ನೆಲ್ಯಾಡಿ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮುದ್ಯ ಬಜತ್ತೂರು ಇದರ ವತಿಯಿಂದ ದಶಸಂಭ್ರಮ ಶ್ರೀ ಗಣೇಶೋತ್ಸವ ಹಾಗೂ ಮರದ ಪೀಠ, ಬೆಳ್ಳಿಯ ನಾಗ ಮತ್ತು ಕಟ್ಟೆಗೆ ಮೇಲ್ಛಾವಣಿ ಸಮರ್ಪಣೆ ಸೆ.19ರಂದು ಬಜತ್ತೂರು ಮುದ್ಯ ಶ್ರೀ ಪಂಚಲಿಂಗೇಶ್ವರ ಸಭಾಭವನದಲ್ಲಿ ನಡೆಯಿತು. ಇದೇ ವೇಳೆ ಮರದ ಪೀಠ, ಬೆಳ್ಳಿಯ ನಾಗ ಮತ್ತು ಕಟ್ಟೆಗೆ ಮೇಲ್ಛಾವಣಿ ಸಮರ್ಪಣೆಯೂ ನಡೆಯಿತು.
ಸೆ.18ರಂದು ಸಂಜೆ ಗೌರಿ ಗಣೇಶ ಹಬ್ಬದ ಪ್ರಯುಕ್ತ ಏಕದಾಶ ರುದ್ರಾಭಿಷೇಕ ನಡೆಯಿತು. ಸೆ.19ರಂದು ಬೆಳಿಗ್ಗೆ ವಿದ್ಯಾಗಣಪತಿ ಪ್ರತಿಷ್ಠೆ ನಡೆಯಿತು. ನಂತರ ಗಣಹವನ, ಶ್ರೀ ಪಂಚಲಿಂಗೇಶ್ವರ ದೇವರಿಗೆ ನಿತ್ಯಪೂಜೆ, ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ನಡ್ಪ ಇವರಿಂದ ಭಜನೆ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಮಧ್ಯಾಹ್ನ ಊರವರಿಂದ ನೃತ್ಯ ವೈಭವವೂ ನಡೆಯಿತು. ವೇದಮೂರ್ತಿ ಅನಂತಕೃಷ್ಣ ಉಡುಪ ಇವರ ನೇತೃತ್ವದಲ್ಲಿ ವೇದಮೂರ್ತಿ ನಡ್ಪ ನಾರಾಯಣ ಬಡೆಕ್ಕಿಲ್ಲಾಯರ ಪೌರೋಹಿತ್ಯದಲ್ಲಿ ವೈದಿಕ ಕಾರ್ಯಕ್ರಮ ನಡೆಯಿತು.
ಗೌರವಾರ್ಪಣೆ/ಬಹುಮಾನ ವಿತರಣೆ:
ಬೆಳಿಗ್ಗೆ ಗೌರವಾರ್ಪಣೆ ಹಾಗೂ ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆಯು ನಡೆಯಿತು. ಗಣೇಶೋತ್ಸವ ಸಮಿತಿ ಮಾಜಿ ಅಧ್ಯಕ್ಷರಾದ ಧನಂಜಯ ಗೌಡ ಮುದ್ಯ, ಈಶ್ವರ ನಾಯಕ್ ಕುಳ್ಳಾಜೆ, ಗೋಪಾಲಕೃಷ್ಣ ಮುಡಂಬಡಿತ್ತಾಯ, ಶಿವಣ್ಣ ಗೌಡ ಬಿದಿರಾಡಿ, ಗೋಪಾಲಕೃಷ್ಣ ಗೌಡ ಪಿಜಕ್ಕಳ, ಮನ್ಮಥ ಮುದ್ಯ, ವೆಂಕಟ್ರಮಣ ಭಟ್ ಮುದ್ಯ ಅವರಿಗೆ ಗೌರವಾರ್ಪಣೆ ಮಾಡಲಾಯಿತು. ಗಣೇಶೋತ್ಸವ ಆಚರಣಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಕೆ.ಎಸ್.ಕುವೆಚ್ಚಾರು ಸನ್ಮಾನಿತರನ್ನು ಪರಿಚಯಿಸಿದರು. ಗಣೇಶೋತ್ಸವ ಸಮಿತಿ ಸಕ್ರೀಯ ಸದಸ್ಯರಾದ ಸೇಸಪ್ಪ ಗೌಡ ಉಪಾತಿಪಾಲು, ಗಂಗಾಧರ ಗೌಡ ಕೆಮ್ಮಾರ, ವಸಂತ ಗೌಡ ಕಾಂಚನ, ದಿನೇಶ್ ಕುಲಾಲ್, ವಾರಿಜ ಕೋಡಿಮನೆ, ಸುಧಾಕರ ಮುದ್ಯರವರನ್ನು ಗೌರವಿಸಲಾಯಿತು. ಮುದ್ಯ ಪಂಚಲಿಂಗೇಶ್ವರ ಭಜನಾ ಮಂಡಳಿಯ ಅಧ್ಯಕ್ಷ ನಾರಾಯಣ ಪೂಜಾರಿ ನೀರಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಪಡ್ಪು ದೈವಸ್ಥಾನದ ವ್ಯವಸ್ಥಾಪಕ ದಾಮೋದರ ಗೌಡ ಶೇಡಿಗುತ್ತು, ಸಂತೋಷ್‌ಕುಮಾರ್ ಜೈನ್ ಬಾರಿಕೆ, ಬಜತ್ತೂರು ಗ್ರಾ.ಪಂ.ಸದಸ್ಯ ಮಾಧವ ಪೂಜಾರಿ ಒರುಂಬೋಡಿ, ವಳಾಲು ಸರಕಾರಿ ಪ್ರೌಢಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಮಹೇಂದ್ರ ವರ್ಮ ಪಡ್ಪು, ಬಜತ್ತೂರು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಉಮೇಶ ಓಡ್ರಪಾಲು, ಕಾಂಚನ ಹಾ.ಉ.ಸಹಕಾರಿ ಸಂಘದ ನಿರ್ದೇಶಕ ಹರಿಶ್ಚಂದ್ರ ಗೌಡ ಮುದ್ಯ, ಗಣೇಶೋತ್ಸವ ಸಮಿತಿ ಅಧ್ಯಕ್ಷ ಗೋಪಾಲ ವಳಾಲುದಡ್ಡು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಧನಂಜಯ ಬಾರಿಕೆ ಸ್ವಾಗತಿಸಿ, ಸೋಮಸುಂದರ ವಂದಿಸಿದರು. ಉಮೇಶ್, ಜಗದೀಶ್ ಬಾರಿಕೆ ನಿರೂಪಿಸಿದರು. ಸೇಸಪ್ಪ ಉಪಾತಿಪಾಲು ಪ್ರಾರ್ಥಿಸಿದರು.
ಧಾರ್ಮಿಕ ಸಭೆ:
ಮಧ್ಯಾಹ್ನ ನಡೆದ ಧಾರ್ಮಿಕ ಸಭೆಯಲ್ಲಿ ಉಜ್ವಲ್ ಗ್ರೂಫ್ಸ್ ಉಡುಪಿ-ಮಣಿಪಾಲ ಇದರ ಮ್ಯಾನೇಜಿಂಗ್ ಡೈರೆಕ್ಟರ್ ಅಜಯ್ ಶೆಟ್ಟಿಯವರು ಧಾರ್ಮಿಕ ಉಪನ್ಯಾಸ ನೀಡಿದರು. ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಕುವೆಚ್ಚಾರು ಅಧ್ಯಕ್ಷತೆ ವಹಿಸಿದ್ದರು. ಬಜತ್ತೂರು ಗ್ರಾ.ಪಂ.ಅಧ್ಯಕ್ಷೆ ಗಂಗಾಧರ ಪಿ.ಎನ್., ಶ್ರೀ ಕ್ಷೇ.ಧ.ಗ್ರಾ.ಯೋಜನೆ ಉಪ್ಪಿನಂಗಡಿ ವಲಯಾಧ್ಯಕ್ಷ ನಾರಾಯಣ ಕೆಳಗಿನಮನೆ, ವಳಾಲು ಹಾ.ಉ.ಸಹಕಾರಿ ಸಂಘದ ಅಧ್ಯಕ್ಷ ವಸಂತ ಗೌಡ ಪಿಜಕ್ಕಳ ಸಂದರ್ಭೋಚಿತವಾಗಿ ಮಾತನಾಡಿದರು. ಅರ್ಚಕ ಕೃಷ್ಣಪ್ರಸಾದ್ ಉಡುಪ, ಬೆದ್ರೋಡಿ ಜನಸ್ಪಂದನ ಸಮಿತಿ ಸದಸ್ಯ ಮೋಹನ ಗೌಡ ಟೈಲರ್ ರೆಂಜಾಳ, ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಪೂವಪ್ಪ ಪೂಜಾರಿ ಕೊಡಿಪಾನ, ಮುದ್ಯ ವರಮಹಾಲಕ್ಷ್ಮೀ ಪೂಜಾ ಸಮಿತಿ ಅಧ್ಯಕ್ಷೆ ಗೀತಾಉಮೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬೆಳ್ಳಿಯ ನಾಗನ ಕೊಡುಗೆ ನೀಡಿದ ಜಯಂತ ಬೆದ್ರೋಡಿ ಹಾಗೂ ವಸಂತಿ ದಂಪತಿಯನ್ನು ಗೌರವಿಸಲಾಯಿತು. ಗಣೇಶೋತ್ಸವ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಸೋಮಸುಂದರ ಕೊಡಿಪಾನ ಅವರನ್ನು ಗೌರವಿಸಲಾಯಿತು. ಗಣೇಶೋತ್ಸವ ಸಮಿತಿ ಅಧ್ಯಕ್ಷ ಗೋಪಾಲ ವಳಾಲುದಡ್ಡು ಸ್ವಾಗತಿಸಿ, ಗಣೇಶ್‌ಕುಲಾಲ್ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಧನಂಜಯ ಬಾರಿಕೆ ವರದಿ ಮಂಡಿಸಿದರು. ಉಮೇಶ್, ಜಗದೀಶ್ ಬಾರಿಕೆ ನಿರೂಪಿಸಿದರು.
ಶೋಭಾಯಾತ್ರೆ:
ಸಂಜೆ ಗಣಪತಿ ದೇವರ ಶೋಭಾಯಾತ್ರೆ ನಡೆಯಿತು. ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಿಂದ ಹೊರಟು ಪಡ್ಪು ದೈವಸ್ಥಾನ ಮುಂಭಾಗದಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ನೀರಕಟ್ಟೆಗೆ ಆಗಮಿಸಿ ಅಲ್ಲಿಂದ ವಳಾಲು ಮೂಲಕ ಮುಗೇರಡ್ಕ ಕ್ರಾಸ್, ಬೆದ್ರೋಡಿ ನರ್ಸರಿ ಬಳಿ ನೇತ್ರಾವತಿ ನದಿಯಲ್ಲಿ ದೇವರ ಮೂರ್ತಿ ವಿಸರ್ಜನೆ ಮಾಡಲಾಯಿತು. ವಿವಿಧ ಭಜನಾ ತಂಡಗಳಿಂದ ಕುಣಿತ ಭಜನೆ ನಡೆಯಿತು. ಜಲಸ್ತಂಭನ ಸ್ಥಳದಲ್ಲಿ ಕಟ್ಟೆಪೂಜೆ, ಧಾರ್ಮಿಕ ಸಭೆ ಬಳಿಕ ದೇವರ ಮೂರ್ತಿ ವಿಸರ್ಜನೆ ಮಾಡಲಾಯಿತು. ಬಳಿಕ ಅನ್ನಸಂತರ್ಪಣೆ ನಡೆಯಿತು. ಶೋಭಾಯಾತ್ರೆ ಸಂದರ್ಭದಲ್ಲಿ ಶಾಸಕ ಅಶೋಕ್ ಕುಮಾರ್ ರೈಯವರು ಭೇಟಿ ನೀಡಿ ಶುಭಹಾರೈಸಿದರು.