7.01 ಲಕ್ಷ ರೂ.ನಿವ್ವಳ ಲಾಭ; ಶೇ.18 ಡಿವಿಡೆಂಡ್, ಪ್ರತಿ ಲೀ.ಹಾಲಿಗೆ 58 ಪೈಸೆ ಬೋನಸ್ ಘೋಷಣೆ
ನೆಲ್ಯಾಡಿ: ನೆಲ್ಯಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ 2022-2023ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಸೆ.22ರಂದು ಬೆಳಿಗ್ಗೆ ಸಂಘದ ಸಭಾಂಗಣದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಡಿ.ಮಹಾಬಲ ಶೆಟ್ಟಿಯವರು ಮಾತನಾಡಿ, ನೆಲ್ಯಾಡಿ ಹಾಲು ಉತ್ಪಾದಕರ ಸಹಕಾರಿ ಸಂಘವು 19-3-1993ರಂದು ಸ್ಥಾಪನೆಗೊಂಡಿದ್ದು 268 ಸದಸ್ಯರಿದ್ದಾರೆ. ಪ್ರಸ್ತುತ 190 ಸದಸ್ಯರು ಹಾಲು ಪೂರೈಸುತ್ತಿದ್ದು ದಿನವೊಂದಕ್ಕೆ ಸರಾಸರಿ 1200 ಲೀ.ಹಾಲು ಸಂಗ್ರಹವಾಗುತ್ತಿದೆ. ಹೊಸಮಜಲು ಹಾಗೂ ಕರ್‌ಂಬಿತ್ತಿಲ್‌ನಲ್ಲಿ ಶಾಖೆಗಳಿವೆ. ವರದಿ ಸಾಲಿನಲ್ಲಿ 5,77,109.5 ಲೀ.ಹಾಲು ಸಂಗ್ರಹಿಸಿ ಡೈರಿಗೆ 5,56,300.9ಲೀ.ಹಾಲು ಮಾರಾಟ ಮಾಡಲಾಗಿದೆ. 20,808.60 ಲೀ.ಹಾಲು ಸ್ಥಳೀಯವಾಗಿ ಮಾರಾಟವಾಗಿದೆ. ನಂದಿನಿ ಸಮತೋಲನ ಪಶು ಆಹಾರ ಮತ್ತು ಕರುಗಳ ಪಶು ಆಹಾರವನ್ನು ಖರೀದಿಸಿ ಸದಸ್ಯರಿಗೆ ವಿತರಣೆ ಮಾಡಲಾಗಿದೆ. ಹೀಗೆ ಹಾಲು ಮತ್ತು ಪಶು ಆಹಾರ ಮಾರಾಟದಿಂದ ರೂ.19,67,676.38 ಲಾಭ ಬಂದಿದ್ದು ಖರ್ಚು ವೆಚ್ಚಗಳನ್ನು ಕಳೆದು 7,01,023.03 ರೂ., ನಿವ್ವಳ ಲಾಭ ಬಂದಿದೆ. ಲಾಭಾಂಶದಲ್ಲಿ ಸದಸ್ಯರಿಗೆ ಶೇ.18 ಡಿವಿಡೆಂಡ್ ಹಾಗೂ ಪ್ರತಿ ಲೀಟರ್ ಹಾಲಿಗೆ 58 ಪೈಸೆ ಬೋನಸ್ ನೀಡಲಾಗುವುದು ಎಂದು ಹೇಳಿದರು. ಸಂಘವು 6 ವರ್ಷದಿಂದ ಲೆಕ್ಕ ಪರಿಶೋಧನಾ ವರ್ಗೀಕರಣದಲ್ಲಿ ’ಎ’ ತರಗತಿಯನ್ನು ಪಡೆದುಕೊಂಡಿದೆ. ಸದಸ್ಯರು ಹಸುಗಳನ್ನು ಮಾರಾಟ ಮಾಡದೇ ಹಾಲು ಉತ್ಪಾದನೆ ಹೆಚ್ಚಳ ಮಾಡಬೇಕು. ಪ್ರತಿಯೊಬ್ಬ ಸದಸ್ಯರೂ ಕನಿಷ್ಠ 10 ಲೀಟರ್ ಹಾಲು ಸಂಘಕ್ಕೆ ಪೂರೈಕೆ ಮಾಡಬೇಕು. ಶುದ್ಧ ಹಾಗೂ ಗುಣಮಟ್ಟದ ಹಾಲು ಪೂರೈಸುವ ಮೂಲಕ ಸಂಘದ ಅಭಿವೃದ್ಧಿಗೂ ಸಹಕಾರ ನೀಡಬೇಕೆಂದು ಹೇಳಿದರು.
ವಿಸ್ತರಣಾಧಿಕಾರಿ ಆದಿತ್ಯ ಚಿದ್ಗಲ್ ಮಾತನಾಡಿ, ಕೃಷಿಗೆ ಪೂರಕವಾಗಿ ಮಾಡಿದಲ್ಲಿ ಮಾತ್ರ ಹೈನುಗಾರಿಕೆಯಿಂದ ಲಾಭ ಪಡೆಯಲು ಸಾಧ್ಯವಿದೆ. ಹಟ್ಟಿಗೊಬ್ಬರ ಬಳಕೆಯಿಂದ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಲು ಸಾಧ್ಯವಿದೆ ಎಂದ ಅವರು ಕರುಸಾಕಾಣಿಕೆ, ಮಿನಿಡೈರಿ ಯೋಜನೆ ಸೇರಿದಂತೆ ಒಕ್ಕೂಟದಿಂದ ಹೈನುಗಾರರಿಗೆ ಸಿಗುವ ಸವಲತ್ತುಗಳ ಕುರಿತು ಮಾಹಿತಿ ನೀಡಿದರು. ಪಶುವೈದ್ಯಾಧಿಕಾರಿ ಡಾ.ಸಚಿನ್ ಅವರು ಮಾಹಿತಿ ನೀಡಿದರು. ಸಂಘದ ಉಪಾಧ್ಯಕ್ಷ ವೆಂಕಪ್ಪ ನಾಯ್ಕ, ನಿರ್ದೇಶಕರಾದ ಕಾಂತಪ್ಪ ಗೌಡ, ಹೊನ್ನಪ್ಪ ಗೌಡ, ವಿಠಲ ಶೆಟ್ಟಿ, ಚಂದ್ರಶೇಖರ ಎಚ್., ಜಯರಾಮ ಬಿ., ಎಚ್.ಬಿ.ಜೋಗಿತ್ತಾಯ, ಸೇಸಮ್ಮ, ವಾರಿಜ, ಗಿರಿಜ, ಹೇಮಾವತಿ, ಪ್ರೇಮಾವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಹುಮಾನ ವಿತರಣೆ:
2022-23ನೇ ಸಾಲಿನಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಸಿದ ಹೈನುಗಾರರನ್ನು ಗೌರವಿಸಲಾಯಿತು. 9,68,666 ರೂ. ಮೌಲ್ಯದ ಹಾಲು ಪೂರೈಸಿದ ಜಿಬಿ ಜಾಯ್(ಪ್ರಥಮ), 3,53,719 ರೂ.ಮೌಲ್ಯದ ಹಾಲು ಪೂರೈಸಿದ ಪುಷ್ಪರಾಜ ಶೆಟ್ಟಿ(ದ್ವಿತೀಯ)ಹಾಗೂ 2,59,991 ರೂ.ಮೌಲ್ಯದ ಹಾಲು ಪೂರೈಸಿದ ವಾಲ್ಟರ್ ಡಿ.ಸೋಜ(ತೃತೀಯ)ಅವರಿಗೆ ಶಾಲು,ಹಾರಾರ್ಪಣೆ ಹಾಗೂ ಬಹುಮಾನ ನೀಡಿ ಗೌರವಿಸಲಾಯಿತು. ವೆಂಕಪ್ಪ ನಾಯ್ಕ್, ಸೋಮಯ್ಯ ಮಡಿವಾಳ, ಸುಮಿತ್ರಾ, ಪ್ರೇಮಾವತಿ, ಸೋಮಪ್ಪ ಕನಡ, ಬಾಬು ಪಿ., ಶಾಂತರಾಮ, ಲೇಧಿ ತುಳಸೀಧರನ್, ಜಯಲಕ್ಷ್ಮೀ ಹಾಗೂ ಮಾರ್ಷೆಲ್ ಡಿ.ಸೋಜರವರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಉಳಿದಂತೆ ಪ್ರಸ್ತುತ ಸಂಘಕ್ಕೆ ಹಾಲು ಪೂರೈಸುತ್ತಿರುವ ಸದಸ್ಯರಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಯಿತು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನುರಾಧ ಹೆಚ್.,ವರದಿ ಮಂಡಿಸಿದರು. ಕಾಂತಪ್ಪ ಗೌಡ ಸ್ವಾಗತಿಸಿ, ಅನುರಾಧ ಹೆಚ್.ವಂದಿಸಿದರು. ಹಾಲು ಪರೀಕ್ಷಕಿ ನಳಿನಾಕ್ಷಿ ಪ್ರಾರ್ಥಿಸಿದರು. ಸಹಾಯಕಿ ಗಿರಿಜ, ಬಿಎಂಸಿ ನಿರ್ವಾಹಕ ಪರಮೇಶ್ವರ, ಕೃ.ಗ.ಕಾರ್ಯಕರ್ತ ಜಯರಾಮ, ಬ್ರಾಂಚ್ ಸಹಾಯಕಿಯರಾದ ವಿಜಯ, ಜಯಂತಿ ಸಹಕರಿಸಿದರು.
ಲೀ.ಹಾಲಿಗೆ 50ರೂ. ಕೊಡಿ:
ಹಾಲು ಉತ್ಪಾದಕರಿಗೆ 1 ಲೀ.ಹಾಲಿಗೆ ಕನಿಷ್ಟ ೫೦ ರೂಪಾಯಿ ಕೊಡಬೇಕೆಂದು ಸದಸ್ಯರು ಒತ್ತಾಯಿಸಿದರು. 1 ಲೀ.ಹಾಲಿಗೆ 50 ರೂ.ನೀಡಿದಲ್ಲಿ ಹಾಲಿನ ಉತ್ಪಾದನೆಯೂ ಹೆಚ್ಚಳಗೊಳ್ಳಲಿದೆ. ಹೈನುಗಾರರು ಲಾಭ ಪಡೆಯಲು ಸಾಧ್ಯವಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಈ ಬಗ್ಗೆ ಸರಕಾರಕ್ಕೆ ಮನವಿ ಮಾಡಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಗಂಡು ಕರುಗಳ ಸಾಕಾಣಿಕೆಗೆ ಸರಕಾರದ ಮಟ್ಟದಲ್ಲಿ ಪ್ರೋತ್ಸಾಹ ಸಿಗಬೇಕೆಂದು ಸದಸ್ಯರು ಒತ್ತಾಯಿಸಿದರು.