ಅದ್ದೂರಿ ಚಲನಚಿತ್ರ ‘ಇನಾಮ್ದಾರ್’ನಲ್ಲಿ ಬಣ್ಣ ಹಚ್ಚಿ ಗಮನ ಸೆಳೆದ ಚಿತ್ರಕಲಾ ರಾಜೇಶ್

0

ಪುತ್ತೂರು: ಕೆಲವೇ ದಿನಗಳಲ್ಲಿ ತೆರೆಗೆ ಅಪ್ಪಳಿಸಲಿರುವ ‘ಇನಾಮ್ದಾರ್’ ಚಲನಚಿತ್ರದಲ್ಲಿ ಚಿತ್ರಕಲಾ ರಾಜೇಶ್ ಅವರು ಬಣ್ಣ ಹಚ್ಚಿ ಗಮನ ಸೆಳೆದಿದ್ದಾರೆ. ಅಕಸ್ಮಿಕವಾಗಿ ಸ್ಯಾಂಡಲ್‌ವುಡ್ ಪ್ರವೇಶ ಮಾಡಿರುವ ಕೊಕ್ಕಡ ಸಮೀಪದ ಪಟ್ರಮೆ ಗ್ರಾಮದ ಚಿತ್ರಕಲಾ ರಾಜೇಶ್ ಅವರು ಈ ಹಿಂದೆ ಸುದ್ದಿ ಬಿಡುಗಡೆ ಸಹಿತ ವಿವಿಧ ಮಾಧ್ಯಮಗಳಲ್ಲಿ ಕೆಲಸ ನಿರ್ವಹಿಸಿದ ಅನುಭವ ಹೊಂದಿದ್ದಾರೆ.

ಪಟ್ರಮೆ ಗ್ರಾಮದ ಅನಾರು ಮನೆಯ ರಾಘವ ಮತ್ತು ಚಂದ್ರಾವತಿಯವರ ಮಗಳಾದ ಚಿತ್ರಕಲಾ ಅವರು ಪುತ್ತೂರು ತಾಲೂಕಿನ ಗಡಿಭಾಗವಾದ ಕಾಸರಗೋಡು ತಾಲೂಕಿನ ದೇಲಂಪಾಡಿಯ ಬಂದ್ಯಡ್ಕದ ರಾಜೇಶ್ ಅವರ ಪತ್ನಿ. ಮೂಲತಃ ಪತ್ರಕರ್ತರಾದ ಚಿತ್ರಕಲಾ ರಾಜೇಶ್ ಅವರು ರಾಜ್ಯದ ಪ್ರತಿಷ್ಠಿತ ಟಿ.ವಿ. ಚಾನೆಲ್‌ಗಳಾದ ಟಿವಿ9, ಸುವರ್ಣ, ರಾಜ್ ನ್ಯೂಸ್, ಝೀ ಕನ್ನಡ, ಸುದ್ದಿ ನ್ಯೂಸ್, ಜನಶ್ರೀ, ಸರಳ ಜೀವನ ಚಾನೆಲ್‌ಗಳಲ್ಲಿ ಕೆಲಸ ನಿರ್ವಹಿಸಿದ್ದರು. ನಂತರ ಪುತ್ತೂರು ಸುದ್ದಿ ಬಿಡುಗಡೆ ಬಳಗದ ಸುದ್ದಿ ನ್ಯೂಸ್ ಚಾನೆಲ್‌ನಲ್ಲಿ ಕಾರ್ಯ ನಿರ್ವಹಿಸಿದ್ದರು. ಪ್ರಸ್ತುತ ಪತಿ ಮತ್ತು ಮಕ್ಕಳೊಂದಿಗೆ ಧಾರವಾಡದಲ್ಲಿ ನೆಲೆಸಿರುವ ಇವರು ವೆಬ್‌ಸೈಟ್‌ಗಳಿಗೆ ವರ್ಕ್ ಫ್ರಂ ಹೋಮ್ ಮಾಡುತ್ತಿದ್ದಾರೆ. ಇವುಗಳ ಮಧ್ಯೆ ಇವರು ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು ಅಭಿನಯಿಸಿದ ಇನಾಮ್ದಾರ್ ಚಿತ್ರ ಭಾರೀ ಸದ್ದು ಮಾಡುತ್ತಿದೆ. ಇದು ಇವರು ನಟಿಸಿದ ಎರಡನೇ ಚಿತ್ರವಾಗಿದೆ. ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ ಹಾಗೂ ಚಿತ್ರಕಲಾ ಅವರು ಬೆಂಗಳೂರಿನ ಸುದ್ದಿ ಟಿ.ವಿ.ಯಲ್ಲಿ ಒಟ್ಟಿಗೆ ಕೆಲಸ ಮಾಡಿದವರು. ಚಿತ್ರಕಲಾ ಅವರ ಫೋಟೋಜನಿಕ್ ಫೇಸ್ ನೋಡಿದ ಸಂದೇಶ್ ಅವರು ಅವರ ಮೊದಲ ನಿರ್ದೇಶನದ ಚಿತ್ರ ‘ಕತ್ತಲೆ ಕೋಣೆ’ಯಲ್ಲಿ ಅವಕಾಶ ಕಲ್ಪಿಸಿದ್ದರು. 2018ರಲ್ಲಿ ತೆರೆ ಕಂಡಿದ್ದ ಈ ಚಿತ್ರದಲ್ಲಿ ಗೃಹ ಮಂತ್ರಿಯ ಪಾತ್ರದಲ್ಲಿ ಚಿತ್ರಕಲಾ ಅಭಿನಯಿಸಿದ್ದರು. ಇದೀಗ ಸಂದೇಶ್ ಅವರದ್ದೇ ನಿರ್ದೇಶನದ ‘ಇನಾಮ್ದಾರ್’ ಚಿತ್ರದಲ್ಲಿ ಪೋಷಕ ನಟಿ ಪಾತ್ರದಲ್ಲಿ ಚಿತ್ರಕಲಾ ನಟಿಸಿದ್ದಾರೆ. ತನ್ನ ಅಭಿನಯದ ಮೂಲಕ ಚಿತ್ರತಂಡದ ಗಮನ ಸೆಳೆದಿದ್ದಾರೆ. ತರಂಗಾಂತರಂಗ ಎಂಬ ಚಿತ್ರದಲ್ಲಿಯೂ ಅಭಿನಯಿಸುತ್ತಿರುವ ಚಿತ್ರಕಲಾ ಅವರು ಸಂದೇಶ್ ಅವರ 3-4 ಪ್ರಾಜೆಕ್ಟ್‌ಗೂ ಒಪ್ಪಿಗೆ ನೀಡಿದ್ದಾರೆ. ಅಕ್ಟೋಬರ್ 6ರಂದು ಇನಾಮ್ದಾರ್ ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ. ಕನ್ನಡ ಚಿತ್ರರಂಗದ ಹಿರಿಯ ಕಲಾವಿದರಾದ ಅವಿನಾಶ್, ಪ್ರಮೋದ್ ಶೆಟ್ಟಿ, ಶರತ್ ಲೋಹಿತಾಶ್ವ, ಥ್ರಿಲ್ಲರ್ ಮಂಜು, ಎಂ.ಕೆ. ಮಠ ಮಾತ್ರವಲ್ಲದೆ ಅನೇಕ ಯುವ ನಟರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಚಿತ್ರರಂಗಕ್ಕೆ ಪ್ರವೇಶ ಮಾಡುತ್ತೇನೆ ಎಂದುಕೊಂಡಿರಲಿಲ್ಲ
ನಾನೆಂದೂ ಚಿತ್ರರಂಗಕ್ಕೆ ಪ್ರವೇಶ ಮಾಡುತ್ತೇನೆ, ಅಭಿನಯಿಸುತ್ತೇನೆ ಎಂದುಕೊಂಡಿರಲಿಲ್ಲ. ಇದೆಲ್ಲದರ ಕ್ರೆಡಿಟ್ ನನ್ನ ಆತ್ಮೀಯರಾದ ನಿರ್ದೇಶಕ ಸಂದೇಶ್ ಶೆಟ್ಟಿ ಅವರಿಗೆ ಸಲ್ಲಬೇಕು. ನನಗೆ ಇದೆಲ್ಲಾ ಆಗಿಬರಲ್ಲ, ಸಿನಿಮಾ ಬಗ್ಗೆ ನನಗೆ ಏನು ಗೊತ್ತಿಲ್ಲ, ನೋಡಿದ್ದೇವೆ, ಕೇಳಿದ್ದೇವೆ, ಕಮೆಂಟ್ ಮಾಡಿದ್ದೇವೆ ಬಿಟ್ರೆ ಅದಕ್ಕಿಂತ ಹೆಚ್ಚಿನದ್ದು ನಮಗೆ ಗೊತ್ತಿಲ್ಲ ಅಂದ್ರೂ ನನ್ನನ್ನು ಬಿಡದೆ ಮೇಡಂ ನೀವು ಒಂದು ಪಾತ್ರ ಆದ್ರೂ ಮಾಡಲೇ ಬೇಕು ಎಂದು ಒತ್ತಾಯಪೂರ್ವಕವಾಗಿ ನನ್ನನ್ನು ಚಿತ್ರರಂಗಕ್ಕೆ ಎಳೆ ತಂದವರು ಸಂದೇಶ್. ಕ್ಯಾಮರಾ, ಅಭಿನಯ, ಎಲ್ಲವೂ ಅವರ ಆದೇಶದಂತೆ ಮಾಡಿದ್ದೇನೆ. ನನ್ನೊಳಗಿನ ಅಭಿನಯವನ್ನು ಒಬ್ಬ ನಿರ್ದೇಶಕರಾಗಿ ಅವರು ಕಂಡುಕೊಂಡು ಅದನ್ನು ಹೊರ ತೆಗೆದಿದ್ದಾರೆ.

LEAVE A REPLY

Please enter your comment!
Please enter your name here