ಕೇರಳದಲ್ಲಿ ನಿಫಾ ವೈರಸ್ ಪತ್ತೆ ಹಿನ್ನೆಲೆ ರಾಜ್ಯದ ಗಡಿಯಲ್ಲಿ ಕಣ್ಗಾವಲು

0

20 ಚೆಕ್‌ಪೋಸ್ಟ್‌ಗಳ ಸ್ಥಾಪನೆ
10 ಸಾವಿರಕ್ಕೂ ಹೆಚ್ಚು ಜನರ ತಪಾಸಣೆ
ಜನರಲ್ಲಿ ಆತಂಕ ಬೇಡ
ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ಧ-ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್


ಮಂಗಳೂರು:ನೆರೆಯ ಕೇರಳದಲ್ಲಿ ಪತ್ತೆಯಾದ ಕೊನೆಯ ನಿಫಾ ಪ್ರಕರಣದ ಕಾವಿನ ಅವಧಿ ಮುಗಿಯುವ ಅಕ್ಟೋಬರ್ 10ರವರೆಗೆ ರಾಜ್ಯದ ಗಡಿಯಲ್ಲಿ ಕಣ್ಗಾವಲು ಮುಂದುವರಿಯುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಕೇರಳದೊಂದಿಗೆ ಗಡಿ ಹಂಚಿಕೊಂಡಿರುವ ದಕ್ಷಿಣ ಕನ್ನಡ, ಚಾಮರಾಜನಗರ, ಮೈಸೂರು, ಕೊಡಗು ಜಿಲ್ಲೆಗಳ ಆರೋಗ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಜ್ಯದಲ್ಲಿ ಯಾವುದೇ ಶಂಕಿತ ನಿಫಾ ಪ್ರಕರಣಗಳು ವರದಿಯಾಗದಿದ್ದರೂ ರಾಜ್ಯವು ಇಲ್ಲಿಯವರೆಗೂ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದರು.


ಗಡಿ ಪ್ರದೇಶಗಳಲ್ಲಿ ಎಚ್ಚರಿಕೆ ವಹಿಸಲಾಗಿದ್ದು, ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಈ ನಾಲ್ಕು ಜಿಲ್ಲೆಗಳಲ್ಲಿ ಸುಮಾರು 20 ಚೆಕ್ ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ ಮತ್ತು ಇದುವರೆಗೆ 10,000ಕ್ಕೂ ಹೆಚ್ಚು ಜನರನ್ನು ಜ್ವರ, ಕೆಮ್ಮು ಮತ್ತು ಇತರ ರೋಗಲಕ್ಷಣಗಳಿಗಾಗಿ ತಪಾಸಣೆ ಮಾಡಲಾಗಿದೆ.ದ.ಕ ಜಿಲ್ಲೆಯ 12 ಚೆಕ್‌ಪೋಸ್ಟ್‌ಗಳಲ್ಲಿ 2184, ಮೈಸೂರಿನ 4 ಚೆಕ್ ಪೋಸ್ಟ್‌ಗಳಲ್ಲಿ 6,500, ಕೊಡಗು 4 ಚೆಕ್‌ಪೋಸ್ಟ್‌ಗಳಲ್ಲಿ 1,132 ಮತ್ತು ಚಾಮರಾಜನಗರದ 2 ಚೆಕ್‌ಪೋಸ್ಟ್‌ಗಳಲ್ಲಿ 1,600 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಆದರೆ ಯಾರಲ್ಲೂ ಜ್ವರದ ಲಕ್ಷಣಗಳು ಕಂಡು ಬಂದಿಲ್ಲ. ಎಲ್ಲ ಚೆಕ್‌ಪೋಸ್ಟ್‌ಗಳಲ್ಲಿ ಆರೋಗ್ಯ ಇಲಾಖೆಯು ಅಗತ್ಯದ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಗಡಿ ದಾಟಿ ಬರುವವರಿಗೆ ಜ್ವರ ಮತ್ತು ಕೆಮ್ಮು ಇದೆಯೋ ಎಂಬ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ ಎಂದು ಸಚಿವರು ಹೇಳಿದರು.


ಈಗಾಗಲೇ ಕೇರಳದಲ್ಲಿ 6 ಮಂದಿಗೆ ನಿಫಾ ಸೋಂಕು ತಟ್ಟಿದೆ. ಈ ಪೈಕಿ ಇಬ್ಬರು ಮೃತಪಟ್ಟಿದ್ದಾರೆ. ನಾಲ್ವರು ಚೇತರಿಸಿಕೊಂಡಿದ್ದಾರೆ.ಸೆ.15ರಂದು ಕೇರಳದಲ್ಲಿ ಕೊನೆಯ ಪ್ರಕರಣ ಪತ್ತೆಯಾಗಿದೆ.ಆದ ಕಾರಣ ಮುಂದೆ ಅಕ್ಟೋಬರ್ 7ರ ತನಕ ಕರ್ನಾಟಕದಲ್ಲಿ ಕಟ್ಟೆಚ್ಚರ ವಹಿಸಲಾಗುವುದು. ಆರೋಗ್ಯ ಇಲಾಖೆಯು ಅಗತ್ಯದ ಕ್ರಮ ಕೈಗೊಂಡಿದೆ ಎಂದರು.
ನಿಫಾ ಸಾವಿನ ಪ್ರಮಾಣ ಶೇ.40-70ರಷ್ಟಿದ್ದು, ರೋಗಕ್ಕೆ ಯಾವುದೇ ಲಸಿಕೆ ಹಾಕದಿರುವುದರಿಂದ ಹೆಚ್ಚು ಜಾಗರೂಕರಾಗಿದ್ದೇವೆ. ಕೇರಳದಲ್ಲಿ ಪತ್ತೆಯಾದ ಕೊನೆಯ ನಿಫಾ ಪ್ರಕರಣದ ಕಾವಿನ ಅವಧಿ ಮುಗಿಯುವ ಅಕ್ಟೋಬರ್ 10 ರವರೆಗೆ ಕಣ್ಗಾವಲು ಮುಂದುವರಿಯುತ್ತದೆ. ಬಳಿಕ ಕಣ್ಗಾವಲು ಸಡಿಲಿಸಲಾಗುವುದು ಎಂದು ಹೇಳಿದರು.


ರಾಜ್ಯದಲ್ಲಿ ಇಲ್ಲಿಯವರೆಗೆ ನಿಫಾದ ಯಾವುದೇ ಪ್ರಕರಣ ವರದಿಯಾಗಿಲ್ಲ. ಅಂತಹ ಪ್ರಕರಣಗಳು ನಮ್ಮ ಗಮನಕ್ಕೆ ಬಂದರೆ, ಸ್ವ್ಯಾಬ್ ತೆಗೆದುಕೊಂಡು ಪರೀಕ್ಷೆಗಾಗಿ ವೈರಾಲಜಿ ಸಂಸ್ಥೆಗೆ ಕಳುಹಿಸುತ್ತೇವೆ. ಇದಲ್ಲದೆ, ಯಾವುದೇ ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಕ್ವಾರಂಟೈನ್, ವಿಶೇಷ ವಾರ್ಡ್‌ಗಳು, ಮಾಸ್ಕ್‌ಗಳು, ಕಿಟ್‌ಗಳು ಇತ್ಯಾದಿ ಸೌಲಭ್ಯಗಳನ್ನು ಇಟ್ಟುಕೊಳ್ಳುವ ಮೂಲಕ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಸಚಿವರು ಹೇಳಿದರು.


ಫಾರ್ಮಾಸಿಸ್ಟ್‌ಗಳಿಗೆ ಹೆಚ್ಚಿನ ಸಂಬಳ: ಸರ್ಕಾರಿ ಆಸ್ಪತ್ರೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಫಾರ್ಮಾಸಿಸ್ಟ್ ಹುದ್ದೆಗೆ ತೆಗೆದುಕೊಳ್ಳುವವರು ಕಡಿಮೆ ಇರುವ ಹಿನ್ನೆಲೆಯಲ್ಲಿ ಅವರ ವೇತನವನ್ನು 12,೦೦೦ ರೂ.ನಿಂದ 17,೦೦೦ ರೂ.ಗೆ ಹೆಚ್ಚಿಸಿ ಆದೇಶ ಹೊರಡಿಸಲಾಗಿದೆ.ಅಲ್ಲದೆ, ಆಸ್ಪತ್ರೆಗಳಲ್ಲಿ ಖಾಲಿ ಇರುವ ಗ್ರೂಪ್ ಡಿ ಹುದ್ದೆಗಳ ಶೇ.100ರಷ್ಟು ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರಕ್ಕೆ ಅನುಮೋದನೆ ನೀಡುವಂತೆ ಮನವಿ ಮಾಡಿದ್ದೇವೆ ಎಂದು ಸಚಿವರು ಹೇಳಿದರು.


ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ.ಆನಂದ್, ಆರೋಗ್ಯ, ಇಲಾಖೆಯ ಜಂಟಿ ನಿರ್ದೇಶಕರಾದ ಡಾ.ತ್ರಿವೇಣಿ, ವಿಭಾಗೀಯ ಸಹ ನಿರ್ದೇಶಕರಾದ ಡಾ.ರಾಜೇಶ್ವರಿ ದೇವಿ, ಉಪ ನಿರ್ದೇಶಕರಾದ ಡಾ.ಪದ್ಮಾ ಎಂ.ಆರ್., ಚಾಮರಾಜನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಚಿದಂಬರ್, ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕುಮಾರ ಸ್ವಾಮಿ, ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್, ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕಿಶೋರ್ ಕುಮಾರ್, ರಾಜ್ಯ ಮಟ್ಟದ ಮೈಕ್ರೋ ಬಯಾಲಜಿಸ್ಟ್, ಸರ್ವೇಕ್ಷಣಾಧಿಕಾರಿಗಳು ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here