*ಗಣಪತಿ ಮೊದಲ ವಂದಿತ ಏಕೆ ?
*ಪ್ರತಿಯೊಂದು ಹಿಂದೂ ದೇವಸ್ಥಾನದಲ್ಲಿ ಗಣಪತಿಯ ಗುಡಿ ಇರುವುದೇಕೆ ?
*ಈಶ್ವರ ದೇವಸ್ಥಾನವಾಗಿರಲಿ, ಮಹಾವಿಷ್ಣುವಿನ ದೇವಸ್ಥಾನವಾಗಿರಲಿ, ತಾಯಿ ದುರ್ಗೆಯ ದೇವಸ್ಥಾನವಾದರೂ, ಪ್ರತಿ ದೇವಸ್ಥಾನಕ್ಕೆ ಹೋದಾಗ *ಮೊದಲು ಮಹಾಗಣಪತಿಗೆ ನಮಿಸಿ ಮೂಲ ದೇವರನ್ನು ಕಂಡರೆ ಅತ್ಯಂತ ಶ್ರೇಯಸ್ಸು ಎನ್ನುವುದು ಏಕೆ ?
ಹಿಂದೂ ಧರ್ಮದ ಆಳವನ್ನು ಅರಿತವನಿಗೆ ಎಲ್ಲಾ ದೇವರುಗಳಲ್ಲಿ ವೈಜ್ಞಾನಿಕ ಅರ್ಥ ಹೇಗೆ ಅಡಗಿದೆ ಎನ್ನುವುದು ಅರಿವಿಗೆ ಬರುತ್ತದೆ.
ಮಹಾಗಣಪತಿ ಎಂದರೆ ಸ್ವಾಭಿಮಾನ ಸ್ವಾಗೌರವ, ಸ್ವಾನಂಬಿಕೆಯ ಸಂಕೇತ. ಯಶಸ್ವಿ ವ್ಯಕ್ತಿಗೆ ಮೂಲಭೂತವಾಗಿ ತನ್ನ ಬಗೆಗೆ ಅತ್ಯಂತ ಅಭಿಮಾನ ಗೌರವ ನಂಬಿಕೆ ಇರುತ್ತದೆ. ನಾನು ಯಾವುದನ್ನು ಬೇಕಾದರೂ ಸಾಧಿಸಬಲ್ಲೆ ಎನ್ನುವ ಛಲ ಇರುತ್ತದೆ. ಇದೇ ಯಶಸ್ಸಿನ ಮೂಲ. ಸಂತೋಷ, ನೆಮ್ಮದಿ, ಯಶಸ್ಸು, ಸಂಬಂಧದ ಬಲ, ಸ್ಥಾನ, ಮಾನ ಉಳಿದೆಲ್ಲವೂ ನಂತರ ಬರುವಂತದ್ದು. ತನ್ನ ಬಗೆಗೆ ನಂಬಿಕೆ ಇಲ್ಲವಾದರೆ ಇವೆಲ್ಲವೂ ಶೂನ್ಯ.
ಮನುಷ್ಯನ ದೇಹದಲ್ಲಿ ಏಳು ಮುಖ್ಯ ಚಕ್ರಗಳಿವೆ. ಪದ್ಮಾಸನದಲ್ಲಿ ಕುಳಿತರೆ ನಮ್ಮ ಬೆನ್ನಿನ ಕೊನೆಯ ಭಾಗದಲ್ಲಿ ಭೂಮಿಯ ಸ್ಪರ್ಶಕ್ಕೆ ಅತಿ ಹತ್ತಿರದಲ್ಲಿರುವ ಚಕ್ರ “ಮೂಲಾಧಾರ ಚಕ್ರ” ಇದರ ಅಧಿಪತಿ “ಮಹಾಗಣಪತಿ”. ಈ ಚಕ್ರದ ಸಮತೋಲನಕ್ಕೆ “ಪೃಥ್ವಿ ತತ್ವ” ಆಧಾರ.
ಹಾಗೆ ಬರಿಗಾಲಲ್ಲಿ ಪ್ರಕೃತಿಯ ನಡುವೆ ನಡೆಯುತ್ತಾ ಹೋದಾಗ ಎಷ್ಟೊಂದು ಉತ್ತಮ ಚಿಂತನೆಗಳು ಬರುತ್ತವೆ ಅಲ್ಲವೇ? ಮನಸ್ಸಿಗೆ ಒಂದು ತರಹ ಸಮಾಧಾನ. ಧನಾತ್ಮಕ ಶಕ್ತಿ. ಹೊಸ ಹೊಸ ಯೋಜನೆಗಳು, ನಾನು ಏನನ್ನಾದರೂ ಮಾಡಬಲ್ಲೆ ಎನ್ನುವಂತಹ ಧೈರ್ಯ, ನಮ್ಮ ಬಗ್ಗೆ ವಿಶೇಷ ಕಾಳಜಿ,ಧೈರ್ಯ ಇತ್ಯಾದಿ ಇತ್ಯಾದಿ…. ಇವೆಲ್ಲವೂ ಸ್ವ ಗೌರವವನ್ನು ಹೆಚ್ಚಿಸಿಕೊಳ್ಳುವ ಸಂಕೇತ. ಪ್ರಕೃತಿಯ ಮಡಿಲಲ್ಲಿ ಇದ್ದಷ್ಟು ಸಮಯ ಅದೊಂದು ವಿಶೇಷವಾದ ಧೈರ್ಯ ನಮ್ಮನ್ನು ಅಪ್ಪಿಕೊಂಡಿರುತ್ತದೆ. ಇದನ್ನೇ ಮಹಾಗಣಪನೆನ್ನುವುದು. ಇವೆಲ್ಲವುಗಳ ಬಗ್ಗೆ ಹಿಂದುಗಳಾದ ನಾವು ಸರಿಯಾದ ಅರಿವನ್ನು ಪಡೆಯಬೇಕು. ನಮಗಿಷ್ಟು ದೇವರು ಏಕೆ ಎನ್ನುವುದನ್ನು ವೈಜ್ಞಾನಿಕವಾಗಿ ತಿಳಿದುಕೊಳ್ಳಬೇಕು. ಇದೇ ಧರ್ಮ.
ಹೇ ಮೊದಲ ವಂದಿತನೇ, ಮಹಾಗಣಪನೆ ಈ ಗಣೇಶ ಚತುರ್ಥಿಯ ಈ ಶುಭ ದಿನದಂದು ಎಲ್ಲಾ ಬಂಧುಗಳಿಗೂ ನನ್ನ ಪ್ರೀತಿ ಪಾತ್ರರಿಗೂ ತಮ್ಮ ಬಗೆಗೆ ಗೌರವ ಅಭಿಮಾನವನ್ನು ಮೂಡಿಸಿ ಜೀವನದಲ್ಲಿ ನಾನು ಏನು ಬೇಕಾದರೂ ಸಾಧಿಸಬಲ್ಲೆ ಎನ್ನುವ ಛಲವನ್ನು ದಯಪಾಲಿಸು ತಂದೆ. ನಿನ್ನ ದಯದಿಂದ ಜೀವನದಲ್ಲಿ ಸಾಧಿಸಿದವರನ್ನು ಇನ್ನಷ್ಟು ಬೆಳೆಸು.
ನಿಮಗೂ ನಿಮ್ಮ ಮನೆಯವರೆಲ್ಲರಿಗೂ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು.
ಡಾ.ಅನಿಲ ದೀಪಕ್ ಶೆಟ್ಟಿ
ಬಿ ವೆಲ್ ಫಾರ್ಮ