ಪುತ್ತೂರು:ದ.ಕ.ಮತ್ತು ಉಡುಪಿ ಜಿಲ್ಲಾ ಪೊಲೀಸರ ಸಹಕಾರದೊಂದಿಗೆ ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಇತರರು ಉಚ್ಛ ನ್ಯಾಯಾಲಯದ ಆದೇಶವನ್ನು ಉಲ್ಲಂಸುತ್ತಿರುವುದಾಗಿ ಆರೋಪಿಸಿ ಉಳ್ಳಾಲ ಬಯಲಂಗಡಿ ಹೊಯ್ಗೆ ಮನೆ ಪರಮೇಶ್ ಆರ್.ಶೆಟ್ಟಿಗಾರ್,ಮಂಗಳೂರು ಪಂಜಿಮೊಗರು ವಿದ್ಯಾನಗರ ಕಲ ಹೌಸ್‌ನ ಹರೀಶ್ ಶೆಟ್ಟಿ ಮತ್ತು ಸೋಮೇಶ್ವರ ಕುಂಪಲ ಚೇತನಾನಗರದ ಸತೀಶ್ ದೀಪಂ ಎಂಬವರು ದ.ಕ ಮತ್ತು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಗೆ ದೂರು ನೀಡಿ,ನ್ಯಾಯಾಲಯದ ಆದೇಶ ಪಾಲಿಸುವಂತೆ ಮನವಿ ಮಾಡಿದ್ದಾರೆ.
ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಇತರರ ವಿರುದ್ಧ ಶ್ರೀ ಕ್ಷೇತ್ರ ಧರ್ಮಸ್ಥಳ, ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬದವರ ವಿರುದ್ಧ ಯಾವುದೇ ರೀತಿಯ ಆರೋಪಗಳನ್ನು ಅಥವಾ ಟೀಕೆಗಳನ್ನು ಮಾಡದಂತೆ ಬೆಂಗಳೂರು ಪ್ರಿನ್ಸಿಪಾಲ್ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ನಿರ್ಬಂಧಕಾಜ್ಞೆ ಜಾರಿಗೊಳಿಸಿ ಆದೇಶಿಸಿದೆ.ಆದರೂ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ ತಿಮರೋಡಿ ಮಹೇಶ್ ಶೆಟ್ಟಿಯವರು ಪೊಲೀಸರ ಸಕ್ರಿಯ ಸಹಾಯದೊಂದಿಗೆ ಡಾ|ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬದವರ ವಿರುದ್ಧ ಬಹಿರಂಗ ಸಭೆಗಳನ್ನು ನಡೆಸಿ ಸುಳ್ಳು ಆರೋಪಗಳನ್ನು ಮಾಡಿಕೊಂಡು ಬರುತ್ತಿದ್ದಾರೆ.ಈ ವಿಚಾರವನ್ನು ಡಾ|ಹೆಗ್ಗಡೆಯವರ ಪರವಾಗಿ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ರಿಟ್ ಪಿಟಿಷನ್‌ನಲ್ಲಿ ನಿವೇದಿಸಿಕೊಳ್ಳಲಾಗಿದೆ.ಪ್ರತಿಬಂಧಕಾಜ್ಞೆ ಉಲ್ಲಂಸದಂತೆ ಉಚ್ಛ ನ್ಯಾಯಾಲಯ ಕೂಡಾ ಮಹೇಶ್ ಶೆಟ್ಟಿ ತಿಮರೋಡಿಗೆ ಕಟ್ಟಾಜ್ಞೆ ನೀಡಿದೆ ಮತ್ತು ತಿಮರೋಡಿಯವರು ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳಲು ಸರಕಾರದ ಮುಖ್ಯಕಾರ್ಯದರ್ಶಿ ಹಾಗೂ ಪೊಲೀಸ್ ಇಲಾಖೆಗೆ ಆದೇಶಿಸಿದೆ.ಆದರೆ, ನ್ಯಾಯಾಲಯದ ಈ ಆದೇಶವನ್ನು ಸ್ವತ: ಪೊಲೀಸ್ ಇಲಾಖೆಯೇ ಉಲ್ಲಂಸುತ್ತಿರುವುದಲ್ಲದೆ ಮಹೇಶ್ ಶೆಟ್ಟಿಯವರಿಗೆ ನ್ಯಾಯಾಲಯದ ಆದೇಶ ಉಲ್ಲಂಸುವುದಕ್ಕೆ ಸಹಕರಿಸುತ್ತಾ, ಬಂದೋಬಸ್ತ್, ಪೊಲೀಸ್ ರಕ್ಷಣೆ ನೀಡಿ ಸತತವಾಗಿ ಬಹಿರಂಗ ಸಭೆ ನಡೆಸಿ ಧ್ವನಿವರ್ಧಕ ಮುಖೇನ ಆರೋಪಗಳನ್ನು ಮಾಡಿಸುತ್ತಿರುವುದು, ಯೂ ಟ್ಯೂಬ್ ಇತ್ಯಾದಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರವನ್ನು ಮಾಡಲಾಗುತ್ತಿದೆ.ಕಾನೂನು ಮತ್ತು ನ್ಯಾಯಾಲಯದ ಆದೇಶವನ್ನು ಗೌರವಿಸಬೇಕಿದ್ದ ಪೊಲೀಸ್ ಇಲಾಖೆಯೇ ಭಯದಿಂದ ಅಥವಾ ಯಾರದ್ದೋ ಒತ್ತಡದಿಂದಾಗಿ ಸೇರಿಕೊಂಡು ಈ ರೀತಿ ಸಮಾಜಕ್ಕೆ ಕೆಟ್ಟ ಸಂದೇಶವನ್ನು ನೀಡಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಸೆ.13ರಂದು ಮಂಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ 400 ಮೀ.ಅಂತರದಲ್ಲಿ ಪೊಲೀಸರ ಸಕ್ರಿಯ ಸಹಕಾರದೊಂದಿಗೆ ಮಹೇಶ್ ಶೆಟ್ಟಿ ತಿಮರೋಡಿ ಸಭೆ ನಡೆಸಿ ಬಹಿರಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಡಾ|ಹೆಗ್ಗಡೆಯವರ ಮತ್ತು ಅವರ ಕುಟುಂಬಿಕರ ವಿರುದ್ಧ ಸುಳ್ಳು ಆರೋಪ ಹೊರಿಸಿರುತ್ತಾರೆ ಎಂದೂ ದೂರಿನಲ್ಲಿ ತಿಳಿಸಿದ್ದು, ನ್ಯಾಯಾಲಯದ ಆದೇಶವನ್ನು ಇನ್ನಾದರೂ ಪಾಲಿಸುವ ಮೂಲಕ ನ್ಯಾಯಾಲಯದ ಘನತೆಯನ್ನು ಎತ್ತಿ ಹಿಡಿಯಬೇಕಾಗಿ ಆಗ್ರಹಿಸಿದ್ದಾರೆ.ಇದಕ್ಕೆ ತಪ್ಪಿದಲ್ಲಿ ನ್ಯಾಯಾಂಗ ನಿಂದನೆ ಮಾಡುತ್ತಿರುವ ದ.ಕ,ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಸರಕಾರದ ಮುಖ್ಯ ಕಾರ್ಯದರ್ಶಿಗಳ ಸಹಿತ ಸಂಬಂಧಿಸಿದ ಎಲ್ಲರ ವಿರುದ್ಧ ಉಚ್ಛ ನ್ಯಾಯಾಲಯದ ಮೊರೆ ಹೋಗುವ ಗಂಭೀರ ಚಿಂತನೆ ನಡೆಸುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.