ಉಪ್ಪಿನಂಗಡಿ ಮೂರ್ತೆದಾರರ ಸಹಕಾರ ಸಂಘದ ಮಹಾಸಭೆ

0

58 ಲಕ್ಷ ರೂ. ನಿವ್ವಳ ಲಾಭ: ಶೇ.18 ಡಿವಿಡೆಂಟ್ ಘೋಷಣೆ

ಉಪ್ಪಿನಂಗಡಿ: ಮೂರ್ತೆದಾರರ ಸೇವಾ ಸಹಕಾರ ಸಂಘ ನಿಯಮಿತ ಉಪ್ಪಿನಂಗಡಿಯು 2022-23ನೇ ಸಾಲಿನಲ್ಲಿ ಒಟ್ಟು 58,64,700 ರೂ. ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.18 ಡಿವಿಡೆಂಟ್ ಘೋಷಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಅಜಿತ್ ಪಾಲೇರಿ ತಿಳಿಸಿದರು.


ಇಲ್ಲಿನ ಎಚ್.ಎಂ. ಅಡಿಟೋರಿಯಂನಲ್ಲಿ ಸೆ.23ರಂದು ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಉಪ್ಪಿನಂಗಡಿಯ ಮೂರ್ತೆದಾರರ ಸಂಘವು ಹಿರೇಬಂಡಾಡಿ, ನೆಲ್ಯಾಡಿ ಹಾಗೂ ಉದನೆಯಲ್ಲಿ ಒಟ್ಟು ಮೂರು ಶಾಖೆಗಳನ್ನು ಹೊಂದಿದ್ದು, ಪುತ್ತೂರು ತಾಲೂಕಿನ ಉಪ್ಪಿನಂಗಡಿ, ಹಿರೇಬಂಡಾಡಿ, ಬಜತ್ತೂರು, ಕಡಬ ತಾಲೂಕಿನ ಗೋಳಿತೊಟ್ಟು, ಆಲಂತಾಯ, ನೆಲ್ಯಾಡಿ, ಕೌಕ್ರಾಡಿ, ಇಚ್ಲಂಪಾಡಿ, ಶಿರಾಡಿ, ಸಿರಿಬಾಗಿಲು, ಕೊಣಾಜೆ ಮತ್ತು ಕೊಂಬಾರು ಇತ್ಯಾದಿ 12 ಕಂದಾಯ ಗ್ರಾಮಗಳನ್ನು ಹೊಂದಿದ್ದು, ಬ್ಯಾಂಕಿಂಗ್ ವ್ಯವಹಾರದೊಂದಿಗೆ ಗುಣಮಟ್ಟದ ಸೇವೆಯನ್ನು ಸರಿಯಾದ ರೀತಿಯಲ್ಲಿ ಒದಗಿಸುತ್ತಿದೆ. ವರ್ಷದ ಕೊನೆಯಲ್ಲಿ 947 ‘ಎ’ ತರಗತಿ ಸದಸ್ಯರಿದ್ದು, ಒಟ್ಟು 14,85,485.70 ರೂ. ಪಾಲು ಬಂಡವಾಳ ಸಂಗ್ರಹಿಸಲಾಗಿದೆ. 1644 ‘ಸಿ’ ತರಗತಿ ಸದಸ್ಯರಿದ್ದು, ಒಟ್ಟು 15,29,973 ರೂ. ಪಾಲು ಬಂಡವಾಳ ಸಂಗ್ರಹಿಸಿದೆ. ಎಲ್ಲಾ ವರ್ಗದವರಿಗೂ ಅನುಕೂಲವಾಗುವಂತಹ ವಿವಿಧ ರೀತಿಯ ಠೇವಣಾತಿಗಳನ್ನು ಆಕರ್ಷಕ ಬಡ್ಡಿದರದಲ್ಲಿ ಸ್ವೀಕರಿಸಲಾಗುತ್ತಿದೆ. ಸದಸ್ಯರಿಗೆ ಮೂರ್ತೆದಾರಿಕೆ ಸಾಲ, ಜಾಮೀನು ಸಾಲ, ಅಡವು ಸಾಲ, ವಾಹನ ಸಾಲ, ಭೂ ಅಡಮಾನ ಸಾಲ, ಠೇವಣಿ ಆಧಾರಿತ ಸಾಲ, ಚಿನ್ನಾಭರಣ ಸಾಲ, ಗುರುಶ್ರೀ ನಿಧಿ ಸಾಲ, ಸಂಜೀವಿನಿ ಸಾಲ, ಪಿಗ್ಮಿ ಮುಂಗಡ ಸಾಲ, ಸಿಬ್ಬಂದಿ ಸಾಲ, ಸ್ವಉದ್ಯೋಗ ಸಾಲ, ಗೃಹ ನಿರ್ಮಾಣ ಸಾಲಗಳನ್ನು ನೀಡಲಾಗಿದೆ. ಸಂಘದಲ್ಲಿ ಸುಪರ್ದಿಯಲ್ಲಿ 17 ಶೇಂದಿ ಮಾರಾಟ ಕೇಂದ್ರಗಳಿದ್ದು, ಮೂರ್ತೆದಾರರಿಗೆ ಅತೀ ಕಡಿಮೆ ರೂಪಾಯಿ ಮೌಲ್ಯದಲ್ಲಿ ಬಿಟ್ಟುಕೊಡಲಾಗಿದೆ. ಸಂಘದ ಪ್ರಾಯೋಜಿತ ಗುರುಶ್ರೀ ಸ್ವ-ಸಹಾಯ ಸಂಘಗಳ ಒಟ್ಟು 120 ಗುಂಪುಗಳನ್ನು ರಚಿಸಲಾಗಿದ್ದು, ಸದಸ್ಯರಿಗೆ ಸುತ್ತುನಿಧಿ ಸಾಲವಾಗಿ 202 ಲಕ್ಷ ರೂ. ಗಳನ್ನು ನೀಡಲಾಗಿದೆ. ಕರ್ನಾಟಕ ರಾಜ್ಯ ಮಹಾಮಂಡಳ ಬೆಂಗಳೂರು ಇದರ ಸದಸ್ಯತ್ವದೊಂದಿಗೆ ಠಸ್ಸೆ ಪೇಪರ್ ವ್ಯವಸ್ಥೆಯನ್ನು ಉಪ್ಪಿನಂಗಡಿ ಮತ್ತು ನೆಲ್ಯಾಡಿ ಶಾಖೆಯಲ್ಲಿ ಪ್ರಥಮವಾಗಿ ಅಳವಡಿಸಿ ಸಾರ್ವಜನಿಕರಿಗೆ ಪ್ರಯೋಜನವಾಗುವಂತೆ ಮಾಡಲಾಗಿದೆ ಎಂದರು.


ಸಂಘವು ಮುಂದಕ್ಕೆ ‘ಎ’ ತರಗತಿ ಸದಸ್ಯರನ್ನು ಹೆಚ್ಚಿಸುವುದು, ಠೇವಣಿ ಹಾಗೂ ಸಾಲದ ಗುರಿ ಮೀರಿದ ಸಾಧನೆ ಮಾಡುವುದು, ಗುರುಶ್ರೀ ಸ್ವ-ಸಹಾಯ ಗುಂಪುಗಳ ಸದಸ್ಯರಿಗೆ ಮಾಹಿತಿ ಶಿಬಿರ, ಸಾಲ ಸೌಲಭ್ಯ ನೀಡಿ ವ್ಯವಹಾರ ನೀಡಿ ವ್ಯವಹಾರ ವೃದ್ಧಿಸುವುದು, ಹೊಸ ಶಾಖೆಗಳನ್ನು ತೆರೆಯುವುದು, ಸಂಘದ ಸಿಬ್ಬಂದಿ ಹಾಗೂ ಆಡಳಿತ ಮಂಡಳಿ ಸದಸ್ಯರಿಗೆ ವ್ಯವಹಾರ, ವೃತ್ತಿ ಕೌಶಲ್ಯ, ಸುಲಲಿತ ಆಡಳಿತ ತರಬೇತಿ ಆಯೋಜಿಸುವುದು ಹೀಗೆ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಸದಸ್ಯರ ಸಹಾಯಕ ನಿಧಿಯಿಂದ ಹಲವು ಸಹಾಯಗಳನ್ನು ನೀಡಲಾಗಿದೆ. ಸಂಘದ ಈ ಪ್ರಗತಿಗೆ ಕಾರಣರಾದ ಠೇವಣಾತಿದಾರರಿಗೆ, ಸಾಲ ಪಡೆದುಕೊಂಡು ಕ್ಲಪ್ತ ಸಮಯದಲ್ಲಿ ಪಾವತಿಸಿದ ಸದಸ್ಯರಿಗೆ, ಸಹಕಾರ ಇಲಾಖಾಧಿಕಾರಿಗಳಿಗೆ, ಲೆಕ್ಕ ಪರಿಶೋಧಕರಿಗೆ, ಸಿಬ್ಬಂದಿಗಳಿಗೆ, ಪಿಗ್ಮಿ ಸಂಗ್ರಹಕಾರರಿಗೆ, ಆಡಳಿತ ಮಂಡಳಿ ನಿರ್ದೇಶಕರಿಗೆ ಹಾಗೂ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಅಧ್ಯಕ್ಷ ಅಜಿತ್ ಪಾಲೇರಿ ಕೃತಜ್ಞತೆ ಸಲ್ಲಿಸಿದ್ದರಲ್ಲದೆ, ಇನ್ನಷ್ಟು ಸಹಕಾರ ನೀಡುವಂತೆ ಕೋರಿದರು.


ಸಂಘದ ಆಕರ್ಷಕ ಯೋಜನೆಗಳಾದ ಸುಮೂರ್ತ ನಿಧಿ, ಶ್ರೀ ಗುರು ನಿಧಿ, ಕಲ್ಯಾಣ ನಿಧಿಗೆ ಚಾಲನೆ ನೀಡಿ ಮಾತನಾಡಿದ ಬಿ.ಸಿ.ರೋಡು ಮೂರ್ತೆದಾರರ ಮಹಾಮಂಡಳದ ಅಧ್ಯಕ್ಷ ಸಂಜೀವ ಪೂಜಾರಿ ಅವರು, ಮೂರ್ತೆದಾರಿಕೆ ಈ ಕಾಲಘಟ್ಟದಲ್ಲಿ ನಶಿಸುತ್ತಿದೆ. ಆದರೂ ಸಂಘದೊಂದಿಗೆ ಬ್ಯಾಂಕಿಂಗ್ ವ್ಯವಹಾರ ನಡೆಸುವ ಮೂಲಕ ಆರ್ಥಿಕ ಸ್ವಾವಲಂಬನೆಯನ್ನು ಕಂಡುಕೊಳ್ಳಬೇಕು. ನಮ್ಮ ಸಂಘವು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿ ಸಾಧಿಸುತ್ತಿದ್ದು, ಇನ್ನಷ್ಟು ಶಾಖೆಗಳನ್ನು ಆರಂಭಿಸಿ, ಗುಣಮಟ್ಟದ ಸೇವೆಯನ್ನು ಒದಗಿಸುವ ಮೂಲಕ ಗ್ರಾಹಕರ ಪ್ರೀತಿ- ವಿಶ್ವಾಸ ಗಳಿಸಿ, ಇನ್ನಷ್ಟು ಅಭಿವೃದ್ಧಿ ಕಾಣಬೇಕು ಎಂದರು.


ಮೂರ್ತೆದಾರಿಕೆಯಲ್ಲಿ ಈ ಹಿಂದೆ ತೊಡಗಿಸಿಕೊಂಡಿದ್ದ ಹಾಗೂ ಈಗ ತೊಡಗಿಸಿಕೊಂಡಿರುವ ಬಾಬು ಪೂಜಾರಿ ಅಂಬರ್ಜೆ, ಕೃಷ್ಣಪ್ಪ ಪೂಜಾರಿ ಮುರದಮೇಲು, ಡೀಕಯ್ಯ ಪೂಜಾರಿ ಬೆತ್ತೋಡಿ, ವಿಶ್ವನಾಥ ಪೂಜಾರಿ ದಾಸರಮೂಲೆ, ಮೋನಪ್ಪ ಪೂಜಾರಿ ಆರಿಜಾಲು ಅವರನ್ನು ಹಾಗೂ ಕಬಡ್ಡಿಯಲ್ಲಿ ರಾಜ್ಯ ತಂಡಕ್ಕೆ ಆಯ್ಕೆಯಾದ ಕಾರ್ತಿಕ್ ಅಂಬರ್ಜೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಶೈಕ್ಷಣಿಕ ಸಾಧನೆ ಮಾಡಿದ ಆಶಿಕಾ ಗುರುಂಪು, ಮಾನ್ಯ ನಿಡ್ಡೆಂಕಿ, ಯಶಸ್ವಿನಿ ಕೌಕ್ರಾಡಿ, ಸೃಜನಾ ಶಾಲೆ ಮನೆ, ಕೃತಿಕಾ ಅಂಬರ್ಜೆ, ಪ್ರಜ್ಞಾ ಮುಡಿಪಿನಡ್ಕ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಸಂಘದ ವೇದಿಕೆಯಲ್ಲಿ ಸಂಘದ ಆಡಳಿತ ಮಂಡಳಿ ನಿರ್ದೇಶಕರಾದ ಡಾ. ರಾಜಾರಾಮ್ ಕೆ.ಬಿ., ಮಾಧವ ಪೂಜಾರಿ ಅರಿಜಾಲು, ಶಶಿಧರ ಪಠೇರಿ, ಚಂದ್ರಶೇಖರ ಬಾಣಜಾಲು, ಚೆನ್ನಪ್ಪ ಪೂಜಾರಿ ಕೊಚ್ಚಿಲ, ಶೀನಪ್ಪ ಪೂಜಾರಿ ಹೂವಿನಮಜಲು, ಶ್ರೀಮತಿ ಚಂದ್ರಕಲಾ ಸದಾನಂದ ಡಿ.ಎಸ್., ಸುನೀತಾ ಸೋಮಸುಂದರ ಕೊಡಿಪಾನ ಉಪಸ್ಥಿತರಿದ್ದರು. ಮಾಜಿ ಅಧ್ಯಕ್ಷರುಗಳಾದ ವರದರಾಜ ಎಂ., ಜನಾರ್ದನ ಬಾಣಜಾಲು, ಸೇಸಪ್ಪ ಪೂಜಾರಿ ಇಟ್ಟೋಳಿಗೆ, ದೇವಪ್ಪ ಪೂಜಾರಿ, ಉಷಾ ಅಂಚನ್ ಚರ್ಚೆಯಲ್ಲಿ ಭಾಗವಹಿಸಿ, ಸಲಹೆ ಸೂಚನೆ ನೀಡಿದರು.


ಸಂಘದ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡೀಕಯ್ಯ ಜಿ. ವರದಿ ಮಂಡಿಸಿದರು. ಶಾಖಾ ವ್ಯವಸ್ಥಾಪಕರಾದ ಎಲ್ಯಣ್ಣ ಎಸ್. ವಂದಿಸಿದರು. ಶಾಖಾ ವ್ಯವಸ್ಥಾಪಕರಾದ ಯಶೋಧ ಕೆ., ಪ್ರಭಾರ ಶಾಖಾ ವ್ಯವಸ್ಥಾಪಕರಾದ ಸುಮಿತ್ರಾ ಕೆ., ಅನಿತಾ ಸತೀಶ್, ನವೀನ್ ಪಿ., ಸಿಬ್ಬಂದಿಗಳಾದ ಮಿಥುನಾಕ್ಷಿ, ಮಹೇಶ್ ಕೆ., ಮುರಳೀಧರ ಎ.ಎಸ್., ಶಾಲಿನಿ, ಪ್ರಮೋಕ್ಷ ಡಿ., ಪಿಗ್ಮಿ ಸಂಗ್ರಾಹಕರಾದ ಧರ್ಣಪ್ಪ ಎಸ್., ಹರೀಶ ಪಿ., ಸುರೇಶ ಜಿ., ಶ್ರೀಧರ ಗೌಡ, ರಾಜೇಶ್ ಬಿ. ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು.

ಸಂಘದ ವಿಶೇಷ ಆಕರ್ಷಕ ಯೋಜನೆ
ಸುಮೂರ್ತ ನಿಧಿ 1,333ರೂ.ಗೆ 60 ತಿಂಗಳಿಗೆ 1,01,111ರೂ.
ಶ್ರೀ ಗುರು ನಿಧಿ 733 ರೂ.ಗೆ 60 ತಿಂಗಳಿಗೆ 55,600ರೂ.
ಕಲ್ಯಾಣ ನಿಧಿ 5555ಗೆ 60 ತಿಂಗಳಿಗೆ 4,20,000 ರೂ.
ನಿರಖು ಠೇವಣಿ ಮೇಲಿನ ಆಕರ್ಷಕ ಬಡ್ಡಿ ದರಗಳು
01ರಿಂದ 44 ದಿನಗಳವರೆಗೆ ಶೇ.4
45 ದಿನಗಳಿಂದ 90 ದಿನಗಳವರೆಗೆ ಶೇ.5
90 ದಿನಗಳಿಂದ 179 ದಿನಗಳವರೆಗೆ ಶೇ.5.5
180 ದಿನಗಳಿಂದ 1 ವರ್ಷದೊಳಗೆ ಶೇ.7.5
1 ವರ್ಷಕ್ಕೆ ಮೇಲ್ಪಟ್ಟು ಶೇ.9
3 ವರ್ಷಕ್ಕೆ ಮೇಲ್ಪಟ್ಟು ಶೇ.9.5
ಉಳಿತಾಯ ಖಾತೆಗೆ ಶೇ.3
ಆವರ್ತನ ಠೇವಣಿ ಶೇ.9

LEAVE A REPLY

Please enter your comment!
Please enter your name here