ಸುಖದ ಹುಡುಕಾಟದಲ್ಲಿ ಕಳೆದುಕೊಂಡಿರುವುದೇನು..?

0

-ವಿಶಾಲಾಕ್ಷಿ ಕೆ, ಶಿಕ್ಷಕಿ

ಭೂಮಿಯ ಮೇಲಿರುವ ಪ್ರತಿಯೊಬ್ಬ ಮಾನವನು ಬಯಸುವುದು ಒಂದೇ… ಅದು ಸುಖ. ತಾನು ಯಾವಾಗಲೂ ಸುಖವಾಗಿರಬೇಕು ತನ್ನ ಮಕ್ಕಳು ಮಡದಿ, ತಾಯಿ, ತಂದೆ, ಅಣ್ಣ, ತಂಗಿ ಎಲ್ಲರೂ ಸುಖವಾಗಿ ಇರಬೇಕೆಂಬ ಹಂಬಲ ಪ್ರತಿಯೊಬ್ಬನಲ್ಲೂ ಸುಪ್ತವಾಗಿರುತ್ತದೆ. ಅದಕ್ಕಾಗಿ ಅವನು ಅನೇಕ ಆಕಾಂಕ್ಷೆಗಳನ್ನು ಹೊಂದಿರುತ್ತಾನೆ. ಅವುಗಳಲ್ಲಿ ಉನ್ನತ ಮಟ್ಟದ ವಿದ್ಯಾಭ್ಯಾಸ, ಉತ್ತಮ ಉದ್ಯೋಗ ,ಮನೆ, ಕಾರು, ಚಿನ್ನ ಬಂಗಲೆ, ಐಶಾರಾಮಿ ಜೀವನ, ಹಣ ಸಂಗ್ರಹಣೆ ಇತ್ಯಾದಿ…


ಅವರ ಬಯಕೆಗಳ ಸಾಲು ಕೊನೆಯಿಲ್ಲದ್ದು. ಇವೆಲ್ಲವುಗಳ ಮೂಲ ಉದ್ದೇಶ, ಸುಖವನ್ನು ಪಡೆಯುವುದು. ಆದರೆ ಮಾನವ ಎಂಬ ಜೀವಿಯನ್ನು ಎರಡು ವಿಭಾಗವನ್ನಾಗಿ ಮಾಡಿದರೆ ಒಂದನೆಯ ಭಾಗ ನಾನು ಮತ್ತು ಎರಡನೆಯ ಭಾಗ ದೇಹ ಎಂಬುದಾಗಿದೆ ನಾನು ಎಂದರೆ ಕಣ್ಣಿಗೆ ಕಾಣದ ಭಾವ, ಪ್ರೀತಿ, ಗೌರವ, ವಿಶ್ವಾಸ, ನೆಮ್ಮದಿ, ಸಂತೃಪ್ತಿ, ಸಮೃದ್ಧಿ, ಸಾಮರಸ್ಯ, ತ್ಯಾಗ ಮುಂತಾದ ಭಾವನಾತ್ಮಕ ವಿಚಾರಕ್ಕೆ ಸಂಬಂಧಿಸಿದ ವಿಷಯವಾದರೆ, ದೇಹವು ತಾತ್ಕಾಲಿಕ ವಸ್ತುಗಳಾದ ಕಾರು ಬಂಗಲೆ ಸಂಪತ್ತು ಇವುಗಳ ಸುಖದ ಮೇಲೆ ನಿಂತಿದೆ. ಆದರೆ ನಾವು ಸುಖವಾಗಿರಬೇಕಾದರೆ ಕೇವಲ ಭೌತಿಕ ವಸ್ತುಗಳೇ ಅಲ್ಲದೆ ಭಾವನೆಗಳು ಅತ್ಯವಶ್ಯಕವೆನಿಸುತ್ತದೆ.

ಬೌತಿಕ ವಸ್ತುಗಳು ಕೇವಲ ತಾತ್ಕಾಲಿಕ ಸುಖವನ್ನು ನೀಡುವುದಲ್ಲದೆ ನಮ್ಮನ್ನು ಆರ್ಥಿಕ ತೊಂದರೆಗಳಿಗೆ ಈಡು ಮಾಡುತ್ತವೆ. ಆದರೆ ಭಾವನಾತ್ಮಕ ವಿಷಯಗಳು ನಮಗೆ ವೆಚ್ಚದಾಯಕವಲ್ಲ ಮತ್ತು ಸದಾ ಸುಖವಾಗಿಡುತ್ತದೆ. ಆದರೆ ಬಂಗಲೆ, ಆಳುಕಾಳು, ಸಂಪತ್ತು, ವಾಹನ ಎಲ್ಲವೂ ಇರುವ ಮನೆಯ ಸದಸ್ಯರ ನಡುವೆ ಪ್ರೀತಿ, ಸೌಹಾರ್ದತೆ, ಸಾಮರಸ್ಯತೆ, ಗೌರವ ಇಲ್ಲದೆ ಹೋದಲ್ಲಿ ಯಾವ ಸುಖವಿದೆ.. ? ಎಲ್ಲಾ ಸೌಕರ್ಯಗಳಿದ್ದರೂ ಗಂಡ ಹೆಂಡತಿಯ ಮಧ್ಯೆ ಪ್ರೀತಿ, ನಂಬಿಕೆ ಇಲ್ಲವಾದಲ್ಲಿ ಅದೆಂತಹ ಸುಖ ದಾಂಪತ್ಯವಾದೀತು..? ವೃದ್ಧಾಪ್ಯದ ಸಮಯದಲ್ಲಿ ಎಲ್ಲಾ ಸೌಲಭ್ಯಗಳಿದ್ದರೂ ಸಾಂತ್ವನ, ಭರವಸೆ,ಪ್ರೀತಿಯಿಂದ ಮಾತನಾಡಲು ಸಮಯವಿಲ್ಲದ ಮಕ್ಕಳಿಂದ ಯಾವ ತಂದೆ ತಾಯಿಯರು ಸುಖವಾಗಿರ ಬಲ್ಲರು..? ಟಿವಿ, ಕಂಪ್ಯೂಟರ್ ಆಟದ ಸಾಮಾನುಗಳು ಎಷ್ಟೇ ಇದ್ದರೂ ಪ್ರೀತಿಯಿಂದ ಅಪ್ಪಿ, ಮುತ್ತನಿಟ್ಟು ಭಾವನೆಗಳನ್ನು ಹಂಚಿಕೊಳ್ಳಲು ಅಪ್ಪ ಅಮ್ಮನಿಗೆ ಬಿಡುವೆ ಇಲ್ಲವಾದರೆ ಮಕ್ಕಳು ಎಷ್ಟು ಸುಖವಾಗಿರಬಲ್ಲರು..? ಇವೆಲ್ಲವುಗಳನ್ನು ಯೋಚಿಸಿದಾಗ ಭೌತಿಕ ವಸ್ತುಗಳಿಂದ ಸಿಗುವ ಸುಖಕ್ಕಿಂತ ಮನುಷ್ಯನಿಗೆ ಭಾವನೆಗಳಿಂದ ಸಿಗುವ ಸುಖ ಉತ್ತುಂಗವಾದುದು. ಮಾನವ ಸದಾ ಅದನ್ನು ಬಯಸುತ್ತಾನೆ.

ಹಾಗಾದರೆ ಸುಖದ ಹುಡುಕಾಟದಲ್ಲಿ ನಾವೇನು ಕಳೆದುಕೊಳ್ಳುತ್ತಿದ್ದೇವೆ..? ಒಂದು ಬಾರಿ ಚಿಂತಿಸೋಣ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಅನಿವಾರ್ಯತೆಯೋ, ಅವಶ್ಯಕವೋ ಇಂದು ಹಸುಳೆಗಳು ತಾಯಿಯ ಮಡಿಲಿನಲ್ಲಿ ಇರಲಾರದೆ ಯಾವುದೋ ಶಿಶುವಿಹಾರಗಳಲ್ಲಿ ಬೆಳೆಯುತ್ತಿದ್ದಾರೆ. ಸುಖದ ಬೆನ್ನೇರಿ ಉದ್ಯೋಗ ನಿಮಿತ್ತ ಹೊರ ನಡೆಯುತ್ತಿರುವ ಮಹಿಳೆಯರು ಇಂದು ತಮ್ಮ ಮಕ್ಕಳ ಲಾಲನೆ ಪಾಲನೆಯಲ್ಲಿರುವಂತಹ ಆ ಸಂವೇದನಾಶೀಲ ಸುಖವನ್ನು ಕಳೆದುಕೊಂಡಿದ್ದಾರೆ. ಮುಂದೆ ಉತ್ತಮ ವಿದ್ಯಾಭ್ಯಾಸದ ಕನಸನ್ನು ಹೊತ್ತು ಮಕ್ಕಳನ್ನು ಹಾಸ್ಟೆಲ್‌ಗಳಿಗೆ ಸೇರಿಸಿ ಕುಟುಂಬದೊಂದಿಗಿನ ಅವಿನಾಭಾವ ಸಂಬಂಧ ದೂರವಾಗುತ್ತಿದೆ. ಮುಂದೆ ಹೆಚ್ಚು ಹಣ ಸಂಪಾದಿಸುವ ನೆಪದಲ್ಲಿ ದೂರದೂರಿಗೋ ವಿದೇಶಕ್ಕೂ ಹಾರಿ ಹೋಗಿಬಿಡುತ್ತಾರೆ. ಇತ್ತ ವೃದ್ಧ ತಂದೆ ತಾಯಿಗಳು ಪ್ರೀತಿಗಾಗಿ ಹಪಹಪಿಸುತ್ತಾ ಕೊನೆಯ ದಿನಗಳನ್ನು ಎಣಿಸುತ್ತಾರೆ. ಹೆಚ್ಚು ಹಣ ಸಂಪಾದನೆಯಿಂದ ಹೆಚ್ಚೆಚ್ಚು ವಸ್ತುಗಳ ಖರೀದಿಗಾಗಿ ವಿದೇಶವೆಂಬ ಮಾಯಾಲೋಕಕ್ಕೆ ಕಾಲಿಡುತ್ತಾರೆ.

ಆದರೆ ಪತ್ನಿ ಮಕ್ಕಳಿಂದ ಸಿಗುವ ಕೌಟುಂಬಿಕ ಸುಖದಿಂದ ವಂಚಿತರಾಗುತ್ತಾರೆ. ಮಕ್ಕಳನ್ನು ನಾವು ಭಾವನಾತ್ಮಕವಾಗಿ ಬೆಳೆಸಿದರೆ ಅವರೂ ಸಹ ಮುಂದೆ ನಮ್ಮನ್ನು ಅದೇ ರೀತಿ ನೋಡಿಕೊಳ್ಳಬಲ್ಲರು. ನಾವು ಅವರನ್ನು ಸಂತೋಷಪಡಿಸಲು ವಸ್ತುಗಳನ್ನು ನೀಡಿದಲ್ಲಿ ಮುಂದೆ ನಮ್ಮ ವೃದ್ಧಾಪ್ಯದ ದಿನಗಳಲ್ಲಿ ಸಹ ನಾವು ಅದನ್ನೇ ನಿರೀಕ್ಷಿಸಬೇಕಲ್ಲವೇ..? ನಮ್ಮಲ್ಲಿ ಎಷ್ಟೇ ಕೆಲಸದ ಒತ್ತಡವಿದ್ದರೂ ನಮ್ಮವರಿಗಾಗಿ ಸಮಯವನ್ನು ಮೀಸಲಿಡೋಣ. ನಮ್ಮನ್ನು ಪ್ರೀತಿಸುವ ಹಂಬಲಿಸುವ ಎಷ್ಟೋ ಜೀವಗಳಿಗೆ ಸ್ವಲ್ಪವಾದರೂ ಸಮಯ ಕೊಡೋಣ. ವಸ್ತುಗಳ ಮೋಹ ಮರೆತು ಭಾವನೆಗಳನ್ನು ಬೆಳೆಸೋಣ. ದ ರಾ ಬೇಂದ್ರೆಯವರು ಹಾಡಿದ “ನಾನು ಬಡವಿ ಆತ ಬಡವ ಒಲವೇ ನಮ್ಮ ಬದುಕು” ಎಂಬ ಹಾಡು ಮತ್ತು ಸಿ ಅಶ್ವತ್ ಹಾಡಿರುವ “ಬಡವನಾದರೆ ಏನು ಪ್ರಿಯೆ? ಕೈ ತುತ್ತು ತಿನಿಸುವೆ” ಈ ಹಾಡುಗಳನ್ನು ಕೇಳಿದಾಗ ಯಾವುದೇ ಭೌತಿಕ ವಸ್ತುಗಳಿಂದ ಸಿಗದ ಸುಖ ಭಾವನೆಗಳಲ್ಲಿ ಸಿಗುವುದೆಂಬುದಂತೂ ಖಂಡಿತ ಎಲ್ಲರೂ ಒಪ್ಪುವ ಸತ್ಯವಾಗಿದೆ.

LEAVE A REPLY

Please enter your comment!
Please enter your name here