ಅಗಸೆ ಮರಕ್ಕೆ ಸಂಸ್ಕೃತದಲ್ಲಿ ಅಗಸ್ತ್ಯ, ಮುನಿದ್ರುಮ ಎಂಬುದಾಗಿ ಹೆಸರಿದೆ. ಹೆಚ್ಚಾಗಿ ಬಿಳಿಬಣ್ಣ ಅಥವಾ ಕೆಂಪುಬಣ್ಣದ ಕತ್ತಿ ಆಕಾರದ ಹೂಗಳಿಂದ ಕೂಡಿದ ಮರವನ್ನು ನಮ್ಮ ಸುತ್ತಮುತ್ತ ಕಾಣಬಹುದು. ಮಲೇಶಿಯಾದಲ್ಲಿ ಇದು ಅಧಿಕ ಕಂಡುಬಂದರೂ ಭಾರತದ ಬಂಗಾಳದಲ್ಲಿ ಅಧಿಕವಾಗಿ ಬೆಳೆಯುತ್ತದೆ. ಇತ್ತೀಚಿನ ದಿನಗಳಲ್ಲಿ ಅಗಸೆ ಬೀಜದ ನಾನಾ ಉಪಯೋಗವನ್ನು ಬಣ್ಣಿಸುವ ಸೋಷಿಯಲ್ ಮೀಡಿಯಾಗಳನ್ನು ನೋಡಿರಬಹುದು. ಹಲವು ವರ್ಷಗಳ ಹಿಂದೆ ಕಾಣದ ಅಗಸೆ ಬೀಜ ಈಗ ಎಲ್ಲಾ ಅಂಗಡಿ ಮಾಲ್ಗಳಲ್ಲಿಯೂ ಲಭ್ಯ.
25-35 ಅಡಿಗಳಷ್ಟು ಎತ್ತರಕ್ಕೆ ಶೀಘ್ರ ಬೆಳೆಯುವ ಮರ. ನೆಲ್ಲಿಕಾಯಿ ಎಲೆಯಂತೆ ಆಕೃತಿ. ಆದರೆ ದೊಡ್ಡದಾದ ಎಲೆಗಳು ಎಲೆದಂಡು ಒಂದರಿಂದ ಒಂದೂವರೆ ಅಡಿ ಉದ್ದ ಇರುತ್ತದೆ. ಕತ್ತಿ ಆಕಾರದಲ್ಲಿ ಗೊಂಚಲಲ್ಲಿ ಕಂಡುಬರುವ ಹೂಗಳು ಬಿಳಿ ಹೂ ಹೆಚ್ಚಾಗಿ ಕಂಡು ಬಂದರೆ ಕೆಂಪು ವರ್ಣದ ಹೂಗಳೂ ಕಂಡುಬರುತ್ತದೆ. ಹೂವಿನಿಂದ ಕೋಡು ಮೂಡಿ 1-2 ಅಡಿ ಉದ್ದ ಬೆಳೆಯುತ್ತದೆ. ಅದರೊಳಗೆ ಆಯತಾಕಾರದ ಬೀಜಗಳು ಅಲಸಂಡೆ ಬೀಜದಂತೆ ಕಂಡುಬರುತ್ತದೆ. ಇದರ ತೊಗಟೆ, ಹೂ, ಬೀಜ, ಎಲೆಗಳು ಔಷಧಿಯಾಗಿ, ಆಹಾರವಾಗಿಯೂ ಉಪಯೋಗಿಸಲ್ಪಡುತ್ತದೆ. ಇದರ ಬೀಜದ ಬಗ್ಗೆ ಬಹಳಷ್ಟು ಪ್ರಚಾರ ಇದ್ದರೂ ಅದಕ್ಕಿಂತಲೂ ಹೆಚ್ಚು ಉಪಯುಕ್ತ ಅಂಶಗಳು ಇದರ ಹೂ, ಎಲೆ, ತೊಗಟೆಯಲ್ಲಿ ಇದೆ. ಹೂ ಮತ್ತು ಎಲೆಯಲ್ಲಿ ಅಧಿಕ ಪೋಷಕಾಂಶಗಳು ಇದೆ.

ತೊಗಟೆ:
ಕೈ ಕಾಲುಗಳಲ್ಲಿ ಊತ ಬಂದು ನೋವಿದ್ದರೆ ತೊಗಟೆಯನ್ನು ನೀರಲ್ಲಿ ಅರೆದು ಹಚ್ಚುವುದರಿಂದ ಕಡಿಮೆಯಾಗುವುದು. ಇದಕ್ಕೆ ಬ್ಯಾಕ್ಟೀರಿಯಾಗಳನ್ನು ನಾಶಮಾಡುವ (Antibacterial) ಗುಣ ಇದೆ. ಜ್ವರ, ಕೆಮ್ಮು ಕಫಗಳಿರುವಾಗ 10-15 ಗ್ರಾಂ ತೊಗಟೆಯನ್ನು ಕಷಾಯ ಮಾಡಿ ದಿನಕ್ಕೆ ಮೂರು ಸಲ ಕುಡಿಯುವುದರಿಂದ ಕಡಿಮೆಯಾಗುವುದು. ನೀರಾಗಿ ಬೇದಿಯಾಗುವಾಗಲು ಕಷಾಯ ಕುಡಿಯಬಹುದು.

ಎಲೆ:
ಪೌಷ್ಠಿಕ ಅಂಶಗಳನ್ನು ಹೊಂದಿದೆ. ಶೇಕಡಾ 25 ಕ್ಕಿಂತಲೂ ಅಧಿಕ ಪ್ರೊಟೀನ್ ಎಲೆಯಲ್ಲಿ ಇದೆ. ಅಲ್ಲದೆ ಕ್ಯಾಲ್ಸಿಯಂ, ಪೊಟಾಷಿಯಂ. ಫಾಸ್ಪ್ರಸ್ಗಳು ಇರುವುದರಿಂದ ಪೋಷಣೆಗೂ ಒಳ್ಳೆಯದು. ಜ್ವರ, ಕೆಮ್ಮು, ಕಫಗಳಿರುವಾಗಲೂ ಇದರ ಎಲೆಯ ಜ್ಯೂಸ್ ಅಥವಾ ಬೇಯಿಸಿ ಕಷಾಯ ಮಾಡಿ ಕುಡಿಯುವುದರಿಂದ ಕಡಿಮೆಯಾಗುವುದು.ನಿರಂತರ ಶೀತದಿಂದ ಬಳಲುತ್ತಿರುವವರು ಹಾಗೂ ತಲೆ ನೋವು ಇರುವಾಗ ಎಲೆಯ ರಸ ತೆಗೆದು 2-3 ಬಿಂದು ಒಂದುವಾರ ಮೂಗಿಗೆ ಬಿಡುವುದರಿಂದ ಕಡಿಮೆಯಾಗುವುದು.

ಹೂ:
ಶರೀರಕ್ಕೆ ತುಂಬಾ ತಂಪು ನೀಡುತ್ತದೆ. ಬಿಳಿಸ್ರಾವ ಇರುವ ಸ್ತ್ರೀಯರು ಇದನ್ನು ಹಾಲಿನೊಂದಿಗೆ ಸೇರಿಸಿ ಜ್ಯೂಸ್ ಮಾಡಿ ಕುಡಿಯಬೇಕು. ಸ್ತ್ರೀಯರ ಮುಟ್ಟು ಸ್ರಾವ ಕಡಿಮೆ ಇರುವಾಗಲೂ ಹೂವಿನ ಜ್ಯೂಸ್ ಪರಿಣಾಮಕಾರಿಯಾಗಿದೆ. ದೃಷ್ಟಿಮಾಂದ್ಯದಲ್ಲಿ ವಿಶೇಷವಾಗಿ ರಾತ್ರಿ ಹೊತ್ತು ದೃಷ್ಟಿ ಮಾಂದ್ಯವಿದ್ದವರಿಗೆ ಇದು ತುಂಬಾ ಸಹಕಾರಿ. ಇದರಲ್ಲಿ vit A ಇರುವುದರಿಂದಲೂ ಕಣ್ಣಿನ ತೊಂದರೆಗಳಲ್ಲಿ ಉಪಯುಕ್ತವಾಗಿದೆ. ಎಲೆ ಮತ್ತು ಹೂವನ್ನು ಪಲ್ಯ ಮಾಡಿ ನಿತ್ಯ ಸೇವಿಸುವುದು ಒಳ್ಳೆಯದು.

ಅಗಸೆ ಬೀಜ:
ಇದರಲ್ಲಿ ಶೇಕಡಾ 25 ರಷ್ಟು ಪ್ರೋಟೀನ್ ಇದೆ. ಅಲ್ಲದೆ ಕ್ಯಾಲ್ಸಿಯಂ, ಪೊಟ್ಯಾಸಿಯಂಗಳೂ ಇವೆ. ಇದನ್ನು ಆರೋಗ್ಯವಂತರೂ ಸಣ್ಣ ಪ್ರಮಾಣದಲ್ಲಿ ಪ್ರತಿದಿನ ಸೇವಿಸಬಹುದು. ಆದರೆ ಮಧು ಮೇಹಿಗಳು ಸೇವಿಸಿದರೆ ಸ್ವಲ್ಪಮಟ್ಟಿಗೆ ರಕ್ತದಲ್ಲಿ ಸಕ್ಕರೆಯನ್ನು ನಿಯಂತ್ರಣ ಮಾಡುವುದು. ಅಗಸೆ ಬೀಜ ಸೇವನೆಯಿಂದ ಕಾರ್ಬೋಹೈಡ್ರೆಟ್ ಜೀರ್ಣವಾಗುವುದನ್ನು ಕಡಿಮೆ ಮಾಡುವುದು. ಆದುದರಿಂದ ಆಹಾರ ತಿಂದ ನಂತರ ರಕ್ತದಲ್ಲಿ ಸಕ್ಕರೆ ಪ್ರಮಾಣ ಜಾಸ್ತಿಯಾಗುವುದನ್ನು ತಡೆಗಟ್ಟುವುದು.ಕೊಲೆಸ್ಟ್ರಾಲ್, ಟ್ರೈಗ್ಲಿಸರೈಡ್ಸ್ ಜಾಸ್ತಿಯಾಗುವುದನ್ನು ಕಡಿಮೆ ಮಾಡುವುದು. ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುವುದು. ಅಗಸೆ ಬೀಜವನ್ನು ಪುಡಿಮಾಡಿ ಕ್ಯಾರೆಟ್, ಬೀಟ್ರೋಟ್, ಮೂಲಂಗಿ ಮುಂತಾದ ತರಕಾರಿಗಳೊಂದಿಗೆ ಮೊಸರು ಸೇರಿಸಿ ಸೇವಿಸಿದರೆ ರಕ್ತದ ಸಕ್ಕರೆ ಪ್ರಮಾಣ ಕಡಿಮೆಮಾಡುವುದು. ಇದರೊಂದಿಗೆ ಇಡ್ಲಿ, ದೋಸೆ, ಕೊಟ್ಟಿಗೆ, ಸೇಮಿಗೆ ರಸಾಯನ ಸೇವಿಸಿದರೆ ಸಕ್ಕರೆ ರಕ್ತದಲ್ಲಿ ಜಾಸ್ತಿಯಾಗಿ ನಮ್ಮ ಪ್ರಯತ್ನ ವಿಫಲವಾಗುವುದು.
ಲೇಖಕರು : ಡಾ|ಹರಿಕೃಷ್ಣ ಪಾಣಾಜೆ
