಡೆಯಿತು. ಬೆಳಿಗ್ಗೆ ಶ್ರೀ ಗಣೇಶ ವಿಗ್ರಹದ ಪ್ರತಿಷ್ಠಾಪನೆ ನಡೆದು ಗಣಪತಿ ಹೋಮ, ವಾಗ್ದೇವಿ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ಶಾಸ್ತ್ರೀಯ ಸಂಗೀತ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಅಪರಾಹ್ನ ಧಾರ್ಮಿಕ ರಸಪ್ರಶ್ನೆ, ರಾತ್ರಿ ಭಜನೆ, ಮಹಾಪೂಜೆ, ಪ್ರಸಾದ ವಿತರಣೆಯ ಬಳಿಕ ಯಶಸ್ವಿ ಕಲಾವಿದರು ಮಂಜೇಶ್ವರ ಇವರಿಂದ `ಅಬ್ಬರ’ ಎಂಬ ತುಳು ನಾಟಕ ಪ್ರದರ್ಶನಗೊಳ್ಳಲಿದೆ.

ನಾಳೆ(ಸೆ.20) ಮಂದಿರದಲ್ಲಿ…
ಬೆಳಿಗ್ಗೆ ವೈಧಿಕ ಕಾರ್ಯಕ್ರಮಗಳು, ಧಾರ್ಮಿಕ ಸಭೆ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಅಪರಾಹ್ನ ವಿವಿಧ ಸ್ಪರ್ಧೆಗಳು, ರಾತ್ರಿ ಸಾರ್ವಜನಿಕ ರಂಗಪೂಜೆ, ಸಾಂಸ್ಕೃತಿಕ ಕಾರ್ಯಕ್ರಮವಾಗಿ ಬೆಳಿಗ್ಗೆ ಭಕ್ತಿರಸಮಂಜರಿ, ರಾತ್ರಿ ಸಾಂಸ್ಕೃತಿಕ ವೈವಿಧ್ಯ ನಡೆಯಲಿದೆ.

LEAVE A REPLY

Please enter your comment!
Please enter your name here